ಪ್ರಕೃತಿ ರಮಣೀಯ ಕೊಣಾಜೆಕಲ್ಲಿಗೆ ಚಾರಣ

Upayuktha
0



ದುಕಿನ ಜಂಜಡದಲ್ಲಿ ಯಾರಿಗೂ ಸಮಯವಿಲ್ಲ. ಮನಸ್ಸಿಗೆ ನೆಮ್ಮದಿಯಿಲ್ಲ. ಎಷ್ಟೊತ್ತಿಗೂ ಕೆಲಸ ಕೆಲಸ. ಬದುಕಿನಲ್ಲಿ ಸದಾಕಾಲ ಬೇರೆಯವರ ಕುರಿತು ಚಿಂತಿಸುವುದೇ ನಮ್ಮ ದಿನಚರಿಯಾಗಿದೆ. ತನಗಾಗಿ ತನ್ನ ಮನೋದೈಹಿಕ ವಿಚಾರವಾಗಿ ಬದುಕಿನಲ್ಲಿ ಏನೂ ಮಾಡಲಾರದ ಸ್ಥಿತಿಗೆ ನಾವು ತಲುಪಿದ್ದೇವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ದಿನಚರಿ ಗಮನಿಸಿದರೆ ಅರಿವಿಗೆ ಬಾರದಿರದು. ಎಲ್ಲರಿಗೂ ಒತ್ತಡ ಒತ್ತಡ. ಮಕ್ಕಳಿಂದ ಹಿಡಿದು ಮುದುಕರ ವರೆಗೆ. ಈ ಒತ್ತಡದಿಂದ ಬದುಕು ದುಸ್ತರವಾಗಿದೆ. ನಮ್ಮ ಪರಂಪರೆ ಆಚಾರ ವಿಚಾರ ಯಾವುದನ್ನಾದರೂ ನಮ್ಮ ಮಕ್ಕಳಿಗೆ ನಾವು ಒದಗಿಸುತ್ತಿದ್ದೇವೆಯೆ? ನಾವು ಪಡೆದ ಸಂಸ್ಕಾರ ನಮ್ಮ ಮಕ್ಕಳಿಗೆ ಬೇಡವೇ? ನಾವು ಕಲಿತ ಪ್ರಕೃತಿಯ ಪಾಠ ಮಕ್ಕಳಿಗೆ ತಿಳಿಸುವುದೆಂತು? ಬದುಕೆಂದರೆ ಕೇವಲ ಕಾಂಕ್ರೀಟ್‌ ಕಟ್ಟಡಗಳಲ್ಲಿ ವಾಸಿಸುವುದು ಮಾತ್ರವೇ? ಮನುಷ್ಯ ಪ್ರಕೃತಿಯ ಸಂಬಂಧ ತಿಳಿಯುವುದು ಹೇಗೆ? ಪುಸ್ತಕದಲ್ಲಿ ಓದಿ ತಿಳಿದ ಮಕ್ಕಳು ಪ್ರಕೃತಿಯನ್ನು ಅನುಭವಿಸುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ದೊರಕಿತು.



ಮೂಡುಬಿದಿರೆ ಹವ್ಯಕ ಸಭೆಯ ಕ್ರಿಯಾಶೀಲ ಅಧ್ಯಕ್ಷರಾದ ವಿನೋದಕುಮಾರ ಹಾಗೂ ಕಾರ್ಯದರ್ಶಿಗಳಾದ ಶಂಕರ ಭಟ್ ಇವರ ನೇತೃತ್ವದಲ್ಲಿ ಮೂಡುಬಿದರೆಯ ಸಮೀಪದ ಪ್ರಕೃತಿ ರಮಣೀಯ ಕೊಣಾಜೆಕಲ್ಲಿನ ಒಂದು ದಿನದ ಪ್ರವಾಸ ದೇಹಕ್ಕೆ ಆಯಾಸವಾದರೂ ಮನಸ್ಸಿಗೆ ನೆಮ್ಮದಿಯನ್ನು ನೀಡಿತು. ವ್ಯವಸ್ಥಿತವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಐವತ್ತು ಜನರು ಭಾಗವಹಿಸುತ್ತಾರೆ ಎಂದಾದಾಗ ಎಲ್ಲರಿಗೂ ಊಟೋಪಚಾರದ ಬಗ್ಗೆ ಏನು ಮಾಡುವುದು ಎಂಬ ಪ್ರಶ್ನಗೆ ನಾವೇ ಅಲ್ಲಿ ಬಾಣಸಿಗರಾಗಿ ನಮ್ಮ ಮನೆಯ ಕಾರ್ಯಕ್ರಮದಂತೆ ಮಾಡೋಣ ಎಂದಾಗ ಎಲ್ಲರ ಒಪ್ಪಿಗೆಯೂ ದೊರಕಿತು. ಮೊದಲು ಆ ಬೆಟ್ಟದ ತುದಿಯ ಆಶ್ರಮದಲ್ಲಿ ಏನೆಲ್ಲ ವ್ಯವಸ್ಥೆಯಿದೆ ಎಂದು ಅಲ್ಲಿಗೆ ಭೇಟಿ ನೀಡಿದೆವು. ಅಲ್ಲಿನ ಗುರೂಜಿಯವರ ಪೂರ್ಣ ಸಹಕಾರದ ಭರವಸೆ ಪಡೆದು ಕಾರ್ಯೋನ್ಮುಖರಾದೆವು.



ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತಿನ ಸರಿಯಾದ ಅರ್ಥ ಅರಿವಿಗೆ ಬಂತು. ಮೂಡುಬಿದಿರೆಯಿಂದ ಈಶಾನ್ಯದಲ್ಲಿರುವ ಬೆಟ್ಟ ನೋಡುವಾಗ ತುಂಬ ಖುಷಿ. ಆದರೆ ಬೆಟ್ಟದ ತುದಿವರೆಗೆ ಯಾವುದೇ ವಾಹನ ಹೋಗುವುದಿಲ್ಲ. ಬೆಟ್ಟದ ಬುಡದಲ್ಲೇ ವಾಹನ ಇಟ್ಟು ಸರಿ ಸುಮಾರು ಎರಡು ಕಿ.ಮಿ ನಷ್ಟು ಕಲ್ಲು ಬಂಡೆಗಳ ಇಳಿಜಾರು ಗುಂಡುಕಲ್ಲಿನ ದಾರಿಯಲ್ಲಿ ಗಟ್ಟ ಹತ್ತುತ್ತ ಬೆಟ್ಟವೇರುತ್ತ ಸಾಗಿದೆವು. ಬೆಟ್ಟ ಹತ್ತುವಾಗ ಕೊಡಚಾದ್ರಿಯೇ ಮೊದಲಾದ ದೊಡ್ಡ ಬೆಟ್ಟಗಳನ್ನು ಏರಿದ ಅನುಭವ ಪುನರಾವರ್ತನೆಯಾಯಿತು. ಮುಂದೆ ಸಾಗಲು ಅಷ್ಟೊಂದು ಕಷ್ಟವಲ್ಲದಿದ್ದರೂ ಬದಲಾದದ್ದು ನೀನು ಮಾತ್ರ ನಾನಲ್ಲ ಎಂದು ಬೆಟ್ಟ ಅಣಕಿಸುತ್ತಿತ್ತು. ಹತ್ತು ವರ್ಷದ ಹಿಂದೆ ಹೋದ ನನಗೆ ದಾರಿಯುದ್ದಕ್ಕೂ ಯಾವುದೇ ಬದಲಾವಣೆ ಕಾಣಲಿಲ್ಲ. ಆದರೆ ಅಂದು ಏರುವಾಗಿನ ಉತ್ಸಾಹ ಇಂದಿಲ್ಲ ಎಂದಾದರೆ ಪ್ರಕೃತಿ ಬದಲಾಗದು ಮನುಷ್ಯ ಮಾತ್ರ ಬದಲಾಗುತ್ತಾನೆ ಎಂಬುದು ಅರಿವಿಗೆ ಬಾರದಿರದು.



ಸುತ್ತಲಿರುವ ಸುಂದರ ಮರಗಿಡಬಳ್ಳಿಗಳ ವೈವಿಧ್ಯ ಕೆಲವು ಚಿಕ್ಕಗಿಡವಾಗಿದ್ದರೆ ಹಲವು ದೊಡ್ಡ ದೊಡ್ಡ ಮರಗಳು. ದೊಡ್ಡ ದೊಡ್ಡ ಹೆಡೆಯೆತ್ತಿ ನಿಂತ ಹಾವಿನಾಕಾರದ ಬಳ್ಳಿಗಳು, ಗಿಡಮರಬಳ್ಳಿಗಳಲ್ಲಿ ವರ್ಣವೈವಿಧ್ಯ ಹೂಗಳು ಕಣ್ಮನಗಳನ್ನು ಸೆಳೆದರೆ ಹೂವುಗಳ ಪರಿಮಳ ಮನಸ್ಸನ್ನು ತಂಪಾಗಿಸಿತು. ಮಧುವನ್ನು ಹೀರಲು ಬಂದ ದುಂಬಿಗಳ ಝೇಂಕಾರ. ಮೇಲಿಂದ ನೋಡಿದರೆ ಮೂಡುಬಿದಿರೆಯ ವಿಹಂಗಮ ದರ್ಶನ ಹೀಗೆ ಒಂದೇ ಸಮಯದಲ್ಲಿ ಹಲವಂಗದ ಸಂತೋಷ. ಮುಂದೆ ಹೋದಾಗ ಕೊಣಾಜೆಕಲ್ಲು ಎಂಬ ಸಿದ್ಧಾಶ್ರಮ.ಅಲ್ಲಿ ನಾಲ್ಕೈದು ಜನ ವಿರಾಗಿಗಳು ಧ್ಯಾನ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ಷೇತ್ರ ಪಾವಿತ್ರ್ಯ ಕಾಯ್ದುಕೊಂಡು ಬಂದ ಭಕ್ತರಿಗೆ ಪ್ರವಾಸಿಗರಿಗೆ ಕ್ಷೇತ್ರ ದರ್ಶನ ಮಾಡುತ್ತಿರುವುದು ಸಂತಸದ ಸಂಗತಿ. ನೀರೊಂದನ್ನು ಬಿಟ್ಟು ಮತ್ತೆಲ್ಲವನ್ನೂ ತಲೆಹೊರೆಯಲ್ಲಿ ಕೆಳಗಿನಿಂದಲೇ ಕೊಂಡೊಯ್ಯಬೇಕಾದ ಅನಿವಾರ್ಯತೆ ಅಲ್ಲಿದೆ. ಅಧ್ಯಾತ್ಮದ ಬಗೆಗಿನ ಆಸ್ಥೆ ಮಾತ್ರ ಅಲ್ಲಿ ನೆಲೆಸಲು ಬಯಸೀತು.



ಅಲ್ಲಿರುವ ಮಂಗಗಳ ಚೇಷ್ಟೆ ವಾಲ್ಮಿಕಿ ರಾಮಾಯಣದ ವಾಲಿ-ಸುಗ್ರೀವ ಕಾಳಗ ಹಾಗೂ ಅನೇಕ ರಾಮಭಕ್ತರ ಕಥೆಯನ್ನು ಮನಸ್ಸಿಗೆ ತರುತ್ತದೆ. ಇಂತಹ ಮಂಗಗಳೊಂದಿಗೆ ರಾಮ ಅದೇಗೆ ಸೇತುವೆ ರಚಿಸಿ ಲಂಕೆಯನ್ನು ಗೆದ್ದನಪ್ಪ ಎಂಬ ಉದ್ಗಾರ ಹೊರಬರದೇ ಇರದು. ಯಾಕೆಂದರೆ ಅಲ್ಲಿ ಏನಾದರೂ ತಿಂಡಿಯೋ ಹಣ್ಣೊ ಕಾಯಿಯೋ ಕೊಂಡುಹೋದರೆ ವಾನರೇಂದ್ರಾಯ ಸ್ವಾಹಾ ಎಂದು ಬಿಡಬೇಕಾಗುತ್ತದೆ. ಮನಸ್ಸಿಗೆ ತುಂಬಾ ಮುದ ನೀಡುತ್ತದೆ. ಇಂತ ಜಾಗದಲ್ಲಿ ಸಾಧಕರು ಇದ್ದಾರಲ್ಲ. ಇದಲ್ಲವೇ ಭಾರತದ ಶ್ರೇಷ್ಠತೆ. ಇಂತಹ ಸಾಧಕರ ಸಾಧನ ಭೂಮಿಯ ಸ್ಪರ್ಶನಗೈಯಲು ನಮಗೆ ಅವಕಾಶವಾಯ್ತು.



ಐವತ್ತು ಜನರಿಗೆ ಬೇಕಾದ ಭೋಜನ ಸಾಮಗ್ರಿ ಸಣ್ಣಸಣ್ಣ ಕೈಚೀಲಗಳಲ್ಲಿ ತುಂಬಿಸಿ ಸುವ್ಯವಸ್ಥಿತವಾಗಿ ಕೆಳಗಿನಿಂದಲೇ ಕೊಂಡುಹೋಗಿ ಆಶ್ರಮದ ಪಾತ್ರೆ ಗ್ಯಾಸ್ ಬಳಸಿಕೊಂಡು ಅಡುಗೆ ತಯಾರಿಸಲು ಸಿದ್ಧತೆ ಮಾಡಿದೆವು. ಅಲ್ಲಿ ಮಂಗಗಳನ್ನು ಕಾಯುವುದೇ ಎರಡು ಮೂರು ಜನರು ಹಾಗೂ ಮಕ್ಕಳ ಕೆಲಸವಾಯ್ತು. ಬೆಳಿಗ್ಗೆ ಎಂಟುವರೆಗೆ ಹೊರಟು ಒಂಬತ್ತುವರೆಗೆ ತಲುಪಿ ಅವಲಕ್ಕಿ ಪಾನಕ ಸಿದ್ದಮಾಡಿ ಸ್ವೀಕರಿಸಿದೆವು. ಅನಂತರ ಅಡುಗೆ ಸಿದ್ದತೆ. ಅಲ್ಲೇ ಪಕ್ಕದಲ್ಲಿರುವ ದೇವಿಮಂದಿರದಲ್ಲಿ ಸುವಾಸಿನಿಯರು ಕುಂಕುಮಾರ್ಚನೆ ಮಾಡಿದರು. ಅನಂತರ ವಿಶಿಷ್ಟ ಕಾರ್ಯಕ್ರಮ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮುದ್ರಾಪರಿಚಯ ಹಾಗೂ ವರ್ಣಚಿಕಿತ್ಸೆಯ ಕುರಿತು ಪ್ರಾಯೋಗಿಕ ಉಪನ್ಯಾಸ ನಡೆಯಿತು. ಅನುಭವ ಮಾತಾಡಿಸುತ್ತದೆ. ಅವರ ಒಂದೊಂದು ಮಾತೂ ಕೂಡ ಸುಲಲಿತವಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇತ್ತು. ಎರಡು ಗಂಟೆ ಉಪನ್ಯಾಸವನ್ನು ಒಬ್ಬರೇ ನಿರಂತರವಾಗಿ ಮಾಡಿದರೂ ಒಬ್ಬರಿಗೂ ಆಕಳಿಕೆ ಬಾರದ ರೀತಿಯಲ್ಲಿ ಲಲಿತವಾಗಿ ಹಾಸ್ಯಮಯವಾಗಿ ನಿರೂಪಿಸಿದ್ದು ಅದ್ಭುತವಾದದ್ದು. 65 ವರ್ಷ ವಯಸ್ಸಾದರೂ ಹದಿಹರೆಯದ ಹುಡುಗನ ಉತ್ಸಾಹ ಅವರಲ್ಲಿ ಕಂಡಿತು. ಬೀಜಾಕ್ಷರದೊಂದಿಗೆ ಮುದ್ರೆ ಮಾಡಿದರೆ ಏನು ಪ್ರಯೋಜನ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿದರು. ಚಕ್ರಗಳ ಬಗೆಗೆ ಮಾಹಿತಿ ನೀಡಿ ಬಣ್ಣ ಚಿಕಿತ್ಸೆಯ ಕುರಿತು ಅರಿವು ಮೂಡಿಸಿದರು. ಬದುಕಿನ ಬಣ್ಣ ಬದಲಾಗಬೇಕಾದರೆ ಬಣ್ಣದ ಬದುಕನ್ನು ಆಸ್ವಾದಿಸಬೇಕು. ಪ್ರಕೃತಿಯನ್ನು ಆಸ್ವಾದಿಸಬೇಕು ಎಂದು ತಿಳಿಸಿದರು.


ಆಪ್ತವಾದ ಕಾರ್ಯಕ್ರಮ ಪ್ರಕೃತಿಯ ಮಡಿಲಲ್ಲಿ ಶೃಂಗದ ತುದಿಯಲ್ಲಿ ಆಶ್ರಮದ ಆಶ್ರಯದಲ್ಲಿ ನಡೆದದ್ದು ಸಂತೃಪ್ತಿಯನ್ನು ನೀಡಿತು. ನಂತರ ಭೋಜನ ಸವಿದು ಆಶ್ರಮ ಸುತ್ತಾಡಿ ಸಿದ್ಧಪುರುಷರಿಗೆ ನಮಸ್ಕರಿಸಿ ಅಲ್ಲಿಂದ ಹೊರಟೆವು. ನಮ್ಮೊಂದಿಗೆ ಹೋಗದ ಹೊಸ ಅತಿಥಿಯೊಬ್ಬ ನಾವು ಬೆಟ್ಟ ಇಳಿಯುವಾಗ ನಮ್ಮ ಜೊತೆಯಾದ. ಅವನ ಅಬ್ಬರ ಆರ್ಭಟ ನೋಡಿ ನೆನೆಯುತ್ತಾ ಮನೆಸೇರಿದೆವು.


- ವೆಂಕಟ್ರಮಣ ಕೆರೆಗದ್ದೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top