ಬದುಕಿರುವಾಗ ಕಥೆಯಾಗಿದ್ದ ನಟ ಲೋಕೇಶ್ ನಿಧನಾನಂತರ ದಂತಕಥೆಯಾಗಿ ಹೋದರು! ನಿಮಗಿದು ಸ್ವಲ್ಪ ವಿಚಿತ್ರವಾಗಿ ಕಾಣಬಹುದು. ಆದರೆ ಓದುತ್ತಾ ಹೋದಂತೆಲ್ಲಾ ಆವರಿಸುವ ಗಾಢ ವಿಷಾದ ಮಾತ್ರ ಯಾವ ಧೈರ್ಯಸ್ಥನೂ ಭರಿಸುವಂಥಾದ್ದಲ್ಲ...
'ಗೆಂಡೆತಿಮ್ಮ' ಅನ್ನಿ, 'ಅಯ್ಯು' ಅನ್ನಿ, 'ಬ್ಯಾಂಕರ್ ಮಾರ್ಗಯ್ಯ' ಅನ್ನಿ... ಈ ಎಲ್ಲಾ ಪಾತ್ರಗಳಲ್ಲೂ ಮಿಂಚಿ ಪ್ರೇಕ್ಷಕರನ್ನು ರಂಜಿಸಿದ್ದ ಲೋಕೇಶ್ ಅವರು ನಿಧನರಾದದ್ದು 2004ನೇ ಇಸವಿಯ ಅಕ್ಟೋಬರ್ 16ರಂದು. ನಿಧನಾನಂತರ ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಬೇಕೆನ್ನುವುದು ಲೋಕೇಶ್ ಆಸೆಯಾಗಿತ್ತು. ಅವರ ಆಸೆಯಂತೆಯೇ ಅಂದೇ ದೇಹವನ್ನು ರಾಮಯ್ಯ ಆಸ್ಪತ್ರೆಗೆ ಒಪ್ಪಿಸಿದ್ದರು ಅಮ್ಮ- ಮಗ. ಅಚ್ಚರಿಯ ವಿಷಯವೇನು ಗೊತ್ತೇ? ಹಾಗೆ ದಾನವಾಗಿ ಕೊಟ್ಟ ಲೋಕೇಶ್ ಶವವನ್ನು ಅಲ್ಲಿನ ಬಹುರಕ್ಷಿತ ವಿಶಾಲವಾದ ಫ್ರೀಜರ್ ಕೋಣೆಯ ವಿಲಕ್ಷಣ ದ್ರಾವಣದ ಟ್ಯಾ0ಕ್'ನಲ್ಲಿ ತೇಲುವುದನ್ನು ನಾನು ನೋಡಿ ಬಂದಿದ್ದೇನೆ! ವಾಸ್ತವವಾಗಿ ಇಂಥಾ ಮೆಡಿಕೇಟೆಡ್ ಬಾಡಿಯನ್ನು ನೋಡಲು ಆಸ್ಪತ್ರೆಯ ಸಿಬ್ಬಂದಿ ವರ್ಗ ಬಿಡುವುದಿಲ್ಲ. ಆದರೆ ನನ್ನ ಮತ್ತು ಗೆಳೆಯ ವೀರೇಶ್ ಒತ್ತಾಯ ಮತ್ತು ಒತ್ತಡದಿಂದಾಗಿ ಇದು ಸಾಧ್ಯವಾದದ್ದು ಯೋಗಾಯೋಗ!
ರಾಮಯ್ಯ ಆಸ್ಪತ್ರೆಯಲ್ಲಿ ದಾನವಾದ ಯಾವುದೇ ದೇಹಕ್ಕೆ ಅಲ್ಲಿನ ವೈದ್ಯ ಬಳಗ ನೀಡುವ ಟ್ರೀಟ್ಮೆಂಟಿನ ವಿವರ ಇಂತಿದೆ: 5 ಲೀಟರ್ ಫಾರ್ಮಾಲಿನ್, 5 ಲೀಟರ್ ನೀರು, 1 ಲೀಟರ್ ಉಪ್ಪು ಸೇರಿಸಿ ಮಾಡಿದ ವಿಲಕ್ಷಣ ದ್ರವವನ್ನು ಶವದ ಕುತ್ತಿಗೆಯ ಭಾಗದಲ್ಲಿ ಕುಯ್ದ ಗಾಯದೊಳಗೆ ಇಂಜೆಕ್ಟ್ ಮಾಡಲಾಗುತ್ತದೆ. ಮುಂದಿನ ಹತ್ತೇ ಹತ್ತು ನಿಮಿಷಗಳಲ್ಲಿ ಕ್ಲೀನ್ ಶೇವ್ ಮಾಡಿದ ಬೆತ್ತಲೆ ಬಾಡಿ ಸೆಟೆದುಕೊಂಡು ಬಿಡುತ್ತದೆ. ಹೀಗೆ ಸೆಟೆದುಕೊಂಡ ಬಾಡಿಯನ್ನು ಸಿಮೆಂಟ್ ಟ್ಯಾ0ಕಿನಲ್ಲಿ ತುಂಬಿಸಿಟ್ಟ ವಿಲಕ್ಷಣ ದ್ರಾವಣ ಮಿಕ್ಸ್ ಮಾಡಿರುವ ನೀರಿನಲ್ಲಿ ಹಾಕಿ ಬಿಡುತ್ತಾರೆ. ಹೀಗೆ ಮಾಡಿದರೆ ಮಾತ್ರ ಶವ ವರ್ಷಗಟ್ಟಳೆ ಕೊಳೆಯದೇ ಸುರಕ್ಷಿತವಾಗಿರುತ್ತದೆ. ನಂತರದ ನಿಗದಿತ ವರ್ಷಗಳಲ್ಲಿ ಈ ಬಾಡಿ ಕ್ಯೂನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಟೇಬಲ್ ಮೇಲೆ ಬರುತ್ತದೆ. ಆನಂತರವಷ್ಟೇ ಆಯಾ ಶವದ ಅಂಗಾಂಗ, ನರಮಂಡಲಗಳ ಅಧ್ಯಯನ ನಡೆಯುತ್ತದೆ. ಅಧ್ಯಯನದ ನಂತರ ಅದನ್ನು 'ಸ್ಕ್ರಾಪ್ ಬಾಡಿ' ಎಂದು ಕರೆಯಲಾಗುತ್ತದೆ! ಲೋಕೇಶ್ ಶವ ಕೂಡಾ 'ಸ್ಕ್ರಾಪ್ ಬಾಡಿ'ಯಾದದ್ದು ಹೀಗೆಯೇ...
ಇಂದಿಗೆ ಸರಿಯಾಗಿ ಹದಿನೇಳು ವರ್ಷಗಳ ಹಿಂದೆ ಲೋಕೇಶ್ ಅವರ ಶವವನ್ನು ರಾಮಯ್ಯ ಆಸ್ಪತ್ರೆಗೆ ತರುವ ಮೊದಲು ಸಾರ್ವಜನಿಕ ವೀಕ್ಷಣೆಗಾಗಿ ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ಬಯಲು ರಂಗಮಂದಿರದ ವೇದಿಕೆ ಮೇಲೆ ಇಡಲಾಗಿತ್ತು. ಅಲ್ಲಿಂದ ನೇರವಾಗಿ ಆ0ಬ್ಯುಲೆನ್ಸ್'ನಲ್ಲಿ ಶವ ಹೋದದ್ದೇ ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ. ನಂಬಿದ್ರೆ ನಂಬಿ, ಬಿಟ್ರೆ ಬಿಡಿ: ಯಾವ ಶವವನ್ನು ವೀಕ್ಷಿಸಲೆಂದು ಸಂಸ ರಂಗ ಮಂದಿರದ ವೇದಿಕೆಯ ಮೇಲೆ ಸಹಸ್ರಾರು ಮಂದಿ ಗೆಳೆಯರು, ಬಂಧುಗಳು, ರಂಗಭೂಮಿಯ ಸಹಚರರು, ಚಿತ್ರರಂಗದ ಗಣ್ಯರು ಕ್ಯೂನಲ್ಲಿ ನಿಂತು ವೀಕ್ಷಿಸಿದರೋ ಅದೇ ಶವ ಕೇವಲ ಎರಡೇ ಎರಡು ಗಂಟೆಗಳಲ್ಲಿ ರಾಮಯ್ಯ ಆಸ್ಪತ್ರೆಯ ಶವಾಗಾರದ ಬಾಗಿಲಲ್ಲಿ ಅನಾಥವಾಗಿ ಬಿದ್ದಿತ್ತು! ಮನುಷ್ಯ ಸತ್ತ ಮರು ಘಳಿಗೆಯಲ್ಲೇ ಶವವಾಗಿ ಬಿಡುತ್ತಾನೆ. ಅದನ್ನು 'ಬಾಡಿ' ಎಂದು ಕರೆಯಲಾಗುತ್ತದೆ! ಅದು ತ್ಯಾಜ್ಯ ಬಾಡಿ...
'ಅತಿಗಣ್ಯರ ಶವಕ್ಕೆ ಬೇರೊಂದು ಪ್ರತ್ಯೇಕವಾದ ವ್ಯವಸ್ಥೆ ಇಲ್ಲವೇ?'- ಎಂದು ಪ್ರಶ್ನಿಸಿದರೆ ರಾಮಯ್ಯ ಮೆಡಿಕಲ್ ಕಾಲೇಜಿನ ಆಗಿನ ಅನಾಟಮಿ ವಿಭಾಗದ ಪ್ರೊ| ಆರ್.ಎನ್.ಕುಲಕರ್ಣಿ ಉತ್ತರಿಸಿದ್ದು ಹೀಗೆ: 'ಗಣ್ಯರು, ಅತಿಗಣ್ಯರು, ನಗಣ್ಯರು ಎಂಬ ಭೇದಭಾವ ನಮ್ಮಲ್ಲಿಲ್ಲ. ನಮ್ಮ ಮುಂದಿರುವುದು ಬರೀ ನಿರ್ಜೀವ ಶವ ಅಷ್ಟೇ. ಆತ ವೈದ್ಯನೇ ಆಗಿರಲಿ, ನ್ಯಾಯಾಧೀಶನೇ ಆಗಿರಲಿ, ಪೊಲೀಸ್ ಅಧಿಕಾರಿಯೇ ಆಗಿರಲಿ ಅಥವಾ ಪ್ರಧಾನಮಂತ್ರಿ, ರಾಷ್ಟ್ರಪತಿಯೇ ಆಗಿರಲಿ ನಮ್ಮ ದೃಷ್ಟಿಯಲ್ಲಿ ಅದು ಬಾಡಿ ಅಷ್ಟೇ...'
ಇಂಥಾ ಲೋಕೇಶ್ ಅವರ ಶವಕ್ಕೆ ಮೋಕ್ಷ ಸಿಕ್ಕಿದೆ. ವರ್ಷಗಳ ಹಿಂದೆಯೇ ಈ ಶವದ ಅಧ್ಯಯನ ಪರೀಕ್ಷೆ ನಡೆದಿದೆ. ಲೋಕೇಶ್ ಬಾಡಿ ಸ್ಕ್ರಾಪ್ ಆಗಿದೆ. ಅಧ್ಯಯನ ಮಾಡಿದ ವೈದ್ಯ ವಿದ್ಯಾರ್ಥಿಗಳು ಜಗತ್ತಿನ ಯಾವುದೋ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರಬಹುದು. ನೆನಪಿಡಿ : ಹಾಗೆ ಅಧ್ಯಯನ ನಡೆಸುವಾಗ ಅದು ಲೋಕೇಶ್ ಬಾಡಿ ಎಂದು ಯಾವ ವಿದ್ಯಾರ್ಥಿಗೂ ಗೊತ್ತಿರುವುದಿಲ್ಲ. ಏಕೆಂದರೆ ಎಲ್ಲಾ ಶವಗಳು ನೋಡಲು ತದ್ರೂಪಿಗಳೇ! ಕತ್ತರಿಗುಪ್ಪೆಯ 'ಶಬರಿ' ಎಂಬ ಹೆಸರಿನ ಮನೆಯ ಗೋಡೆ ಮೇಲೆ ಲೋಕೇಶ್ ಫೋಟೋ ನಗುತ್ತಿದೆ! ಇವರ ಶವ ಪರೀಕ್ಷೆಯ ಅಧ್ಯಯನ ನಡೆಸಿದ ವೈದ್ಯರಾದವರ ಮುಖದಲ್ಲಿ ನಗು ಅರಳಿದೆ. ಬದುಕು ಸಾರ್ಥಕ ಅಂತನ್ನುವುದಕ್ಕೆ ಇದಕ್ಕಿಂಥಾ ಬೇರೆ ನಿದರ್ಶನ ಬೇಕಾ?
◆ ಅಂದಹಾಗೆ, ಹದಿನೈದು ವರ್ಷಗಳ ಹಿಂದೆಯೇ ನಾನು, ನನ್ನ ಶ್ರೀಮತಿ ಗಾಯತ್ರಿ, ಹಿರಿಯ ಮಗ ಅಭಿಷೇಕ್, ಕಿರಿಯ ಮಗ ಅಲೋಕ್ ಅದೇ ರಾಮಯ್ಯ ಆಸ್ಪತ್ರೆಗೆ ಹೋಗಿ ದೇಹದಾನ ಮಾಡಿ ಬಂದಿದ್ದೇವೆ...
- ಗಣೇಶ್ ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ