ಪೆನ್ನು-Punಉ : ಲೆಕ್ಕ ಬರೆಯಲು ಹೇಳಿಕೊಟ್ಟ ಲೆಕ್ಕಣಿಕೆ

Upayuktha
0

 Reynolds ನನ್ನೆದೆಯ ಹೊನ್ನಾಡನಾಳುವಳು ಬಿಳಿಯ ಸೀರೆಯ ಚೆನ್ನೆ ನನ್ನ ಪೆನ್ನು




"Be calm, ನೀನು ಎಕ್ಸಾಮ್ ಕಟ್ಟು, ನಿನ್ನ ಜೊತೆ ಬಂದು, ಪರೀಕ್ಷೆಯಲ್ಲಿ ನಾನು ಉತ್ತರ ಬರೆದು ಕೊಡ್ತಿನಿ" ಅಂತ ಆಶ್ವಾಸನೆ ಕೊಟ್ಟು, ಅಕೌಂಟೆನ್ಸಿ, ಕಾಸ್ಟಿಂಗ್, ಸ್ಟ್ಯಾಟಿಸ್ಟಿಕ್ಸ್, ಕಮರ್ಷಿಯಲ್ ಲಾ, ಇನ್‌ಕಮ್‌ ಟ್ಯಾಕ್ಸ್... ಎಲ್ಲ ಬರೆಯುತ್ತ, B.Com ಪರೀಕ್ಷೆಯ ಕೊನೆಯವರಿಗೂ ನನ್ನ ಜೊತೆಯಿದ್ದು, ನನ್ನನ್ನು ಪದವೀಧರನನ್ನಾಗಿಸಿದ್ದು ಇದೇ ರೆನಾಲ್ಡ್ ಪೆನ್!!!


ಅದಕ್ಕಿಂತ ನಾಲ್ಕಾರು ವರ್ಷಗಳು ಹಿಂದಕ್ಕೆ ಹೋದರೆ....


ಬಂಗಾರದ ಕಲ್ಲರ್‌ನ ಕ್ಯಾಪು, ಕಪ್ಪು ಬಣ್ಣದ ಪೆನ್ನು. ಹೆಸರು 'ಹೀರೋ' ಅಂತ. ಅದರಲ್ಲಿ ಥರ್ಮಾಮೀಟರ್‌ನಲ್ಲಿ ಪಾದರಸ ಕಾಣುವ ಹಾಗೆ ಇಂಕು ಎಷ್ಟಿದೆ ಅಂತ ಕಾಣುವ ಹಾಗಿನ ಹೀರೋ ಪೆನ್ ಕೂಡ ಬಂದಿತ್ತು. ಇಂಕನ್ನು ಪೆನ್ನಿಗೆ ಹಾಕಲು ಇಂಕ್ ಪಿಲ್ಲರ್ರು (ಫಿಲ್ಲರ್ರು!!).  ಇಂಕು ಚೆಲ್ಲಿ.....ನೀಲಿ ಬಣ್ಣ ಪಡೆದ ನೋಟ್ಸ್ ಬುಕ್ಕು..... ಒಗೆದರೂ ಹೋಗದ ಇಂಕಿನ ಕಲೆ ಇರುವ ಪಾಠೀ ಚೀಲ.... ಬರೆಯುವಾಗ ಇಂಕಿನ ಪರಿಮಳ.... (ನೋಟ್ಸ್‌ಬುಕ್ಕು ಮತ್ತು ಟೆಕ್ಸ್ಟ್ ಬುಕ್ಕುಗಳೂ ಒಂದು ರೀತಿಯ ಘಮ್ ಅಂತ ಪರಿಮಳ ಬರ್ತಾ ಇತ್ತು.  ಈಗ ಆ ಪರಿಮಳ ಇಲ್ಲ.  ಅಥವಾ ನಾನು ಪುಸ್ತಕಕ್ಕೆ ಮೂಗು ತೂರಿಸಿದ್ದು ಕಮ್ಮಿ ಆಗಿರಬಹುದು!) 'ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್' ಅಂತ ಆಗಲು ಆಗ ಪೆನ್ನುಗಳೂ ಕಾರಣವಾಗಿದ್ದ ಕಾಲ!!


ಆ ಮೇಲೆ ಬಂದ 'ಲೆಡ್' ಪೆನ್ನು. ಅದರಲ್ಲೂ ಅದರ ತಲೆ ಮೇಲೆ ಒಂದು ಬಾರಿ ಒತ್ತಿದರೆ 'ರಿಫೀಲ್ ಲೆಡ್' ಒಳಗೆ ಹೋಗುವುದು, ಇನ್ನೊಂದ್ಸಲ ಒತ್ತಿದರೆ ಹೊರಗಡೆ ಬಂದು "ಏನ್ ಬರಿತೀರಾ ಬರೀರಿ" ಅನ್ನುವ ಹಾಗೆ ಇರೋದು. ಅಂತಹ ಪೆನ್ನುಗಳ ತಲೆ ಒತ್ತಿ ಒತ್ತಿಯೇ ಆ ಪೆನ್ನು ಕಸದ ಬುಟ್ಟಿ ಸೇರೋದು!!  


ತೀರ ಟೆನ್ಷನ್ ಆದಾಗ ಬಾಲ್ ಪೆನ್ ತಲೆ ಒತ್ತಿದರೆ ಸ್ವಲ್ಪ ರಿಲ್ಯಾಕ್ಷೇಷನ್ ಸಿಕ್ತಾ ಇತ್ತು!!!


ಬಾಲ್ ಪೆನ್ನಿನಲ್ಲಿ ನಾಲ್ಕು ಕಲ್ಲರಿನ 'ಲೆಡ್ ಪೆನ್ನು'!! ಹಸಿರು, ನೀಲಿ, ಕಪ್ಪು, ಕೆಂಪುಗಳ ಬಹುತ್ವ!! 


ಆ ಮೇಲೆ ಬಂದಿದ್ದು ನನಗೆ ಪದವಿ ಪ್ರದಾನ ಮಾಡಿಸಿದ ಸರಳವಾದ ಈ ರೆನಾಲ್ಡ್ ಎಂಬ ನೀಲಿ ಕ್ಯಾಪಿನ ಬಿಳೀ ಪೆನ್ನು. ಅದರಲ್ಲಿ '045 fine carbure' ಅಂತ ಒಂದು, '045 bold' ಅಂತ ಇನ್ನೊಂದು.


ಅದರ ಆ್ಯಡ್ ಕೂಡ ಚಂದ ಇತ್ತು!! "ಲಿಕ್ತೇ ಲಿಕ್ತೇ ಲವ್ ಹೋ ಜಾಯೆ" ಅಂತ.  ಅದರಲ್ಲಿ 045 bold ಬೇಸಿಗೆಯಲ್ಲಿ ಸ್ವಲ್ಪ ಲೀಕೇಜ್ ಆಗ್ತಾ ಇತ್ತು ಆಗ  "ಲಿಕ್ತೇ ಲಿಕ್ತೇ ಲೀಕ್ ಹೋ ಜಾಯೆ" ಅಂತ ತಮಾಷೆ ಕೂಡ ಮಾಡ್ತಾ ಇದ್ರು.


ರೆನಾಲ್ಡ್ ಪೆನ್ನಿನ ತುದಿಯ ಭಾಗ ಪಾರದರ್ಶಕ. ಅಲ್ಲಿ ಒಳಗಡೆ ಅದೇ ಪೆನ್ನಿನಲ್ಲಿ ನಮ್ಮ ಹೆಸರನ್ನು ಪುಟ್ಟ ಚೀಟಿಯಲ್ಲಿ ಬರೆದು, ರೀಫಿಲ್‌ಗೆ ಸುತ್ತಿ ಹಾಕಿಟ್ಟರೆ... ಪೆನ್ನಿನ ಒಳಗೆ ನಮ್ಮ ಹೆಸರು!! 'ಬರೆದು ಹೆಸರು ಮಾಡಬೇಕು', ಬರೆಯುವ ಪೆನ್ನಿನಲ್ಲೇ ನಮ್ಮ ಹೆಸರಿದ್ದರೆ!!? ಅದರ ಗಮ್ಮತ್ ಬೇರೆ.


ಪೆನ್ನಿನ ಇಂಕು ಖಾಲಿಯಾದಾಗ ರೀಫಿಲ್ ಬದಲಾಯಿಸಬೇಕಿತ್ತು. ರಿಫೀಲ್ ಸ್ಥಾವರ ಅಳಿವುಂಟು, ಪೆನ್ನು ಜಂಗಮ ಅಳಿವಿಲ್ಲ!!


ಇವತ್ತಿಗೂ ಬರೆಯುವುದಕ್ಕೆ ಆ ನೀಲಿ ಕ್ಯಾಪ್ ಧರಿಸಿದ, ಬಿಳಿ ರೆನಾಲ್ಡೇ ದಿ ಬೆಸ್ಟ್.


ಪೆನ್ ಬಗ್ಗೆ ಬರೆಯಲು ಹೋದರೆ ಇಂತಹ ಸಂಗತಿಗಳು ತುಂಬಾ ಇವೆ.  ಬರೆಯುವುದಕ್ಕೆ ಪೆನ್ನು ಪೇಪರ್‌ಗಳೇ ಇಲ್ಲ!!!.  ಈಗ ಬರೆಯುವುದು ಮೊಬೈಲ್ ನೋಟ್ ಪ್ಯಾಡ್ ಮೇಲೆ.  ಜೇಬಿನಲ್ಲಿರುವ ರೆನಾಲ್ಡ್ ಪೆನ್ನಿನ ನೀಲಿ ಕ್ಯಾಪ್ ನೋಡ್ತಾ ಇದೆ!!


ಎಲ್ಲೋ ಇಟ್ಟು ಎಲ್ಲೋ ಹುಡುಕಿ ಸಿಗದಿರುವ, ಎಷ್ಟೋ ಹೊತ್ತಿನ ಮೇಲೆ ಸಿಗುವ, ಸಿಕ್ಕಿ ಖುಷಿ ಕೊಡುವ ಬಾಚಣಿಗೆ, ಕನ್ನಡಕಗಳ ಲಿಸ್ಟ್‌ನಲ್ಲಿ ಆಗ ಪೆನ್ನು ಇರ್ತಾ ಇತ್ತು!!!


ಆಧಾರ್ ಬಂದ ಮೇಲೆ,  ಮತ್ತೆ ಹೆಬ್ಬೆಟ್ಟಿನ ಕಾಲಕ್ಕೆ ಹೋದ ಮೇಲೆ "ಒಂಚೂರು ಪೆನ್ ಕೊಡ್ತೀರಾ?" ಅನ್ನುವುದು, ಹಾಗೆ ಕೇಳಿದವರಿಗೆ, ಅದರ ಕ್ಯಾಪ್ ತೆಗೆದು ಇಟ್ಕೊಂಡು ಪೆನ್ ಕೊಡುವ 'ಸಂಬಂಧವೂ' ಈಗಿಲ್ಲ!!!


ಇನ್ನೊಂದು ನಾಲ್ಕ್ ವರ್ಷ, ಪೆನ್ನೂ ಮ್ಯೂಸಿಯಂ ಸ್ಥಾವರ ಸೇರಲಿದೆ!! 


ಅಂತಹ ಒಂದಿಷ್ಟು ರೆನಾಲ್ಡ್ ಪೆನ್ನುಗಳನ್ನು, ಕಲಿಯುಗಾಬ್ದದ 1945ನೇ ಶಾಲಿವಾಹನ ಶಕೆ ಅಂದರೆ ಕಳೆದ ವರ್ಷದ ಒಂದುದಿನ ಅಮೆಜಾನ್ ಮೂಲಕ ತರಿಸಿ, ಅದರಲ್ಲಿ ಒಂದನ್ನು ಡೆಲ್ಲಿ ಕೇಜ್ರಿವಾಲ್ ತರಹ, ಅಥವಾ ಪಬ್ಲಿಕ್ ರಂಗನಾಥ್ ರೀತಿ ನನ್ನ ಜೋಬಿನಲ್ಲಿ ಇರಿಸಿಕೊಂಡಿರುತ್ತೇನೆ.


ಕೆ.ಎಸ್.ನ.ರವರ ಕ್ಷಮೆ ಕೋರಿ, ಅದೇ ರೆನಾಲ್ಡ್ ಪೆನ್ನಿನಲ್ಲಿ ಅವರ ಶೈಲಿಯಲ್ಲಿ ಒಂದು ಪದ್ಯ ಪಲ್ಲವಿ ಗುನುಗುವುದಾದರೆ....


ರೆನಾಲ್ಡು ನನ್ನೆದೆಯ ಹೊನ್ನಾಡನಾಳುವಳು ಬಿಳಿಯ ಸೀರೆಯ ಚೆನ್ನೆ ನನ್ನ ಪೆನ್ನು||


**


ಕೆಲವು ದಿನಗಳ ಹಿಂದೆ, "ಪದವೀಧರ ಆಯ್ಕೆಯ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಕಾನ್ವಕೇಷನ್ ಸರ್ಟಿಫಿಕೇಟ್ ಕಾಪಿ ಕೊಟ್ಟು ಪದವೀಧರರು ನೊಂದಾವಣೆ ಮಾಡಿಕೊಳ್ಳಬಹುದು" ಅಂತ ವಾಟ್ಸಪ್‌ನಲ್ಲಿ ಮಾಹಿತಿ ಬಂದಾಗ, "ಏಯ್, ಬರೀ ವಾಟ್ಸಪ್ ನೋಡ್ತಾ ಕೂರಬೇಡ, ಹೋಗು ಪದವೀಧರರ ಎಲೆಕ್ಷನ್ ಕಾರ್ಡಿಗೆ ಅರ್ಜಿ ಕೊಡು" ಎಂದು ಥಟ್ ಅಂತ ಹೇಳಿದ್ದು ಜೇಬಲ್ಲಿದ್ದ ರೆನಾಲ್ಡ್ ಪೆನ್ನು!!!  


ಪದವೀ ಕೊಡಿಸಿದ ಬಿಳಿಯ ಸೀರೆಯ ಚೆನ್ನೆ ರೆನಾಲ್ಡ್ ಹೇಳಿದ ಮೇಲೆ ಆಗದು ಅನ್ನಲಾಗದೆ, ಪದವೀಪತ್ರ ಫೋಟೋ ಕಾಪಿ ಮಾಡಿ,  ರೆನಾಲ್ಡ್ ಪೆನ್ನಿನಲ್ಲೇ ಅರ್ಜಿ ತುಂಬಿಸಿ ಕೊಟ್ಟು ಮನೆಗೆ ಬಂದರೆ... ಮಗ ನನ್ನ ಜೇಬಿನಲ್ಲಿದ್ದ ನನ್ನ ರೆನಾಲ್ಡ್ ಪೆನ್ನನ್ನೇ ನೋಡುತ್ತ ಒಂದು ಶಾಕಿಂಗ್ ನ್ಯೂಸ್‌ನ್ನು ಓದಿ ಹೇಳಿದ!!!:


"ರೆನಾಲ್ಡ್ಸ್ ಐಕಾನಿಕ್ ಬಾಲ್ ಪಾಯಿಂಟ್ ಪೆನ್ ತಯಾರಿಕೆಯನ್ನು ನಿಲ್ಲಿಸುತ್ತಿದ್ದಾರೆ. ರೆನಾಲ್ಡ್ಸ್ 045 ಫೈನ್ ಕಾರ್ಬ್ಯೂರ್ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ, ಒಂದು ಯುಗದ ಅಂತ್ಯ." ಅಂತ.


ಯಾಕೋ ಬೇಜಾರಾಯ್ತು.


ಮನಸ್ಸಿನಲ್ಲೇ ಒಂದು RIP ಹೇಳಿ, ಶರಟನ್ನು ಹ್ಯಾಂಗರ್‌ಗೆ ಹಾಕಿ, ಬಟ್ಟೆ ಇಡೋ ಜಾಗದಲ್ಲಿ ಇಟ್ಟರೆ... ಜೇಬಲ್ಲಿದ್ದ ಹೊನ್ನಾಡನಾಳುವ ರೆನಾಲ್ಡ್ 045 ಪೆನ್ನಿನ ನೀಲಿ ಕ್ಯಾಪ್ ಮಾತ್ರ ಹೊರಗೆ ಮುಖ ಹಾಕಿ, ಒಮ್ಮೆ ದಿಟ್ಟಿಸಿತು. 'ಒಂದು ಯುಗದ ಅಂತ್ಯ' ಅಂತ ಓದಿದ್ದನ್ನು  ಕೇಳಿಸಿಕೊಂಡ ಜೇಬಿನ ಒಳಗಿದ್ದ ಬಿಳೀ ಬಣ್ಣದ ಪೆನ್ನಿಗೆ ಏನನ್ನಿಸಿತೋ ಏನೋ... ಜೇಬಿನ ಒಳಗೆ ಮೌನವಾಗಿ ಮಲಗಿತ್ತು!!!


ಆದರೆ, ರೆನಾಲ್ಡ್ ಪೆನ್ನಿಗೆ ರಮೇಶ್ ಬೇಗಾರ್ ನಿರ್ದೇಶನದ ಜಲಪಾತ ಸಿನಿಮಾದಂತೆ ದುರಂತ ಕ್ಲೈಮ್ಯಾಕ್ಸ್ ಆಗಲಿಲ್ಲ!!! 


ದ ಡೈರೆಕ್ಟರ್ ಗಾಡ್ ಈಸ್ ಗ್ರೇಟ್!!


'ಒಂದು ಯುಗದ ಅಂತ್ಯ' ಎನ್ನುವ ಶೀರ್ಷಿಕೆಯಲ್ಲಿ ಜಾಲತಾಣದಲ್ಲಿ 'ಬರೆದು' ಹರಿದಾಡಿ, ಪ್ರಸಾರವಾದ ಸುದ್ದಿ ಪರಮಶುದ್ದ ಸುಳ್ಳು.


"ಈ ಸುದ್ದಿಯು ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಆ ತಪ್ಪು, ಓದುಗರನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿದೆ. ರೆನಾಲ್ಡ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗಮನಾರ್ಹ ಅಸ್ತಿತ್ವವನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿದೆ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ."

ಅಂತ ಕಂಪನಿ Newell Brands ಸ್ಪಷ್ಟೀಕರಣ ಕೊಟ್ಟಿದೆ (ದಪ್ಪ ಅಕ್ಷರದಲ್ಲಿ ಬರೆದು). ಹಾಗಂತ ಮಗ ಅರ್ಧ ಗಂಟೆಯಲ್ಲಿ ಮತ್ತೆ ಓದಿ ಹೇಳಿದಾಗ, ಸಂಭ್ರಮ ಆಗಿದ್ದು ಸತ್ಯ. RIP ಯನ್ನು ವಾಪಾಸ್ ತಗೊಂಡೆ.


ಸೋ, Reynolds 045 ಪೆನ್ ಈಗಲೂ ಮಾರ್ಕೇಟ್‌ನಲ್ಲಿ ಸಿಗುತ್ತದೆ.  ಆದರೆ ಎಲ್ಲ ಹತ್ತಿರದ ಸ್ಟೇಷನರಿ ಅಂಗಡಿಗಳಲ್ಲಿ ದೊರೆಯದಿರಬಹುದು.  ಅಮೆಜಾನ್‌ನಲ್ಲಿ ಸಿಗುತ್ತೆ. 


***


ರೆನಾಲ್ಡ್ಸ್ ಪೆನ್‌ನಲ್ಲಿ 045 ಎನ್ನುವುದು, ರೆನಾಲ್ಡ್ಸ್ ತಮ್ಮ ಮೊದಲ ಪೆನ್ ಅನ್ನು ಪರಿಚಯಿಸಿದ ವರ್ಷವನ್ನು ಸೂಚಿಸುತ್ತದೆ. ಮಿಲ್ಟನ್ ರೆನಾಲ್ಡ್ಸ್ ಮೊದಲ ಬಾರಿಗೆ ರೆನಾಲ್ಡ್ಸ್ ಬಾಲ್ ಪಾಯಿಂಟ್ ಪೆನ್ನುಗಳನ್ನು ಅಕ್ಟೋಬರ್ 1945 ರಲ್ಲಿ ಪರಿಚಯಿಸಿದ್ದಂತೆ.


ಈ ಪೆನ್ನಿನಲ್ಲಿ ಬರೆದರೆ ಅಕ್ಷರ ದುಂಡುಗಾಗುತ್ತೆ. ನಾನು ನನ್ನ ಪರಿಚಯದ ಡಾಕ್ಟರ್‌ಗಳಿಗೆಲ್ಲ ಈ ಪೆನ್‌ನ್ನು ಗಿಫ್ಟ್ ಆಗಿ ಕೊಡೋಣ ಅಂತದಿನಿ. ಮೆಡಿಕಲ್ ಶಾಪ್‌ನವರಿಗೆ ಅನುಕೂಲ ಆಗಲಿ ಅಂತ!


ನೀವೂ ರೆನಾಲ್ಡ್ 045 ಬಳಸಿ ನೋಡಿ. "ಲಿಕ್ತೇ ಲಿಕ್ತೇ ಲವ್ ಹೋ ಜಾಯೆ" ಆಗುತ್ತೆ. ಪೆನ್ನಿನ ಮೇಲೆ! ಬರೆಯುವ ಅಭ್ಯಾಸಕ್ಕೆ ಬರ ಬರುವುದು ಬೇಡ. ಒಂದು ಪೆನ್ನು ಎಲ್ಲರ ಜೇಬಿನಲ್ಲೋ, ವ್ಯಾನಿಟಿ ಬ್ಯಾಗಿನಲ್ಲೋ ಸದಾ ಇರಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top