ಪ್ರತಿಭಾನ್ವಿತ ಯಕ್ಷನಟ ಪದ್ಮನಾಭ ಆಚಾರ್ಯರು

Upayuktha
0



ಚಿಕ್ಕಂದಿನಿಂದಲೂ  ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ. ಸುತ್ತಮುತ್ತ ಎಲ್ಲಿ ಯಕ್ಷಗಾನ ಆದರೂ ಬೆಳಗ್ಗಿನವರೆಗೆ ಯಕ್ಷಗಾನ ನೋಡುವ ಹವ್ಯಾಸವನ್ನು ಹೊಂದಿದವರು ಪದ್ಮನಾಭ ಆಚಾರ್ಯರು. 29ನೇ ವಯಸ್ಸಿನವರೆಗೆ ಒಮ್ಮೆಯೂ ವೇಷ ಮಾಡಿದವವರಲ್ಲ. ಪ್ರಸಾದ್ ಮೊಗೆಬೆಟ್ಟುರವರ ಗುರುತನದಲ್ಲಿ ಶ್ರೀ ಮಹಾಲಿಂಗೇಶ್ವರ ಕಲಾ ರಂಗದಲ್ಲಿ ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ ಪದ್ಮನಾಭ ಆಚಾರ್ಯರಿಗೆ ನಂತರ ಇದೇ ಸಂಘದಲ್ಲಿ ಹಾಗೂ ಸುತ್ತಮುತ್ತಲಿನ ಅನೇಕ ಸಂಘಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತು. ಯಕ್ಷಗಾನದಲ್ಲಿ ಏನಾದರೂ ಅಲ್ಪಸ್ವಲ್ಪ ಕಲಿತದ್ದಿದ್ದರೆ ಬಡಗಿನ ಮೇರು ಪ್ರಸಂಗಕರ್ತ, ಯಕ್ಷ ಗುರು, ಯಕ್ಷ ಕವಿ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಂದ.



ಪದ್ಮನಾಭ ಆಚಾರ್ಯರು ವೆಂಕಟರಮಣ ಆಚಾರ್ಯ ಹಾಗೂ ಗಿರಿಜಾ ಆಚಾರ್ಯರ ಪುತ್ರ. ಇವರು ಬಿ.ಎ ವಿದ್ಯಾಭ್ಯಾಸವನ್ನು ಪಡೆದಿದ್ದು, ಒಬ್ಬ ಒಳ್ಳೆಯ ಯಕ್ಷಗಾನ ಕಲಾವಿದರಾಗಿ ರೂಪುಗೊಂಡರು. ರಂಗಕ್ಕೆ ಹೋಗುವ ಮೊದಲು ಗುರುಗಳ ಹತ್ತಿರ ಪ್ರಸಂಗದ ಬಗ್ಗೆ ತಿಳಿದುಕೊಂಡು, ಪದ್ಯದ ಅರ್ಥವನ್ನು ಗುರುಗಳ ಬಳಿ ತಿಳಿದುಕೊಂಡು, ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಒಳ್ಳೆಯ ವೃತ್ತಿ ಕಲಾವಿದರ ವಿಡಿಯೋ ನೋಡಿ ಅವರು ಹೇಳುವ ಅರ್ಥವನ್ನು ಬರೆದುಕೊಂಡು ಕಲಿತು ತಯಾರಿ ಮಾಡಿಕೊಳುತ್ತೇನೆ ಎಂದು ಹೇಳುತ್ತಾರೆ ಪದ್ಮನಾಭ ಆಚಾರ್ಯರು.




ಗದಾಯುದ್ಧ, ಭೀಷ್ಮ ವಿಜಯ, ಚಂದ್ರಹಾಸ ಚರಿತ್ರೆ, ಕಂಸ ದಿಗ್ವಿಜಯ, ಅಭಿಮನ್ಯು ಕಾಳಗ, ಮಾಯಾಪುರಿ, ವೀರಮಣಿ, ದ್ರೌಪದಿ ಪ್ರತಾಪ, ಶ್ವೇತಕುಮಾರ ಚರಿತ್ರೆ, ಲವ ಕುಶ, ಸುದರ್ಶನ ವಿಜಯ ಹಾಗೂ ಇನ್ನೂ ಹಲವಾರು ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ವಿಷ್ಣು, ಕೃಷ್ಣ, ಈಶ್ವರ, ಹನುಮಂತ, ಶ್ವೇತಕುಮಾರ, ಕಂಸ, ಲವ, ಸುಭದ್ರೆ, ದ್ರೋಣ, ಭೀಮ ಇತ್ಯಾದಿ ಇವರ ನೆಚ್ಚಿನ ವೇಷಗಳು.




ಯಕ್ಷಗಾನದ ಜೊತೆಗೆ 3-4 ಬಾರಿ ತಾಳಮದ್ದಳೆ ಅರ್ಥವನ್ನು ಹೇಳುವ ಅವಕಾಶ ಸಿಕ್ಕಿದೆ. ಪಾತ್ರ ಚಿತ್ರ, ಪ್ರಸಂಗಕ್ಕನುಗುಣವಾಗಿ ಉತ್ತಮ ಮಾತುಗಾರಿಕೆಯನ್ನು ಕಲಿಯುವುದು ಯಕ್ಷಗಾನದ ಇನ್ನೊಂದು ಭಾಗ ಅಂದುಕೊಂಡಿದ್ದೇನೆ. ಭಜನೆ ನೆಚ್ಚಿನ ಹವ್ಯಾಸ. ಕಳೆದ 16 ವರ್ಷಗಳಿಂದ ಮಹಾಲಿಂಗೇಶ್ವರ ಭಜನಾ ಮಂಡಳಿ ಕಟ್ಟಿ ಸುತ್ತಮುತ್ತಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಜನೆ ನಡಿಸಿಕೊಟ್ಟಿದ್ದೇವೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ಸೋಮವಾರ ಸಂಜೆ ಭಜನಾ ಕಾರ್ಯಕ್ರಮ ನಿರ್ವಹಿಸುತ್ತಾ ಬಂದಿದ್ದೇವೆ. ಈ ವರ್ಷ ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಘಟಕದ ಅಧ್ಯಕ್ಷನಾಗಿ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಹಲವಾರು ನಾಟಕಗಳಲ್ಲಿ ಅಭಿನಯ ಮಾಡಿದ ಅನುಭವ. ಕ್ರಿಕೆಟ್, ವಾಲಿಬಾಲ್ ಕ್ರೀಡಾಪಟು ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆ ಹೇಳುವ ಅಭ್ಯಾಸ. ಧರ್ಮಸ್ಥಳ ಸ್ವ ಸಹಾಯ ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ಅನುಭವ.




45 ಮಕ್ಕಳಿಗೆ ಕಳೆದ 6 ವರ್ಷಗಳಿಂದ ಪ್ರತೀ ಆದಿತ್ಯವಾರ ಗುರುಗಳಾದ ಪ್ರಸಾದ್ ಮೊಗೆಬೆಟ್ಟು ಹಾಗೂ ದೇವದಾಸ ರಾವ್ ಕೊಡ್ಗಿಯವರ ಮಾರ್ಗದರ್ಶನದಲ್ಲಿ ಯಕ್ಷಗಾನ ತರಬೇತಿ ನಡೆಸಿ ಮಕ್ಕಳಿಂದಲೇ ಪ್ರತೀ ವರ್ಷ ಯಕ್ಷಗಾನ ಪ್ರದರ್ಶನ ಮಾಡಿಸಿದ ಹೆಮ್ಮೆ ನಮ್ಮ ಕಲಾರಂಗಕ್ಕೆ ಎಂದು ಹೇಳುತ್ತಾರೆ ಪದ್ಮನಾಭ ಆಚಾರ್ಯರು.




ಯಕ್ಷಗಾನದ ಇಂದಿನ ಸ್ಥಿತಿ ಗತಿ:-

ಕಾಲದ ಬದಲಾಗಿ ಜನರ ಅಭಿರುಚಿಗೆ ತಕ್ಕಂತೆ ಯಕ್ಷಗಾನ ಅನೇಕ ಬದಲಾವಣೆಯನ್ನು ಕಂಡಿದೆ. ಕಾಲಮಿತಿಗೆ ಒಳಪಡಿಸಿದ್ದರಿಂದ ಪ್ರಸಂಗದಲ್ಲಿ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ. ಪಾತ್ರವನ್ನು ಸಂಪೂರ್ಣವಾಗಿ ಚಿತ್ರಿಸುವುದರಲ್ಲಿ ಅವಕಾಶ ವಂಚಿತರಾಗುತ್ತಾರೆ ಅನ್ನುವುದು ಆಚಾರ್ಯರವರ ಅಭಿಪ್ರಾಯ.



ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ಪ್ರೇಕ್ಷಕರ ಅಭಿರುಚಿ ಭಿನ್ನ ರೀತಿಯಲ್ಲಿರುತ್ತದೆ. ಯಕ್ಷಗಾನ ತನ್ನ ತಾರಾ ಮೌಲ್ಯ ಕಳೆದುಕೊಳ್ಳುವುದಕ್ಕೆ ಕೆಲವು ಹುಚ್ಚು ಪ್ರೇಕ್ಷಕರೇ ಕಾರಣ. ಪ್ರಜ್ಞಾವಂತ ಪ್ರೇಕ್ಷಕ ಯಾವತ್ತೂ ಉತ್ತಮ ಯಕ್ಷಗಾನದ ಚೌಕಟ್ಟನ್ನು ಮಾತ್ರ ಪ್ರೀತಿಸುತ್ತಾರೆ. ಯಕ್ಷಗಾನದ ರಂಗದಲ್ಲಿ ವಿಶೇಷ ಯೋಜನೆಯೇನೂ ಇಲ್ಲ. ಹವ್ಯಾಸಿ ಕಲಾವಿದರಿಂದ ಯಕ್ಷಗಾನವನ್ನು ಪ್ರಧಾನ ಮಾಡಿಕೊಳ್ಳುವುದು ಕಷ್ಟ, ನಮ್ಮ ವೃತ್ತಿ ಬದುಕು, ಸಂಸಾರ ಮೊದಲು ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಬಿಡುವಿನ ಸಮಯವನ್ನು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಇಷ್ಟವಾದ ವೇಷ ಮಾಡಲು ಬಯಸುತ್ತೇನೆ ಎಂದು ಹೇಳುತ್ತಾರೆ ಪದ್ಮನಾಭ ಆಚಾರ್ಯರು.




ಸನ್ಮಾನ ಹಾಗೂ ಪ್ರಶಸ್ತಿ ಸಿಗುವಷ್ಟು ದೊಡ್ಡ ಕಲಾವಿದನಲ್ಲ ಅದರ ನಿರೀಕ್ಷೆಯೂ ಇಲ್ಲ. ಆದರೆ ಕಳೆದ 12 ವರ್ಷಗಳಿಂದ ಹಲವು ಸಂಘ ಸಂಸ್ಥೆಗಳು ಕರೆದು ಅನೇಕ ವೇಷ ಮಾಡುವ ಅವಕಾಶ ಕೊಟ್ಟಿದ್ದಾರೆ. ಇದೇ ದೊಡ್ಡ ಸನ್ಮಾನ ಎಂದು ಹೇಳುತ್ತಾರೆ ಪದ್ಮನಾಭ ಆಚಾರ್ಯರು. ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂಬುದು ಪದ್ಮನಾಭ ಆಚಾರ್ಯರ ಅಭಿಪ್ರಾಯ. 




ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.




-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top