ಯುಕೆಟಿಎಲ್ ಯೋಜನೆಗಾಗಿ ಭೂ ಸ್ವಾಧೀನ ಇಲ್ಲ, ಕೇವಲ ಭೂಮಿ ಬಳಕೆ ಮಾತ್ರ

Upayuktha
0

ಜಿಲ್ಲಾಧಿಕಾರಿಗಳೇ ನಿರ್ಧರಿಸಿದಂತೆ ರೈತರ ಭೂಮಿಗೆ ಪರಿಹಾರ



ಮಂಗಳೂರು: ಬಹು ನಿರೀಕ್ಷಿತ ಯುಕೆಟಿಎಲ್ ಯೋಜನೆಯ ಅನುಷ್ಠಾನಕ್ಕಾಗಿ ಎಲ್ಲೂ ಭೂಮಿಯನ್ನು ಸರಕಾರವಾಗಲೀ, ಅನುಷ್ಠಾನಗೊಳಿಸುವ ಸಂಸ್ಥೆಯಾಗಲೀ ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ. ಬದಲಾಗಿ ಭೂ ಮಾಲಿಕರ ಅನುಮತಿಯೊಂದಿಗೆ, ಅವರ ಭೂಮಿಯನ್ನು ಬಳಸಿ ಯೋಜನೆಯ ಅನುಷ್ಠಾಣ ಮಾಡಲಾಗುತ್ತದೆ. ಯೋಜನೆಗಾಗಿ ಬಳಸಿಕೊಳ್ಳುವ ಭೂಮಿಗೆ ಸೂಕ್ತ ರೀತಿಯ ಪರಿಹಾರವನ್ನು ಜಿಲ್ಲಾಧಿಕಾರಿಗಳೇ ತೀರ್ಮಾನಿಸಿ ನಿರ್ಣಯಿಸುತ್ತಾರೆ. ಭೂಮಿಯ ಹಕ್ಕು ಭೂ ಮಾಲಕರದ್ದೇ ಆಗಿರುತ್ತದೆ ಎಂಬುದು ಗಮನಾರ್ಹ.



ಯೋಜನೆಯವ ವಿದ್ಯುತ್ ಟವರ್ ಹಾಗೂ ವಿದ್ಯುತ್ ತಂತಿ ಸಾಗುವ ಕಾರಿಡಾರ್‌ಗಳಿಗೆ ಭೂ ಪರಿಹಾರ ಮಾರ್ಗಸೂಚಿಯನ್ವಯ ಪರಿಹಾರ ಕಾರ್ಯವನ್ನು ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳೇ ಈ ತೀರ್ಮಾನವನ್ನು ಕೈಗೊಂಡು ರೈತರಿಗೆ, ಭೂ ಮಾಲಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ. ಸರಕಾರ ಅಂದರೆ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಅಂತಿಮಗೊಳಿಸಿದ ದರವನ್ನು ಅನುಷ್ಠಾನಗೊಳಿಸುವ ಕಂಪೆನಿ ಸಂಪೂರ್ಣವಾಗಿ ಪಾರದರ್ಶಕವಾಗಿಯೆ ಪಾವತಿಸಲಿದೆ.



ಭೂಮಿಗೆ ಪರಿಹಾರವೂ ಲಭ್ಯ!: ಗೋಪುರ ನಿರ್ಮಾಣಕ್ಕೆ ಬೇಕಾಗುವ ಜಾಗಕ್ಕೆ ಸೂಕ್ತ ಪರಿಹಾರ ಲಭ್ಯವಾಗಲಿದೆ. ಜಿಲ್ಲಾಧಿಕಾರಿಗಳು ಪ್ರಾದೇಶಿಕವಾರು ದರನಿಗಧಿ ಮಾಡಿ ಭೂಮಾಲಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳು ತಿಳಿಸಿದ ಮೊತ್ತಕ್ಕೆ ಅನುಷ್ಠಾನ ಸಂಸ್ಥೆ ಬದ್ಧವಾಗಿ ಭೂಮಾಲಿಕರಿಗೆ ಹಣ ನೀಡುವ ಕಾರ್ಯವೂ ನಡೆಯಲಿದೆ. ಹಾಗಾಗಿ ಯೋಜನೆಯಿಂದಾಗಿ ಭೂಮಾಲಿಕರಿಗೆ ತಮ್ಮ ಸ್ವಂತ ಭೂಮಿ ತಮ್ಮಲ್ಲೇ ಉಳಿಯುವುದಲ್ಲದೆ, ಟವರ್ ಹಾಗೂ ಕಾರಿಡಾರ್ ಪ್ರದೇಶಕ್ಕೆ ಸೂಕ್ತ ಬೆಲೆಯೂ ಲಭಿಸಿದಂತಾಗುತ್ತದೆ.



ತಲ ತಲಾಂತರಗಳಿಂದ ಕೃಷಿ, ಸೇರಿದಂತೆ ಹಲವು ಚಟವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಜನತೆ ಈ ಯೋಜನೆಯ ಅನುಷ್ಠಾನಕ್ಕೆ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರಕಾರ ಪ್ರಾಯೋಜಕತ್ವದ ರಾಷ್ಟ್ರೀಯ ಯೋಜನೆ ಇದಾಗಿದ್ದು, ಜನತೆ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಕಂಡುಕೊಳ್ಳದಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡುವ ಸಂತ್ರಸ್ಥರಿಗೆ ಸ್ವಂತ ಭೂಮಿ ಮತ್ತೆಂದೂ ಸಿಗಲಾರದು. ಆದರೆ ಈ ಯೋಜನೆಗೆ ಭೂಮಿ ನೀಡುವ ಜನತೆ ಭೂಮಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಮಾತ್ರ ಅವಕಾಶ ನೀಡುತ್ತಾರೆಯೇ ಹೊರತು ಭೂಮಿ ಭೂ ಮಾಲಿಕನ ಒಡೆತನದಲ್ಲೇ ಉಳಿಯುತ್ತದೆ ಎಂಬ ಸತ್ಯ ತಿಳಿಯದೆ ಹೋಗಿದ್ದಾನೆ! ಯೋಜನೆ ಅನುಷ್ಟಾನಗೊಂಡ ನಂತರ ಅ ಪ್ರದೇಶಗಳಲ್ಲಿ ಭತ್ತ, ರಾಗಿ, ಜೋಳ, ಶುಂಠಿ ಅಥವಾ ಇತರ ಕೃಷಿಗಳನ್ನು ಧಾರಾಳವಾಗಿ ಮಾಡಬಹುದಾಗಿದೆ. ಇದರಿಂದ ಯಾವೊಂದು ತೊಂದರೆಯೂ ಉಂಟಾಗುವುದಿಲ್ಲ!


ಭಾರತದ ವಿದ್ಯುತ್ ಬೇಡಿಕೆಯು ಸತತ ಎರಡನೇ ವರ್ಷಕ್ಕೆ ಶೇ6 ಕ್ಕಿಂತ ಹೆಚ್ಚು ಬೆಳೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ದೇಶದಲ್ಲಿ ವಿದ್ಯುತ್ ಅಗತ್ಯವು 1,650.94 ಬಿಲಿಯನ್ ಯುನಿಟ್ ಎಂದು ಅಂದಾಜಿಸಲಾಗಿದೆ.


ಗ್ರಿಡ್ ಇಂಡಿಯಾದ ನ್ಯಾಷನಲ್ ಲೋಸ್ ಡೆಸ್ಪಾಚ್ ಸೆಂಟರ್ ಪ್ರಕಾರ ಜನವರಿ 2022ಕ್ಕೆ ಹೋಲಿಸಿದರೆ ಜನವರಿ 2023ರಲ್ಲಿ ವಿದ್ಯುತ್ ಒಟ್ಟು ಬಳಕೆ 13.5 ಶತಕೋಟಿ ಕಿಲೋವ್ಯಾಟ್ ಅವರ್ಸ್ ಹೆಚ್ಚಾಗಿದೆ.



ಉಷ್ಣ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಕೊರತೆಯು ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಂತಹ ರಾಜ್ಯಗಳನ್ನು ತೀವ್ರವಾಗಿ ಭಾಧಿಸಲಾರಂಭಿಸಿವೆ. ದೆಹಲಿಗೂ ವಿದ್ಯುತ್ ಬಿಕ್ಕಟ್ಟು ಆವರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.


ರಾಜ್ಯದಲ್ಲಿಯೂ ತೀವ್ರ ರೀತಿಯ ವಿದ್ಯುತ್ ಅಭಾವ ಉಂಟಾಗಿದ್ದು ಸರಿಪಡಿಸಲು ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿಯ ಬಗ್ಗೆ ಸರಕಾರ ಪ್ರಯತ್ನಿಸುತ್ತದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.


ಏತನ್ಮಧ್ಯೆ ವಿದ್ಯುತ್ ವಿನಿಮಯಕ್ಕೆ ಕೇಂದ್ರ ಸರಕಾರದ ವನ್ ಗ್ರಿಡ್ ವನ್ ನೇಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನವಾದಲ್ಲಿ ಹೆಚ್ಚುವರಿ ವಿದ್ಯುತ್ ಇರುವ ರಾಜ್ಯಗಳಿಂದ ಅಥವಾ ಪ್ರದೇಶಗಳಿಂದ ಅಗತ್ಯವಿರುವ ಕಡೆಗೆ ಪೂರೈಕೆ ಮಾಡುವುದು ಅತೀ ಸುಲಭವಾಗಲಿದೆ.


ಬಹು ನಿರೀಕ್ಷಿತ ಉಡುಪಿ ಕಾಸರಗೋಡು 400 ಕೆವಿ ಪವರ್ ಲೈನ್ ಪ್ರಾಜೆಕ್ಟ್ ಲೈನ್ ಈ ಯೋಜನೆಯ ಒಂದು ಭಾಗವಾಗಿದೆ. ಇದು ಅನುಷ್ಠಾನವಾದಲ್ಲಿ ಎರಡೂ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಅತ್ಯಂತ ಸುಲಭವಾಗಲಿದೆ.


ಉಡುಪಿ ಜಿಲ್ಲೆಯಿಂದ ಆರಂಭಗೊAಡು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕಾಸರಗೋಡನ್ನು ಸಂಪರ್ಕಿಸುವ ವಿದ್ಯುತ್ ಕಾರಿಡಾರ್ ಯೋಜನೆ ಇದಾಗಿದೆ. ೪೦೦ಕೆವಿ ಪವರ್ ಟ್ರಾನ್ಸ್ಮಿಷನ್ ಮೂಲಕ ಹೆಚ್ಚುವರಿ ವಿದ್ಯುತನ್ನು ಅವಶ್ಯಕವಿರುವ ಫೀಡರ್‌ಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಈ ಯೋಜನೆಯ ಅನುಷ್ಠಾನದಿಂದ ಲಭ್ಯವಾಗಲಿದೆ.


114 ಕಿಲೋಮೀಟರ್ ಉದ್ದದ ವಿದ್ಯುತ್ ಕಾರಿಡಾರ್ ನಿರ್ಮಾಣವಾಗಲಿದೆ. ಈ ಪೈಕಿ 68 ಕಿಲೋ ಮೀಟರ್ ಕಾರಿಡಾರ್ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುವುದು. ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ನಿಡ್ಡೋಡಿ, ಕಲ್ಲಮುಂಡ್ಕೂರು, ತೆಂಕ ಮಿಜಾರು, ಬಡಗ ಮಿಜಾರು ವ್ಯಾಪ್ತಿಯಲ್ಲಿ 17 ಗೋಪುರ ನಿರ್ಮಾಣವಾಗಲಿದೆ. ಬಂಟ್ವಾಳ, ವಿಟ್ಲ ಭಾಗಗಳ ಮೂಲಕ ಕಾಸರಗೋಡನ್ನು ಸಂಪರ್ಕಿಸಲಿದೆ.

ವಿದ್ಯುತ್ ಗೋಪುರ ಹಾಗೂ, ಕಾರಿಡಾರ್‌ಗಾಗಿ ಖಾಸಗಿ ಜಮೀನು ಹಾಗೂ ಸರಕಾರಿ ಜಮೀನು ಬಳಕೆಯಾಗುತ್ತದೆ. ಜನತೆ ವಿದ್ಯುತ್ ಗೋಪುರ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ.



"ದೇಶ, ರಾಜ್ಯದಲ್ಲಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸಶಕ್ತೀಕರಿಸುವ ಯೋಜನೆಗಳಲ್ಲಿ ವನ್‌ಗ್ರಿಡ್ ವನ್ ನೇಷನ್ ಅಗ್ರಸ್ಥಾನದಲ್ಲಿದೆ. ಇದರ ಅಂಗವಾಗಿಯೇ ಯುಕೆಟಿಎಲ್ ಪ್ರಾಜೆಕ್ಟ್ ಅನುಷ್ಠಾನ ಗೊಳ್ಳಲಿದ್ದು, ಒಂದರ್ಥದಲ್ಲಿ ದೇಶದ ಪ್ರಗತಿಯೊಂದಿಗೆ, ಭವಿಷ್ಯದ ಸ್ವಾವಲಂಬನೆಗೆ ಭದ್ರ ಬುನಾದಿ ಈ ಯೋಜನೆಯಾಗಿದೆ. ಭೂಮಾಲಿಕರ ಭೂಮಿಯನ್ನು ಬಳಸಿ, ಯೋಜನೆಯ ಅನುಷ್ಠಾನ ಕಾರ್ಯ ಕೈಗೊಳ್ಳುವುದು ಒಂದಾದರೆ, ಯಾವುದೇ ರೀತಿಯ ಭೂ ಸ್ವಾಧೀನ ಪ್ರಕ್ರಿಯೆ ಈ ಯೋಜನೆಯಲ್ಲಿಲ್ಲ ಎಂಬುದು ಮತ್ತೊಂದು ಪ್ರಮುಖ ಅಂಶ. ಭೂ ಮಾಲಿಕರಿಗೆ ಜಿಲ್ಲಾಧಿಕಾರಿಯವರೇ ಯಾವೊಂದು ಅನ್ಯಾಯವಾಗದಂತೆ ನಿಗದಿಪಡಿಸಿದ ದರವನ್ನು ಕಾನೂನಾತ್ಮಕವಾಗಿ ನೀಡುವ ಕಾರ್ಯ ಆಗಲಿದೆ. ಪ್ರಸರಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಬೆಳೆ, ಮರ, ಹಾನಿ ಈ ರೀತಿಯಾಗಿ ಪ್ರತ್ಯೇಕ ಪರಿಹಾರದ ಅಂಶವನ್ನು ರೂಪಿಸಲಾಗಿದ್ದು ಭಾರತ ಸರಕಾರವು ಸೂಕ್ತ ಮಾರ್ಗಸೂಚಿಯನ್ನು ಅಳವಡಿಸಿಕೊಂಡಿದೆ. ಇದರಲ್ಲಿ 95% ಭೂಮಿ ಮೌಲ್ಯವನ್ನು ಟವರ್ ಬೇಸ್‌ಗೆ ಮತ್ತು 15% ಲೈನ್ ಕಾರಿಡಾರ್‌ಗೆ ನಿಗದಿಪಡಿಸಲಾಗಿದೆ.

ದೇಶದ ಬಹುಪಾಲು ರಾಜ್ಯಗಳು ಇದೇ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸುತ್ತಿದೆ. ಭೂ ದರಗಳು ಹಾಗೂ ಪ್ರಸರಣ ಮಾರ್ಗಗಳಿಗೆ ಪರಿಹಾರದ ಮೌಲ್ಯಮಾಪನ ಮಾಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಅಧಿಕೃತರಾಗಿದ್ದಾರೆಂಬುದು ಗಮನಾರ್ಹ ಅಂಶವಾಗಿದೆ.''


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top