ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ

Upayuktha
0


ಮಂಗಳೂರು: ವಾಮಂಜೂರು ಮೂಡುಶೆಡ್ಡೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.



"ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸಬೇಕು" ಎಂದು ಮನವಿ ಮಾಡಿದರು.



ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, "ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ" ಎಂದರು.



ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ, ಕ್ಷೇತ್ರದ ಗಡಿಬೈಲು ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top