ಪಣಜಿ: ನಾವೆಲ್ಲರೂ ಕನ್ನಡಕ್ಕಾಗಿ ಒಗ್ಗಟ್ಟಾಗಬೇಕು, ಗೋವಾದಲ್ಲಿ ಇನ್ನೂ ಹೆಚ್ಚು ಹೆಚ್ಚು ಕನ್ನಡ ಸಂಘಗಳು ಸ್ಥಾಪನೆಯಾಗಲಿ, ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಬಿಜೆಪಿ ಗೋವಾ ಕರ್ನಾಟಕ ಸೆಲ್ ಕನ್ವೀನರ್ ಉರಳಿ ಮೋಹನ್ ಶೆಟ್ಟಿ ನುಡಿದರು.
ಮುರಗಾಂವ ಶ್ರೀ ದಾಮೋದರ ಮುರಗಾಂವ ಕನ್ನಡ ಸೇವಾ ಸಮೀತಿ ವಾಸ್ಕೊದ ಮುರಗಾಂವ ಎಂಪಿಟಿ ಅಂಬೇಡ್ಕರ್ ಸಭಾಭವನದಲ್ಲಿ ನವೆಂಬರ್ 25 ರಂದು ನೂತನ ಕನ್ನಡ ಸಂಘದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಸಂಘದ ಒಂದು ಉಧ್ಘಾಟನಾ ಸಮಾರಂಭದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿರುವುರು ಇದೇ ಮೊದಲು ಎಂಬಂತಿದೆ. ಇದಕ್ಕೆ ಮಹಿಳಾ ಶಕ್ತಿ ಎಂದು ಹೇಳುತ್ತೇವೆ. ಆಯಾ ಊರಿನಲ್ಲಿ ಸ್ಥಳೀಯವಾಗಿ ಕನ್ನಡ ಸಂಘಗಳು ಸ್ಥಾಪನೆಯಾಗಬೇಕು. ಆಗ ಸ್ಥಳೀಯವಾಗಿರುವ ಕನ್ನಡಿಗರೆಲ್ಲ ಒಗ್ಗಟ್ಟಾಗಲು ಸಾಧ್ಯವಾಗುತ್ತದೆ ಎಂದು ಮೋಹನ್ ಶೆಟ್ಟಿ ನುಡಿದರು.
ಶ್ರೀ ದಾಮೋದರ ಮುರಗಾಂ ಕನ್ನಡ ಸೇವಾ ಸಮೀತಿ ಅಧ್ಯಕ್ಷ ಸಂಗಮೇಶ ಹಗರಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ- ಕನ್ನಡಿಗರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಇಷ್ಟು ದಿನ ಕೂಡ ಕನ್ನಡಿಗರಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಮುಂಬರುವ ದಿನಗಳಲ್ಲಿಯೂ ಕೂಡ ಎಲ್ಲ ಕನ್ನಡಿಗರ ಬೆಂಬಲ ನಮ್ಮ ನೂತನ ಸಂಘಕ್ಕೆ ಅಗತ್ಯ ಎಂದರು.
ಬಿಜೆಪಿ ಕರ್ನಾಟಕ ಸೆಲ್ ದಕ್ಷಿಣ ಗೋವಾ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮಾತನಾಡಿ- ಕನ್ನಡ ರಾಜ್ಯೋತ್ಸವ ಗೋವಾದಲ್ಲಿ ಇಷ್ಟು ವರ್ಷ ನಡೆಸುತ್ತಾ ಬಂದಿದ್ದೇವೆ. ಆದರೆ ಇಷ್ಟು ವರ್ಷವಾದರೂ ಗೋವಾದಲ್ಲಿ ಯಾವುದೇ ಒಂದು ಪಕ್ಷ ತಮ್ಮ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ ಪ್ರಸಕ್ತ ಬಾರಿ ಗೋವಾ ಬಿಜೆಪಿ ಪಕ್ಷವು ಗೋವಾದಲ್ಲಿ ಕನ್ನಡಿಗರಿಗೆ ಬಿಜೆಪಿ ಕರ್ನಾಟಕ ಸೆಲ್ ಎಂದು ಪ್ರತ್ಯೇಕ ಘಟಕ ಮಾಡಿ ನಮಗೆ ಮಾಪ್ಸಾ ಬಿಜೆಪಿ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅವಕಾಶ ಕಲ್ಪಿಸಿತ್ತು. ಗೋವಾ ಸರ್ಕಾರದ ವತಿಯಿಂದ ಗೋವಾದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಮಾತನಾಡಿ- ಸಾಸ್ಮೋಲಿಂ ಬೈನಾ ಕನ್ನಡ ಶಾಲೆ ಅಳಿವಿನಂಚಿನಲ್ಲಿದೆ. ಅದನ್ನು ಉಳಿಸಲು ಸಹಾಯ ಸಹಕಾರ ನೀಡಬೇಕು. ಗೋವಾದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು, ಈ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡಬೇಕು ಎಂದು ಸ್ಥಳೀಯ ಶಾಸಕ ಸಂಕಲ್ಪ ಅಮೋಣಕರ್ ರವರ ಪತ್ನಿ ಶೃದ್ಧಾ ಅಮೋಣಕರ್ ರವರ ಬಳಿ ಮನವಿ ಮಾಡಿದರು.
ವೇದಿಕೆಯಲ್ಲಿ ಚಂದ್ರಶೇಖರ್ ಬಿಂಗಿ, ಸೇವಾ ಸಮೀಯಿ ಮೀತಿಯ ಮಾರ್ಗದರ್ಶಕರಾದ ಮಾಂತೇಶ ಕಾರಿಗೇರಿ, ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿ ಹನುಮಂತ ನರಸಲಗಿ, ಮುರಗಾಂವ ವಾರ್ಡ ನಂ 8 ರ ಸದಸ್ಯೆ ಶೃದ್ಧಾ ಅಮೋಣಕರ್, ಬೈನಾ ರವೀಂದ್ರ ಭವನದ ಉಪಾಧ್ಯಕ್ಷ ಪ್ರಭುದೇಸಾಯಿ, ಕನ್ನಡ ಸಂಘದ ಗೌರವಾಧ್ಯಕ್ಷ ವಿಠ್ಠಲ ಸುನಗದ ಮತ್ತಿತರರು ಉಪಸ್ಥಿತರಿದ್ದರು. ಮಾಂತೇಶ ಕಾರಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿವು ಛಲವಾದಿ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ