ಮಂಗಳೂರಿನ ಎಂ.ಫ್ರೆಂಡ್ಸ್‌ ವತಿಯಿಂದ ಕ್ಲಾಸ್ ಆನ್ ವ್ಹೀಲ್ಸ್ ಕಂಪ್ಯೂಟರ್ ಸಾಕ್ಷರತಾ ಡಿಜಿ ಬಸ್ ನ.18ರಂದು ಲೋಕಾರ್ಪಣೆ

Upayuktha
0





ಮಂಗಳೂರು: ಮಂಗಳೂರಿನ ಪ್ರಸಿದ್ಧ ಸೇವಾ ಸಂಸ್ಥೆಯಾದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಒಂದನ್ನು ನಿರ್ಮಿಸಿ  ನ.18ರಂದು  ಲೋಕಾರ್ಪಣೆಗೊಳಿಸುತ್ತಿದೆ.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮನಪಾ ಮೇಯರ್ ಸುಧೀರ್ ಕಣ್ಣೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಡಿ.ಆರ್. ನಾಯಕ್, ಯೇನೆಪೋಯ ವಿವಿ ಕುಲಪತಿ ಡಾ. ವೈ. ಅಬ್ದುಲ್ಲ ಕುಂಞಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಯುಎಇಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್‌ನ ಮ್ಯಾನೇಜರ್ ಮುಹಮ್ಮದ್ ಹನೀಫ್ ಪುತ್ತೂರು ಭಾಗವಹಿಸಲಿದ್ದಾರೆ.

ಕ್ಲಾಸ್ ಆನ್ ವ್ಹೀಲ್ಸ್ ಕಂಪ್ಯೂಟರ್ ಸಾಕ್ಷರತಾ ಡಿಜಿ ಬಸ್ ಹೆಸರಿನ ಈ ಬಸ್‌ ಅನ್ನು ಲೋಕಾರ್ಪಣೆ ಕುರಿತು ಟ್ರಸ್ಟ್‌ನ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿನೂತನ ಮಾದರಿ ಯೋಜನೆಯ ಬಗ್ಗೆ ವಿವರ ನೀಡಿದರು.


ಶಿಕ್ಷಣದಲ್ಲಿ ನವ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್ ಕಲಿಕೆಯು ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಗ್ರಾಮೀಣ ಮತ್ತು ಹಳ್ಳಿಗಾಡು ಪ್ರದೇಶದ ಮಕ್ಕಳು ಅದರಲ್ಲೂ ಸರಕಾರೀ ಶಾಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.


ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ ಪ್ರಸಿದ್ಧ ಸೇವಾ ಸಂಸ್ಥೆಯಾದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಒಂದನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿದೆ.


"ಕ್ಲಾಸ್ ಆನ್ ವ್ಹೀಲ್ಸ್" ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್, ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ. ವಾರ್ಷಿಕ ಐದು ಸಾವಿರ ಮಕ್ಕಳಿಗೆ ಕಂಪ್ಯೂಟರ್ ನ ಮೂಲಭೂತ ಶಿಕ್ಷಣ ನೀಡುವ ಗುರಿ ಮತ್ತು ಅದಮ್ಯವಾದ ಬಯಕೆಯನ್ನು ಈ ಡಿಜಿಟಲ್ ಬಸ್ ಹೊಂದಿದೆ.


ಬಸ್ ನಲ್ಲಿ ಏನೇನಿದೆ ಗೊತ್ತಾ?

ಕಂಪ್ಯೂಟರ್ ಬಸ್ ನ್ನು ಸಂಪೂರ್ಣ ಕ್ಲಾಸ್ ರೂಮ್ ಆಗಿ ಪರಿವರ್ತಿಸಲಾಗಿದೆ. ತರಗತಿಯೊಳಗೆ ಒಂದು ಟನ್ನಿನ ಎರಡು ಎ.ಸಿ. ಅಳವಡಿಸಲಾಗಿದೆ. ಏಕಕಾಲದಲ್ಲಿ 16 ಅಥವಾ 32 ವಿದ್ಯಾರ್ಥಿಗಳು ಕಲಿಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೀಪೇಡ್, ಮೌಸ್, ಚಾರ್ಜರ್ಸ್, ಕೂರಲು 16 ರಿವೋಲ್ವಿಂಗ್ ಚೆಯರ್ಸ್, 16 ಮಡಚುವ ಸಂವಿಧಾನವಿರುವ ಡೆಸ್ಕ್ ಇದೆ. ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಚೆಯರ್, ಡೆಸ್ಕ್ ನಿರ್ಮಿಸಲಾಗಿದೆ. ಕಾನ್ಫರೆನ್ಸ್ ಗೆ ಪ್ರಾಜೆಕ್ಟರ್, ಪ್ರಸೆಂಟೇಶನ್ ಗೆ ಟಿ.ವಿ., ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಎಲ್ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ. ಅಂತರ್ಜಾಲದ ವಿದ್ಯೆಗಾಗಿ ವೈಫೈ, ಇಂಟರ್ನೆಟ್ ನ್ನೂ ಒಳಗೊಂಡಿದೆ. ಅವಶ್ಯಕತೆಗಾಗಿ ಕಲರ್ ಪ್ರಿಂಟರ್, ಫೋಟೋ ಕೋಪಿ ಮತ್ತು ಸ್ಕ್ಯಾನರ್ ಇದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಜರಾತಿಗೆ ಬಸ್ ಬಾಗಿಲ ಬಳಿ ಅತ್ಯಾಧುನಿಕ ಬಯೋಮೆಟ್ರಿಕ್ ಡಿವೈಸ್ ಸ್ಥಾಪಿಸಲಾಗಿದೆ. ಇತರ ಸಮಯಗಳಲ್ಲಿ 25 ಜನರ ಸಭೆ ಸಮಾರಂಭಗಳನ್ನು ಬಸ್ ನೊಳಗೆ ಎಲ್ಲಿ ಬೇಕಾದರೂ ಮಾಡುವಂತಹ ಮಲ್ಟಿಸ್ಪೆಶಾಲಿಟಿ ವ್ಯವಸ್ಥೆ ಇದೆ. ತರಗತಿ ಒಳ ಹೋಗಲು ಮೂರು ಪ್ರವೇಶ ದ್ವಾರಗಳಿವೆ. ಮಕ್ಕಳ ಸುರಕ್ಷತೆ ಗಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ.

ಸ್ವಂತ ವಿದ್ಯುತ್ ಸಂಚಲನಕ್ಕಾಗಿ 6.8 ಕೆ.ವಿ. ಯ ಅತ್ಯಾಧುನಿಕ ಜನರೇಟರ್, ಹೊರಗಿನ ವಿದ್ಯುತ್ ಸಂಪರ್ಕದ ಸೌಲಭ್ಯದ ಪಾಯಿಂಟ್, ಕೈ ಮುಖ ತೊಳೆಯಲು ಬಸ್ ಟಾಪಲ್ಲಿ 200 ಲೀಟರಿನ ನೀರಿನ ಟ್ಯಾಂಕ್, ವಾಶ್ ಬೇಸಿನ್, 40 ಲೀಟರಿನ ಕುಡಿಯುವ ನೀರಿನ ಸೌಲಭ್ಯ, ಎರಡು ಎಸಿ ಔಟ್ ಡೋರ್ ಯೂನಿಟ್, ಬ್ಯಾಟರಿ ಬಾಕ್ಸ್, ಟೂಲ್ ಬಾಕ್ಸ್, ಪವರ್ ಪಾಯಿಂಟ್ ಮೊದಲಾದವನ್ನು ಬಸ್ ಹೊಂದಿದೆ.


ಬಸ್ ಕನಸು ಕಂಡದ್ದಾದರೂ ಹೇಗೆ?

ಹನೀಫ್ ಪುತ್ತೂರು ಅವರು ಸದ್ಯ ದುಬೈ ಯ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಪ್ರಯೋಗಾಲಯ ದಲ್ಲಿ ಕ್ಲೌಡ್ & ಇನ್ಫ್ರಾ ಸ್ಟ್ರೆಕ್ಚರ್ ಮೆನೇಜರ್ ಆಗಿ ಉದ್ಯೋಗದಲ್ಲಿದ್ದು, ಯುಎಇ ಗೋಲ್ಡನ್ ವೀಸಾ ಹೊಂದಿದ್ದಾರೆ. ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್’ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 


ಯುಎಇಯ ಅಬುದಾಬಿಯಲ್ಲಿನ ಸಂಸ್ಥೆಯೊಂದು ಹಮ್ಮಿಕೊಂಡಿರುವ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಅವರ ಪುತ್ರ ಮಹಮ್ಮದ್ ಹನೀಫ್ ಅವರು ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದರು.


ಹನೀಫ್ ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್ ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು. ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಅದರಲ್ಲಿ ದೊರೆತ ಬಹುಮಾನದ ಮೊತ್ತಕ್ಕೆ ತಮ್ಮಿಂದಾಗುವ ಹಣವನ್ನು ಸೇರಿಸಿ ತಾನು ಸೇವೆಗೈಯ್ಯುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಗೆ ಆ ಮೊತ್ತ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದರು. ಬಸ್ ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ಭಾಗಶಃ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್ ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್ ನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಸುಸಜ್ಜಿತವಾಗಿ ಪರಿವರ್ತಿಸಿದವರು ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್ ನವರು.


ಈ ಬಸ್ ಜಿಲ್ಲೆಯ ಗ್ರಾಮೀಣ ವಿದ್ಯಾಸಂಸ್ಥೆಗಳಿಗೆ ತೆರಳಿ ಶಾಲಾ ಆವರಣದಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಿದೆ. ಒಂದು ವಿದ್ಯಾರ್ಥಿಗೆ ಕನಿಷ್ಟ 15 ರಿಂದ 20 ತಾಸುಗಳ ತರಬೇತಿಯನ್ನು ಹಂತ ಹಂತವಾಗಿ ಕೊಡಲಿದೆ. ಒಂದು ದಿನದಲ್ಲಿ ಮೂರು ಅಥವಾ ನಾಲ್ಕು ಶಾಲೆಗಳಿಗೆ ತೆರಳಿ ತಲಾ ಒಂದರಿಂದ ಒಂದೂವರೆ ತಾಸಿನ ತರಗತಿಯನ್ನು ಬಿತ್ತರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕ ಸಿಲೆಬಸ್ ರಚಿಸಲಾಗಿದೆ. ಬಸ್ ನಲ್ಲಿ ಇಬ್ಬರು ಕಂಪ್ಯೂಟರ್ ಶಿಕ್ಷಕಿಯರು, ಅನುಭವಿ ಚಾಲಕ ಮತ್ತು ನಿರ್ವಾಹಕರು ಇರುತ್ತಾರೆ. ಸರಕಾರಿ ರಜೆ ಹೊರತುಪಡಿಸಿ ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ಡಿಜಿಬಸ್ ಕಾರ್ಯಾಚರಿಸಲಿದೆ. ಈ ಯೋಜನೆಗೆ ವಾರ್ಷಿಕ 10 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ.


ಪ್ರಾರಂಭ ಎಲ್ಲಿಂದ?

ಹನೀಫ್ ಅವರು ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಕುಂಜೂರು ಪಂಜ ಶಾಲೆಯಿಂದಲೇ ಈ ಡಿಜಿ ಬಸ್ ಪ್ರಾರಂಭವಾಗಲಿದ್ದು, ತಾನು ಉನ್ನತ ಹುದ್ದೆಗೇರಿದಾಗ ಕಲಿತ ಶಾಲೆಯನ್ನು ಮರೆತು ಬಿಡುವವರಿಗೆ ಇದೊಂದು ಪ್ರೇರಣಾ ಶಕ್ತಿಯಾಗಿ ಕಲಿತ ಶಾಲೆಗೂ, ಊರಿಗೂ ಹೆಮ್ಮೆಯ ಪ್ರತೀಕವಾಗಲಿದೆ. 


ಎಂ.ಫ್ರೆಂಡ್ಸ್ ನ ಈ ಕಂಪ್ಯೂಟರ್ ಬಸ್ ರಾಜ್ಯಕ್ಕೆ ಹೊಸ ಯೋಜನೆಯಾಗಿದೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತನ್ನ ದಶಮಾನೋತ್ಸವದ ಸವಿ ನೆನಪಿಗಾಗಿ ಈ ವಿದ್ಯಾ ಯೋಜನೆಯನ್ನು ಬಿಡುಗಡೆಗೊಳಿಸಿದೆ. 2013 ರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಪ್ರಾರಂಭವಾದ ಎಂ. ಫ್ರೆಂಡ್ಸ್ ತಂಡ ಇಂದು ಪ್ರಸಿದ್ಧ ಚಾರಿಟಿ ಟ್ರಸ್ಟ್ ಆಗಿ ಪರಿವರ್ತನೆಗೊಂಡಿದೆ. ಕಳೆದ 10 ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಹಲವಾರು ಸೇವಾ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಅನಾರೋಗ್ಯ ಪೀಡಿತರ ಸೇವೆ ಮೂಲಕ ಪ್ರಾರಂಭವಾದ ಟ್ರಸ್ಟ್ ನ ಸೇವೆ ಜಿಲ್ಲೆಯ 8 ಕುಗ್ರಾಮಗಳನ್ನು ಸಮೀಕ್ಷೆ ಮಾಡಿ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸ, ಆರೋಗ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಅನ್ನದಾನದ ಮಹತ್ವವನ್ನು ಅರಿತು ಕಳೆದ ಆರು ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಹವರ್ತಿಗಳಿಗೆ ದಿನನಿತ್ಯ ಸುಮಾರು 500 ಬಡ/ಅಶಕ್ತರಿಗೆ ರಾತ್ರಿಯ ಭೋಜನವನ್ನು ಉಚಿತವಾಗಿ ವಿತರಿಸುತ್ತಿದೆ. ಇದೀಗ ಕಂಪ್ಯೂಟರ್ ಡಿಜಿಟಲ್ ಬಸ್ಸಿನ ಹೊಸ ಯೋಜನೆ ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.


ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ಕೆ., ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಹಾಗೂ ಟ್ರಸ್ಟಿ ಅಬೂಬಕ್ಕರ್ ಪುತ್ತು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top