ಪುಟ್ಟ ಚಹಾ ಹೋಟೆಲ್ ನಲ್ಲಿ ಅಂಧ ವ್ಯಕ್ತಿಯೋರ್ವ ಚಹಾ ಸೇವಿಸುತ್ತಾ ಕುಳಿತಿದ್ದ. ಆತನ ಪಕ್ಕದ ಟೇಬಲ್ ನಲ್ಲಿ ಕುಳಿತ ವ್ಯಕ್ತಿ ಉಬ್ಬು ಅಕ್ಷರದಲ್ಲಿ ಬರೆದ ರಹಸ್ಯ ವಿಷಯವನ್ನು ಮಿಲಿಟರಿ ಅಧಿಕಾರಿಗಳು ಸರಳವಾಗಿ ಡೀಕೋಡ್ ಮಾಡಿ ಓದಿದ ಪರಿಣಾಮವಾಗಿ ಯುದ್ಧ ಕಾರ್ಯಾಚರಣೆಯಲ್ಲಿ ವಿಜಯ ಸಾಧಿಸಿದ ವಿಷಯವನ್ನು ಜೋರಾಗಿ ಓದಿದ. ರಾತ್ರಿಯ ವೇಳೆ ಬೆಳಕಿನ ಸಹಾಯವಿಲ್ಲದೆಯೂ ಈ ಉಬ್ಬು ಚಿತ್ರಗಳಲ್ಲಿನ ಸಂಕೇತಗಳ ಭಾಷೆಯನ್ನು ಅರ್ಥೈಸಿಕೊಳ್ಳಬಹುದು ಎಂಬುದನ್ನು ಅರಿತ ಆ ಅಂಧ ವ್ಯಕ್ತಿ ಅತ್ಯಂತ ಸಂತಸ ಪಟ್ಟ. ಆತನ ಅಂಧಕಾರದ ಬದುಕಿಗೆ ಆಶಾಜ್ಯೋತಿ ಗೋಚರಿಸಿತು.
ದಪ್ಪನೆಯ ಕಾಗದದ ಮೇಲೆ ಸೂಜಿಯಿಂದ ಚುಚ್ಚಿದಾಗ ಅದರ ಕೆಳಗಡೆ ಉಂಟಾಗುವ ಉಬ್ಬುಗಳನ್ನು ಅಕ್ಷರವಾಗಿ ಪರಿವರ್ತಿಸುವ, ನಿರ್ದಿಷ್ಟ ರಂಧ್ರಗಳಿಗೆ ನಿರ್ದಿಷ್ಟ ಅಕ್ಷರಗಳನ್ನು ಗುರುತಿಸಿ ಒಟ್ಟಿನಲ್ಲಿ ಆರು ರಂಧ್ರಗಳನ್ನು ಗುರುತು ಮಾಡಿ ನಂತರ ಅವುಗಳ ಮೇಲೆ ಬೆರಳು ಆಡಿಸಿ ಅಭ್ಯಾಸ ಮಾಡುವ ಪದ್ಧತಿಯನ್ನು ರಚಿಸಿ.. ನಿರಂತರ ಅಭ್ಯಾಸದ ಬಲದಿಂದ ದೃಷ್ಟಿ ಇರುವವರು ಓದುವ ವೇಗದಲ್ಲಿಯೇ ಅಂಧರು ಕೂಡ ಓದುವ ಲಿಪಿಯನ್ನು ಕಂಡುಹಿಡಿದ ಆತನೇ ಇಂದು ಜಗತ್ತಿನಲ್ಲೆಲ್ಲ ಪ್ರಸಿದ್ಧವಾದ...... ಅಂಧ ಜನರ ಪಾಲಿನ ಆಶಾಕಿರಣವಾದ ಫ್ರಾನ್ಸ್ ದೇಶದ ಲೂಯಿ ಬ್ರೈಲ್.
ಲೂಯಿ ಬ್ರೈಲ್ ತಂದೆ ಸೈಮನ್ ಓರ್ವ ಚಮ್ಮಾರ. ಪ್ಯಾರಿಸ್ ನಿಂದ ಸುಮಾರು ನಲವತ್ತು ಕಿಲೋಮೀಟರ್ ದೂರವಿರುವ ಕೋಪವ್ರೆ ಎಂಬ ಊರಿನಲ್ಲಿ ವಾಸವಾಗಿದ್ದ. ಸುತ್ತಿಗೆ, ಮೊಳೆ, ಚರ್ಮ ಮತ್ತು ಅಡಿಗಲ್ಲುಗಳೆ ಆತನ ಸಲಕರಣೆಗಳು. ಹದ ಮಾಡಿದ ಒಣಗಿದ ಚರ್ಮವನ್ನು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆ ಮೊಳೆಗಳ ಸಹಾಯದಿಂದ ಸರಿಯಾದ ಆಕಾರಕ್ಕೆ ತಂದು ಕುದುರೆಗೆ ಬೇಕಾಗುವ ಜೀನುಗಳನ್ನು ಆತ ಸಿದ್ದಪಡಿಸುತ್ತಿದ್ದ. ಚಿಕ್ಕ ಮಗುವಾಗಿದ್ದಾಗಿನಿಂದ ಪ್ರತಿದಿನವೂ ಅಂಗಡಿಗೆ ಬರುತ್ತಿದ್ದ ಆತನ ಮಗು ಲೂಯಿ ಕೂಡ ತಂದೆಯಂತೆಯೇ ಕೈಯಲ್ಲಿ ಅಳಿದುಳಿದ ಚರ್ಮವನ್ನು ಸುತ್ತಿಗೆ ಮತ್ತು ಮೊಳೆಗಳ ಸಹಾಯದಿಂದ ಆಕಾರಕ್ಕೆ ತರುವ ಆಟವಾಡುತ್ತಿದ್ದ. ಹೀಗೆ ಒಂದು ದಿನ ಆಟವಾಡುವಾಗ ಮೊಳೆಯು ಜೋರಾಗಿ ಕಣ್ಣಿಗೆ ತಾಕಿ ಒಂದೇ ಸಮ ರಕ್ತ ಸುರಿಯಿತು... ಕಣ್ಣಿನ ನರಗಳಲ್ಲಿ ಬಾಧೆ ಉಂಟಾಗಿ ಸೋಂಕಿಗೊಳಗಾಯಿತು. ಕಣ್ಣು ಕುರುಡಾಯಿತು. ಕೆಲವೇ ದಿನಗಳಲ್ಲಿ ಇನ್ನೊಂದು ಕಣ್ಣು ಕೂಡ ಸೋಂಕಿಗೊಳಗಾಗಲು ಆ ಮಗು ಸಂಪೂರ್ಣವಾಗಿ ಕತ್ತಲ ಪ್ರಪಂಚಕ್ಕೆ ಜಾರಿತು.
ಕುಳಿತಲ್ಲಿಯೇ ಕುಳಿತು ಕೊಳ್ಳುತ್ತಿದ್ದ ಮಗು ಜೊತೆಗಾರರೊಂದಿಗೆ ಆಟವಾಡಲು ಬಯಸುತ್ತಿತ್ತು. ಮೊದಮೊದಲು ಆತನನ್ನು ಆಟಕ್ಕೆ ಸೇರಿಸಿಕೊಳ್ಳದ ಮಕ್ಕಳು ಕ್ರಮೇಣ ಆತನನ್ನು ಆಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ತನಗೆ ಗೊತ್ತಿಲ್ಲದ ವಿಷಯಗಳನ್ನು ಅರಿತುಕೊಳ್ಳುವಲ್ಲಿ ಆತನು ತೋರುವ ಕುತೂಹಲ ಎಲ್ಲರಿಗೂ ಸೋಜಿಗದ ಸಂಗತಿಯಾಗಿತ್ತು. ಆಟವಾಡುವಾಗ ಮಕ್ಕಳು ತಪ್ಪು ಉತ್ತರ ಹೇಳಿದರೆ, ಬಾಲಕ ಲೂಯಿ ಕೂಡಲೇ ಸರಿಯಾದ ಉತ್ತರವನ್ನು ಹೇಳುತ್ತಿದ್ದ.ಆತನ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿರಲಿಲ್ಲ. ಓಣಿಯ ಜನರು ನಿಧಾನವಾಗಿ ಆತನ ಜಾಣ್ಮೆ, ತಿಳುವಳಿಕೆಗಳಿಗೆ ಮೆಚ್ಚಿದರು. ಆತನ ನೆನಪಿನ ಶಕ್ತಿ, ಜ್ಞಾನ ಮತ್ತು ಓದುವ ಆಸಕ್ತಿಯನ್ನು ಮೆಚ್ಚಿದ ಶಾಲಾ ಶಿಕ್ಷಕರೊಬ್ಬರು ಆತನ ತಂದೆಗೆ ಹತ್ತಿರದ ಊರಿನ ಅಂಧರ ಶಾಲೆಗೆ ಸೇರಿಸಲು ಸಲಹೆ ನೀಡಿದರು. ಸೈಮನ್ ತಡ ಮಾಡದೆ ತನ್ನ ಮಗನನ್ನು ಪ್ಯಾರಿಸ್ ನ ಅಂಧರ ಶಾಲೆಗೆ ಭರ್ತಿ ಮಾಡಿದ. ಸರಿ ಸುಮಾರು ಎಂಟು ವರ್ಷಗಳ ಕಾಲ ಅಲ್ಲಿ ಸಂಗೀತ ಮತ್ತು ಅಕ್ಷರಾಭ್ಯಾಸವನ್ನು ಕಲಿತ ಲೂಯಿಗೆ ಅದೇ ಶಾಲೆಯಲ್ಲಿ ಶಿಕ್ಷಕ ಹುದ್ದೆಯು ಕೂಡ ದೊರೆಯಿತು. ಇದರಿಂದ ಕೊಂಚ ನಿರಾಳನಾದ ಲೂಯಿ ಬ್ರೈಲ್.
ಆ ಸಮಯದಲ್ಲಿ ಅಂಧರಿಗೆ ಕಾಗದದ ಮೇಲೆ ಗಟ್ಟಿ ಮಸಿಯಿಂದ ದಪ್ಪನಾದ ಅಕ್ಷರ ಬರೆದು ಅವುಗಳ ಮೇಲೆ ಬೆರಳು ಆಡಿಸಿ ಓದಿಸುತ್ತಿದ್ದರು. ಕಡ್ಡಿಗಳನ್ನು ಜೋಡಿಸಿ ಓದಿಸಲು ಪ್ರಯತ್ನಿಸುತ್ತಿದ್ದರು. ಮರಳಿನ ಮೇಲೆ ಉಬ್ಬು ಚಿತ್ರಗಳನ್ನು ರಚಿಸಿ ಓದಿಸುತ್ತಿದ್ದರು. ಮೇಣದಲ್ಲಿ ಅಕ್ಷರಗಳನ್ನು ಒಡಮೂಡಿಸಿ ಕಲಿಸುತ್ತಿದ್ದರು. ಆದರೆ ಇದಕ್ಕೆಲ್ಲ ಸಾಕಷ್ಟು ಸ್ಥಳಾವಕಾಶ ಮತ್ತು ಸಮಯ ಬೇಕಾಗುತ್ತಿತ್ತು. ಅಂಧರು ಸಾಮಾನ್ಯ ಜನರಂತೆ ಓದಲು ಸಾಧ್ಯವಾಗುತ್ತಿರಲಿಲ್ಲ. ಲೂಯಿ ಎಲ್ಲಾ ಅಂಧರಿಗೂ ಅನುಕೂಲವಾಗುವ ಲಿಪಿಯೊಂದನ್ನು ತಯಾರಿಸಬೇಕು ಎಂಬ ಆಶಯವನ್ನು ಹೊಂದಿದ್ದ, ಆದರೆ ಸೂಕ್ತ ಸಮಯ ಇನ್ನೂ ಬಂದಿರಲಿಲ್ಲ. ಈ ಸಮಯದಲ್ಲಿಯೇ ಚಹಾದ ಹೋಟೆಲ್ನಲ್ಲಿ ಮೇಲಿನ ಘಟನೆ ನಡೆದದ್ದು ಆತನ ಅಂಧ ಕಂಗಳಿಗೆ ಭರವಸೆಯ ಬೆಳಕು ಗೋಚರಿಸಿತು.
ದಪ್ಪನೆಯ ಕಾಗದದ ಮೇಲೆ ಸೂಜಿಯ ಮನೆಯಿಂದ ಚುಚ್ಚಿದರೆ ಕೆಳಭಾಗದಲ್ಲಿ ಉಬ್ಬು ಬರುವುದಷ್ಟೇ... ಹೀಗೆ ಹುಟ್ಟಿದ ರಂಧ್ರಗಳಿಂದ ಅಕ್ಷರ ಜ್ಞಾನ ಮಾಡಿಕೊಡತೊಡಗಿದ. ನಿರ್ದಿಷ್ಟ ರಂಧ್ರಗಳಿಗೆ ನಿರ್ದಿಷ್ಟ ಅಕ್ಷರ ಎಂದು ನಿರ್ಧರಿಸಿದ ಆತ ಕೊನೆಗೆ ಆರು ರಂಧ್ರಗಳನ್ನು ಗುರುತು ಮಾಡಿದ. ಅವುಗಳ ಮೇಲೆ ಬೆರಳು ಆಡಿಸಿ ಅಭ್ಯಾಸ ಮಾಡುವುದು ಸರಳವಾಯಿತು. ನಿರಂತರವಾದ ಅಭ್ಯಾಸದಿಂದ ದೃಷ್ಟಿ ಇರುವವರು ಓದುವ ವೇಗದಲ್ಲಿಯೇ ಅಂಧರು ಕೂಡ ಓದುವಂತಹ ಲಿಪಿಯನ್ನು ಸಿದ್ದಪಡಿಸಿದ. ಮುಂದೆ ಈ ಲಿಪಿಯನ್ನು ಅಂತರಾಷ್ಟ್ರೀಯ ಮಾನ್ಯತೆಗಾಗಿ ಫ್ರಾನ್ಸ್ ಸರ್ಕಾರಕ್ಕೆ ಕಳುಹಿಸಿದ. ಆದರೆ ಅಂಧರು ಓದುವುದಕ್ಕಾಗಿ ಮಾಡಿದ ಈ ರೀತಿಯ ಬಗ್ಗೆ ಯಾವುದೇ ರೀತಿಯ ಆಸಕ್ತಿ ತೋರದ ಸರ್ಕಾರ ಇದಕ್ಕೆ ಮಾನ್ಯತೆ ನೀಡದೆ ಹೋಯಿತು. ಇದು ಲೂಯಿಗೆ ಆಘಾತವನ್ನು ನೀಡಿತು. ಚಿಂತೆಯಿಂದ ಆತ ಕ್ಷಯ ರೋಗ ಬಾಧಿತನಾದ. ಅಂದು ಕ್ಷಯ ರೋಗಕ್ಕೆ ಯಾವುದೇ ಔಷಧಿ ಇಲ್ಲದೆ ಮುಂದೆ 1852ರ ಜನವರಿ 11ರಂದು ಲೂಯಿ ಮರಣ ಹೊಂದಿದ.
ಲೂಯಿಯ ಮರಣ ನಂತರ ಅಂಧರ ಬಾಳಿನಲ್ಲಿ ವಿಪರೀತ ಸಂಕಷ್ಟ ಉಂಟಾಯಿತು. ಆಗ ತನ್ನ ತಪ್ಪಿನ ಅರಿವಾದ ಸರ್ಕಾರ ಲೂಯಿ ಸಿದ್ಧಪಡಿಸಿದ ಮಾದರಿಗೆ ಮಾನ್ಯತೆ ಕೊಟ್ಟು ಅದನ್ನು ಬ್ರೈಲ್ ಲಿಪಿ ಎಂದು ಹೆಸರಿಸಿತು. ಇಂದಿಗೂ ಅಂಧರ ಬರವಣಿಗೆಗೆ ಬ್ರೈಲ್ ಅಕ್ಷರ ಎಂದು ಕರೆಯುತ್ತಾರೆ. 1929 ರಲ್ಲಿ ಬ್ರೈಲ್ ಅಕ್ಷರದ ಶತಮಾನೋತ್ಸವವನ್ನು ಆಚರಿಸಲಾಯಿತು. ವರ್ಥೋನ್ ನಗರದಲ್ಲಿ ಲೂಯಿ ಬ್ರೈನ್ ನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ತಮ್ಮ ಬಾಳಿನ ಆಶಾಕಿರಣವಾದರೂ ಲೂಯಿ ಬ್ರೈಲ್ ನ ಮೂರ್ತಿಯನ್ನು ವಿಶ್ವಾದ್ಯಂತದ ಅಂಧರು ಸಂದರ್ಶಿಸಿ, ಸ್ಪರ್ಶಿಸಿ ತಮ್ಮ ಹರ್ಷವನ್ನು ಗೌರವವನ್ನು ಸಲ್ಲಿಸುತ್ತಾರೆ. ಮೊಳೆಯಿಂದಲೇ ಕಣ್ಣು ಕಳೆದುಕೊಂಡು ಮೊಳೆ(ಸೂಜಿ)ಯಿಂದಲೇ ಕಣ್ಣಿಲ್ಲದವರಿಗೆ ಅಕ್ಷರವನ್ನು ಸೃಷ್ಟಿಸಿದ ಲೂಯಿ ಬ್ರೈಲ್ ಅಂಧರ ಪಾಲಿನ ಆಶಾಕಿರಣ.
-ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ. ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ