ಭಾಷಾಂತರಕಾರರಿಗೆ ರಾಷ್ಟ್ರೀಯ ಮನ್ನಣೆ ಸಿಗಲಿ: ಡಾ. ಡಿ. ವೀರೇಂದ್ರ ಹೆಗ್ಗಡೆ

Upayuktha
0

 ‘ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ



ಉಜಿರೆ: ಭಾಷಾಂತರಕಾರರಿಗೆ ರಾಷ್ಟ್ರೀಯ ಮನ್ನಣೆ ಸಿಗುವುದು ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.


 


ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಲಾದ ‘ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನ. 22 ರಂದು ಅವರು ಉದ್ಘಾಟಿಸಿ ಮಾತನಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಶ್ರೀ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿ ಮತ್ತು ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕರ್ನಾಟಕ ಭಾಷಾಂತರಕಾರರ ಒಕ್ಕೂಟದ ಸಹಯೋಗದಲ್ಲಿ ಭಾಷಾಂತರಕಾರರ ಮೂರನೆಯ ಸಮಾವೇಶದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


 


ಹೊಸ ಕೃತಿ ರಚನೆ ಮಾಡುವುದಕ್ಕೂ ಒಂದು ಕೃತಿಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರುವುದಕ್ಕೂ ವ್ಯತ್ಯಾಸವಿದೆ. ಆ ಕಾರ್ಯದಲ್ಲಿ ಆಳವಾದ ಅಧ್ಯಯನ, ಹುಡುಕಾಟ ಅಗತ್ಯವಾಗುತ್ತದೆ. ವಿಶೇಷ ಸಹನೆ, ಅನುಭವ, ಜೀವನಾನುಭವ ಬೇಡುವ ಭಾಷಾಂತರ ಕಾರ್ಯ ಸುಲಭವಲ್ಲ. ಅಂತಹ ಮಹತ್ವದ ಕಾರ್ಯಕ್ಕೆ ಮನ್ನಣೆ ಅಗತ್ಯ. ವಿಶ್ವವಿದ್ಯಾನಿಲಯಗಳಿಂದ ಅವರಿಗೆ ಗೌರವ ಸಿಗುವುದು ಉತ್ತಮ. “ಕನ್ನಡ ಸಾಂಸ್ಕೃತಿಕ ಸಂವರ್ಧನೆ ಆಗಬೇಕು ಎನ್ನುವುದು ಎಲ್ಲರ ಆಶಯ. ನಿತ್ಯ ನಾವು ಭಾಷಾಂತರದಲ್ಲಿ ತೊಡಗಿರುತ್ತೇವೆ. ಇಲ್ಲಿ (ಉಜಿರೆ/ ದ.ಕ.) ಕನ್ನಡದಿಂದ ತುಳುವಿಗೆ, ತುಳುವಿನಿಂದ ಕನ್ನಡಕ್ಕೆ ಭಾಷಾಂತರ ಆಗುತ್ತಿರುತ್ತದೆ. ಧಾರವಾಡದಲ್ಲಿ ಅಂಕಿ ಸಂಖ್ಯೆಯಲ್ಲಿ ಮರಾಠಿಯ ಪ್ರಭಾವ ಕಾಣುತ್ತದೆ. ಭಾಷಾಂತರದಲ್ಲಿ ಭಾಷೆಯ ಪರಿಣಾಮ, ಪ್ರಭಾವದ ಅರಿವಾಗುತ್ತದೆ” ಎಂದು ಅವರು ತಿಳಿಸಿದರು.


 



 ಮುಖ್ಯ ಅತಿಥಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿದರು. ಬಹುಸಂಸ್ಕೃತಿ ಮತ್ತು ಬಹುಭಾಷೆ ಭಾರತದ ಸತ್ವ ಮತ್ತು ಸಂಪತ್ತು. ಅದನ್ನು ಕಾಪಾಡುವಲ್ಲಿ ಭಾಷಾಂತರಕಾರರು ಮುಖ್ಯ ಪಾತ್ರ ವಹಿಸುತ್ತಾರೆ. ಜ್ಞಾನವು ನಿಂತ ನೀರಾಗಬಾರದು. ಅದು ಹರಿಯುತ್ತಿರಬೇಕು. ಭಾಷಾಂತರಕಾರರಿಂದ ಅದು ಸಾಧಿತವಾಗುತ್ತಿದೆ. ಭಾಷಾಂತರವು ಕಲೆ ಹಾಗೂ ವಿಜ್ಞಾನವೂ ಆಗಿದೆ. ಅದು ಏಕಕಾಲಕ್ಕೆ ಕಲೆ, ವಿಜ್ಞಾನ ಮತ್ತು ವಾಣಿಜ್ಯದ ಮೌಲ್ಯಗಳನ್ನು ಹೊಂದಿದೆ. ಆಧುನಿಕ ವಾಣಿಜ್ಯ ವ್ಯವಹಾರದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಕೂಡ ಭಾಷಾಂತರ ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೂಡ ಭಾಷಾಂತರ ಕೊಡುಗೆ ನೀಡಿದೆ. ಬಿ.ಎಂ.ಶ್ರೀ. ಅವರಂತಹ ಸಾಹಿತಿಗಳು ಭಾಷಾಂತರದ ಮೂಲಕ ಹೊಸ ಸಾಹಿತ್ಯ ಸೃಷ್ಟಿಯ ಸಾಧ್ಯತೆಗಳನ್ನು ತೋರಿಸಿದರು. ಭಾಷಾಂತರದಿಂದ ಜ್ಞಾನದ ವಿನಿಮಯವಾಗಿ, ಅಪನಂಬಿಕೆ, ವಿಘಟನೆ ದೂರವಾಗುತ್ತದೆ ಎಂದು ಅವರು ವಿವರಿಸಿದರು.


 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ಭಾಷೆ, ಭಾಷಾಂತರ ಜನಜೀವನದ ಅವಿಭಾಜ್ಯ ಅಂಗ. ಭಾಷಾಂತರದ ಮೂಲಕ ಭಾಷೆ ಹಾಗೂ ಸಂಸ್ಕೃತಿಗಳು ಸಮೃದ್ಧಿ ಕಂಡಿವೆ. ಮ್ಯಾಕ್ಬೆತ್, ಇಲಿಯಡ್, ವರ್ಡ್ಸ್ವರ್ತ್ ಮುಂತಾದ ವಿದೇಶಿ ಚಿಂತನೆಗಳು ಭಾರತೀಯರಿಗೆ ತಲುಪಿವೆ ಹಾಗೂ ವಾಲ್ಮೀಕಿ, ವ್ಯಾಸ ಮುಂತಾದವರ ಕೃತಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿವೆ. “ಭಾಷೆ, ಸಾಹಿತ್ಯದ ಅಧ್ಯಯನದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅವರಲ್ಲಿ ಒಲವು ಮೂಡಿಸುವುದು ಅಗತ್ಯ. ಅಲ್ಲದೆ, ಭಾಷಾಂತರ ಕ್ಷೇತ್ರದಲ್ಲಿ ವಿಪುಲ ಉದ್ಯೋಗ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದರು.


 


ಕಾರ್ಯಕ್ರಮ ಸಂಯೋಜಕ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರದ ಮುಖ್ಯಸ್ಥ ಡಾ. ಎ. ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತದಂತಹ ಬಹುಭಾಷೆಯ ನೆಲದಲ್ಲಿ, ಉಜಿರೆಯಂತಹ ಪ್ರದೇಶದಲ್ಲಿ ಪ್ರತಿಯೊಬ್ಬರೂ ಭಾಷಾಂತರಕಾರರೇ. ಭಾಷಾಂತರವು ಆಧುನಿಕ ಯುಗದಲ್ಲಿ ಹೊಸದಾಗಿ ರೂಪುಗೊಂಡ ಶಿಸ್ತು (ವಿಭಾಗ) ಎಂದರು.


 


ಆಧುನಿಕ ಗದ್ಯದ ನಿರ್ಮಾತೃಗಳಾಗಿ ಭಾಷಾಂತರಕಾರರು ಇದ್ದಾರೆ. ಅವರ ಕೊಡುಗೆಯಿಂದ ಕನ್ನಡ ಸಾರಸ್ವತಲೋಕ ಬೆಳಗಿದೆ. ಅವರ ಆ ಸದ್ದಿಲ್ಲದ ಕೆಲಸವನ್ನು ನಾವು ಗುರುತಿಸಬೇಕಾಗಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅನೇಕ ಭಾಷಾಂತರಕಾರರು ಕೆಲಸ ಮಾಡಿದ್ದಾರೆ. ಏಕೀಕರಣವು ಭಾಷೆಯ ಉಳಿವಿನಲ್ಲಿದೆ ಎಂಬ ಆಲೋಚನೆ ಅವರಿಗಿತ್ತು. ಭಾಷಾಂತರ ಎಂಬುದಕ್ಕೆ ಸೀಮಿತ ಅರ್ಥವಿಲ್ಲ. ತಾಳಮದ್ದಲೆ ಕೂಡ ಭಾಷಾಂತರವೇ. ಈ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ಪ್ರಜ್ಞಾಪೂರ್ವಕ ಭಾಷಾಂತರದ ಕುರಿತು ತರಬೇತಿ ನೀಡಲಾಗುತ್ತಿದೆ. ಭಾಷಾಂತರ ಕುರಿತ ಅಧ್ಯಯನದಲ್ಲಿ ಸಾರ್ವಜನಿಕರನ್ನೂ ಒಳಗೊಳ್ಳುವ ದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


 


ಗಣ್ಯರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿನಿ ಪೂರ್ವಿ ಜಿ. ದಾಮ್ಲೆ ಮತ್ತು ಬಳಗದವರು ಪ್ರಾರ್ಥಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ವಂದಿಸಿದರು.


 


ವಿವಿಧ ಗೋಷ್ಠಿಗಳು ನಡೆದವು. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿತ್ತು. ಸಂಜೆ ‘ಮೃತಸಂಜೀವಿನಿ’ ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಂಡಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top