ಆವಿಷ್ಕಾರದ ಫಲ ಸಮುದಾಯಕ್ಕೆ ತಲುಪಲಿ: ಎಮಿಲಿ ಆಳ್ವ

Upayuktha
0

 ಆಳ್ವಾಸ್ ಶಾಲೆಯಲ್ಲಿ ಇಂಡಿಯನ್ ಸೈನ್ಸ್ ಸೊಸೈಟಿ ಸ್ಪರ್ಧೆ: 5 ಮಾದರಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ



ಮೂಡುಬಿದಿರೆ:
‘ಆವಿಷ್ಕಾರದ ಫಲ ಸಮುದಾಯಕ್ಕೆ ತಲುಪಿದಾಗ ಸಾರ್ಥಕ’ಎಂದು ಅಮೆರಿಕ ಫ್ಲಾರಿಡಾದ ಹೂಡಿಕೆ ಬ್ಯಾಂಕರ್ ಎಮಿಲಿ ಆಳ್ವ ಹೇಳಿದರು.



ಭಾರತೀಯ ವಿಜ್ಞಾನ ಸಮಾಜ(ಇಂಡಿಯನ್ ಸೈನ್ಸ್ ಸೊಸೈಟಿ) ಸಹಯೋಗದಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆ (ಸಿಬಿಎಸ್‍ಸಿ)ಯಲ್ಲಿ ಶನಿವಾರ ನಡೆದ ‘ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಇನ್‍ಸೆಫ್)’ದ ಪ್ರಾದೇಶಿಕ ಮೇಳ ಮತ್ತು ವಿಜ್ಞಾನ ವಿಸ್ತರಣಾ ಕಾರ್ಯಕ್ರಮ’ದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.



ಕುತೂಹಲ ಹಾಗೂ ಸೃಜನಶೀಲತೆಯು ವಿಜ್ಞಾನದ ಮಡಕೆಯಲ್ಲಿ ಇರುತ್ತವೆ. ಸಮುದಾಯದಲ್ಲಿ ಅವಶ್ಯಕತೆ ಇರುವ ಜನರಿಗೆ ಅದನ್ನು ಉಣಬಡಿಸಿದಾಗ ಸಾರ್ಥಕವಾಗುತ್ತದೆ. ಸಂಶೋಧನೆಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿಜ್ಞಾನವು ಬದುಕಿನಲ್ಲಿ ಬದಲಾವಣೆತರಬೇಕು. ಪರಿವರ್ತನೆಗೆ ಕಾರಣವಾಗಬೇಕು. ನಿಮ್ಮೆಲ್ಲರಲ್ಲಿ ಅಂತಹ ಆತ್ಮವಿಶ್ವಾಸ ಇದೆ. ಅದು ಫಲಪ್ರದಗೊಳ್ಳಲಿ’ ಎಂದು ಹಾರೈಸಿದರು. 



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲರೂ ಗೆದ್ದವರು. ಪ್ರಶಸ್ತಿ ಬಾರದೇ ಇದ್ದರೂ, ನಿಮ್ಮ ಸದುದ್ದೇಶ, ಪ್ರಯತ್ನ ಒಳಿತು ಮಾಡುತ್ತದೆ. ಸೋಲು ಜೀವನ ಕಲಿಸುತ್ತದೆ. ಬದುಕಿಗೆ ಬಲ ನೀಡುತ್ತದೆ. ಭವಿಷ್ಯ ಯಶಸ್ಸುಗೊಳಿಸುತ್ತದೆ. ನಮ್ಮ ಪರಿಸರದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ  ದಿವಂಗತ ಹರೀಶ್ ಭಟ್ ಅವರ ಕೊಡುಗೆಯನ್ನು ನಾನು ಸ್ಮರಿಸುತ್ತೇನೆ. ಯಾವತ್ತೂ ನಿಮ್ಮ ಆವಿಷ್ಕಾರಗಳು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು. ಜನರಿಗೆ ಸ್ಪಂದಿಸಬೇಕು. ಪಿಎಚ್.ಡಿ, ಪೇಟೆಂಟ್ ಹಾಗೂ ಸಂಶೋಧನೆಗಳು ಕಪಾಟಿನಲ್ಲೇ ಕೊಳೆಯಬಾರದು. ನಿಮ್ಮ ಸೃಜನಶೀಲ ಯೋಚನೆಗಳು ಯೋಜನೆಗಳಾಗಬೇಕು. ನೀವು ಭವಿಷ್ಯದ ಉದ್ಯೋಗದಾತರಾಗಬೇಕೇ ಹೊರತು ಉದ್ಯೋಗ ಆಕಾಂಕ್ಷಿಗಳಲ್ಲ ಎಂದರು. 



ಭಾರತೀಯ ವಿಜ್ಞಾನ ಸಮಾಜದ ನಾರಾಯಣ ಅಯ್ಯರ್ ಮಾತನಾಡಿ, ‘ವೈಜ್ಞಾನಿಕ ಮನೋಭಾವ ಮೂಡಿಸುವ ನಮ್ಮ ಪ್ರಯತ್ನದ ಈ ಕಾರ್ಯಕ್ರಮ  ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವೇಕ್ ಆಳ್ವರಿಗೆ ಕರೆ ಮಾಡಿದಾಗ ಕ್ಷಣಾರ್ಧದಲ್ಲಿ ಆತಿಥ್ಯ ವಹಿಸಿಕೊಂಡರು. ಅವರದ್ದು ಕ್ರಿಯಾತ್ಮಕ ನಾಯಕತ್ವ. ಯಶಸ್ಸು ನಿಮ್ಮ ಮುಂದಿದೆ’ ಎಂದರು. 



‘ಚಿನ್ನದ ಪದಕ ಪಡೆದ ನಾಲ್ಕು ಹಾಗೂ ಬೆಳ್ಳಿ ಪಡೆದ ಒಂದು (ಅದ್ವಿಜ್ ಸಜೇಶ್) ಮಾದರಿಯು ರಾಜ್‍ಕೋಟ್‍ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ರಾಷ್ಟ್ರ ಮಟ್ಟದ ವಿಜೇತರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳಲಿದ್ದಾರೆ’ ಎಂದು ಘೋಷಿಸಿದರು.  



ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಶಾಲೆಗಳ ಮುಖ್ಯ ಶಿಕ್ಷಕರುಗಳಾದ ಮೊಹಮ್ಮದ್ ಶಫಿ ಶೇಕ್, ಜಾನೆಟ್ ಪಾಯಸ್, ಶೈಲಜಾ ರಾವ್, ಉಮಾರಿ ಫಾಜ್, ವಿಜಯಾ ಇದ್ದರು.



ತೀರ್ಪುಗಾರರಾದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿನಯ್, ಡಾ.ಸಿದ್ದೇಶ್, ಡಾ.ವಿನುತಾ, ಡಾ.ಶಶಿಕುಮಾರ್, ಡಾ.ದತ್ತಾತ್ರೇಯ, ಡಾ.ಉಮೇಶ್ಚಂದ್ರ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಡಾ.ರಾಮ್ ಭಟ್ ಪಾಲ್ಗೊಂಡರು. 



ಮುಖ್ಯ ಶಿಕ್ಷಕಿ ಸರ್ವಾಣಿ ಡಿ. ಹೆಗ್ಡೆ ಹಾಗೂ ಸಹ ಶಿಕ್ಷಕಿ ಸಪ್ನಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಗಳಿಂದ ಬಂದಿದ್ದ ವಿಜ್ಞಾನ ಮಾದರಿಗಳ ಪೈಕಿ 35 ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡವು. ವಿದ್ಯಾರ್ಥಿಗಳ ಜೊತೆ ಮಾರ್ಗದರ್ಶಕ ಶಿಕ್ಷಕರು ಹಾಜರಿದ್ದರು. 



ಪ್ರಶಸ್ತಿ: 

ಒಟ್ಟು ನಾಲ್ಕು ವಿಜ್ಞಾನ ಮಾದರಿಗಳಿಗೆ ಚಿನ್ನ, ಐದು ಮಾದರಿಗಳಿಗೆ ಬೆಳ್ಳಿ ಹಾಗೂ ಆರು ಮಾದರಿಗಳಿಗೆ ಕಂಚಿನ ಪದಕ ನೀಡಲಾಯಿತು. ಹತ್ತು ಮಾದರಿಗಳಿಗೆ ಪ್ರೋತ್ಸಾಹಕ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. 



ಪುತ್ತೂರು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಧನ್ಯಶ್ರೀ, ಇದೇ ಶಾಲೆಯ ಆಪ್ತಚಂದ್ರಮತಿ ಮುಳಿಯ, ಮೂಡುಬಿದಿರೆ ಆಳ್ವಾಸ್ ಕೇಂದ್ರೀಯ ಶಾಲೆಯ ಅಮೋಘ ಎ. ಹೆಬ್ಬಾರ್, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಸುಹಾಸ್ ಎಂ. ಬಣಕಾರ್ ಹಾಗೂ ಹೃಷಿಕೇಶ್ ನಾಯಕ್ ಅವರ ವಿಜ್ಞಾನ ಮಾದರಿಗಳು ಚಿನ್ನದ ಪದಕ ಪಡೆದವು. 



ಪುತ್ತೂರು ಸುದಾನಾ ವಸತಿ ಶಾಲೆಯ ಅದ್ವಿಜ್ ಸಜೇಶ್, ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿ ಪೂರ್ವಕಾಲೇಜಿನ ಅರೋನ್ ಡಿಸೋಜ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆದ್ಯಾ ಪಿ. ಶೆಟ್ಟಿ, ಪುತ್ತೂರು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಅಭಿನವ್‍ಆಚಾರ್ ಕೆ. ಮತ್ತು ಶ್ರೀಜಿತ್ ಸಿ.ಎಚ್, ಪುತ್ತೂರು ಸುದಾನ ವಸತಿ ಶಾಲೆಯ ಸೃಷ್ಟಿ ಎನ್.ವಿ ಅವರ ಮಾದರಿಗಳು ಬೆಳ್ಳಿ ಪದಕಕ್ಕೆ ಪಾತ್ರವಾದವು. 



ಪುತ್ತೂರು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಆರ್ಯನ್ ಸಿ.ಆರ್. ಮತ್ತು ದಿಶಾಂತ್ ಕೆ., ಇದೇ ಶಾಲೆಯ ಗೌತಮ ಕೃಷ್ಣ, ಪುತ್ತೂರು ಸುದಾನ ವಸತಿ ಶಾಲೆಯ ಆದಿತ್ಯಾ ಕೆ., ಬಂಟ್ವಾಳ ಬಿಆರ್‍ಎಂಪಿಸಿ ಪಬ್ಲಿಕ್ ಸ್ಕೂಲ್ ಮತ್ತು ಕಾರ್ಮೆಲ್ ಹೈಸ್ಕೂಲ್‍ನ ರಿಶೋನ್ ಸಂಸಿಯಾ ಪಿಂಟೊ ಮತ್ತು ನಿಹಾರಿಕಾ, ಮಂಗಳೂರು ಶಕ್ತಿ ವಸತಿ ಶಾಲೆಯು ಶಾಸ್ತ ನಾಯ್ಕ್ ವಿ., ಪುತ್ತೂರು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಬಿ. ಧ್ಯಾನ್ ಶೆಟ್ಟಿ ಅವರ ಮಾದರಿಗಳು ಕಂಚಿನ ಪದಕಕ್ಕೆ ಪಾತ್ರವಾದವು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top