ಕಾರವಾರ: ಕರಾವಳಿ ಭಾಗದಲ್ಲಿ ಕೆಲವೆಡೆ ರೈತರ ಕೃಷಿ ಭೂಮಿ ಇದ್ದರೂ ಇಲ್ಲದಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಇಲ್ಲಿನ ರೈತರು ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಕೂಲಿಯೊಂದಿಗೆ ಪ್ರಾಣಿ-ಪಕ್ಷಿಗಳನ್ನು ಸಾಕುವುದು ಸಹಜವಾಗಿರುತ್ತದೆ. ಆದ್ರೆ ಕೆಲವು ಕುಟುಂಬಗಳು ಇದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆದು ಸುವ್ಯವಸ್ಥಿತವಾದ ಯೋಜನೆ ನಿರ್ಮಿಸಿ ಮಾದರಿಯಾಗಿದ್ದಾರೆ.
ಅಂಕೋಲ ತಾಲೂಕಿನ ಬೆಳಂಬರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ 13ಕ್ಕೂ ಹೆಚ್ಚು ಕೋಳಿ ಶೇಡ್‍ಗಳು ನಿರ್ಮಾಣವಾಗಿದ್ದು, ಫಲಾನುಭವಿಗಳು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಕೋಳಿ ಶೆಡ್ ನಿರ್ಮಿಸಿಕೊಂಡ ಗಂಗೆ ಗೌಡ ಅವರು ಹೇಳುವಂತೆ ನಾವು ಕಳೆದ 30 ವರ್ಷಗಳಿಂದಲೂ ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಳಿ ಶೆಡ್ ನೀಡಿರುವುದು ನಮಗೆ ತುಂಬಾ ಅನುಕೂಲವಾಗಿದೆ ಎಂದರು.
ನಮ್ಮಲ್ಲಿ ಪ್ಯಾರೇಟ್ ನೋಸ್, ಕೋಚಿಯಂತಹ ಉತ್ತಮ ಕೋಳಿ ತಳಿಗಳಿದ್ದು, ಜೋಡಿ ಮರಿಗೆ 1000-2000ರೂಗೆ ಮಾರಾಟವಾಗುತ್ತದೆ. ಹಾಗೂ ಬೆಳೆದ ಕೋಳಿಗಳು 2000ದಿಂದ 5000ರೂವರೆಗೂ ಮಾರಾಟವಾಗುತ್ತದೆ. ಕೋಳಿಶೆಡ್ ನಿರ್ಮಾಣವಾದ್ದರಿಂದ ಮಳೆ ಗಾಳಿಯಿಂದ ನಮ್ಮ ಕೋಳಿಗಳು ಸುರಕ್ಷಿತವಾಗಿವೆ ಎನ್ನುತ್ತಾರೆ ಫಲಾನುಭವಿ ಮಂಜುನಾಥ ಗೌಡ.
ನರೇಗಾ ಯೋಜನೆಯಡಿ 60,000ರೂ ವೆಚ್ಚದಲ್ಲಿ 2021-22ನೇ ಸಾಲಿನಲ್ಲಿ 10 ಹಾಗೂ 2022-23ನೇ ಸಾಲಿನ 7 ಕೋಳಿಶೆಡ್‍ಗಳು ನಿರ್ಮಾಣಗೊಂಡಿವೆ. ಇನ್ನೂ ಕೋಳಿಗಳಿಗೆ ಮಾರುಕಟ್ಟೆ ವ್ಯವಸ್ಥೆ ನೋಡುವುದಾದರೆ ನೇರವಾಗಿ ಮನೆಗಳಿಗೆ ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಾರೆ. ಅಲ್ಲದೆ ಈ ಕೋಳಿಗಳು ನಾಟಿ ತಳಿಗಳಾಗಿದ್ದು, ಇಲ್ಲಿನ ಪರಿಸರಕ್ಕೆ ಒಗ್ಗಿಕೊಂಡಿರುತ್ತವೆ.
ಉದ್ಯೋಗ ಖಾತರಿ ಯೋಜನೆಯಡಿ ಕೋಳಿ, ಕುರಿ, ಹಂದಿ ಶೆಡ್ ಹಾಗೂ ದನದ ಕೊಟ್ಟಿಗೆಯಂತಹ ಕಾಮಗಾರಿಗಳು ಸಾರ್ವಜನಿಕರಿಗೆ ಹೊಸ ಭರವಸೆ ಮೂಡಿಸುತ್ತಿವೆ. ಈ ಕಾಮಗಾರಿಗಳು ಅದೆಷ್ಟೋ ಕುಟುಂಬಗಳ ಸ್ವಾವಲಂಬನೆಗೆ ಸಾಕ್ಷಿಯಾಗಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ