ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಭತ್ತ ಖರೀದಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತೀ ಕ್ವಿಂಟಾಲ್ ಭತ್ತ (ಸಾಮಾನ್ಯ) ಕ್ಕೆ ರೂ. 2183 ಮತ್ತು ಭತ್ತ (ಗ್ರೇಡ್ ಎ) ಗೆ ರೂ.2203 ನಿಗಧಿಪಡಿಸಿದ್ದು, ಜಿಲ್ಲೆಯಲ್ಲಿ ಭತ್ತ ಸಂಗ್ರಹಣಾ ಏಜೆನ್ಸಿಯನ್ನಾಗಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ನೇಮಿಸಲಾಗಿದೆ ಎಂದರು.
ರೈತರು ಬೆಳೆದಿರುವ ಭತ್ತದ ಮಾಹಿತಿಯನ್ನು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ತಂತ್ರಾಂಶದ ಮೂಲಕ ಪಡೆದು, ಸರಕಾರದ ಮಾರ್ಗಸೂಚಿಯಂತೆ ಬೆಂಬಲ ಬಲೆ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವ ರೈತರಿಂದ ಭತ್ತವನ್ನು ಖರೀದಿಸುವಂತೆ ತಿಳಿಸಿದರು.
ಭತ್ತ ಖರೀದಿಗೆ ರೈತರನ್ನು ನೊಂದಣಿ ಮಾಡಲು ನೊಂದಣಿ ಕೇಂದ್ರಗಳನ್ನು ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆವತಿಯಿಂದ ಪ್ರತೀ ಖರೀದಿ ಕೇಂದ್ರಕ್ಕೆ ಗ್ರೇಡರ್‍ಗಳನ್ನು ಹಾಗೂ ಖರೀದಿ ಅಧಿಕಾರಿಗಳನ್ನು ನೇಮಕ ಮಾಡುವಂತೆ ಹಾಗೂ ಪ್ರತೀ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ನಿಗಧಿಪಡಿಸಿರುವ ಪ್ರಮಾಣದಲ್ಲಿ ಭತ್ತ ಖರೀದಿಸುವಂತೆ ತಿಳಿಸಿದರು.
ರೈತರಿಂದ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲು ಗೋದಾಮುಗಳನ್ನು ಗುರುತಿಸಿ ಅಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹಾಗೂ ಖರೀದಿಯಾದ ಭತ್ತವನ್ನು ಹಲ್ಲಿಂಗ್ ಮಾಡಿಸಲು ಅಕ್ಕಿ ಗಿರಣಿ ಮಾಲೀಕರನ್ನು ನೊಂದಣಿ ಮಾಡುವಂತೆ ಸೂಚನೆ ನೀಡಿದರು.
ಭತ್ತ ಖರೀದಿಯ ಬಗ್ಗೆ ಮತ್ತು ಬೆಂಬಲ ಬೆಲೆಯ ಬಗ್ಗೆ ಹಾಗೂ ರೈತರ ನೊಂದಣಿ ಕುರಿತಂತೆ ರೈತರಿಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಹಾಗೂ ಬೆಂಬಲ ಬೆಲೆಯಡಿ ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾಗದಂತೆ ಸಂಬಂದಪಟ್ಟ ಎಲ್ಲಾ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೇವಣ್‍ಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಹಾಗೂ ಜಿಲ್ಲೆಯ ಅಕ್ಕಿ ಗಿರಣಿಗಳ ಮಾಲೀಕರು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ