ಕೆ.ಆರ್.ಪೇಟೆ: ಭ್ರಷ್ಟಾಚಾರ ಎಂಬುದು ಸಾಂಕ್ರಾಮಿಕ ರೋಗವಿದ್ದಂತೆ. ಅದರಲ್ಲಿ ಸಿಲುಕಿದರೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಇದರ ಬದಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿ.ಜೆ ಸುಜೀತ್ ಸರ್ಕಾರಿ ನೌಕರರಿಗೆ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಮುದಾಯ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆಯಾಗಿದೆ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳು ಎಲ್ಲ ವಲಯಗಳಲ್ಲೂ ಪ್ರಗತಿಪಥದತ್ತ ಸಾಗಿವೆ ದೇಶದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಪಾರದರ್ಶಕತೆಯ ಬದಲಾವಣೆಯ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇದರಿಂದ ರಾಷ್ಟ್ರದ ಸುವರ್ಣ ಯುಗ ಪ್ರಾರಂಭವಾಗಲಿದೆ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಮೂಡಿಸುತ್ತಿದ್ದೇವೆ. ಸರ್ಕಾರಿ ನೌಕರರು, ಖಾಸಗಿ ವಲಯಗಳ ನೌಕರರು ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಬೇಕು. ಸ್ವಯಂ ಪ್ರೇರಿತವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಅನೇಕರು ಹೋರಾಡುತ್ತಿದ್ದಾರೆ. ಅಂತಹ ಪ್ರಜ್ಞಾವಂತರಿಗೆ ಬೆಂಬಲ ನೀಡಬೇಕು, ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರಿಗೆ ಸಬೂಬು, ವಾಯಿದೆ ಹೇಳದೇ ಅವರ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕು. ಹಾಗಾದಾಗ ಸರ್ಕಾರಿ ವ್ಯವಸ್ಥೆಯ ಬಗ್ಗೆ ಅವರಿಗೆ ಮೆಚ್ಚುಗೆ ಮೂಡುತ್ತದೆ ಎಂದು ಅರಿವು ಮೂಡಿಸಿದರು.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ ಉನ್ನತ ಗುಣಮಟ್ಟದ ಪ್ರಾಮಾಣಿಕ ಮತ್ತು ನಿಷ್ಠೆಗೆ ನಾವು ಬದ್ಧರಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕು. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪ್ರಾಮಾಣಿಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿರುತ್ತದೆ ಎಂದರು.
ಬಳಿಕ ಮಾತನಾಡಿದ ತಹಸೀಲ್ದಾರ್ ನಿಸರ್ಗಪ್ರಿಯ, ಈ ದಿನ ಪ್ರತಿಜ್ಞಾ ಬೋಧನೆ ಸ್ವೀಕಾರವನ್ನು ಮೈಗೂಡಿಸಿಕೊಂಡು ತಾಲೂಕಿನಲ್ಲಿ ಸಾರ್ವಜನಿಕರ ಹಿತ ಕಾಪಾಡುವ ಭದ್ಧರಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಸೇವೆಯನ್ನು ಅರ್ಥೈಸಿಕೊಂಡರೆ ಭ್ರಷ್ಟಾಚಾರ ನಮ್ಮ ಹತ್ತಿರ ಸುಳಿಯುವುದಿಲ್ಲ. ಸಾರ್ವಜನಿಕರ ಸೇವೆಗಾಗಿ ನಮಗೆ ನೀಡಿದ ಸ್ಥಾನ, ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳೋಣ. ಯಾವುದೇ ಅಪೇಕ್ಷೆ, ಪಕ್ಷಪಾತ ಮಾಡದೆ ಭ್ರಷ್ಟಾಚಾರವನ್ನು ದೂರು ಇಟ್ಟು, ಕೊಡುವ ಸಂಬಳಕ್ಕಾಗಿ ಕೆಲಸ ಮಾಡಿದರೆ, ನಮ್ಮ ಬಗೆಗಿನ ಕೆಟ್ಟ ಜನಾಭಿಪ್ರಾಯವೂ ದೂರಾಗುತ್ತದೆ ಎಂದರು.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಬ್ಯಾಟರಾಯಿಗೌಡ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ, ತಾ.ಪಂ. ಕಾರ್ಯನಿರ್ವಾಹಕ ಸತೀಶ್,ಕ್ಷೆತ್ರ ಶಿಕ್ಷಣ ಅಧಿಕಾರಿ ಸೀತಾರಾಮ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಟಿ.ಎಸ್. ಮಂಜುನಾಥ್, ಸರ್ವೆ ಇಲಾಖೆಯ ಎ.ಡಿ.ಎಲ್.ಆರ್ ಸಿದ್ದಯ್ಯ, ಪುರಸಭೆಯ ಮುಖ್ಯಾಧಿಕಾರಿ ಜಗನ್ ರೆಡ್ಡಿ, ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ