ಹೈಪರ್ ಲೋಕಲ್ ಸುದ್ದಿಗಳಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ನಂಟು: ನವೀನ್ ಅಮ್ಮೆಂಬಳ

Upayuktha
0



ಬೆಳ್ತಂಗಡಿ: ಹೈಪರ್ ಲೋಕಲ್ ಸುದ್ದಿಗಳಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮಂಗಳೂರಿನ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಸಂಘಟನೆಯ ಅಧ್ಯಕ್ಷ ನವೀನ್ ಅಮ್ಮೆಂಬಳ ಅಭಿಪ್ರಾಯಪಟ್ಟರು.



ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗ ಮಾಮ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 'ಹೈಪರ್ ಲೋಕಲ್ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ' ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.



ಬೆಳ್ತಂಗಡಿಯ ದಿಡುಪೆ ಎಂಬ ಕುಗ್ರಾಮವನ್ನು ಅದರ ಸುದ್ದಿಗಳನ್ನು ದಶಕಗಳ‌ ಹಿಂದೆ ರಾಜ್ಯ ಮಟ್ಟಕ್ಕೆ ಉದಯವಾಣಿ ಪತ್ರಿಕೆಯ ಮೂಲಕ ಪರಿಚಯಿಸಿದವರು ಅಭ್ಯುದಯ ಪತ್ರಕರ್ತ ಈಶ್ವರ ದೈತೋಟ ಅವರು. ಆ ಮೂಲಕ ಅಭಿವೃದ್ಧಿ ಕಂಡ ದಿಡುಪೆ ಜಗತ್ತಿನ ಗಮನ ಸೆಳೆಯಿತು. ತೀರಾ ಸ್ಥಳೀಯ ಮಹತ್ವವನ್ನು ಪಸರಿಸಿದ ಕರ್ನಾಟಕದ‌‌‌ ಮೊದಲ ಪ್ರಯೋಗ ಅಭ್ಯುದಯ ಪತ್ರಿಕೋದ್ಯಮದ ಮಾದರಿ. ಹಾಗಾಗಿ ಅಭ್ಯುದಯ ಪತ್ರಿಕೋದ್ಯಮಕ್ಕೂ ಹೈಪರ್ ಲೋಕಲ್ ಸುದ್ದಿಗಳಿಗೂ ಅವಿನಾಭಾವತೆ ಇದೆ ಎಂದು ಅವರು ಹೇಳಿದರು.



ಹೈಪರ್ ಅಂದರೆ ಗತಿಶೀಲ, ಚಲನಶೀಲ, ಕ್ರಿಯಾತ್ಮಕ ಎಂದೆಲ್ಲಾ ಅರ್ಥೈಸಬಹುದು. ತೀರಾ‌ ಸ್ಥಳೀಯ ಸುದ್ದಿಗೆ ಹೆಚ್ಚಿನ ಮಹತ್ವ‌ ನೀಡಿ ಜಾಗತಿಕ ಅಥವಾ ಗ್ಲೋಬಲ್ ಮಟ್ಟಕ್ಕೆ ಒಯ್ಯುವ ಸಾಧ್ಯತೆ ಹೇರಳವಾಗಿದೆ. 'ಹೈಪರ್ ಲೋಕಲ್' ಸುದ್ದಿಗಳೇ ಹೈಪರ್ ಗ್ಲೋಬಲ್ ಸುದ್ದಿಗಳಾಗಿ ಪರಿವರ್ತನೆಯಾಗುವುದಕ್ಕೆ ನಿದರ್ಶನಗಳಿವೆ. ರಾಷ್ಟ್ರಮಟ್ಟದ ಮಾಧ್ಯಮಗಳೂ ಪುತ್ತೂರು ಅಥವಾ ರಾಯಚೂರಿನ ಹಳ್ಳಿಯ ಸುದ್ದಿಗೂ ಪ್ರಾಮುಖ್ಯತೆ ಕೊಡುತ್ತಿರುವುದನ್ನು ಗಮನಿಸಬಹುದು ಎಂದು ಅಮ್ಮೆಂಬಳ ಅಭಿಪ್ರಾಯಿಸಿದರು‌.



ಈಗಿನ ಸಾಮಾಜಿಕ ಜಾಲತಾಣಗಳು‌ ಮಹತ್ವದ ತೀರಾ ಸ್ಥಳೀಯ ಅಥವಾ ಬೇರುಮಟ್ಟದ ಸುದ್ದಿ, ಬೆಳವಣಿಗೆಗಳನ್ನು ಜಗತ್ತಿಗೆ ತಲುಪಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ಸ್ಥಳೀಯ ಹೈಪರ್ ಲೋಕಲ್ ಸುದ್ದಿಗಾರರಿಗೆ ವಿಪುಲ ಅವಕಾಶಗಳಿವೆ ಎಂದರು.



ಜಾಗತಿಕ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಏಕೆಂದರೆ ಇವು ಸ್ಥಳೀಯ ಆಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಜಾಗತಿಕ ನೆಲೆಗಟ್ಟಿನಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತವೆ. ಪ್ರಸ್ತುತ ಕ್ರಿಯಾಶೀಲ ಸ್ಥಳೀಯ ಪತ್ರಿಕೆಗಳಿಗೆ ಹೊಸ ಮಾಧ್ಯಮ ಲೋಕದಲ್ಲಿ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.



ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು ಪಿ ಶಿವಾನಂದ, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ, ಮಾಮ್ ಸಂಘಟನೆ ಗೌರವಾಧ್ಯಕ್ಷ ವೇಣು ಶರ್ಮ, ಕಾರ್ಯಾಗಾರದ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎ.ಜೆ. ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top