ಸಿರಿ ಸಿಬ್ಬಂದಿಗಳಿಂದ ಅಭಿನಂದನಾ ಕಾರ್ಯಕ್ರಮ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸದಾ ಜನಪರ ಕೆಲಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ವಿಶೇಷ ಸಾಧನೆಯನ್ನು ಗುರುತಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಅತ್ಯಂತ ಪ್ರತಿಷ್ಠಿತ “ಕರ್ನಾಟಕ ಪರಿವರ್ತನೆಯ ರೂವಾರಿ ಪ್ರಶಸ್ತಿ”ಯನ್ನು ನೀಡಿ ಗೌರವಿಸಿರುತ್ತಾರೆ.
ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರಿಗೆ ಸಿರಿ ಸಂಸ್ಥೆಯ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಶನಿವಾರದಂದು ಧರ್ಮಸ್ಥಳ ಬಿಡುವಿನಲ್ಲಿ ಜರುಗಿತು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಕೆ.ಎನ್.ಜನಾರ್ಧನ ರವರು ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ಪರಮ ಪೂಜ್ಯರು ಹಾಗೂ ಮಾತೃಶ್ರಿ ಅಮ್ಮನವರನ್ನು ಗೌರವಿಸಿ, ಅಭಿನಂದನೆ ಸಲ್ಲಿಸಿದರು. ಮುಂದುವರೆದು ಸ್ತ್ರೀ ಸಬಲೀಕರಣದ ಧ್ಯೇಯೋದ್ದೇಶದೊಂದಿಗೆ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಹಸ್ರಾರು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಉತ್ತಮ ಸಲಹೆ, ಸಹಕಾರ, ಮಾರ್ಗದರ್ಶನವನ್ನು ನೀಡುವ ಮೂಲಕ ಸದಾ, ಸಿರಿ ಸಂಸ್ಥೆಯ ಸಮಸ್ತ ಸಿಬ್ಬಂದಿಗಳ ಏಳಿಗೆಯನ್ನು ಬಯಸುತ್ತಿರುವ ಪೂಜ್ಯ ದಂಪತಿಗಳಿಗೆ ಆಭಾರ ವ್ಯಕ್ತಪಡಿಸಿದರು.
ಸಿರಿ ಸಿಬ್ಬಂದಿಗಳ ಪ್ರೀತಿಪೂರ್ವಕ ಗೌರವವನ್ನು ಸ್ವೀಕರಿಸಿ ಮಾತನಾಡಿದ ಪೂಜ್ಯರು ಎಲ್ಲಾ ಸಿಬ್ಬಂದಿಗಳೂ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆಯಿಂದ ಹಾಗೂ ಶ್ರಮವಹಿಸಿ ದುಡಿದು ಸಿರಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಇಡೀ ದೇಶವ್ಯಾಪಿ ಎತ್ತಿ ಹಿಡಿಯುವಲ್ಲಿ ಸಂಪೂರ್ಣವಾಗಿ ಕೈಜೋಡಿಸುವಂತೆ ಸಲಹೆ ನೀಡಿದರು ಹಾಗೂ ಎಲ್ಲಾ ಸಿರಿ ಸಿಬ್ಬಂದಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಅದೇ ರೀತಿ ಮಾತೃಶ್ರೀ ಹೇಮಾವತಿ ಅಮ್ಮನವರು ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಸನ್ನಯು ಹಾಗೂ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು, ಸಿರಿ ಸಿಬ್ಬಂದಿಗಳು ಉಪಸ್ಥಿತರಿದ್ದು, ಪೂಜ್ಯ ದಂಪತಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ