ಹಂಪಿ ವಿವಿಯ ಡಾ.ಎ.ಸುಬ್ಬಣ್ಣ ರೈಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ

Upayuktha
0


ಹಂಪಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ, ತುಳುವಿನ ಖ್ಯಾತ ಸಂಶೋಧಕ ಡಾ.ಎ.ಸುಬ್ಬಣ್ಣ ರೈ ಅವರು ಸೇವಾನಿವೃತ್ತಿ ಹೊಂದಿದ ಸಂದರ್ಭದಲ್ಲಿ ವಿಭಾಗದ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಮಾಧವ ಪೆರಾಜೆಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ "ಡಾ.ಸುಬ್ಬಣ್ಣ ರೈಯವರ ನಿಷ್ಕಳಂಕ ವ್ಯಕ್ತಿತ್ವ, ನಿಷ್ಕಲ್ಮಶ ನಡೆ ನುಡಿ, ಗಂಭೀರ ಅಧ್ಯಯನಶೀಲತೆ ಸದಾ ಅಧ್ಯಾಪಕರಿಗೂ, ವಿದ್ಯಾರ್ಥಿಗಳಿಗೂ ಮಾದರಿ" ಎಂದು ಅಭಿಪ್ರಾಯಪಟ್ಟರು.


"ರೈಯವರು ಗಡಿನಾಡು ಕಾಸರಗೋಡಿನಲ್ಲಿ ಜನಿಸಿ, ಉನ್ನತ ಶಿಕ್ಷಣವನ್ನು ಕೇರಳದಲ್ಲಿ ಪಡೆದು, ಮದ್ರಾಸ್, ಮುಂಬೈ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ನಡೆಸಿ ಕನ್ನಡ ವಿವಿಯಲ್ಲಿ ಅಧ್ಯಾಪಕರಾಗಿ ನೀಡಿದ ಕೊಡುಗೆ ಬಹಳ ದೊಡ್ಡದು. ಅವರ "ದಕ್ಷಿಣ ಕನ್ನಡದ ಐತಿಹ್ಯಗಳು" ಕೃತಿ ಯಾವತ್ತಿಗೂ ಉಳಿಯುವಂತಹುದು. ಹಾಗೆಯೇ ಅವರ ಕದ್ರಿ, ಗಾಳೆಮ್ಮ, ಹೊಸಪೇಟೆ ತಾಲೂಕು ದರ್ಶನ, ಕೀರ್ತಿನಾಥ ಕುರ್ತಕೋಟಿ, ತುಳು ಸಾಹಿತ್ಯ ಚರಿತ್ರೆ, ತೆಲುಗು ಸಾಹಿತ್ಯ ಚರಿತ್ರೆ, ದ್ರಾವಿಡ ನಿಘಂಟು, ದ್ರಾವಿಡ ಸಂಸ್ಕೃತಿ ಮೊದಲಾದವು ಆಕರ ಕೃತಿಗಳಾಗಿ ಹೆಸರು ಮಾಡಿವೆ. ಅವರು ವಿಭಾಗವನ್ನು ಕಟ್ಟಿಬೆಳೆಸಿದ ಬಗೆ ಅನನ್ಯವಾದುದು" ಎಂದು  ಶ್ಲಾಘಿಸಿದರು.



ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ್ದ ಸುಬ್ಬಣ್ಣ ರೈಯವರ ಸಂಶೋಧನಾ ವಿದ್ಯಾರ್ಥಿಗಳು ಅವರ ಸ್ಪೂರ್ತಿದಾಯಕ ವ್ಯಕ್ತಿತ್ವ ತಮ್ಮ ಸಂಶೋಧನೆಯನ್ನೂ, ಬದುಕನ್ನೂ ರೂಪಿಸಿದ ಬಗೆಯನ್ನು ತೆರೆದಿಟ್ಟರು. ಈ ಸಂದರ್ಭದಲ್ಲಿ ಡಾ.ಸುಬ್ಬಣ್ಣ ರೈ ಹಾಗೂ ಅವರ ಸಹಧರ್ಮಿಣಿ, ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಸರಸ್ವತಿಯವರನ್ನು ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು, ಹಿರಿಯ ಸಂಶೋಧನಾ ವಿದ್ಯಾರ್ಥಿಗಳ ಬಳಗದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ "ಏರಿದವರು ಚಿಕ್ಕವನಿರಬೇಕೆಲೆ ಎಂಬ ಪಂಜೆಯವರ ಮಾತಿನಂತೆ ಎಚ್ಚರವೂ, ಎನಗಿಂತ ಕಿರಿಯರಿಲ್ಲ ಎಂಬ ವಿನೀತ ಭಾವವೂ ನಿರಂತರ ಬೆಳವಣಿಗೆಗೆ ಕಾರಣವಾಗುವಂತಹುದು, ತೆರೆದ ಮನಸ್ಸಿನ ಪರಿಶೀಲನೆಯು ಅಧ್ಯಾಪನ, ಸಂಶೋಧನೆಗೆ ಸದಾ ಹೊಸ ಬೆಳಕನ್ನು ಬೀರುವಂತಹುದು" ಎಂದ ಸುಬ್ಬಣ್ಣ ರೈ ಅವರು ತಮ್ಮ ವೃತ್ತಿ ಬದುಕಿನ ಹಲವು ಮಜಲುಗಳನ್ನು ನೆನಪಿಸಿಕೊಂಡರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ವೆಂಕಟೇಶ್ ಅವರು "ಪ್ರೊ. ಸುಬ್ಬಣ್ಣ ರೈಯವರು ವ್ಯಕ್ತಿಯಲ್ಲ, ಒಂದು ಶಕ್ತಿ. ಬಹುಭಾಷಾ ಪಂಡಿತರಾದ ಅವರು ದ್ರಾವಿಡ ಸಂಸ್ಕೃತಿ ಅಧ್ಯಯನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು. ಒಂದು ಕ್ರಿಯಾಶೀಲ ವ್ಯಕ್ತಿತ್ವದ ಪದವಿ ನಿಷ್ಕ್ರಮಣವೂ ಪಟ್ಟಾಭಿಷೇಕದಂತಿರಬೇಕು ಎಂಬ ಮಾತಿಗೆ ಇಂದಿನ ಸಮಾರಂಭವು ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿಯೂ ಅವರ ಮಾರ್ಗದರ್ಶನ ನಿರಂತರವಾಗಿರಲಿ" ಎಂದು  ನುಡಿದರು. ರಾಘವೇಂದ್ರ ಕುಪ್ಪಲೂರು ಸ್ವಾಗತಿಸಿ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top