ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು. ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲ ಕೈಲಾದಷ್ಟು ಕೊಡಿಸುವವನು ಅಪ್ಪ ಅಂದ್ರೆ ಕುಟುಂಬದ ಶಕ್ತಿ, ಮಕ್ಕಳಿಗೆ ಮೊದಲ ಹೀರೋ, ಅಪ್ಪ ಅಂದ್ರೆ ಆಕಾಶ.
ಆದರೆ ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ನನಗೆ ಅದು 'ತುಂಬಲಾರದ ನಷ್ಟ' ಎಂಬ ವಾಸ್ತವ ಅರಿವಾದದ್ದು ಗೆಳೆಯರು ಹರಟೆ ಹೊಡೆಯುವ ಮಧ್ಯೆ ಅವರು ಹೇಳುತ್ತಿದ್ದ ಅಪ್ಪಂದಿರ ಕಥೆಗಳನ್ನು ಕೇಳಿದಾಗ! ಗೆಳೆಯರು 'ನನ್ನಪ್ಪ ಅದು ತೆಗೆದುಕೊಟ್ಟರು, ನನ್ನಪ್ಪ ಅಲ್ಲಿಗೆ ಕರೆದುಕೊಂಡು ಹೋದರು 'ಎಂದೆಲ್ಲಾ ಖುಷಿಯಿಂದ ಹೇಳುವಾಗ ನನಗೆ ಮನಸ್ಸಿನ ಮೂಲೆಯಲ್ಲಿ ಮೂಡಿದ ಪ್ರಶ್ನೆಯೊಂದೇ 'ನನ್ನಪ್ಪನನ್ನು ಆ ವಿಧಿ ಯಾಕೆ ನನ್ನಿಂದ ದೂರ ಮಾಡಿತು?! ಪ್ರಶ್ನೆ ಮೂಡಿದ ವೇಳೆಯಲ್ಲಿ ಕಣ್ಣುಗಳು ಒದ್ದೆಯಾಗಿತ್ತವೆಯೇ ಹೊರತು ಉತ್ತರ ಸಿಗಲಾರದು.
ಅಮ್ಮ ನನಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರೂ, ಅಪ್ಪನ ಹಿಡಿ ಪ್ರೀತಿಯ ಬಯಕೆ ಸಹಜವಾಗಿ ಆಗುತ್ತದೆ. ಯಾರೇ ಹೊಸದಾಗಿ ಭೇಟಿಯಾದಾಗಲೂ, ಅಪ್ಪ ಏನು ಮಾಡುತ್ತಾರೆ?'ಎಂಬ ಪ್ರಶ್ನೆ ನನ್ನ ಮುಂದೆ ಇಟ್ಟಾಗ ಮನಸ್ಸು ಭಾರವಾಗುತ್ತದೆ.ಅಪ್ಪನ ಪ್ರೀತಿಯನ್ನು ಅನುಭವಿಸುವ ಭಾಗ್ಯವೇ ಇಲ್ಲದಾಯಿತಲ್ಲ. ಅಪ್ಪ ಮರಳಿ ಬಾರದ ಲೋಕಕ್ಕೆ ನೀನು ಅದಾಗಲೇ ಹೋಗಿ ಆಗಿದೆ.ನಿನ್ನನ್ನು ನೆನೆಯದ ದಿನಗಳಿಲ್ಲ, ಕನಸಲ್ಲಿ ದಿನವೂ ಬರುವ ನಿನ್ನ ಇರುವಿಕೆಯನ್ನು ಬಯಸದ ರಾತ್ರಿಗಳಿಲ್ಲ, ಬಯಸಿದರೂ ಬರುವುದಿಲ್ಲ ಎಂದು ತಿಳಿದಿದ್ದರೂ ಮತ್ತೆ ಮತ್ತೆ ನೀನು ಬಂದು ನಮ್ಮನ್ನು ಸೇರುವ ಕನಸನ್ನು ಕಾಣುತ್ತೇನೆ. ನನಗೆ ಗೊತ್ತು ನಾನೆಷ್ಟೇ ಎತ್ತರಕ್ಕೆ ಬೆಳೆದರೂ ನೀನು ನನ್ನ ಕೈಗೆಟುಕುವುದಿಲ್ಲ ಯಾಕೆಂದರೆ ನೀನು ದೂರದಲ್ಲಿರುವ ಆಕಾಶ, ಹೌದು ಅಪ್ಪ ಅಂದ್ರೆ ಆಕಾಶ!
- ಕಮಲಾಕ್ಷ ಗೌಡ
ಪ್ರಥಮ ಜೆ.ಎಂ.ಸಿ ವಿಭಾಗ
ವಿವೇಕಾನಂದ (ಸ್ವಾಯತ) ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ