ದಕ್ಷಿಣ ಕನ್ನಡ: ಬ್ಯಾಂಕಿಂಗ್ ತೊಟ್ಟಿಲಿನ ನಾಡಲ್ಲೇ ಬ್ಯಾಂಕಿಂಗ್ ವಂಚನೆಯ ಪ್ರಕರಣಗಳು ಅಧಿಕ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ಅಧಿಕವಾಗುತ್ತಿದ್ದು, ಈ ಹಿಂದಿನ ಹಲವಾರು ಪ್ರಕರಣಗಳಲ್ಲಿ ಪೊಲೀಸರು, ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳ ಕಾರ್ಯವೈಖರಿಯಿಂದ ಆರೋಪಿಗಳು ಸುಲಭವಾಗಿ ಪಾರಾಗುತ್ತಿದ್ದಾರೆ. ಸುಸ್ತಿದಾರರಿಗೆ ಸರಿಯಾಗಿ ನೋಟಿಸ್ ನೀಡದೆ, ವಿಚಾರಣೆ ನಡೆಸದೆ ದೋಷಮುಕ್ತಗೊಳಿಸುವ ನಿದರ್ಶನಗಳು ಸಾಕಷ್ಟು ನಡೆಯುತ್ತಿವೆ ಎಂದು ಸರಕಾರೇತರ ಸಂಸ್ಥೆ ಪಿಯುಸಿಎಲ್ ಆರೋಪಿಸಿದೆ.


ಈ ಸಂಬಂಧ ಪಿಯುಸಿಎಲ್‌ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅಜಯ್ ಡಿ’ಸಿಲ್ವಾ ಸುದೀರ್ಘವಾದ ಪತ್ರಿಕಾ ಪ್ರಕಟಣೆ ನೀಡಿದ್ದು, ಅದರ ವಿವರ ಇಂತಿದೆ:


ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ನ್ಯಾಯಾಲಯ, ಬ್ಯಾಂಕಿಂಗ್ ವಂಚನೆಯ ಪ್ರಕರಣಗಳಿಗೆ ನೀರೆರೆಯುವಂತೆ ಸಾಗುತ್ತಿದ್ದು, ಬ್ಯಾಂಕ್ ಸಾಲ ವಸೂಲಾತಿ ಪ್ರಕ್ರಿಯೆ ಅರ್ಜಿಗಳನ್ನು ಸುಸ್ತಿದಾರರಿಗೆ ನೋಟೀಸು ಜಾರಿಗೊಳಿಸದೆಯೇ ಮತ್ತು ಕನಿಷ್ಟ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸದೆ, ಬ್ಯಾಂಕ್ ವಂಚನೆಯ ಬಗ್ಗೆಗಿನ ಪೂರಕ ಧಾರಾಳ ಸಾಕ್ಷ್ಯಾಧಾರಗಳ ಲಭ್ಯತೆಯ ಹೊರತಾಗಿಯೂ ಕೂಡಾ ಪೊಲೀಸ್ ಇಲಾಖೆಯ ಎಫ್‌ಐಆರ್‌ ದಾಖಲಾದ ಪ್ರಕರಣಗಳಲ್ಲಿ ದೋಷ ನಿರಾರೋಪಣ, ಬಿ. ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುವ ಮಟ್ಟಿಗೆ ಇಳಿದಿದೆ. 


ದ.ಕ ಮಂಗಳೂರು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸರಕಾರೇತರ ಸಂಸ್ಥೆಯ ಸಹಕಾರದೊಂದಿಗೆ ಬೆಳಕಿಗೆ ಬಂದ ಹಲವಾರು ಬ್ಯಾಂಕಿಂಗ್ ವಂಚನೆಯ ಪ್ರಕರಣಗಳಲ್ಲಿನ ದಾಖಲಾದ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್ ಸಂಖ್ಯೆ 116/2019, 146/2019, 66/2021, 24/2022 ಮತ್ತು 47/2022) ಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಬಾಹ್ಯ ಹವ್ಯಾಸಿ ವಂಚಕರೊಂದಿಗೆ ಶಾಮೀಲು ಹೊಂದಿ ಬ್ಯಾಂಕಿಂಗ್ ವಂಚನೆಗೈದ ಕೃತ್ಯಗಳಾಗಿವೆ. ಸರ್ಪೇಸಿ ಆ್ಯಕ್ಟ್ ಗಳಲ್ಲಿನ ಕಲಂ 14ರಲ್ಲಿ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಆದೇಶ ಪಡೆಯುವ ನಿಯಮಗಳಿದ್ದು, ಆಶ್ಚರ್ಯವೆಂಬಂತೆ ಅಶಂಕಿತ ಸುಸ್ತಿದಾರ ಸಂತ್ರಸ್ತರಿಗೆ ಯಾವುದೇ ಮುನ್ಸೂಚನಾ ನೋಟೀಸು ಜ್ಯಾರಿಗೊಳಿಸದೆಯೇ ಆದೇಶಗಳನ್ನು ಜ್ಯಾರಿಗೊಳಿಸಲಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯ ಸಮರ್ಪಕ ಆಲಿಕೆಯನ್ನೇ ಮಾಡಲಾಗುತ್ತಿಲ್ಲ ಮತ್ತು ಬ್ಯಾಂಕ್ ಅಧಿಕಾರಿಗಳ ವತಿಯಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನೇ ಪೂರಕ ದಾಖಲೆಗಳಾಗಿ ಸಲ್ಲಿಸಲಾಗುತ್ತಿದೆ. 


ಅನೇಕ ಸಂದರ್ಭಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ಬರದ ರೀತಿಯಲ್ಲಿಯೇ, ಜಿಲ್ಲಾಡಳಿತದ ಸಿಬ್ಬಂದಿಗಳನ್ನು ಮತ್ತು ಕಾರ್ಯನಿರ್ವಾಹಕರನ್ನು ಬಳಸಿಕೊಂಡು, ವಸೂಲಾತಿ ಆದೇಶ ಪಡೆದು, ಸದರಿ ಆದೇಶಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ತಹಶೀಲ್ದಾರರು ಮತ್ತು ಪೊಲೀಸು ಅಧಿಕಾರಿಗಳ ಸಹಕಾರದೊಂದಿಗೆ ಯಾವುದೇ ಸಾಲ ಪಡೆಯದ ಅಶಂಕಿತ ಸ್ಥಿರಾಸ್ತಿ ಮಾಲಕರನ್ನು ಗುರಿಯಾಗಿಸಲಾಗುತ್ತಿದೆ. 


ಅಶಂಕಿತ ಸ್ಥಿರಾಸ್ತಿ ಮಾಲಕರಿಗೆ ವಂಚನಾತ್ಮಕ ನೋಟೀಸು ಜ್ಯಾರಿಗೊಳಿಸಿದ ನಂತರದ ಬೆಳವಣಿಗೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ ಪ್ರಕರಣಗಳಲ್ಲಿ ಪೊಲೀಸರು ಬ್ಯಾಂಕಿಂಗ್ ವಂಚನೆಯ ಬಗ್ಗೆ ಆಮೆಗತಿಯಲ್ಲಿ ಸ್ಪಂದಿಸುತ್ತಿರುವುದು ಆಶ್ಚರ್ಯವಾಗಿದೆ ಮತ್ತು ಪೊಲೀಸರು ಬ್ಯಾಂಕ್ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಸೂಲಾತಿ ಅರ್ಜಿ ಸಲ್ಲಿಕೆ ಮಾಡುವಂತಹ ಅವಕಾಶ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ನ್ಯಾಯಾಲಯ ಜ್ಯಾರಿಗೊಳಿಸುವ ನೋಟೀಸುಗಳು ವ್ಯತ್ಯಾಸವಾದ ಹೆಸರು, ವಿಳಾಸ ಮತ್ತು ಅಸಮರ್ಪಕ ವಿಳಾಸಗಳನ್ನು ಒಳಗೊಂಡಿರುತ್ತದೆ.


ಒಂದು ಪ್ರಕರಣದಲ್ಲಿ, ಜಿಲ್ಲಾಧಿಕಾರಿ ಕಛೇರಿಗೆ ಸಲ್ಲಿಕೆಯಾದ ಅರ್ಜಿಯಲ್ಲಿನ ವಂಚನೆಯಾದ ಭೂಪರಿವರ್ತನೆ ಆದೇಶದ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆ ಅಪೇಕ್ಷಿಸಿದ ಪ್ರಕರಣದಲ್ಲಿಯೂ ಕೂಡಾ, ಬ್ಯಾಂಕ್ ಪರ ವಸೂಲಾತಿ ಆದೇಶ ಜ್ಯಾರಿಯಾಗಿರುತ್ತದೆ. ಹೆಚ್ಚುವರಿಯಾಗಿ, ನಕಲಿ ಪರಭಾರೆ ಪತ್ರ, ವಂಚನೆ ಉದ್ದೇಶಿತ ಸಾಲ ನೀಡುವಿಕೆ ಅರ್ಜಿಗಳನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಕೆ ಆಗಿದೆ. ಇದರಿಂದಾಗಿ ಸಾಲ ಪಡೆಯದ ಸ್ಥಿರಾಸ್ತಿ, ಮಾಲಕರ ಆಸ್ತಿಗಳನ್ನು ಏಲಂಗೆ ಒಳಪಡಿಸಿ, ಅಕ್ರಮ ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದು ಅಸ್ತಿತ್ವದಲ್ಲಿಯೇ ಇರದ ವ್ಯಕ್ತಿಯ ಸ್ಥಿರಾಸ್ತಿಯನ್ನು ಅಡವುಗೊಳಿಸುವಂತೆ ಮಾಡಿ, ಕಂಪೆನಿ ಹೆಸರಲ್ಲಿ ಸಾಲ ನೀಡಿದಂತೆ ತೋರಿಸಲಾಗಿದೆ. ಬ್ಯಾಂಕ್ ವ್ಯವಸ್ಥಾಪಕರು ದಸ್ತಾವೇಜಿನ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದು, ಸಾಲ ನೀಡಲಾದ ಕಂಪೆನಿಯು, ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಬೇರೊಂದು ಹೆಸರಿನ ಕರೆಂಟ್ ಖಾತೆಯನ್ನು ಹೊಂದಿರುತ್ತಾರೆ.


ಇನ್ನೊಂದು ಪ್ರಕರಣದಲ್ಲಿ, ಬ್ಯಾಂಕ್ ವ್ಯವಸ್ಥಾಪಕರೊಬ್ಬರು ವ್ಯಕ್ತಿಯೋರ್ವರ ಸ್ಥಿರಾಸ್ತಿ ಮೇಲೆ ಸಾಲ ನೀಡಿದ್ದು, ಸಾಲದ ಹಣವನ್ನು ಬೇನಾಮಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದ್ದು, ಸದರಿ ಬ್ಯಾಂಕ್ ವ್ಯವಸ್ಥಾಪಕರು ಸೇವೆಯಿಂದ ಅಮಾನತ್ತುಗೊಂಡಿರುತ್ತಾರೆ. ಈ ಬೇನಾಮಿ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಜಮೆ ಆಗಿ ಇರುತ್ತದೆ. ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಈಗಾಗಲೇ ಪ್ರಥಮ ವರ್ತಮಾನ ವರದಿ ಮೊಕದ್ದಮೆ ದಾಖಲಾಗಿದ್ದು, ಬೇನಾಮಿ ಖಾತೆದಾರರನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸ ಬೇಕಿದೆ. ಇಂತಹ ಅನೇಕ ಪ್ರಕರಣಗಳ ಬಗ್ಗೆ ದ,ಕ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಲಾಗಿದ್ದು ಯಾವುದೇ ಕ್ರಮ ಜರುಗಿಸಲಾಗಿಲ್ಲ.


ಇಂತಹ ಪ್ರಕರಣದಲ್ಲಿ ಅಗಾಧ ಪ್ರಾಥಮಿಕ ಸಾಕ್ಷ್ಯಗಳ ಅಸ್ತಿತ್ವ ಮತ್ತು ಲಭ್ಯತೆ ಹೊರತಾಗಿಯೂ ಕೂಡಾ, ಪೊಲೀಸರು ದೋಷ ನಿರಾರೋಪ-ಬಿ ರಿಪೋರ್ಟ್ ಸಲ್ಲಿಸುವುದರಿಂದ ಪ್ರಕರಣದ ಗಂಭೀರತೆಗೆ ಮಾನ್ಯತೆ ಇಲ್ಲದಾಗಿ, ಪರೋಕ್ಷವಾಗಿ ಭಾರತದಲ್ಲಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಅಧಿಕವಾಗಲು ಕಾರಣವಾಗಿದೆ. 


- ಅಜಯ್ ಡಿ’ಸಿಲ್ವಾ

ಪ್ರಧಾನ ಕಾರ್ಯದರ್ಶಿ  

ಪಿ.ಯು.ಸಿ.ಎಲ್.ದ.ಕ 

9341216181


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top