-----------------------------------------
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
----------------------------------
ಆಘಾತಗಳ ಸರಣಿ
ಕೋವಿಡ್-19, ಕೋವಿಡ್ ನಂತರದ ಹಣದುಬ್ಬರ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಈಗ ಇಸ್ರೇಲ್-ಹಮಾಸ್ ಸಂಘರ್ಷ ಹೀಗೆ ಜಗತ್ತಿನ ಆರ್ಥಿಕತೆ ಕಳೆದ ನಾಲ್ಕು ವರ್ಷಗಳಲ್ಲಿ ಅಘಾತಗಳ ಸರಣಿಯಿಂದ ಜರ್ಜರಿತವಾಗಿದೆ. ಉಕ್ರೇನ್-ರಷ್ಯಾ ಯುದ್ಧದ ಜೊತೆಗೆ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವು ಜಾಗತಿಕ ಆರ್ಥಿಕತೆಗೆ ಎರಡು ಹೊಡೆತವಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಮೊದಲೇ ಜಾಗತಿಕ ಮಟ್ಟದಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಪ್ರಾರಂಭವಾಗಿರುವ ಮತ್ತೊಂದು ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈಗಾಗಲೇ ಹೆಚ್ಚುತ್ತಿವೆ ಹಾಗೂ ಅದು ಕೊನೆಗೊಳ್ಳುವ ಲಕ್ಷಣಗಳಿಲ್ಲ. ಇಸ್ರೇಲ್-ಹಮಾಸ್ ಯುದ್ಧವು ಜಾಗತಿಕ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ ಅನ್ನುವ ಭಯ ಆರಂಭವಾಗಿದೆ.
ಪಶ್ಚಿಮ ಏಷ್ಯಾ ಪ್ರದೇಶದ ಘಟನೆಗಳಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಜಾಗತಿಕ ದಕ್ಷಿಣದಲ್ಲಿ ಏಕತೆ ಮತ್ತು ಸಹಕಾರದ ತುರ್ತು ಅಗತ್ಯತೆ ಇದೆ.
ಜಾಗತಿಕ ಆರ್ಥಕತೆಯ ಮೇಲೆ ಹೊಡೆತ
ಜಾಗತಿಕ ಆರ್ಥಿಕತೆಯ ಮೇಲೆ ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮವು ಸ್ಪಷ್ಟವಾಗಲು ಸಮಯ ತೆಗೆದುಕೊಳ್ಳಬಹುದು. ಆದರೆ ಈ ಸಂಘರ್ಷವು ಮಧ್ಯಪ್ರಾಚ್ಯದ ಇತರ ಭಾಗಗಳಿಗೆ ಮುಖ್ಯವಾಗಿ ಪ್ರಮುಖ ತೈಲ ಉತ್ಪಾದಕ ಹಾಗೂ ಹಮಾಸ್ ಬೆಂಬಲಿಗ ಇರಾನ್ ಗೆ ಹರಡಿದರೆ ಅದು ಹೆಚ್ಚು ತೀವೃವಾಗುತ್ತದೆ.
ಜಾಗತಿಕ ತೈಲ ಪೂರೈಕೆಯ ಮೂರನೇ ಒಂದು ಭಾಗದಷ್ಟು ಪೂರೈಕೆ ಮಾಡುವ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಕಾರಣ ಕಚ್ಚಾತೈಲ ಬೆಲೆಗಳು ಏರುಗತಿಯಲ್ಲಿದೆ. ಈಗಾಗಲೇ ಹೆಚ್ಚಿದ ಹಣದುಬ್ಬರದಿಂದ ಜರ್ಜರಿತವಾಗಿರುವ ಜಾಗತಿಕ ಆರ್ಥಿಕತೆಯು ಇನ್ನಷ್ಟು ಬಿಕ್ಕಟ್ಟನ್ನು ಎದುರಿಸಲಿದೆ. ಅಂತರಾಷ್ಟ್ರೀಯವಾಗಿ ವ್ಯಾಪಾರವಾಗುವ ಕಚ್ಚಾ ತೈಲ ಪೂರೈಕೆಯ ಮೂರನೇ ಎರಡರಷ್ಟು ಬೆಲೆಯನ್ನು ನಿಗದಿಪಡಿಸಲು ಬಳಸಲಾಗುವ ಬ್ರೆಂಟ್ ಫ್ಯೂಚರ್ಸ್ ನಲ್ಲಿ ಪ್ರತಿ 10 ಡಾಲರ್ ಏರಿಕೆಯು ಚಾಲ್ತಿ ಖಾತೆ ಕೊರತೆ(CAD)ಯನ್ನು 0.5% ದಷ್ಟು ವಿಸ್ತರಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಯುದ್ಧ ಸನ್ನಿವೇಶ ಸಹಜವಾಗಿ ಪೂರೈಕೆ ಅಡತಡೆಗಳ ಸಂಭವನೀಯತೆ ಹಾಗೂ ಮಾರುಕಟ್ಟೆ ಆತಂಕವನ್ನು ಹೆಚ್ಚಿಸುತ್ತವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯು ತೈಲ ಬೆಲೆಗಳ ಮೇಲೆ ಮೇಲ್ಮುಖ ಒತ್ತಡವನ್ನು ತರುತ್ತದೆ. ಆರ್ಥಿಕ ಚಟವಟಿಕೆಯ ಮೇಲೆ ಇಂಧನ ಬೆಲೆಯ ಆಘಾತಗಳ ಋಣಾತ್ಮಕ ಪ್ರಭಾವದ ಜೊತೆಗೆ ಏರುಗತಿಯ ಇಂಧನ ಬೆಲೆಗಳು ಹಣದುಬ್ಬರವನ್ನು ಹದ್ದುಬಸ್ತಿಗೆ ತರುವ ಪ್ರಯತ್ನಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಲಿದೆ.
ತೈಲಬೆಲೆಯ ಹೆಚ್ಚಳ ವಸ್ತುಗಳ ಮತ್ತು ಸೇವೆಯ ಬೆಲೆಯನ್ನು ಹೆಚ್ಚಿಸಲಿದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗದೆ ಖರ್ಚು ಮಾತ್ರ ಏರುತ್ತಲೇ ಹೋಗುವುದು. 2024 ರಲ್ಲಿ ವಿಶ್ವದ ಬೆಳವಣಿಗೆಯನ್ನು 2.9% ಗೆ ನಿಧಾನಗೊಳಿಸುತ್ತದೆ ಎಂದು ಐಎಂಎಫ್ ಊಹಿಸಿದೆ. ತೈಲ ಬೆಲೆಗಳು 10% ರಷ್ಟು ಹೆಚ್ಚಾದರೆ, ಜಾಗತಿಕ ಆರ್ಥಿಕ ಬೆಳವಣಿಗೆಯು 0.15% ರಷ್ಟು ಕಡಿಮೆಯಾಗುತ್ತದೆ ಮತ್ತು ಜಾಗತಿಕ ಹಣದುಬ್ಬರ 0.4%ರಷ್ಟು ಹೆಚ್ಚಾಗುತ್ತದೆ ಎಂದು ಉಹಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದ ಜಗತ್ತಿನ ಹಲವು ರಾಷ್ಟ್ರಗಳ ಹೂಡಿಕೆದಾರರು ಮೂಲ ಹಣವನ್ನು ಕಳದುಕೊಂಡಿದ್ದಾರೆ. ಮಾರುಕಟ್ಟೆ ಆರೋಗ್ಯಕರವಾಗಿದ್ದರೂ ಹೂಡಿಕೆ ಮಾಡಲು ಭಯ ಇದ್ದೇ ಇದೆ.
ಭಾರತದ ಮೇಲೆ ಪರಿಣಾಮ
ಆಮದು ಮೂಲಕವೇ ತನ್ನ ತೈಲ ಅಗತ್ಯಗಳ 85% ಪೂರೈಸಿಕೊಳ್ಳುವ ಭಾರತದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆಮದು ಹೊರೆ ಚಾಲ್ತಿ ಖಾತೆ ಕೊರತೆಗೆ ಕಾರಣವಾಗಬಹುದು. ಹೆಚ್ಚಿದ ತೈಲ ಬೆಲೆಗಳು ಭಾರತದ ರೂಪಾಯಿಯನ್ನು ದುರ್ಬಲಗೊಳಿಸುತ್ತದೆ. ಈ ಸಂಕಟ ಪರಿಸ್ಥಿತಿಯಲ್ಲಿ ತೈಲದರವನ್ನು ಸ್ಥಿರವಾಗಿ ಇಟ್ಟುಕೊಳ್ಳಬೇಕಾದರೆ ಭಾರತೀಯ ತೈಲ ಮಾರಾಟ ಕಂಪೆನಿಗಳು ತಮ್ಮ ಲಾಭಾಂಶವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.
ಭಾರತದ ಚಿಲ್ಲರೆ ಹಣದುಬ್ಬರ ದರವು ಆಗಸ್ಟ್‌ನಲ್ಲಿ ಶೇಕಡಾ 6.83 ರಿಂದ ಸೆಪ್ಟೆಂಬರ್‌ನಲ್ಲಿ ಶೇಕಡಾ 5.02 ಕ್ಕೆ ಇಳಿದಿದೆ. ಮುಂಬರುವ ತಿಂಗಳುಗಳಲ್ಲಿ, ಜಾಗತಿಕ ಅನಿಶ್ಚಿತತೆಗಳು ಹಾಗೂ ದೇಶೀಯ ಸಮಸ್ಯೆಗಳು ದೇಶದ ಹಣದುಬ್ಬರ ದರವನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಬಹುದು.
ಹಣದುಬ್ಬರ ಜನಸಾಮಾನ್ಯರನ್ನು ಸ್ವಲ್ಪ ಹೆಚ್ಚೇ ಪೀಡಿಸಿ, ಉಳ್ಳವರ-ಇಲ್ಲದವರ ಅಂತರ ಇನ್ನಷ್ಟು ಹೆಚ್ಚಿಸಲಿದೆ. ಯುದ್ಧವಾಗಲಿ, ಹಣದುಬ್ಬರವಾಗಲಿ ಜನಸಾಮಾನ್ಯರನ್ನು ತಲ್ಲಣಿಸದೆ ಬಿಡದು. ತನ್ನದಲ್ಲದ ತಪ್ಪಿಗೆ ಯಾವಾಗಲೂ ದಂಡ ಕಟ್ಟುವುದು ಜನಸಾಮಾನ್ಯ ಎಂಬ ಅಂಶ ಆಘಾತಕಾರಿ ಹಾಗೂ ಸ್ವೀಕಾರಾರ್ಹವಲ್ಲ.
ಭಾರತ ಮತ್ತು ಇಸ್ರೇಲ್ ನಡುವಿನ ಆರ್ಥಿಕ ಸಂಬಂಧ ಕಳೆದ ಎರಡು ದಶಕಗಳಿಂದ ವಿಸ್ತಾರವಾಗುತ್ತಲೇ ಇದೆ. 2022-23 ರಲ್ಲಿ ಇಸ್ರೇಲ್ ಗೆ ಭಾರತೀಯ ರಪ್ತು 7.89 ಶತಕೋಟಿ ಡಾಲರ್ ಆಗಿದ್ದರೆ ಭಾರತವು 2.13 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.
ವ್ಯಾಪಾರ ವಹಿವಾಟಿನ ವಿಚಾರದಲ್ಲಿ ಭಾರತ ಮತ್ತು ಇಸ್ರೇಲ್‌ನ ಸಂಬಂಧ ತೀರಾ ಹಳತೇನೂ ಅಲ್ಲ. 90ರ ದಶಕದಲ್ಲಿ ಭಾರತವು ಉದಾರೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡಾಗಷ್ಟೇ ಇಸ್ರೇಲ್‌ನೊಂದಿಗೆ ಗಣನೀಯ ಮಟ್ಟದ ವಾಣಿಜ್ಯ ಸಂಬಂಧ ಬೆಳೆದದ್ದು. ನಂತರದ ವರ್ಷಗಳಲ್ಲಿ ಆ ಸಂಬಂಧ ಗಟ್ಟಿಯಾಗುತ್ತಲೇ ಹೋಗಿದೆ. ಈಗ ಭಾರತವು ಹತ್ತು ಹಲವು ಕ್ಷೇತ್ರಗಳಲ್ಲಿ ಇಸ್ರೇಲ್‌ನೊಟ್ಟಿಗೆ ವಾಣಿಜ್ಯ ಸಂಬಂಧವನ್ನು ಹೊಂದಿದೆ. ಭಾರತದ ಹಲವು ಐಟಿ ಕಂಪನಿಗಳು, ಭಾರತೀಯ ಸ್ಟೇಟ್ ಬ್ಯಾಂಕ್, ಕೈಗಾರಿಕೆಗಳು ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತವು ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೌಲ್ಯಕ್ಕಿಂತ, ಭಾರತವು ಇಸ್ರೇಲ್‌ಗೆ ರಫ್ತು ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಹೆಚ್ಚು.
ಭಾರತವು ಮುಖ್ಯವಾಗಿ ಮುತ್ತುಗಳು, ಅಮೂಲ್ಯ ಕಲ್ಲುಗಳು, ರಾಸಾಯನಿಕ ಮತ್ತು ಖನಿಜ ಉತ್ಪನ್ನಗಳು,ಜವಳಿ ಮತ್ತು ಉಡುಪುಗಳನ್ನು ರಪ್ತು ಮಾಡುತ್ತದೆ. ಇಸ್ರೇಲ್ ರಸಗೊಬ್ಬರಗಳು, ಯಂತ್ರೋಪಕರಣಗಳು, ಪೆಟ್ರೋಲಿಯಂ ತೈಲಗಳು, ಸಾರಿಗೆ ಉಪಕರಣಗಳು ಮತ್ತು ರಕ್ಷಣಾ ಉಪಕರಣಗಳನ್ನು ಭಾರತಕ್ಕೆ ರಪ್ತು ಮಾಡುತ್ತದೆ.
ಅತಿಅಗತ್ಯದ ಸರಕು ಮತ್ತು ಸೇವೆಗಳಿಗಾಗಿ ಭಾರತವು ಇಸ್ರೇಲ್ ಅನ್ನು ಅವಲಂಬಿಸಿರುವುದಕ್ಕಿಂತ, ಇಸ್ರೇಲ್ ಭಾರತವನ್ನು ಅವಲಂಬಿಸಿದೆ. ಭಾರತವು ಇಸ್ರೇಲ್‌ಗೆ ರಫ್ತು ಮಾಡುವ ಸರಕುಗಳಲ್ಲಿ, ಹಲವು ಸರಕುಗಳು ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ತಯಾರಾಗುತ್ತವೆ. ಯುದ್ಧ ಮುಂದುವರಿದು, ಅಂತಹ ಸರಕುಗಳಿಗೆ ಬೇಡಿಕೆ ಕುಸಿದರೆ ಈ ಕೈಗಾರಿಕೆಗಳ ವಹಿವಾಟು ಕುಸಿಯುತ್ತದೆ. ಅಂತಿಮವಾಗಿ ಇದು ಆ ಕೈಗಾರಿಕೆಗಳಲ್ಲಿ ಉದ್ಯೋಗಕ್ಕಿರುವ ಜನರ ಉದ್ಯೋಗವನ್ನು ಕಸಿದುಕೊಳ್ಳಬಹುದು. ಆದರೆ, ಅಂತಹ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ರಫ್ತು ಉದ್ಯಮದ ಮೇಲೆ ಈ ಯುದ್ಧವು ಈವರೆಗೆ ಯಾವುದೇ ಪರಿಣಾಮ ಬೀರಿಲ್ಲ.
ದಕ್ಷಿಣ ಭಾರತದ ಕೈಗಾರಿಕಾ ಕೇಂದ್ರಗಳಲ್ಲಿನ ಗಾರ್ಮೆಂಟ್‌ಗಳಲ್ಲಿ (ಸಿದ್ಧಉಡುಪು ಕಾರ್ಖಾನೆಗಳು) ತಯಾರಾಗುವ ಹತ್ತಿಯ ಬಟ್ಟೆಗಳಿಗೆ ಇಸ್ರೇಲ್ ದೊಡ್ಡ ಮಾರುಕಟ್ಟೆಗಳಲ್ಲಿ ಒಂದು. ಕಳೆದ ಕೆಲವು ವರ್ಷಗಳಿಂದ ಭಾರತದಿಂದ ಇಸ್ರೇಲ್‌ಗೆ ರಫ್ತಾಗುವ ಹತ್ತಿಯ ಬಟ್ಟೆಗಳ ಪ್ರಮಾಣ ಕಡಿಮೆಯಾಗಿದೆ. ಯುದ್ಧ ಮುಂದುವರಿದರೆ ಅದು ಇನ್ನಷ್ಟು ಕಡಿಮೆಯಾಗುವ ಅಪಾಯವಿದೆ. 2021–22ರಲ್ಲಿ ಭಾರತದಿಂದ ಇಸ್ರೇಲ್‌ಗೆ ₹250 ಕೋಟಿ ಮೌಲ್ಯದ ಹತ್ತಿಯ ಬಟ್ಟೆಗಳು ರಫ್ತಾಗಿದ್ದವು. 2022–23ರಲ್ಲಿ ಅದು ₹210 ಕೋಟಿಗೆ ಕುಸಿದಿತ್ತು. ಈಗ ಅದು ಇನ್ನಷ್ಟು ಕುಸಿಯುವ ಅಪಾಯವಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತದ ಟಿಸಿಎಸ್, ವಿಪ್ರೊ, ಇನ್ಫೊಸಿಸ್ ಸೇರಿ ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳು ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಕೆಲವು ಕಂಪನಿಗಳು ಈಗಾಗಲೇ ತಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿವೆ. ಯುದ್ಧ ತೀವ್ರವಾದರೆ ಭಾರತದ ಕಂಪನಿಗಳೂ ಇದೇ ಹಾದಿ ಹಿಡಿಯಬೇಕಾಗಬಹುದು. ಅಕ್ಟೋಬರ್ ಆರಂಭದ ವೇಳೆಗೆ ಇಸ್ರೇಲ್‌ನಲ್ಲಿದ್ದ ಭಾರತೀಯರ ಸಂಖ್ಯೆ ಅಂದಾಜು 20,000. ಈ ಎಲ್ಲಾ ಭಾರತೀಯರು ಇಸ್ರೇಲ್‌ನಿಂದ ಹೊರಗೆ ಬಂದರೆ, ಅವರು ಮಾಡುತ್ತಿದ್ದ ಕೆಲಸ ಬಾಕಿಯಾಗುವ ಸಾಧ್ಯತೆ ಇರುತ್ತದೆ.
ವಿಶ್ವದಲ್ಲಿ ಹರಳು ಮತ್ತು ವಜ್ರಗಳಿಗೆ ಹೊಳಪು ನೀಡುವ ಉದ್ಯಮವು ಕೇಂದ್ರಿತವಾಗಿರುವುದು ಗುಜರಾತ್‌ನ ಸೂರತ್‌ನಲ್ಲಿ. ವಿಶ್ವದ ಹರಳು ಮತ್ತು ವಜ್ರಗಳಿಗೆ ಹೊಳಪು ನೀಡುವ ಶೇ 90ರಷ್ಟು ಕೆಲಸಗಳು ನಡೆಯುವುದು ಸೂರತ್‌ನಲ್ಲಿಯೇ. ಆದರೆ, ಸೂರತ್‌ನ ಈ ಉದ್ಯಮವು ಕಚ್ಚಾ ಹರಳು ಮತ್ತು ವಜ್ರಗಳಿಗಾಗಿ ಅವಲಂಬಿಸಿರುವುದು ಇಸ್ರೇಲ್ ಅನ್ನು. ಹೀಗೆ ಹೊಳಪು ನೀಡಲಾದ ಉತ್ಪನ್ನಗಳನ್ನೂ ಭಾರತವು ಇಸ್ರೇಲ್‌ಗೆ ರಫ್ತು ಮಾಡುತ್ತದೆ. ಹೊಳಪು ನೀಡುವ ಉದ್ಯಮಕ್ಕೆ ಹಲವು ವಾರಗಳಿಗೆ ಬೇಕಾಗುವಷ್ಟು ಕಚ್ಚಾ ಹರಳು ಮತ್ತು ವಜ್ರಗಳ ದಾಸ್ತಾನು ಈಗಾಗಲೇ ಸೂರತ್‌ನಲ್ಲಿ ಇದೆ. ಹೀಗಾಗಿ ಯುದ್ಧವು ತಕ್ಷಣಕ್ಕೆ ದೊಡ್ಡ ಪ್ರಮಾಣದ ಹೊಡೆತವನ್ನೇನೂ ನೀಡಿಲ್ಲ. ಆದರೆ, ಯುದ್ಧ ಮುಂದುವರಿದರೆ ಪೂರೈಕೆ ಮತ್ತು ಬೇಡಿಕೆ ಎರಡಕ್ಕೂ ಧಕ್ಕೆಯಾಗಬಹುದು.
ರಷ್ಯಾ ಹಾಗೂ ಇಸ್ರೇಲ್ ದೇಶಗಳಿಂದಲೇ ಭಾರತವು ಹಲವು ಮುಖ್ಯ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುತ್ತದೆ. ಆದರೆ, ಈಗ ಈ ಎರಡೂ ದೇಶಗಳು ಯುದ್ಧದಲ್ಲಿ ಮುಳುಗಿವೆ. ಈಗಾಗಲೇ ರಷ್ಯಾ–ಉಕ್ರೇನ್ ಯುದ್ಧದ ಕಾರಣ ರಷ್ಯಾದಿಂದ ಬರಬೇಕಿದ್ದ ರಕ್ಷಣಾ ಸಾಮಗ್ರಿಗಳ ಮೇಲೆ ಪರಿಣಾಮ ಬೀರಿದೆ. ಒಂದುವೇಳೆ ಇಸ್ರೇಲ್ ಹಾಗೂ ಹಮಾಸ್ ಯುದ್ಧವು ತಿಂಗಳುಗಳವರೆಗೆ ನಡೆದರೆ, ಇಸ್ರೇಲ್‌ದಿಂದ ಬರುವ ರಕ್ಷಣಾ ಸಾಮಗ್ರಿಗಳ ಮೇಲೂ ಪರಿಣಾಮ ಬೀರಬಹುದು ಎಂದು ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್–ಹಮಾಸ್ ಯುದ್ಧದ ಕಾರಣದಿಂದ ಭಾರತದಿಂದ ಇಸ್ರೇಲ್ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದು. ಆದ್ದರಿಂದ, ಯುದ್ಧದಿಂದ ಭಾರತಕ್ಕೆ ಲಾಭವೇ ಇದೆ ಎಂದು ಕೆಲವು ಖಾಸಗಿ ರಕ್ಷಣಾ ಸಾಮಗ್ರಿ ತಯಾರಕ ಕಂಪನಿಗಳು ಅಭಿಪ್ರಾಯಪಟ್ಟಿವೆ. ಆದರೆ, ತಜ್ಞರ ಪ್ರಕಾರ ಹೆಚ್ಚು ದಿನ ಯುದ್ಧ ನಡೆಯುವುದರಿಂದ ಭಾರತದ ರಕ್ಷಣಾ ಕ್ಷೇತ್ರಕ್ಕೆ ತೊಂದರೆಯೇ ಉಂಟಾಗಲಿದೆ.
ಭಾರತದ ಹಲವು ಟೆಲಿಕಾಂ ಕಂಪನಿಗಳು 5ಜಿ ಸಂಪರ್ಕ ಸೇವೆಯನ್ನು ಒದಗಿಸಲು ಮುಂದಾಗಿವೆ. ಇದಕ್ಕಾಗಿ ನೂರಾರು ಕೋಟಿ ಹೂಡಿಕೆಯನ್ನೂ ಮಾಡಿವೆ. ಜೊತೆಗೆ, ಭಾರತವು ಈ 5ಜಿ ಸಂಪರ್ಕ ಸೇವೆಗೆ ಅಗತ್ಯ ಇರುವ ಹಲವು ಉಪಕರಣಗಳನ್ನು ಇಸ್ರೇಲ್ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧವು ಮುಂದುವರಿದರೆ ಭಾರತದ ಟೆಲಿಕಾಂ ಕಂಪನಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇಸ್ರೇಲ್–ಹಮಾಸ್ ಯುದ್ಧದ ಕಾರಣದಿಂದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಕುಸಿತ ಕಾಣುವ ಲಕ್ಷಣಗಳಿವೆ. ಇದರಿಂದಾಗಿ ಉಪಕರಣಗಳ ಆಮದಿನ ಮೌಲ್ಯವು ₹2,000 ಕೋಟಿಯಿಂದ ₹2,500 ಕೋಟಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ.
ಪ್ರಗತಿಯ ವೇಗ ತಡೆ
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಪ್ರಭಾವದಿಂದ ತತ್ತರಿಸುತ್ತಿರುವ ಜಾಗತಿಕ ಆರ್ಥಿಕತೆಗೆ ಮತ್ತೊಂದು ಪೆಟ್ಟು ಎನ್ನುವಂತೆ ಇಸ್ರೇಲ್-ಹಮಾಸ್ ಯುದ್ಧ ಹೊಸ ಸವಾಲಾಗಿದೆ. ಈ ಯುದ್ಧಗಳು, ಸಾವು-ನೋವುಗಳು, ಆಸ್ತಿ-ಪಾಸ್ತಿ ಹಾನಿಗಳು ಜಾಗತಿಕವಾಗಿ ಪರಿಣಾಮ ಬೀರುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಸಾಂಕ್ರಾಮಿಕ ರೋಗದ ನಂತರ ಭಾರತವು ಹಿಂದಿನ ಹಣಕಾಸು ವರ್ಷದಲ್ಲಿ ಶೇ.7.8 ರಷ್ಟು ಬೆಳವಣಿಗೆಯನ್ನು ದಾಖಲಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಪ್ರಸ್ತುತ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಬೆಳಕಿನಲ್ಲಿ ದೇಶವು ಇದನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬುದು ಈಗ ದೊಡ್ಡ ಸವಾಲಾಗಿದೆ.
ಇಂದಿನ ವಿಶ್ವ ಆರ್ಥಿಕತೆಯು ದುರ್ಬಲವಾಗಿ ಕಾಣುತ್ತಿದೆ. ರಷ್ಯಾ ಉಕ್ರೇನ್ ಸಂಘರ್ಷದಿಂದ ಉಲ್ಬಣಗೊಂಡ ಹಣದುಬ್ಬರದಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಇಂಧನ ಉತ್ಪಾದಿಸುವ ಪ್ರದೇಶದಲ್ಲಿ ಮತ್ತೊಂದು ಯುದ್ಧವು ದುಬಾರಿಯಾಗಲಿರುವ ತೈಲ, ಏರುಗತಿಯ ಹಣದುಬ್ಬರ ಮತ್ತು ನಿಧಾನಗತಿಯ ಬೆಳವಣಿಗೆಗೆ ನಾಂದಿಯಾಗಲಿದೆ. ಈ ಸಂಘರ್ಷದ ಪ್ರಭಾವವು ಪ್ರಾದೇಶಿಕಕ್ಕಿಂತ ಹೆಚ್ಚಾಗಿ ಜಾಗತಿಕವಾಗಿರಲಿದೆ. ದೀರ್ಘಾವಧಿಯವರೆಗೆ ಯುದ್ಧ ಮುಂದುವರಿದರೆ ಕುಂಟುತ್ತಾ ಸಾಗುತ್ತಿರುವ ಜಾಗತಿಕ ಆರ್ಥಿಕತೆ ಇನ್ನಷ್ಟು ಕುಂಟುವ ಹಾಗೂ ಭಾರತದ ಆರ್ಥಿಕ ಸ್ಥಿರತೆ ಹಾಗೂ ವೇಗಕ್ಕೆ ತಡೆಯಾಗುವುದಂತೂ ಸತ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ