ಸೈಬರ್ ದಾಳಿಯಾದ ‘ಗೋಲ್ಡನ್ ಅವರ್’ನೊಳಗೆ ಕಾರ್ಯಪ್ರವೃತ್ತರಾಗಲು ನೆರವಾಗಲಿದೆ Copconnect
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಯುಗದ ಹೊಸ ಬೆದರಿಕೆಯಾಗಿರುವ ಸೈಬರ್ ಕ್ರೈಮ್ ತಡೆಯಲು ಹಾಗೂ ಆ ಕುರಿತು ಜಾಗೃತಿ ಮೂಡಿಸಲು ಐಸಾಕ್‌ನ copconnect ಅಡಿಯಲ್ಲಿ ಸ್ವಯಂಸೇವಾ ಪಡೆಯೊಂದು ಸನ್ನದ್ಧವಾಗಿದೆ. ಜನರು ಈ ಉಚಿತ ಆ್ಯಪ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಐಸಾಕ್‌ನ ನಿರ್ದೇಶಕರಾದ ಕ್ಯಾ.ಆನಂದ್ ನಾಯ್ಡು ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2023ರ 2ನೇ ದಿನ ನಡೆದ “ಡಿಜಿಟಲ್ ಫ್ರಾಂಟಿಯರ್‌ನ ನ್ಯಾವಿಗೇಶನ್: ಇಂಟರ್ನೆಟ್ ನಿರ್ವಹಣೆ, ಸೈಬರ್ ಭದ್ರತೆ ಹಾಗೂ ಸೈಬರ್ ವಾರ್‌ಫೇರ್” ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.
ಸೈಬರ್ ಕ್ರೈಮ್ ಸಂಭವಿಸಿದಾಗ ಗೋಲ್ಡನ್ ಅವರ್‌ನಲ್ಲೇ (ಆರಂಭಿಕ ಹಂತ) ನಾವು ಕಾರ್ಯಪ್ರವೃತ್ತರಾಗಬೇಕು. ಇದಕ್ಕಾಗಿ copconnect ಎಂಬ ಉಚಿತ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಅದರಲ್ಲಿ ಸೈಬರ್ ಕ್ರೈಂ ತಡೆ ತಂಡದ ನಿಮ್ಮ ಸಮೀಪದ ಸ್ವಯಂಸೇವಕರು ದೊರಕಲಿದ್ದಾರೆ. ಸಾರ್ವಜನಿಕರ ನೆರವಿಗಾಗೇಯ ಕಾಪ್ ಕನೆಕ್ಟ್‌ನಲ್ಲಿ ಸಾವಿರಾರು ಮಂದಿ ತರಬೇತುಗೊಂಡ ಸ್ವಯಂಸೇವಕರು ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಅಕ್ಟೋಬರ್ ತಿಂಗಳೊಂದರಲ್ಲೇ 2,000 ಮಂದಿ ಸ್ವಯಂಸೇವಕರು ಸಂಪೂರ್ಣ ತರಬೇತಿ ಪಡೆದು ಈ ತಂಡವನ್ನು ಸೇರಿಕೊಂಡಿದ್ದಾರೆ ಎಂದು ನಾಯ್ಡು ವಿವರಿಸಿದರು.
ಸೈಬರ್ ಕ್ರೈಮ್ ಕುರಿತು ಅರಿವಿನ ಕೊರತೆಯಿದೆ. ಹಳ್ಳಿಗರಷ್ಟೇ ಅಲ್ಲ, ಸಾಂಸ್ಥಿಕ ಮಟ್ಟದಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಬೊಟ್ಟು ಮಾಡಿದ ಆನಂದ್ ನಾಯ್ಡು, ಕಾಪ್‌ಕನೆಕ್ಟ್‌ನ ಈ ಸಮವಸ್ತ್ರ ರಹಿತ ಯೋಧರು ತಳಮಟ್ಟದಲ್ಲಿ ಅಂದರೆ, ಪಂಚಾಯ್ತಿಗಳು, ಶಾಲೆಗಳಲ್ಲಿ ಸೈಬರ್ ಕ್ರೈಮ್ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಸೈಬರ್ ಕ್ರೈಮ್ ವ್ಯಾಪ್ತಿ ಭಯಾನಕ:
14 ಹರೆಯದಲ್ಲೇ ವೆಬ್‌ಸೈಟ್ ರೂಪಿಸಿದ ಖ್ಯಾತಿ ಹೊಂದಿರುವ, ಗ್ಲೋಬಲ್ಸ್ ಇಂಕ್‌ನ ಸಿಇಒ ಸುಹಾಸ್ ಗೋಪಿನಾಥ್, ಅವರು ಸೈಬರ್ ಕ್ರೈಮ್ ಲೋಕದ ಕರಾಳಹಸ್ತದ ವ್ಯಾಪ್ತಿ ಬೆಚ್ಚಿಬೀಳಿಸುತ್ತದೆ ಎಂದರು. ಕೆಲವು ದಿನಗಳ ಹಿಂದಷ್ಟೇ ಮನೆಯ ಟೆರೇಸ್ ಮೇಲೆ ಕುಳಿತ ಇರಾನ್ ಹ್ಯಾಕರ್‌ಗಳು, 20 ವಿಮಾನಗಳ ಪಥವನ್ನೇ ಬದಲಿಸಿದ್ದರು. ವರ್ಷಗಳ ಹಿಂದೆ ಏಮ್ಸ್‌ನ ರೋಗಿಗಳ ಡೇಟಾವೇ ಹ್ಯಾಕ್ ಆಗಿತ್ತು. ಹೀಗೆ ಸೈಬರ್ ಕ್ರೈಮ್ ವಿವಿಧ ಕ್ಷೇತ್ರಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಹೇಳಿದರು.
ಸೈಬರ್ ಅಪರಾಧ ಮಟ್ಟ ಹಾಕಬೇಕಿರುವ ಶಾಸಕಾಂಗ, ನ್ಯಾಯಾಂಗ ಮಟ್ಟದಲ್ಲಿ ಸೈಬರ್ ಕ್ರೈಮ್ ಕುರಿತು ಇನ್ನೂ ಅರಿವು ಮೂಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ಕ್ರೈಮ್ ಅನ್ನು ವ್ಯಾಖ್ಯಾನಿಸಿಯೇ ಇಲ್ಲ. ಇನ್ನು ಇದರ ವಿರುದ್ಧ ಹೋರಾಡುವುದಾದರೂ ಹೇಗೆ ಎಂದು ಸುಹಾಸ್ ಬೇಸರ ವ್ಯಕ್ತಪಡಿಸಿದರು.
ಸುರಕ್ಷತೆ ಮುಖ್ಯ:
ತಂತ್ರಜ್ಞಾನ ಹೊಸದಾದಂತೆ, ಪರಿಹಾರವೂ ಹೊಸದಾಗಬೇಕಿದೆ. ಪ್ರತಿದಿನ ಹೊಸ ಬಳಕೆದಾರರು ಸೈಬರ್ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಪ್ರತಿಕ್ಷಣ ಸೈಬರ್ ಬೆದರಿಕೆ ಎದುರಿಸುತ್ತಿದ್ದೇವೆ. ಐಪಿ ರಕ್ಷಣೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ಕಾನೂನು ಚೌಕಟ್ಟು ರೂಪಿಸುವುದು ಸುಲಭದ ಕಾರ್ಯವಲ್ಲ. ಇಂಟರ್ನೆಟ್ ಎಂಬುದು ಬಹು ಮಧ್ಯಸ್ಥಿಕೆದಾರರ ಕ್ಷೇತ್ರ. ಎಲ್ಲರನ್ನೂ ಒಟ್ಟುಸೇರಿಸಿ ನೀತಿ ರೂಪಿಸಬೇಕು. ಸೈಬರ್ ಕ್ರೈಮ್‌ಗೆ ಸಂಬಂಧಿಸಿದಂತೆ ಸರ್ಕಾರಗಳು ಇನ್ನೂ ಕಲಿಕಾ ಹಂತದಲ್ಲಿವೆ. ಸರ್ಕಾರದೊಂದಿಗೆ ಉದ್ಯಮಗಳೂ ತೊಡಗಿಸಿಕೊಳ್ಳಬೇಕು ಹಾಗೂ ಸರ್ಕಾರವೂ ಪ್ರೋತ್ಸಾಹ ನೀಡಬೇಕು ಎಂದು ಇನ್‌ಮೊಬಿ ಸಂಸ್ಥೆಯ ಜಾಗತಿಕ ಎಸ್‌ವಿಪಿ ಆಗಿರುವ ಡಾ.ಸುಬಿ ಚತುರ್ವೇದಿ ಹೇಳಿದರು.
ಇಸ್ರೋದ ಸಿಐಎಸ್ಒ ರಾಜೀವ್ ಚೆತ್ವಾನಿ ಹಾಗೂ ಪತ್ರಕರ್ತ ಪಂಕಜ್ ಧೋವಲ್ ಅವರು ಸಂವಾದದಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ