
ಸುರತ್ಕಲ್: ಹಿಂದೂ ಬಾಂಧವರ ಸಂಭ್ರಮ ಸಡಗರದ ದೀಪಾವಳಿ ಹಬ್ಬದ ಆಚರಣೆಗೆ ಕಾಂಗ್ರೆಸ್ ಸರ್ಕಾರ ಪಾಲಿಸಲು ಸಾಧ್ಯವಾಗದ ಕಾನೂನು ಕ್ರಮ ಜಾರಿ ಮಾಡಿ ಪರೋಕ್ಷವಾಗಿ ಅಡ್ಡಗಾಲು ಹಾಕುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಆಪಾದಿಸಿದರು.
ದೀಪಾವಳಿ ಸಂಭ್ರಮದಲ್ಲಿ ಸುಡು ಮದ್ದು ಅಷ್ಟೇ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ. ಇದೀಗ ಮಾಲಿನ್ಯದ ನೆಪದಲ್ಲಿ ಸುಡುಮದ್ದು, ಪಟಾಕಿಯನ್ನು ಖರೀದಿಸಲು ಆಗದಂತೆ ಕುತಂತ್ರ ಮಾಡಿದೆ. ಅನುಮತಿಗಾಗಿ ಅಲೆದಾಡಿಸುತ್ತಿದೆ. ಯಾವುದೋ ಮೂಲೆಯಲ್ಲಿ, ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿ ಇತ್ತ ಜನರು ಬಾರದಂತೆ ಪಟಾಕಿ ಮಾರಾಟಗಾರರಿಗೂ ನಷ್ಟವಾಗುವಂತೆ ಮಾಡಿ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಬಯಲು ಮಾಡಿದೆ ಎಂದು ಶಾಸಕರು ಆರೋಪಿಸಿದರು.
ವರ್ಷಕ್ಕೆ ಒಮ್ಮೆ ಸುಡುಮದ್ದು ಸುಡುವ ಕಾರಣಕ್ಕೆ ಮಾಲಿನ್ಯದ ಕಾರಣ ಒಂದು ಕುಂಟು ನೆಪ ಮಾತ್ರ. ವರ್ಷಪೂರ್ತಿ ಮಾಲಿನ್ಯ ಮಾಡುವ ಹಲವಾರು ಯೋಜನೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಸರಕಾರ ಇಬ್ಬಗೆಯ ನೀತಿ ಅನುಸರಿಸಿದೆ ಎಂದು ಡಾ.ಭರತ್ ಶೆಟ್ಟಿ ಹೇಳಿದರು.
ಸರಕಾರ ಎಷ್ಟೇ ಅಡೆತಡೆ ಒಡ್ಡಿದರೂ ಹಿಂದು ಬಾಂಧವರು ಈ ಹಿಂದೆಗಿಂತ ದುಪ್ಪಟ್ಟು ಸಂಭ್ರಮದಿಂದ ದೀಪಾವಳಿ ಆಚರಿಸಲು ಬದ್ಧರಿದ್ದೇವೆ. ಇತ್ತೀಚೆಗೆ ನಡೆದ ಪರೀಕ್ಷೆಯ ಸಂದರ್ಭ ಮಾಂಗಲ್ಯ ತೆಗೆಸಿ ಹಿಂದೂ ಧರ್ಮದ ಸಂಪ್ರದಾಯಕ್ಕೆ ಧಕ್ಕೆ ತಂದ ಸರಕಾರದಿಂದ ಹಿಂದೂ ಸಮಾಜ ಹೆಚ್ಚೇನನ್ನೂ ನಿರೀಕ್ಷಿಸುವಂತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಮಂಜೂರು ಅಣಬೆ ಉತ್ಪಾದನೆ ನಿಲ್ಲಿಸಲೂ ಸರಕಾರ ತಡೆ:
ವಾಮಂಜೂರಿನ ಆಶ್ರಯನಗರದಲ್ಲಿ ಇರುವ ಅಣಬೆ ಉತ್ಪಾದನಾ ಕಂಪನಿಯ ಸ್ಥಗಿತಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ರವಿ ಕುಮಾರ್ ಸ್ಥಗಿತಕ್ಕೆ ಆದೇಶ ನೀಡಿದ್ದರೂ ಪ್ರಸ್ತುತ ಸರಕಾರ ಇದಕ್ಕೆ ತಡೆ ನೀಡಿ ಯಾವುದೇ ಕ್ರಮ ಜರುಗಿಸಲು ಬಿಡದೆ ಅಧಿಕಾರಿ ವರ್ಗದ ಕೈ ಕಟ್ಟಿಹಾಕಿದೆ.
ಈ ನಿಟ್ಟಿನಲ್ಲಿ ಸರಣಿ ಹೋರಾಟ ಕೈಗೊಂಡಿದ್ದ ಬಿಜೆಪಿ ಇದನ್ನು ಮುಂದುವರಿಸಲಿದೆ. ನನ್ನ ಸಂಪೂರ್ಣ ಬೆಂಬಲವೂ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ