- ವಿದುಷಿ ಸುಮಿತ್ರಾ ನಿತಿನ್, ವಿದ್ವಾನ್ ಸಿ. ಚೆಲುವರಾಜುಗೆ ಸುಸ್ವರಲಯ ಪ್ರಶಸ್ತಿ
- ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ 24ರ ಹರೆಯ
- ಶ್ರೀ ರಾಮ ಲಲಿತಕಲಾ ಮಂದಿರದಲ್ಲಿ ಕಾರ್ಯಕ್ರಮ
ಬೆಂಗಳೂರು: ರಾಜಧಾನಿಯ ಜಯನಗರ 4ನೇ ಬ್ಲಾಕ್‌ನಲ್ಲಿರುವ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಗೆ ಈಗ 24 ವಸಂತ. ಕರ್ನಾಟಕ ಸಂಗೀತದಲ್ಲಿ ಗಾಯನ ಮತ್ತು ಮೃದಂಗ ವಾದನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಇನ್ನೂ ಹಲವಾರು ಪ್ರಕಾರಗಳಲ್ಲಿ ತನ್ನ ಸಂಗೀತ ಕೈಂಕರ್ಯವನ್ನು ಸಲ್ಲಿಸುತ್ತಾ ಸಂಗೀತ ಪ್ರಪಂಚದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯು 24ನೇ ಅರ್ಥಪೂರ್ಣ ವಾರ್ಷಿಕೋತ್ಸವ ನ. 24 ರಿಂದ 26 ರ ವರೆಗೆ ಬನಶಂಕರಿ 2ನೇ ಹಂತದ ಶ್ರೀ ರಾಮಲಲಿತ ಕಲಾ ಮಂದಿರದ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
24ರ ಸಂಜೆ 4.30ಕ್ಕೆ ಖ್ಯಾತ ವೀಣಾ ವಾದಕಿ ವಿದುಷಿ ಡಾ. ಸುಮಾ ಸುಧೀಂದ್ರ ಅವರು ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ . ಸಂಸ್ಥೆ ಕೊಡಮಾಡುವ ಬೆಂಗಳೂರು ನಾಗರತ್ನಮ್ಮ ಸ್ಮರಣಾರ್ಥ ಪ್ರಶಸ್ತಿ ‘ಸ್ವರಲಯ ರತ್ನ’ ವನ್ನು ವಿದುಷಿ ಸುಮಿತ್ರಾ ನಿತಿನ್‌ಗೆ, ‘ಸ್ವರಲಯ ಶೃಂಗ’ ಪ್ರಶಸ್ತಿಯನ್ನು ಖ್ಯಾತ ಮೃದಂಗ ಪಟು ವಿದ್ವಾನ್ ಸಿ. ಚೆಲುವರಾಜು ರವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆ ಪ್ರಾಚಾರ್ಯ ವಿದ್ವಾನ್ ಎಚ್.ಎಸ್. ಸುಧೀಂದ್ರ ತಿಳಿಸಿದ್ದಾರೆ.
ವಾಸುದೇವರಾವ್‌ಗೆ ಗೌರವ:
ನಾಡು ಕಂಡ ಹಿರಿಯ ಮೃದಂಗ ವಿದ್ವಾಂಸ, ಕರ್ನಾಟಕ ಕಲಾಚಾರ್ಯ ಪುರಸ್ಕೃತ ಎಂ. ವಾಸುದೇವರಾವ್ ರವರು 80 ವಸಂತ ಪೂರೈಸಿರುವ ಸಂದರ್ಭದಲ್ಲಿ ಅವರನ್ನು ಮತ್ತೊಬ್ಬ ಹಿರಿಯ ಮೃದಂಗವಾದನ ಪಟು ಶ್ರೀಮುಷ್ಣಂ ವಿ. ರಾಜಾರಾವ್ ಅವರು ಗೌರವಿಸಲಿದ್ದಾರೆ. ನಂತರ ವಿದುಷಿ ಸುಮಿತ್ರಾ ನಿತಿನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.
25ರ ಬೆಳಗ್ಗೆ 9.30ಕ್ಕೆ ಕಲಾಶಾಲೆಯ ಮಕ್ಕಳಿಂದ ತಾಳವಾದ್ಯವಿದೆ. ನಂತರ ವಿದ್ವಾನ್ ಮತ್ತೂರು ಶ್ರೀನಿಧಿಅವರಿಂದ ಪಿಟೀಲು-ಒಂದು ಬಹುಮುಖ್ಯ ವಾದ್ಯ- ಪ್ರಾತ್ಯಕ್ಷಿಕೆ ಇದೆ. ನಂತರ ವಿದ್ವಾನ್ ಅನೂರ್ ವಿನೋದ್ ಶ್ಯಾಮ್ ಮತ್ತು ತಂಡದವರಿಂದ ಲಯವಿನ್ಯಾಸ -ನಿರೂಪಣೆ ಮತ್ತು ಪ್ರಸ್ತುತಿ ಆಯೋಜನೆಗೊಂಡಿದೆ. ಸಂಜೆ 4ಕ್ಕೆ ಕಲಾಶಾಲೆಯ ವಿದ್ಯಾರ್ಥಿಗಳಿಂದ ಲಯವಿನ್ಯಾಸ, ವಿದುಷಿ ವರದಾ ಕುಲಕರ್ಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ವಿದೆ. ಸಂಜೆ ಖ್ಯಾತ ವಿದುಷಿ ಸಿಕ್ಕಿಲ್ ಮಾಲಾ ಚಂದ್ರಶೇಖರ್ ಅವರಿಂದ ಕೊಳಲು ವಾದನ ನೆರವೇರಲಿದೆ.
ಪ್ರಾತ್ಯಕ್ಷಿಕೆ - ಉಪನ್ಯಾಸ:
26ರ ಬೆಳಗ್ಗೆ 9.30ಕ್ಕೆ ಕಲಾಶಾಲೆಯ ಮಕ್ಕಳಿಂದ ತಾಳವಾದ್ಯವಿದೆ. ನಂತರ ವಿದ್ವಾನ್ ಡಾ. ವೆಂಕಟೇಶಾಚಾರ್ಯರು ‘ವಿಜಯದಾಸರ ಜೀವನ ದರ್ಶನ ಮತ್ತು ಕೊಡುಗೆಗಳು’ ವಿಷಯ ಕುರಿತು, ವಿದುಷಿ ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಅವರು ‘ ಸಂಗೀತಕ್ಕೆ ಮೈಸೂರು ಒಡೆಯರ ಪ್ರೋತ್ಸಾಹ ಮತ್ತು ಪೋಷಣೆ’ ವಿಷಯ ಲುರಿತು ಪ್ರಾತ್ಯಕ್ಷಿಕೆ - ಉಪನ್ಯಾಸ ನೀಡಲಿದ್ದಾರೆ. ಸಂಜೆ 4ಕ್ಕೆ ಉದಯೋನ್ಮುಖ ಪ್ರತಿಭೆ ಬಿ. ಎಸ್. ಸರ್ವಜಿತ್ ಅವರಿಂದ ಗಾಯನವಿದೆ. ನಂತರ ಪ್ರಖ್ಯಾತ ಗಾಯಕ ವಿದ್ವಾನ್ ಶೆಂಕೋಟ್ಟೈ ಹರಿಹರ ಸುಬ್ರಹ್ಮಣ್ಯಮ್ ಅವರ ಸಂಗೀತ ಕಛೇರಿ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ