ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಅದರ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಇದೇ ಮೊದಲ ಬಾರಿಗೆ ಅಂತರ್ ಕಾಲೇಜು ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ನ.25 ರಂದು ಹಮ್ಮಿಕೊಂಡಿತ್ತು. ನಿಟ್ಟೆ ಶಿಕ್ಷಣ ಸಂಸ್ಥೆಯ ಸದಾನಂದ ಸಭಾಂಗಣದಲ್ಲಿ ದಕ್ಷಿಣಕನ್ನಡ-ಉಡುಪಿ ಜಿಲ್ಲೆಯ ಐದು ಕಾಲೇಜಿನ ಕಲಾವಿದರು “ಭೀಷ್ಮ ಪ್ರತಿಜ್ಞೆ” ಪ್ರಸಂಗವನ್ನು ಪ್ರದರ್ಶಿಸಲು ವೇದಿಕೆ ನೀಡಲಾಯಿತು. ಈ ಯಕ್ಷಗಾನ ಸ್ಪರ್ಧೆಯ ಉದ್ಘಾಟನೆಯನ್ನು ಪ್ರಸಿದ್ಧ ಕಲಾವಿದ ಹಾಗೂ ವಿದ್ವಾಂಸ ಸೂರಿಕುಮೇರು ಗೋವಿಂದ ಭಟ್ ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು.
ಈ ಯಕ್ಷಗಾನ ಸ್ಪರ್ಧೆಯಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜು, ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು, ಮಂಗಳೂರಿನ ಡಾ. ಪಿ ದಯಾನಂದ ಪೈ- ಪಿ ಸತೀಶ್ ಪೈ ಪ್ರಥಮದರ್ಜೆ ಕಾಲೇಜು, ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ತಂಡಗಳು ಭಾಗವಹಿಸಿದ್ದವು.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ಹಾಗೂ ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶ್ಯೂಸ್ ನ ಪ್ರವರ್ತಕ ಶ್ರೀಪತಿ ಭಟ್ ಅತಿಥಿಗಳಾಗಿ ಭಾಗವಹಿಸಿ ಕಲಾಸಕ್ತ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಅಗರಿ ಶ್ರೀನಿವಾಸ ಭಾಗವತರ ಮೊಮ್ಮಗ ಅಗರಿ ರಾಘವೇಂದ್ರ ರಾವ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಯಕ್ಷಗಾನ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ತಂಡ ಪ್ರಥಮ ಸ್ಥಾನವನ್ನು ಗಳಿಸಿದರೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ತಂಡ ದ್ವಿತೀಯ ಹಾಗೂ ಮಂಗಳೂರಿನ ಡಾ. ಪಿ ದಯಾನಂದ ಪೈ- ಪಿ ಸತೀಶ್ ಪೈ ಪ್ರಥಮದರ್ಜೆ ಕಾಲೇಜಿನ ತಂಡ ತೃತೀಯ ಸ್ಥಾನವನ್ನು ಗಳಿಸಿದೆ. ಯಕ್ಷ ಪ್ರಸಂಗದಲ್ಲಿ ಬರುವ ವಿವಿಧ ಪ್ರಮುಖ ಪಾತ್ರಗಳಿಗೆ ಅತ್ಯುತ್ತಮ ಪಾತ್ರಧಾರಿ ಪ್ರಶಸ್ತಿಯನ್ನೂ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ