ಬೆಂಗಳೂರು: ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಆತ್ಮವಿಶ್ವಾಸ ವರ್ಧಿಸುತ್ತದೆ. ನಮ್ಮ ನಾಡುನುಡಿಗಳಿಗಿರುವ ಶ್ರೀಮಂತ ಪರಂಪರೆಯ ನೆನಪು ನಮ್ಮನ್ನು ಸ್ವಾಭಿಮಾನಿಗಳನ್ನಾಗಿಸುತ್ತದೆ. ನಾವು ಸಹಸ್ರ ಸಹಸ್ರ ವರ್ಷಗಳ ಪರಂಪರೆಯ ಸಂಸ್ಕಾರ ಗಳಿಸಿರುವ ಶ್ರೇಷ್ಠರು ಎಂಬ ಹೆಮ್ಮೆ ಮೂಡುತ್ತದೆ. ಇದು ನಾವು ಪದವಿ ಶಿಕ್ಷಣದಿಂದ ಪಡೆಯುವ ಪದವಿ ಪ್ರಮಾಣಪತ್ರಕ್ಕಿಂತ ಹೆಚ್ಚು, ಏಕೆಂದರೆ ನಾವು ಕನ್ನಡದ ನೆಲ ಕಲಿಸಿದ ಮಾನವೀಯ ಮೌಲ್ಯಗಳಿಂದ ಜಗತ್ತನ್ನು ಇದಿರುಗೊಳ್ಳುತ್ತೇವೆ ಎಂದು ಕನ್ನಡದ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಪ್ರೊ. ಬೈರಮಂಗಲ ರಾಮೇಗೌಡ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಝೇಂಕಾರ’ ಶೀರ್ಷಿಕೆಯಡಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ದೇಸೀ ದಿನದ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಲ್ಲಲ್ಲಿ ಚೆದುರಿ ಹೋಗಿದ್ದ ಕನ್ನಡ ನಾಡು, ವಿಶಾಲ ಮೈಸೂರು ರಾಜ್ಯವಾಗಿ 1956ರಲ್ಲಿ ಮೂಡಿದ್ದು ಸಹಜವಾಗಿ ಅಲ್ಲ. ಅದರ ಹಿಂದೆ ಕುಲಪುರೋಹಿತ ಆಲೂರು ವೆಂಕಟರಾಯರಾದಿಯಾಗಿ ಕನ್ನಡ ಪ್ರೇಮಿಗಳು ನಡೆಸಿದ್ದ ಹೋರಾಟದ ಹಕ್ಕೊತ್ತಾಯವಿತ್ತು. ನಮ್ಮ ಕವಿ ಕುವೆಂಪು ಅವರು ಮುಂಚೂಣಿಯಲ್ಲಿದ್ದು ತಮ್ಮ ಕಾವ್ಯ ಕೃಷಿಯಲ್ಲಿ ಕನ್ನಡ ಹಾಗೂ ಕರ್ನಾಟಕದ ಅಸ್ಮಿತೆಯನ್ನು ಬಿಂಬಿಸಿ ಅಧಿಕೃತ ನಾಮಕರಣಕ್ಕೆ ಕಾರಣರಾದರು. ಇಂದು ನಾವು ಈ ವಿಶಾಲ ಕರ್ನಾಟಕದ ಪ್ರಜೆಗಳಾಗಿ ಕನ್ನಡನುಡಿ ಹಾಗೂ ಮಾನವೀಯತೆಯನ್ನೇ ಉಸಿರಾಡುವ ಕನ್ನಡಸಂಸ್ಕೃತಿಗಳ ರಾಯಭಾರಿಗಳಾಗಿ ಕನ್ನಡದ ಶ್ರೇಷ್ಠತೆಯನ್ನು ವಿಶ್ವಕ್ಕೆ ತಿಳಿಸಬೇಕು. ಇದನ್ನೂ ನಾವು ಒಂದು ಹೋರಾಟ ಎಂದು ಭಾವಿಸಿದಾಗ ಮಾತ್ರ ಯಶಸ್ಸು ಸಾಧಿಸುತ್ತೇವೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಎನ್.ಟಿ.ಟಿ. ಡಾಟಾ ಸಂಸ್ಥೆಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕರು, ಸಂಗೀತ ನಿರ್ದೇಶಕರು, ವ್ಯಂಗ್ಯಚಿತ್ರಕಾರರು ಹಾಗೂ ನಟ ವಿಶ್ವೇಶ್ ಭಟ್ ಅವರು ಸಂಗೀತದ ರಾಗಗಳು ಹೇಗೆ ಭಿನ್ನ ಭಿನ್ನ ಅಭಿವ್ಯಕ್ತಿಗಳಿಗೆ ಮಾಧ್ಯಮವಾಗುತ್ತದೆ ಹಾಗೂ ಕನ್ನಡ ಭಾಷೆ ಹೇಗೆ ಈ ರಾಗಗಳಲ್ಲಿ ಹಾಸುಹೊಕ್ಕಾಗಿ ನಾದ ಮಾಧುರ‍್ಯವನ್ನು ಸೃಷ್ಟಿಸುತ್ತದೆ ಎಂಬುದನ್ನು ಸೋದಾಹರಣವಾಗಿ ಸಾದರಪಡಿಸಿದರು.
ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸರ್ವರನ್ನೂ ಸ್ವಾಗತಿಸಿ, ಕನ್ನಡ ಭಾಷೆಯನ್ನು ಡಿಜಿಟಲ್ ಯುಗದ ಅತ್ಯಾಧುನಿಕ ತಂತ್ರಾಂಶಗಳಿಗೆ ಸಂಪೂರ್ಣವಾಗಿ ಅಳವಡಿಸುವ ನಿಟ್ಟಿನಲ್ಲಿ, ಕನ್ನಡ ಮಾತೃಭಾಷೆಯ ಮಾಹಿತಿ ತಂತ್ರಜ್ಞಾನದ ತಂತ್ರಜ್ಞರೆಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ವಿನಂತಿಸಿದರು. ಇದೇ ಸಂದರ್ಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘಟನೆ ‘ಚಿಗುರು’ ಹೊರತಂದಿರುವ ವಿಶೇಷ ಸಂಚಿಕೆಯನ್ನು ಮುಖ್ಯ ಅತಿಥಿಗಳು ಲೋಕಾರ್ಪಣೆ ಮಾಡಿದರು.
ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಅಕೆಡೆಮಿಕ್ ನಿರ್ದೇಶಕ ಪ್ರೊ. ಸಂದೀಪ್ ಶಾಸ್ತ್ರಿ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಮತ್ತು ‘ಚಿಗುರು’ ಸಂಘಟನೆಯ ಶಿಕ್ಷಕ ಸಂಯೋಜಕಿ ಡಾ. ಎನ್. ನಳಿನಿ, ‘ಚಿಗುರು’ ವಿದ್ಯಾರ್ಥಿ ಬಳಗದ ಪದಾಧಿಕಾರಿಗಳಾದ ಬೃಂದಾ ಹಾಗೂ ಇತರರು ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ರೋಹನ್ ಕನ್ನಡಿಗ ಅವರು ಸಮಾರಂಭದ ನಿರ್ವಹಣೆಯ ಹೊಣೆ ಹೊತ್ತಿದ್ದರು. ಉದ್ಘಾಟನಾ ಸಮಾರಂಭದ ನಂತರ ಯಕ್ಷಗಾನ, ಭರತನಾಟ್ಯ, ಡೊಳ್ಳು ಕುಣಿತ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ