ಸಾಮಾನ್ಯವಾಗಿ ಆರೋಗ್ಯವಾಗಿ ಇರಬೇಕಾದರೆ ಅದಕ್ಕೆ ಮುಖ್ಯ ಕಾರಣ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಾಗರಿಕರ ಪ್ರಮುಖ ಕರ್ತವ್ಯವೂ ಆಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ. ಸ್ವಚ್ಛ ಮಂಗಳೂರು ಸಾಕಾರವಾಗುವುದು ಯಾವಾಗ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಕೇವಲ ಪ್ರಶ್ನೆ ಮಾಡಿಕೊಂಡರೆ ಸಾಲದು ಅದರ ಜೊತೆಗೆ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಲ್ಲಿ ಮಂಗಳೂರಿಗೆ ತನ್ನದೇ ಆದ ಒಂದು ಹೆಸರಿದೆ. ಬುದ್ಧಿವಂತರೆ ತುಂಬಿರುವ ಇಲ್ಲಿ ಕೆಲ ಅತಿಯಾದ ಬುದ್ಧಿವಂತರು ಇಡೀ ಮಂಗಳೂರು ಗಬ್ಬುನಾರುವಂತೆ ಮಾಡಿಬಿಟ್ಟಿದ್ದಾರೆ. ತಮ್ಮ ಕೊಳಕು ಮನಸ್ಥಿತಿಯಿಂದ ನೈರ್ಮಲ್ಯದಿಂದ ದೂರ ಉಳಿದು ಎಲ್ಲೆಂದರಲ್ಲಿ ಕೊಳಕು ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಕೊಳಕಾಗಿ ಇಟ್ಟುಕೊಂಡು ಎಲ್ಲೆಂದರಲ್ಲಿ ಕಸ ಹಾಕಿ ದೇಶದ ಅಂದ ಚೆಂದವನ್ನು ಕೈಯಾರೆ ಹಾಳು ಮಾಡಿ ವಿದೇಶಗಳ ನೈರ್ಮಲ್ಯವನ್ನು ಹಾಡಿಹೊಗಳುವ ಭಾರತೀಯರು ನಾವು. ಇದೊಂದು ರೀತಿಯಲ್ಲಿ ನಮ್ಮ ಮನೆಯನ್ನು ಕೊಳಕು ಮಾಡಿ ಪಕ್ಕದ ಮನೆಯ ಅಂದವನ್ನು ನೋಡಿ ಕಣ್ತುಂಬಿಕೊಳ್ಳುವ ಹಾಗೆ.
ಮಂಗಳೂರು ಬುದ್ಧಿವಂತರ ಜಿಲ್ಲೆ ಎಂದು ನಾವು ಸ್ವಾಭಿಮಾನದಿಂದ ಬೀಗುತ್ತಿದ್ದೇವೆ. ಆದರೆ ಒಮ್ಮೆ ಯೋಚಿಸಿ ನಾವು ನಿಜವಾಗಿಯೂ ಬುದ್ಧಿವಂತರ ಹಾಗೆ ವರ್ತಿಸುತ್ತಾ ಇದ್ದೇವಾ ಎಂದು? ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಕೇವಲ ನಗರದ ಸೌಂದರ್ಯ ಮಾತ್ರ ಹಾಳಾಗುವುದೆಂದು ನೀವು ಅಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ.
ಸಮಸ್ಯೆ ಏನೋ ದೊಡ್ಡದಾಗಿ ಕಂಡರೂ ಪರಿಹಾರ ಬಲು ಸರಳವಾಗಿದೆ. ಅದು ನಮ್ಮ ಕೈಯಲ್ಲೇ ಇದೆ. ನಮ್ಮ ಮಂಗಳೂರನ್ನು ಪ್ರಪಂಚದಲ್ಲೇ ಅತಿ ಸುಂದರವಾದ ನಗರವನ್ನಾಗಿಸುತ್ತೇವೆಂದು ಮನದಲ್ಲಿ ಸಂಕಲ್ಪ ಮಾಡಿಕೊಂಡು ಅದರ ನೈರ್ಮಲ್ಯದ ಜವಾಬ್ದಾರಿಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಸರ್ಕಾರದೊಂದಿಗೆ ಕೈಜೋಡಿಸಿ ಎಲ್ಲೂ ಕಸವನ್ನು ಎಸೆಯದೆ ಇದ್ದ ಕಸವನ್ನು ವಿಲೇವಾರಿ ಮಾಡಿ ನಮ್ಮ ನಗರದ ಅಂದ ಚಂದವನ್ನು ನಾವೇ ಹೆಚ್ಚಿಸಬೇಕು.
ಪ್ರತಿಯೊಬ್ಬ ನಾಗರಿಕನು ತನ್ನಲ್ಲಿ ತಮ್ಮ ಊರಿನ ಸ್ವಚ್ಛತೆಗೆ ನಾವೇ ಹೊಣೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಸವನ್ನು ಅಲ್ಲಲ್ಲಿ ಬಿಸಾಕುವುದರ ಬದಲು ನಮ್ಮ ಊರಿನ ಸ್ವಚ್ಛತೆಗೆ ನಾವೇ ಕಾರಣ ಕರ್ತರು ಎಂಬುದನ್ನು ತಿಳಿಯಬೇಕು. ಯಾವಾಗ ಮಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ ಸ್ವಚ್ಛ ಮಂಗಳೂರು ಸಾಕಾರ ನನ್ನಿಂದ ಸಾಧ್ಯ ಎಂಬುದು ಮನಸ್ಸಿನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಸ್ವಚ್ಛ ಮಂಗಳೂರು ಪರಿಕಲ್ಪನೆ ಕನಸಾಗಿಯೇ ಉಳಿಯುದರಲ್ಲಿ ಎರಡು ಮಾತಿಲ್ಲ. ನಾವೆಲ್ಲರೂ ಧೃಢ ಮನಸ್ಸು ಮಾಡಿಕೊಂಡು ಕಿಂಚಿತ್ತು ಸೇವೆಯನ್ನು ನಮ್ಮ ಊರಿನ ಅಭಿವೃದ್ಧಿಗಾಗಿ ಮುಡಿಪಾಗಿಡೋಣ. ಆಗಮಾತ್ರವೇ ಸ್ವಚ್ಛ ಮಂಗಳೂರು ಎಂಬ ಕನಸು ಸಾಕಾರವಾಗಲು ಸಾಧ್ಯವಾಗುತ್ತದೆ.
-ಸುಶ್ಮಿತಾ
ವಿ ವಿ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ