ಆಶ್ವಿಜ ಮಾಸದ ಶುಕ್ಲಪಕ್ಷದ ದಶಮಿ ತಿಥಿಯಂದು ದುರ್ಗಾದೇವಿಯು ಒಂಬತ್ತು ದಿನಗಳವರೆಗೆ ರಾಕ್ಷಸರೊಂದಿಗೆ ಯುದ್ಧ ಮಾಡಿ ಸಂಪೂರ್ಣ ವಿಜಯ ಪಡೆದುಕೊಂಡ ಕಾರಣ ಈ ದಿನವನ್ನು "ವಿಜಯ ದಶಮಿ" ಎಂದು ಆಚರಿಸುತ್ತಾರೆ.
ಅಂತೆಯೇ ಇದರ ಹಿಂದಿನ ಒಂಬತ್ತು ದಿನಗಳನ್ನು ನವರಾತ್ರಿ ಎಂದು ಹೆಸರಿಸಿ ಜಗನ್ಮಾತೆಯಾದ ದೇವಿಯ ಆರಾಧನೆಗೆ ಮೀಸಲಿಟ್ಟು. ನವರಾತ್ರಿಯಲ್ಲಿ ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ಎಂಬ ನವದುರ್ಗೆಯರ ಶಕ್ತಿಯ ರೂಪಗಳನ್ನು ಉಪಾಸನೆ ಮಾಡುತ್ತಾರೆ.
ದುರ್ಗಾಸಪ್ತಶತೀ ಅಥವಾ ಚಂಡಿ ಪಾರಾಯಣದಲ್ಲಿ ದೇವಿಯು ಮಧು, ಕೈಟಭ, ಬಿಡಾಲ, ಮಹಿಷಾಸುರ, ಧೂಮ್ರಲೋಚನ, ಚಂಡ, ಮುಂಡ, ರಕ್ತಬೀಜಾಸುರ, ಶುಂಭ, ನಿಶುಂಭ ಮುಂತಾದ ರಾಕ್ಷಸರನ್ನು ಸಂಹರಿಸಿದ ಬಗ್ಗೆ ಉಲ್ಲೇಖನವಿದೆ. ದೇವಿಯು ಸಂಹರಿಸಿದ ಈ ರಾಕ್ಷಸರು ಯಾವುದೋ ಒಂದು ಕಾಲದಲ್ಲಿ ಇದ್ದು ಹೋಗಿರಬಹುದು, ಆದರೆ ಮನುಷ್ಯನ ವಿಕೃತ ಮನಸ್ಸಿನಲ್ಲಿ ಈಗಲೂ ವಾಸವಾಗಿದ್ದಾರೆ. ಅಂತೆಯೇ ಇದು ಕೇವಲ ದೇವಿ ಪುರಾಣವಲ್ಲ, ನಮ್ಮ ದೇಹದ ಪುರಾಣ. ಅಲ್ಲಿ ಬರುವ ರಾಕ್ಷಸರು ನಮ್ಮ ಮನಸ್ಸಿನಲ್ಲಿರುವ ದುರ್ಗುಣಗಳ ಸಂಕೇತವಾದರೆ, ಅವರನ್ನು ಸಂಹರಿಸಿದ ದೇವಿಯು ಪೂರ್ಣಪ್ರಮಾಣದಲ್ಲಿ ಜಾಗೃತಗೊಂಡ ದಿವ್ಯಾತ್ಮದ ಪ್ರತೀಕವಾಗಿದ್ದಾಳೆ.
ಮನುಷ್ಯನ ಪ್ರಾಪಂಚಿಕ ಬಂಧನಕ್ಕೆ ಕಾರಣವಾಗಿರುವ ರಾಗ-ದ್ವೇಷಗಳೇ ಮಧು ಕೈಟಭರು. ಮನಸ್ಸಿನಲ್ಲಿ ರಾಗದ್ವೇಷಗಳು ಸೃಷ್ಟಿಯಾಗುವುದು ಕೂಡ ಕಿವಿಯಿಂದಲೇನೇ. ನಮ್ಮ ವಿಶ್ವಾಸ ಯಾರ ಮೇಲಿರುತ್ತದೆಯೋ ಅವರು ಯಾರ ಬಗ್ಗೆ ಒಳ್ಳೆಯವರೆಂದು ಹೇಳುತ್ತಾರೆಯೋ ಅವರ ಬಗ್ಗೆ ನಮ್ಮ ಮನದಲ್ಲಿ ರಾಗ ರೂಪುಗೊಂಡರೆ, ಯಾರ ಬಗ್ಗೆ ಕೆಟ್ಟವರೆಂದು ಕಿವಿ ತುಂಬುತ್ತಾರೆಯೋ ಅವರ ಬಗ್ಗೆ ಮನದಲ್ಲಿ ದ್ವೇಷ ಜನಿಸುತ್ತದೆ.
ಮನದ ಮದವೇ ಮಹಿಷಾಸುರ. ಮಾಯಾವಿ ಮಹಿಷಾಸುರನು ಹಲವಾರು ರೂಪಗಳನ್ನು ತಳೆದು ದೇವಿಯೊಂದಿಗೆ ಯುದ್ಧ ಮಾಡಿದ್ದು ಪುರಾಣದಲ್ಲಿ ಉಲ್ಲೇಖವಿದೆ. ಅಹಂಕಾರಕ್ಕೂ ನೂರೆಂಟು ರೂಪಗಳು. ವಿದ್ಯಾಮದ, ಧನಮದ, ಯೌವನ ಮದ, ರೂಪ ಮದ ಮುಂತಾಗಿ ಇವುಗಳು ಕೆಟ್ಟದರ ಮೇಲೆ ಮಾತ್ರ ಸವಾರಿ ಮಾಡುವುದಿಲ್ಲ, ಬದಲಾಗಿ ಒಳ್ಳೆಯದರ ಮೇಲೂ ಸವಾರಿ ಮಾಡಿ ನಮ್ಮನ್ನು ಸರ್ವನಾಶ ಮಾಡುತ್ತದೆ. ‘ನ ಅಹಂ, ಅನಹಂ. ಅನಹಮೇವ ಅಹಂಕರೋತೀತಿ ಅಹಂಕಾರಃ ’ ಮನುಷ್ಯನ ಎಲ್ಲ ದುಃಖಗಳಿಗೆ ಈ ಅಹಂಕಾರವೇ ಕಾರಣ. ಇದನ್ನು ಆತ್ಮಜ್ಞಾನ ಹಾಗೂ ವಿವೇಕವೆಂಬ ಅಸ್ತ್ರದಿಂದ ಪರಾಭವಗೊಳಿಸಬೇಕು.
ಚಂಡ-ಮುಂಡರು ಮನದೊಳಗಿನ ಲೋಭ-ಮೋಹಗಳ ಸಂಕೇತ. ತನ್ನ ಬಳಿ ಇಲ್ಲದೇ ಇರುವ ವಸ್ತುವನ್ನು ಶತಾಯಗತಾಯ ಪಡೆದುಕೊಳ್ಳಬೇಕೆಂಬ ಆಸೆಯೇ ಲೋಭ. ಪಡೆದುಕೊಂಡಿರುವ ವಸ್ತು ಅಥವಾ ವ್ಯಕ್ತಿಗಳು ನಮ್ಮಿಂದ ಎಂದೂ ದೂರವಾಗಬಾರದೆಂಬ ಭಾವವೇ ಮೋಹ. ಇವೆರಡೂ ಮನಸ್ಸಿನ ಹಲವಾರು ದುಃಖಗಳಿಗೆ ಕಾರಣವಾಗಿರುವುದರಿಂದ ದೇವಿಯು ಯುದ್ಧದಲ್ಲಿ ಚಂಡಮುಂಡರ ರುಂಡಗಳನ್ನು ಸಂಹರಿಸಿ ಚಂಡಿ, ಚಾಮುಂಡಿ ಎನಿಸಿಕೊಂಡಂತೆ ನಾವು ಕೂಡ ಅಲೌಕಿ ಸಾಧನೆಯ ಯುದ್ಧದಲ್ಲಿ ಲೋಭ, ಮೋಹಗಳನ್ನು ನಿರ್ಲಿಪ್ತಭಾವವೆಂಬ ಅಸ್ತ್ರದಿಂದ ಸದೆಬಡಿದು ಬಿಡಬೇಕು.
ಶುಂಭ ನಿಶುಂಭರು ಕಾಮ ಮತ್ತು ಕ್ರೋಧಗಳ ಸಂಕೇತ. ದೇವಿಯ ಸ್ಪುರದ್ರೂಪಕ್ಕೆ ಮರುಳಾಗಿ ಜಗನ್ಮಾತೆಯನ್ನೆ ಮದುವೆಯಾಗಲು ಬಯಸಿ, ಪ್ರಯತ್ನಿಸಿ, ಕೊನೆಗೆ ಅವಳಿಂದ ಮರಣವನ್ನು ಹೊಂದುತ್ತಾರೆ. ಕಾಮವು ನಮ್ಮ ಹಿತಶತ್ರುವಾಗಿದ್ದು ಕೊಂಡೇ ಸುಖದ ಮುಖವಾಡ ಹಾಕಿಕೊಂಡು ಕೊನೆಗೆ ದುಃಖವನ್ನೇ ಕೊಡುತ್ತದೆ. ಆದ್ದರಿಂದ ಈ ಕಾಮ, ಕ್ರೋಧವೆಂಬ ಶುಂಭ ನಿಶುಂಭರನ್ನು ವೈರಾಗ್ಯವೆಂಬ ಖಡ್ಗದಿಂದ ಸಂಹರಿಸಬೇಕು.
ದೇವರು ನಮಗೆ ಪಂಚಜ್ಞಾನೇಂದ್ರಿಯಗಳನ್ನು ಕೊಟ್ಟಿದ್ದಾನೆ. ಆದರೆ ಮನುಷ್ಯನು ಸ್ವಭಾವತಃ ಬಹಿಮುಖವಾದ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳದೇ ತಾನೇ ಅವುಗಳ ಗುಲಾಮನಾಗಿ ಅಧಃಪತನ ಹೊಂದುವುದು ವಿಪರ್ಯಾಸ.
ವಿಜಯ ದಶಮಿ ಆಚರಣೆ
ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ.
ಮಹಾಭಾರತದಲ್ಲಿ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||
ವಿಜಯದ - ಶಮೀ
ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರಂತೆ ಈಗಲೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿಯೂ ಮುಂದುವರೆಯಿತು.
ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.
ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು ನೋಡುವುದೆಂದರೆ ಪರಮ ಸಂತೋಷ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದ್ದು ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ.
✍️ ಸೌಮ್ಯಸನತ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ