ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ : ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Upayuktha
0



ಉಡುಪಿ: ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹವಾಲುಗಳನ್ನು ಸಲ್ಲಿಸಿ, ತಮ್ಮ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.


ಅವರು ಸೋಮವಾರ ಕಾಪು ಆಡಳಿತ ಸೌಧದಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಉಡುಪಿ, ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಾಗೂ ಕಾಪು ಪುರಸಭೆ ಇವರ ಸಹಯೋಗದೊಂದಿಗೆ ನಡೆದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜನತಾ ದರ್ಶನ ಕಾರ್ಯಕ್ರಮವು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಮಾಡಲಾಗುತ್ತಿದೆ. ಜನರು ಸಲ್ಲಿಸಿದ ಅಹವಾಲುಗಳನ್ನು ಅಧಿಕಾರಿಗಳ ವ್ಯಾಪ್ತಿಯಲ್ಲಿ ನಿಯಮಾನುಸಾರ ಬಗೆಹರಿಸುವಂತಹವುಗಳನ್ನು ಸ್ಥಳೀಯವಾಗಿ ಬಗೆಹರಿಸಲಾಗುತ್ತದೆ. ಒಂದೊಮ್ಮೆ ಅವು ಅನುದಾನ ಪೂರಕವಾಗಿದ್ದಲ್ಲಿ ಅಥವಾ ಸರಕಾರದ ಮಟ್ಟದಲ್ಲಿ ಬಗೆಹರಿಸುವಂತಾಗಿದ್ದಲ್ಲಿ ಸರಕಾರದ ಗಮನಕ್ಕೆ ತಂದು ಬಗೆಹರಿಸಲು ಮುಂದಾಗಲಾಗುವುದು. ಜನರು ಅರ್ಜಿ ಸಲ್ಲಿಸುವಾಗ ಕಾನೂನಿನ ಅಡಿಯಲ್ಲಿ ಬಗೆಹರಿಸಲು ಸಾಧ್ಯವೇ ಎಂದು ಅರ್ಥೈಸಿಕೊಂಡು ಅರ್ಜಿ ಸಲ್ಲಿಸುವುದು ಒಳಿತು ಎಂದರು. 


ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ವಿಧಾನಸಭಾ ವ್ಯಾಪ್ತಿಯು ಎರಡು ತಾಲೂಕುಗಳನ್ನು ಒಳಗೊಂಡು ಭೌಗೋಳಿಕವಾಗಿ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಜನರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಬಗೆಹರಿಸಲು ಮುಂದಾಗಬೇಕು. ಜನರು ಸಹ ಇದಕ್ಕೆ ಸ್ಪಂದಿಸಬೇಕು. ಸ್ಥಳೀಯವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ ಎಂದರು. 


ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 16, ಸ್ಥಳೀಯ ಸಂಸ್ಥೆಗಳ (ಅರ್ಬನ್ ಡೆವಲಪ್‍ಮೆಂಟ್) 11, ಭೂ ಮಾಪನ ಇಲಾಖೆಯ 6, ಗ್ರಾಮೀಣ ಕುಡಿಯುವ ನೀರು ಇಲಾಖೆಯ 3,  ಕೆ.ಐ.ಡಿ.ಬಿ ಗೆ ಸಂಬಂಧಿಸಿದಂತೆ 3, ಪೊಲೀಸ್ ಇಲಾಖೆಯ 2, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 1, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 1, ಸಣ್ಣ ನೀರಾವರಿ ಇಲಾಖೆಯ 1, ಪಂಚಾಯತ್ ರಾಜ್ ಇಲಾಖೆಯ 1, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 1 ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ 1 ಸೇರಿದಂತೆ ಒಟ್ಟು 47 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದು, ಸಾಮಾನ್ಯವಾಗಿ ರಸ್ತೆ ಸಂಪರ್ಕ ಕಲ್ಪಿಸುವ, ಖಾತೆ ಬದಲಾವಣೆ, ಭೂ ಸ್ವಾಧೀನ ಪ್ರಕ್ರಿಯೆಯ ಪರಿಹಾರ, ಸರ್ವೇ ಕಾರ್ಯ ಕೈಗೊಳ್ಳುವ ಬಗ್ಗೆ, ಅಕ್ರಮ ಸಕ್ರಮ ಮಂಜೂರಾತಿ ಪತ್ರ ನೀಡುವುದು ಸೇರಿದಂತೆ ಮತ್ತಿತರ ಅಹವಾಲುಗಳನ್ನು ಸಲ್ಲಿಸಲಾಗಿತ್ತು.


ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸಾಗುವಳಿ ಚೀಟಿ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಅಡಿ ಆದೇಶ ಪತ್ರ, ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ಕುಂದಾಪುರ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ನಾಯಕ್, ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಸ್. ಸಿದ್ದಲಿಂಗಪ್ಪ, ಕಾಪು ತಹಶೀಲ್ದಾರ್ ನಾಗರಾಜ್ ವಿ ನಾಯ್ಕಡ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top