ಕುಪ್ಪಂ (ಆಂಧ್ರಪ್ರದೇಶ): ''ದ್ರಾವಿಡ ಭಾಷೆಗಳ ನಡುವಿನ ಬಾಂಧವ್ಯವನ್ನು ಬೆಸೆಯುವಲ್ಲಿ ಭಾಷಾಂತರವು ಮಹತ್ವದ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ದ್ರಾವಿಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಬೆಳವಣಿಗೆಯು ಗುರುತರವಾದುದಾಗಿದೆ. ಇಲ್ಲಿನ ಬೋಧನೆ, ಸಂಶೋಧನೆಗಳು ಉತ್ಕೃಷ್ಟ ಮಟ್ಟದ್ದಾಗಿದ್ದು ಭಾಷೆ, ಸಾಹಿತ್ಯ, ಕಲೆ, ಜನಪದ, ಬುಡಕಟ್ಟು, ಅನುವಾದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು'' ಎಂದು ಕನ್ನಡದ ಖ್ಯಾತ ಜನಪದ ಸಂಶೋಧಕ, ಅನುವಾದಕ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಕರೆನೀಡಿದರು.
ಅವರು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ 26ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದ ವಿಶೇಷ ಉಪನ್ಯಾಸವನ್ನು ನೀಡುತ್ತಾ ''ಇಲ್ಲಿನ ಗ್ರಂಥಾಲಯವು ಅಮೂಲ್ಯವಾದ ಪುಸ್ತಕಗಳನ್ನು ಒಳಗೊಂಡಿದ್ದು ಸಂಶೋಧಕರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುನ್ನೂರಕ್ಕೂ ಹೆಚ್ಚಿನ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಇಲ್ಲಿನ ಪ್ರಸಾರಾಂಗವು ಪ್ರಕಟಿಸಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯವಿದೆ, ದ್ರಾವಿಡ ಭಾಷೆಗಳ ಈ ಪ್ರಕಟಣೆಗಳು ಆಯಾ ಭಾಷಿಕರಿಗೆ ತಲುಪುವಂತಾಗಬೇಕು'' ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಪತಿಗಳಾದ ತೆಲುಗಿನ ಖ್ಯಾತ ಕತೆಗಾರ ಪ್ರೊ.ತುಮ್ಮಲ ರಾಮಕೃಷ್ಣ ಅವರು ''26 ವರ್ಷಗಳ ಹಿಂದೆ ಬೀಜರೂಪದಲ್ಲಿದ್ದ ಈ ವಿಶ್ವವಿದ್ಯಾಲಯವು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ, ಇದು ಇನ್ನಷ್ಟು ಮುಂದುವರೆಯಲು ದಕ್ಷಿಣದ ಎಲ್ಲಾ ರಾಜ್ಯಗಳ ಸಹಯೋಗ ಅಗತ್ಯ'' ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಕೆ.ವೇಣುಗೋಪಾಲ ರೆಡ್ಡಿಯವರು ''ವಿಶ್ವವಿದ್ಯಾಲಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಇಲ್ಲಿನ ಅಧ್ಯಾಪಕರ ಕಾರ್ಯಗಳನ್ನು ಗುರುತಿಸಿ ಕರ್ನಾಟಕ, ತಮಿಳುನಾಡು ಸರಕಾರಗಳು ಪ್ರತಿಷ್ಟಿತ ಪ್ರಶಸ್ತಿಗಳನ್ನು ನೀಡಿರುವುದು ಸಂತಸದ ಸಂಗತಿ. ಇನ್ನಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಸೇರುವ ಮೂಲಕ ವಿಶ್ವವಿದ್ಯಾಲಯವನ್ನು ಬಲಪಡಿಸಬೇಕು'' ಎಂದು ಕರೆ ನೀಡಿದರು.
ವಿ.ವಿ.ಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ನಿರ್ಮಲ ಅವರು ''ಹಚ್ಚಹಸಿರಿನಿಂದ ಕೂಡಿರುವ ಈ ವಿಶಾಲ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದು ವಿದ್ಯಾರ್ಥಿಗಳು ಇಲ್ಲಿನ ಎಲ್ಲಾ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಬೇಕು'' ಎಂದು ಸೂಚಿಸಿದರು.
ಡೀನ್ ಅಕಡೆಮಿಕ್ ಅಫರ‍್ಸ್ ಪ್ರೊ. ಲೋಕನಾಥ ವಲ್ಲೂರು ಅವರು ವಿದ್ಯಾರ್ಥಿಗಳ ಪ್ರಗತಿ, ಸಾಧನೆಗಳನ್ನೂ, ಮೂಲಿಕಾವನದ ವೈಶಿಷ್ಟ್ಯತೆಗಳನ್ನೂ ಪರಿಚಯಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಅಧ್ಯಾಪಕರಾದ ಡಾ.ಜಯಲಲಿತ, ಡಾ.ಎಂ.ಎನ್. ವೆಂಕಟೇಶ್ ಹಾಗೂ ವಿಶೇಷ ಪ್ರಗತಿ ತೋರಿದ ಬೋಧನೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಗ್ರಂಥಾಲಯಕ್ಕೆ ಮೌಲಿಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಹಾಗೆಯೇ ಈ ವೇಳೆ ಎರಡು ಶುದ್ಧನೀರಿನ ಘಟಕಗಳನ್ನು ಉದ್ಘಾಟಿಸಲಾಯಿತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು, ಬೋಧಕ, ಬೋಧನೇತರ ಸಿಬ್ಬಂದಿಗಳು ಹಾಗೂ ಕನ್ನಡ ಪ್ರಾಧ್ಯಾಪಕ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಎಂ.ಎಸ್. ದುರ್ಗಾಪ್ರವೀಣ್ ಅವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ