ಇವತ್ತು ಬೆಳಗ್ಗೆ ಪೇಪರ್ ಓದುವಾಗ ನವಿಲುಗರಿ ಬಗೆಗಿನ ಸುದ್ದಿ ಓದಿ ಕೆಲವು ಪ್ರಶ್ನೆಗಳು ನವಿಲು ಗರಿಗಳಂತೆ ಹರಡಿಕೊಂಡವು!!
ಪತ್ರಿಕೆಯ ಬಾಕ್ಸ್‌ನಲ್ಲಿದ್ದ ಸುದ್ದಿ ಹೀಗಿದೆ: (ಬಹುತೇಕ ಇಂದಿನ 26.10.23ರ ಎಲ್ಲ ದಿನ ಪತ್ರಿಕೆಗಳಲ್ಲೂ ಈ ಸುದ್ದಿ ಇದೆ)
"1972ರಿಂದ ದೇಶದಲ್ಲಿ ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಲ್ಲಿದೆ. ಅದರಂತೆ ಕಾಡು ಪ್ರಾಣಿಗಳ ಬೇಟೆ, ಮಾಂಸ ಭಕ್ಷಣೆ ಹಾಗೂ ಅವುಗಳ ದೇಹದ ಬಿಡಿ ಭಾಗಗಳ ಮಾರಾಟ ನಿಷೇಧವಿದೆ. ಯಾವುದೇ ವನ್ಯ ಜೀವಿಗಳನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮ ಹದ ಮಾಡಿ ಅಲಂಕಾರಿಕ ವಸ್ತು ಗಳನ್ನಾಗಿ ಬಳಸುವಂತಿಲ್ಲ. ವನ್ಯ ಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಅಪರಾಧ. ಹಾವಿನ ವಿಷವನ್ನೂ ಸಂಗ್ರಹಿಸುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ.
------
ಸುದ್ದಿ ಇನ್ನೂ ಇತ್ತು. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ. ಎಂಬ ವಾಕ್ಯ ಓದುವಾಗ ಸಖೇದಾಶ್ಚರ್ಯ ಆದ ಕಾರಣ, ಮತ್ತೆ ಮುಂದಕ್ಕೆ ಓದಲಾಗಲಿಲ್ಲ!!
ಕುಣಿಯುವ ಗಂಡು ಮಯೂರದ ಹಿಂಬಾಗದಲ್ಲಿ ಗರಿಗಳು ಬಿಚ್ಚಿಕೊಳ್ಳುವ ಹಾಗೆ, ನನ್ನ ತಲೆಯಲ್ಲಿ ಪ್ರಶ್ನೆಗಳ ಗರಿಗಳು ಬಿಚ್ಚಿಕೊಂಡವು.
ಗರಿ 1) ಅಡಿಕೆ ತೋಟದಲ್ಲಿ ಜೀರಿಗೆ ಮೆಣಸು ಬೆಳದು ಕೊಟ್ಟಿದ್ದಕ್ಕೆ, ಅದನ್ನು ತಿನ್ನಲು ಬರುವ ನವಿಲುಗಳು, ಕೆಲವು ಗರಿಗಳನ್ನು ತೋಟದಲ್ಲೇ ಬಿಟ್ಟು ಹೋಗುತ್ತವೆ. ಅದನ್ನು ನಾವು ಇಟ್ಟುಕೊಳ್ಳುವಂತಿಲ್ಲ ಅಂತಾದರೆ ಏನು ಮಾಡಬೇಕು?
ಗರಿ 2) ಕಂದಾಯ ಕಟ್ಟುವ ನನ್ನ ಮನೆಯಲ್ಲಿ ಅದನ್ನು ಸಂಗ್ರಹಿಸಿ ತಂದು ಇಟ್ಟುಕೊಳ್ಳುವಂತಿಲ್ಲ ಅಂತಾದರೆ... ಕಂದಾಯ ಕಟ್ಟುವ ನನ್ನ ಸ್ವಂತದ ತೋಟವು ನನ್ನದೇ ಆದ ಕಾರಣ, ನವಿಲು ಗರಿ ನನ್ನ ತೋಟದಲ್ಲೂ ಇರುವಂತಿಲ್ಲ ಅಲ್ಲವಾ?
ಗರಿ 3) ತೋಟದಲ್ಲಿ ನವಿಲುಗರಿ ಬಿದ್ದಿದ್ದು ಕಂಡ್ರೆ, ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಕೂಡಲೆ ತಿಳಿಸಬೇಕಾ? ಇದಕ್ಕೊಂದು ನವಿಲುಗರಿ ಸರ್ವೆ ಆ್ಯಪ್ ತರಬಹುದು!!
ಗರಿ 4) ನಾನು ನವಿಲು ಗರಿಗಳನ್ನು ಸಂಗ್ರಹಿಸುವಂತಿಲ್ಲ ಎಂದ ಮೇಲೆ, ನಾನೇ ನವಿಲು ಗರಿಗಳನ್ನು ಒಟ್ಟು ಮಾಡಿ, 15 ಕಿ ಮೀ ದೂರದಲ್ಲಿರುವ ಅರಣ್ಯ ಕಛೇರಿಗೆ ಕೊಂಡುಹೋಗಿ ಕೊಡುವಂತಿಲ್ಲ ಎಂದಾಯಿತಲ್ಲವೆ?
ಗರಿ 5) ಬಹುತೇಕ ದಿನಕ್ಕೆ ಎರಡು ಬಾರಿ ನವಿಲುಗಳು ಅಡಿಕೆ ತೋಟದಲ್ಲಿರುವ ಇಂಬಳ, ಜೀರಿಗೆಮೆಣಸು, ಹುಳ, ಹುಪ್ಪಟೆಗಳನ್ನು ತಿನ್ನಲು ಬರುತ್ತಿರುವುದರಿಂದ ಮತ್ತು ಬಂದಾಗಲೆಲ್ಲ ಗರಿಗಳನ್ನು ಬೀಳಿಸಿ ಹೋಗುವ ಸಾಧ್ಯತೆ ಇರುವುದರಿಂದ, ಪ್ರತೀ ದಿನ ಅರಣ್ಯಾಧಿಕಾರಿಗಳು ನನ್ನ ಅಡಿಕೆ ತೋಟಕ್ಕೆ ಬಂದು, ಇಡೀ ತೋಟ ಸುತ್ತಿ ಗರಿಗಳನ್ನು ಸಂಗ್ರಹಿಸಿಕೊಂಡು ಹೋಗಬಹುದಾ? ಬರುವಾಗ ಲೋಡ್ ಇಲ್ಲದ ಕೋವಿ ಹಿಡ್ಕೊಂಡು ರೌಂಡ್ಸ್‌ಗೆ ಬರಬಹುದಾ? ಕೋವಿ ನೋಡಿದರೆ ಮಂಗಗಳು ಹೆದರುತ್ತವೆ ಅಂತ ಅಭಿಪ್ರಾಯ ಇದೆ.
ಗರಿ 6) ದಶಕಗಳಿಂದ 'ಒತ್ತುವರಿ' ಜಾಗದಲ್ಲೂ ನವಿಲು ಗರಿಗಳು ಬಿದ್ದಿದ್ದರೆ ಅವುಗಳನ್ನು ಹೇಗೆ ಹ್ಯಾಂಡ್ಳು ಮಾಡುವುದು?
ವನ್ಯಜೀವಿ ರಕ್ಷಣಾ ಅಧಿನಿಯಮದಡಿಯಲ್ಲಿ ಇದಕ್ಕೆ ಯಾವ ನಿಯಮಗಳಿವೆ?
ಗರಿ 7) ಅರಣ್ಯ ಇಲಾಕೆಯ ಅಕೇಶಿಯ ಕಾಡಿನಲ್ಲಿ ತಿನ್ನಲು ಹುಲ್ಲು ಸಿಗದೆ ಕಾಡುಕೋಣಗಳು, ಆನೆಗಳು, ಚಿರತೆಗಳು, ರೈತರ ಜಮೀನಿಗೆ ಬಂದಾಗ ಕೆಲವು ನವಿಲುಗರಿಗಳು ಅವುಗಳ ಕಾಲಿಗೆ ಸಿಕ್ಕಿ ಛಿದ್ರಗೊಂಡಿವೆ, ಅವುಗಳ ಸಗಣಿಯ ಮೇಲೂ ನವಿಲುಗರಿಗಳು ಬಿದ್ದು ಭಾಗಶಃ ಹಾಳಾಗಿವೆ. ಅಂತಹ ನವಿಲುಗರಿಗಳನ್ನು 1972ರ ಕಾಯಿದೆ ಪ್ರಕಾರ ವಿಳಂಬ ಮಾಡದೆ, ಕಾಯದೆ, ಕೂಡಲೆ ಅರಣ್ಯಾಧಿಕಾರಿಗಳೇ ಸಂಗ್ರಹಿಸುವ ವ್ಯವಸ್ಥೆಗೆ ನಿಯಮ ಇದೆಯಾ?
ಗರಿ 8) ವಿಪರೀತ ಮಂಗಗಳು ರೈತರ ಜಮೀನಿಗೆ ಬಂದಾಗ, ಅವುಗಳು ನವಿಲುಗರಿಗಳನ್ನು ಹಿಡಿದು ಆಟ ಆಡುತ್ತ ಅಡಿಕೆ ತೋಟದ ಕೊಕ್ಕೋ ಗಿಡದ ಮೇಲೆ, ಕಾಫಿ ಗಿಡಗಳ ಮೇಲೂ ಹಾಕಿವೆ. ಅರಣ್ಯಾಧಿಕಾರಿಗಳು ಗರಿ ಸಂಗ್ರಹಕ್ಕೆ ಬರುವಾಗ ಮೆಟಲ್ ಡಿಟೆಕ್ಟರ್ ರೀತಿಯ ಗರಿ ಡಿಟೆಕ್ಟರ್ ತರಬಹುದಾ!!?
ಗರಿ 9) ನಾಟಿ ವೈದ್ಯರು ನವಿಲು ಗರಿಯ ಕಡ್ಡಿಯಿಂದ ಔಷಧಿ ತಯಾರಿಸಿ ಕೊಡುತ್ತಾರಂತೆ. ಹಾಗಂತ ವದಂತಿ ಇದೆ. ಹೌದಾಗಿದ್ದರೆ, ನಾಟಿ ವೈದ್ಯರು ನವಲುಗರಿ ಬಳಸಲು ಅನುಮತಿಗೆ ಅರ್ಜಿ ಕೊಡಬೇಕಾ? ಪ್ರತೀ ಗರಿಗಿಷ್ಟು ಅಂತ ಫೀಸ್ ಕಟ್ಬೇಕಾ?
ಗರಿ 10) ತಾಯಿತ ಕಟ್ಟುವವರು, ಸಂಜೆ ಹೊತ್ತು ದೂಪ ಹಾಕುವವರು ಒರಿಜಿನಲ್ ನವಿಲು ಗರಿಗಳ ಕಟ್ಟನ್ನೇ ಬಳಸುತ್ತಿರುತ್ತಾರೆ. ಈ ರೀತಿ ಬಳಸುವುದಕ್ಕೆ ಅವರುಗಳಿಗೆ ಒಂದು ಲೈಸನ್ಸ್ ಸ್ಮಾರ್ಟ್ ಕಾರ್ಡ್ ಇಶ್ಯೂ ಮಾಡುವ ವ್ಯವಸ್ಥೆಗೆ ನಿಯಮಾವಳಿಗಳಿಗೆ ಒಂದು ಬೈಲಾ ತಿದ್ದುಪಡಿ ತರಬಹುದಾ!!?
ಗರಿ 11) ವಾಸ್ತು ಶಾಸ್ತ್ರದ ಪ್ರಕಾರ 'ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಕುಟುಂಬದ ಮೇಲೆ ತುಂಬಾ ಧನಾತ್ಮಕ ಪರಿಣಾಮ ಬೀರುತ್ತದೆ'ಯಂತೆ. ಆಧುನಿಕ ವಾಸ್ತು ಮತ್ತು ಜ್ಯೋತಿಶ್ಯಾಸ್ತ್ರದ ಪ್ರಕಾರ ಮನೆಯ ಈಶಾನ್ಯ ಮೂಲೆಯಲ್ಲಿ ಎರಡೇ ಎರಡು ನವಲುಗರಿ ಇಡುವುದಕ್ಕೆ ಕಾಯಿದೆ ಪ್ರಕಾರ ಯಾರ ಅನುಮತಿ ಬೇಕು!!?
ಗರಿ 12) ಮುನಿರತ್ನಂ 'ಕುರುಕ್ಷೇತ್ರ'ದಲ್ಲಿ ರವಿಚಂದ್ರನ್, 'ಮುಕುಂದ ಮುರಾರಿ'ಯಲ್ಲಿ ಸುದೀಪ್, 'ಬೃಂದಾವನ'ದಲ್ಲಿದರ್ಶನ್ ನವಿಲು ಗರಿ ಧರಿಸಿದ್ದರು. ಇದೇ ರೀತಿ ಅನೇಕರು ಸಿನಿಮಾಗಳಲ್ಲಿ ನವಿಲುಗರಿಗಳನ್ನು ಧರಿಸಿದ್ದು ಸತ್ಯವಷ್ಟೆ? ಈಗ ಆ ಎಲ್ಲಾ ಸಿನಿಮಾಗಳ ಹೀರೋ, ಡೈರೆಕ್ಟರ್, ಪ್ರಡ್ಯೂಸರ್‌ಗಳ ಮನೆ ಮೇಲೆ ರೈಡ್ ಮಾಡಲಾಗುತ್ತದೆಯಾ? (ಇಲ್ಲಿ ಒಂದು ಉಪ ಪ್ರಶ್ನೆ ಗರಿ ಇದೆ: ಮನೆ ಮೇಲೆ ರೈಡ್ ಮಾಡುವುದೇಕೆ!!? ಮನೆ ಒಳಗೆ ಮಾಡುವುದಲ್ವಾ? ಹಳ್ಳಿಗಳಲ್ಲಿ ಮನೆ ಮೇಲೆ ಮಂಗಗಳು ರೈಡ್ ಮಾಡ್ತಾವೆ!!). ವಿಚಾರಣೆಗೆ ಕರೆಯಲಾಗುತ್ತಾ? ಅಥವಾ ಅವರೆಲ್ಲ ಪೂರ್ವಾನುಮತಿ ಪಡೆದಿದ್ದರಾ? RTIನಲ್ಲಿ ಪೂರ್ವಾನುಮತಿ ಕಾಪಿ ಸಿಗಬಹುದಾ!!? ಎಲ್ಲ ಪ್ರಸಿದ್ದ ನಟರು, ನಿರ್ದೇಶಕರು, ನಿರ್ಮಾಪಕರು ನವಿಲುಗರಿ (+ಉಗುರು, ರೋಮ, ಎಲುಬು... ಇತ್ಯಾದಿ) ಕೇಸ್‌ಗಳಿಂದ ಜೈಲಿಗೆ ಹೋದರೆ, BIG BOSS ಮನೆಗೆ ಯಾರು ಹೋಗುವುದು? ಸಿನಿಮಾ ಥಿಯೇಟರ್‌ಗಳ ಕತೆ ಏನು? ಹಳೇ ಕೃಷ್ಣ ಗಾರುಡಿ ಕಪ್ಪು-ಬಿಳುಪು ಚಿತ್ರ ತೋರಿಸಬೇಕಾಗುತ್ತೆ ಅಷ್ಟೆ (ಗರಿಯಲ್ಲಿ ಕಲರ್ ಇರಲ್ಲ!) ಗಾಂಧಿನಗರದ 'ಚಂದನವನ'ದಲ್ಲಿ ನಿಂತುಹೋದ 'ಶೂಟಿಂಗ್' ಅಂತ ಪತ್ರಿಕೆ ಹೆಡ್ ಲೈನ್!!
ಗರಿ 13) ಅದೇ ರೀತಿ ನಾಟಕ, ಯಕ್ಷಗಾನ, ಭರತನಾಟ್ಯಗಳಲ್ಲಿ ಬಿಂದಾಸ್ ಆಗಿ ನವಿಲುಗರಿಗಳನ್ನು ಬಳಸಲಾಗುತ್ತದೆ. ಇದಕ್ಕೆಲ್ಲ ಇನ್ಮೇಲೆ ಕಾಡಿನಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕಾ?
ಗರಿ 14) ಗೋಕುಲಾಷ್ಟಮಿಗೆ ಕೃಷ್ಣ ವೇಷ ಸ್ಪರ್ಧೆಗಳಲ್ಲೂ ಪುಟಾಣಿ ಮಕ್ಕಳಿಗೆ ನವಿಲು ಗರಿ ಬಳಸಿ ಕೃಷ್ಣ ವೇಷ ಹಾಕಲಾಗುತ್ತದೆ. ಈಗಾಗಲೆ ಲಕ್ಷಾಂತರ ಮಕ್ಕಳು ನವಿಲುಗರಿ ಬಳಸಿ ಕೃಷ್ಣ ವೇಷ ಹಾಕಿದ್ದಾರೆ. (ಗೂಗಲ್ ಫೋಟೋ ಆಲ್ಬಮ್‌ನಲ್ಲಿ ರೆಡ್ ಹ್ಯಾಂಡ್ ಬಣ್ಣ ಹಚ್ಚಿದ ಫೋಟೋ ಸಾಕ್ಷಿಗಳು ಬೇಕಾದರೆ ಸಿಗುತ್ತವೆ). 'ಬಾಲಾಪರಾದಿಗಳು' ಎಂದು ಅಂತಹ ಮಕ್ಕಳನ್ನು 7 ವರ್ಷ ಜೈಲಿಗೆ ಕಳಿಸಿ, ಶಿಕ್ಷೆ ಮುಗಿಸಿ ಬಂದ ಮೇಲೆ LKG ಗೆ ಸೇರಿಸುವುದಾ!!? ಪೋಷಕರನ್ನೂ ಮಕ್ಕಳ ಜೊತೆ ಒಂದೇ ಜೈಲಲ್ಲಿ, ಒಂದೇ ಸೆಲ್‌ನಲ್ಲಿ ಹಾಕಲಾಗುತ್ತದಾ? ಸ್ಲೇಟ್ ಕಟ್ ಮಣಿ ಎಣಿಸುವ ಮಕ್ಕಳು ಪೋಷಕರ ಜೊತೆ ಕಂಬಿ ಎಣಿಸಬೇಕಾ? ಅಥವಾ ಬೇರೆ ಬೇರೆ ಸೆಲ್‌ಗಳಾ!? ಸೆಲ್‌ನಲ್ಲಿ ಆಟಕ್ಕೆ ಸೆಲ್ ಫೋನ್ ಸಿಗುತ್ತಾ ಅಂತ ಮಕ್ಕಳು ಕೇಳಿದರೆ!?
ಗರಿ 15) ಗೋಕುಲಾಷ್ಟಮಿಗೆ ಕೃಷ್ಣನ ವೇಷಕ್ಕೆ ಸಿಂಥೆಟಿಕ್ ಪ್ಲಾಸ್ಟಿಕ್ ನವಿಲುಗರಿಗೆ ಬೇಡಿಕೆ ಬರಬಹುದು!!!
ಗರಿ 16) ಅವದೂತರು, ಸ್ವಾಮಿಗಳು, ಸೆಲಬ್ರಟಿಗಳು, ನಟರು, ಕಲಾವಿದರು, ರೈತರು, ಮಕ್ಕಳು, ಪೋಷಕರು ನವಿಲುಗರಿ ವಿಷಯದಲ್ಲಿ ಜೈಲೇ ಗತಿಯಾದರೆ....? ಜೈಲಲ್ಲಿ ಜಾಗ ಸಾಲದೆ ಸಪರೇಟ್ ಸಪಾರಿ ನಿರ್ಮಿಸಬೇಕಾಗಬಹುದು!!?
ಅಲ್ವಾ!!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ