ಚಂದ್ರಯಾನ 7ರವರೆಗೆ ಯೋಜನೆ ಸಿದ್ಧಗೊಂಡಿದೆ: ಇಸ್ರೋ ವಿಜ್ಞಾನಿ ಡಾ. ರಾಧಾಕೃಷ್ಣ ವಾಟೆಡ್ಕ

Upayuktha
0

ಬಪ್ಪಳಿಗೆ ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಅಂಗವಾಗಿ ವಿಶೇಷ ಉಪನ್ಯಾಸ




ಪುತ್ತೂರು: ಇಸ್ರೋದಿಂದ ಚಂದ್ರಯಾನ - 3 ಯಶಸ್ವಿಯಾಗಿ ನಡೆದಿದ್ದು, ಮುಂದೆ ಚಂದ್ರಯಾನ 7ರವರೆಗೆ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಪ್ರಧಾನಿಗಳು ಆ ಬಗೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾನವ ಸಹಿತ ಗಗನಯಾನ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ಭೂಮಿಯಿಂದ ಚಂದ್ರನಿಗೆ ಹಾಗೂ ಚಂದ್ರನಿಂದ ಭೂಮಿಗೆ ಮರಳಲು ತಂತ್ರಜ್ಞಾನ ರೂಪುಗೊಳ್ಳಲಿದೆ. ಚಂದ್ರನ ಮೇಲೆ ಅಧ್ಯಯನ ನಡೆಸಿ, ಅಲ್ಲಿನ ಸಂಪನ್ಮೂಲಗಳ ಬಳಸಿಕೊಂಡು ಅಲ್ಲಿ ಕೃತಕ ವಾತಾವರಣ ಸೃಷ್ಟಿಸುವ ಮೂಲಕ ಚಂದ್ರನ ಮೇಲೆ ಮಾನವ ಪ್ರಭುತ್ವ ಸಾಧಿಸಲಿದ್ದಾನೆ ಎಂದು ಇಸ್ರೋದ ಬಾಹ್ಯಾಕಾಶ ಖಗೋಳಶಾಸ್ತ್ರ ಉಪಕರಣಗಳ ವಿಭಾಗದ ಗುಂಪಿನ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ. ರಾಧಾಕೃಷ್ಣ ವಾಟೆಡ್ಕ ಹೇಳಿದರು. 



ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಸಂಸ್ಥೆಯ ಹತ್ತನೆ ವರ್ಷದ ದಶಾಂಬಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ‘ಮಿಷನ್ ಚಂದ್ರಯಾನ 2023’ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು. 



ಚಂದ್ರಯಾನ – 3ರಲ್ಲಿ ಭಾರತ ನಿರ್ಮಿತ ಉಪಕರಣಗಳನ್ನು ಬಳಸಲಾಗಿದ್ದು, ಲ್ಯಾಂಡಿಂಗ್ ವೇಳೆ ಯಾವುದೇ ಸಮಸ್ಯೆ ಉಂಟಾಗದಂತೆ ಪ್ರಯೋಗಗಳನ್ನು ನಡೆಸಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಚಿತ್ರದುರ್ಗದಲ್ಲಿ ಇದಕ್ಕಾಗಿಯೇ ಚಂದ್ರನ ಮೇಲ್ಮೈನಂತೆ ಪ್ರತ್ಯೇಕ ವಾತಾವರಣ ನಿರ್ಮಿಸಿ 100ಕ್ಕೂ ಹೆಚ್ಚು ಬಾರಿ ಲ್ಯಾಂಡಿಂಗ್ ಮಾಡಿ ಚಂದ್ರನಲ್ಲಿ ಲ್ಯಾಂಡರ್ ಇಳಿಸಲು ಪೂರ್ವ ತಯಾರಿ ನಡೆಸಲಾಗಿತ್ತು. ಲ್ಯಾಂಡಿಂಗ್ ಯಶಸ್ವಿಯಾಗಿರುವುದು ಮುಂದಿನ ಪ್ರಯೋಗಗಳಿಗೆ ಹೊಸ ಸಾಧ್ಯತೆಗಳನ್ನು ತೆರೆದಿರಿಸಿದೆ. ಚಂದ್ರನ ಮೇಲೆ ಇಳಿದು ಈಗಾಗಲೇ ಹಲವು ದಿನಗಳು ಕಳೆದಿವೆ, ಚಂದ್ರನಲ್ಲಿ ವಿಪರೀತ ಶೀತ ಅಥವಾ ವಿಪರೀತ ಬಿಸಿಯ ವಾತಾವರಣ ಇರುವುದರಿಂದ ಅಲ್ಲಿ ಇಳಿದಿರುವ ವಿಕ್ರಮ್ 14 ದಿನ ಕಾರ್ಯನಿರ್ವಹಿಸಿ ಇದೀಗ ಕೆಲಸ ಸ್ಥಗಿತಗೊಳಿಸಿದೆ. 14 ದಿನಗಳಲ್ಲಿ ಲಭಿಸಿರುವ ಸಂದೇಶಗಳನ್ನು ಆಧರಿಸಿ ಇಸ್ರೋದ ದೊಡ್ಡ ತಂಡ ಅಧ್ಯಯನ ನಡೆಸುತ್ತಿದೆ. ಈ ಮೂಲಕ ಇನ್ನಷ್ಟು ಹೊಸ ವಿಚಾರಗಳು ಬಯಲಾಗುವ ಸಾಧ್ಯತೆಗಳಿವೆ ಎಂದರು. 



ದಶಾಂಬಿಕೋತ್ಸವದ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮಹೇಶ್ ಕಜೆ ಮಾತನಾಡಿ, ಚಿಕ್ಕಂದಿನಿಂದಲೂ ಮನುಷ್ಯರಿಗೆ ಚಂದ್ರನ ಮೇಲೆ ವಿಶೇಷ ವ್ಯಾಮೋಹ. ಅದರಲ್ಲೂ ಶಿವನ ಶಿರದಲ್ಲಿ ಚಂದ್ರನಿದ್ದಾನೆ, ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಹೆಸರು, ಸ್ವಾತಂತ್ರ‍್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ಕೂಡ ಚಂದ್ರನಿದ್ದಾನೆ. ಹಾಗಾಗಿ ಚಂದ್ರನ ಕುರಿತ ಇಸ್ರೋ ಸಂಶೋಧನೆ ಅದ್ಭುತವಾಗಿದ್ದು, ಸಾಧನೆ ಅವರ್ಣನೀಯವಾಗಿದೆ ಎಂದರು. 



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ವಿಶ್ವದಲ್ಲೇ ಮೊದಲ ಬಾರಿಗೆ ಭಾರತದ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಸಾಧನೆ ಮಾಡಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಡಾ. ರಾಧಾಕೃಷ್ಣ ಅವರು ಸಂಶೋಧನೆಗಾಗಿ ವಿದೇಶಕ್ಕೆ ತೆರಳದೆ, ದೇಶ ಸೇವೆಗೆ ಮೀಸಲಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅಂತಹವರ ಆದರ್ಶದೊಂದಿಗೆ ವಿದ್ಯಾರ್ಥಿಗಳು ದೇಶದ ಶ್ರೇಷ್ಠ ವಿಜ್ಞಾನಿಗಳಾಗಿ ಹೊರಬರಬೇಕಾದ ಅಗತ್ಯವಿದೆ ಎಂದರು.



ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಅಂಬಿಕಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಕೆ. ಸುರೇಶ್ ಶೆಟ್ಟಿ, ಡಾ. ಮಾಧವ ಭಟ್, ಬಾಲಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿ ರಾಧಾಕೃಷ್ಣ ವಾಟೆಡ್ಕ ಅವರ ಸಾಧನೆಯನ್ನು ಗುರುತಿಸಿ ಅಂಬಿಕಾ ಸಮೂಹ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.



ಅಂಬಿಕಾ ಸಿಬಿಎಸ್ ಸಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಸ್ವಾಗತಿಸಿ, ಶಿಕ್ಷಕಿ ಸುಜಯಾ ವಂದಿಸಿದರು. ಶಿಕ್ಷಕಿ ದಿವ್ಯಾ ಅತಿಥಿ ಪರಿಚಯ ಮಾಡಿದರು. ಶಿಕ್ಷಕಿ ಕೃತಿಕಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿಗಳ ಜೊತೆ ವಿಜ್ಞಾನಿಗಳ ಸಂವಾದ ನಡೆಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ. ರಾಧಾಕೃಷ್ಣ ಉತ್ತರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top