ಸುಸ್ಥಿರ ಆರೋಗ್ಯಕ್ಕೆ 8 + 8 + 8 ರೂಲ್

Upayuktha
0



19ನೇ ಶತಮಾನದ ಆದಿಯಲ್ಲಿ ರಾಬರ್ಟ್ ಓವೆನ್ ಎಂಬ ಸಾಮಾಜಿಕ ಸಮಾನತೆಯ ಅರಿವುಳ್ಳ ವ್ಯಕ್ತಿಯು ಪ್ರತಿಯೊಬ್ಬರು ವ್ಯಕ್ತಿಗೆ 10 ಗಂಟೆಗಳ ಹಗಲು ಹೊತ್ತನ್ನು ಹೊಂದಿರಬೇಕು ಎಂಬುದು ಆತನ ವಾದವಾಗಿತ್ತು. 1817ರಲ್ಲಿ ನ್ಯೂಲನಾರ್ಕ್ ನಲ್ಲಿ ನಡೆದ ಸಾಮಾಜಿಕ ಸಮಾರಂಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯು 8+8+8 ಫಾರ್ಮುಲವನ್ನು ಅಳವಡಿಸಿಕೊಳ್ಳಬೇಕು ಎಂದು ಆತ ಪ್ರತಿಪಾದಿಸಿದ ದೈಹಿಕ ಸ್ವಾಸ್ಥ ಮತ್ತು ಮಾನಸಿಕ ಸಂತುಲನವನ್ನು ಉಳಿಸಿಕೊಳ್ಳಲು 8 + 8 + 8 ರೂಲನ್ನು ಅಳವಡಿಸಿಕೊಳ್ಳಲೇಬೇಕು. 



ಹಾಗಾದರೆ ಯಾವುದು 8 + 8 + 8 ರೂಲ್

8 ಗಂಟೆಗಳ ನಿದ್ದೆ 8 ಗಂಟೆಗಳ ಪರಿಶ್ರಮ ಮತ್ತು 8 ಗಂಟೆಗಳ ವೈವಿಧ್ಯಮಯ ಚಟುವಟಿಕೆಗಳು. 8 ಗಂಟೆಗಳ ನಿದ್ದೆ ಅತ್ಯವಶ್ಯಕವಾಗಿ ಬೇಕು. ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯನ್ನು ನಿದ್ರೆಯಿಂದಲೇ ಪಡೆಯುತ್ತಾನೆ. ನಿದ್ರೆ ಮನುಷ್ಯನ ಬಾಹ್ಯ ಚಟುವಟಿಕೆಗಳಿಗೆ ವಿರಾಮವನ್ನು ಜೈವಿಕ ಚಟುವಟಿಕೆಗಳಿಗೆ ಕೊಂಚಮಟ್ಟಿಗಿನ ವಿಶ್ರಾಂತಿಯನ್ನು ನೀಡುತ್ತದೆ. ರಾತ್ರಿ 8ರ ಒಳಗಾಗಿ ಊಟ ಮಾಡುವುದರಿಂದ ಮುಂದಿನ ಎರಡು ಗಂಟೆಗಳ ನಂತರ ನಿದ್ರೆ ಮಾಡುವ ವ್ಯಕ್ತಿ ಸತತ ಎಂಟು ಗಂಟೆಗಳ ನಿದ್ರೆಯನ್ನು ಮಾಡುವ ಮೂಲಕ ಆತನ ದೇಹದ ಸಕಲ ಅಂಗಗಳು ವಿಶ್ರಾಂತಿಯನ್ನು ಪಡೆಯುತ್ತವೆ. ಹೃದಯ ಮತ್ತು ಶ್ವಾಸಕೋಶಗಳು ಕೂಡ ತುಸು ಚೇತರಿಸಿಕೊಳ್ಳುತ್ತವೆ. ದೇಹವು ತನ್ನ ಮರುಪೂರಣ ಶಕ್ತಿಯನ್ನು ಸಂಚಯಿಸಿಕೊಳ್ಳುತ್ತದೆ.



ಎರಡನೇ ಎಂಟು ಗಂಟೆ ಪರಿಶ್ರಮ. 8 ಗಂಟೆಗಳ ಕಾಲ ಪರಿಶ್ರಮದ ಕಾರ್ಯ ನಿರ್ವಹಿಸಬೇಕು. ಯಾವ ರೀತಿ ಹೆಣ್ಣು ಮಕ್ಕಳು ಮನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೋ ಹಾಗೆಯೇ ಎಲ್ಲರೂ ಕೂಡ 8 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಉದರ ನಿಮಿತ್ತವೇ ಇರಲಿ.... ಉದ್ಯೋಗ ನಿಮಿತ್ತವೇ ಇರಲಿ ಒಟ್ಟಿನಲ್ಲಿ ಎಂಟು ಗಂಟೆಗಳ ಕಾಲ ಕೆಲಸ ಮಾಡಲೇಬೇಕು. ಈ ಕೆಲಸದಲ್ಲಿ ಅವರ ದೈಹಿಕ ಶಕ್ತಿಯ ವಿನಿಯೋಗವಾಗಬೇಕು.



ಮೂರನೇ ಎಂಟು ಗಂಟೆಯನ್ನು ಆತ ಮತ್ತೆ ಮೂರು ವಿಭಾಗಗಳಲ್ಲಿ ಹಂಚಿದನು ಅವುಗಳೆಂದರೆ 3 ಎಫ್, ಮೂರು ಹೆಚ್ ಮತ್ತು ಮೂರು ಎಸ್ ಗಳು, ಮೂರು ಎಫ್ ಗಳು ಫ್ಯಾಮಿಲಿ ಫ್ರೆಂಡ್ಸ್ ಅಂಡ್ ಫೇತ್. ಕುಟುಂಬ ಸ್ನೇಹಿತರು ಮತ್ತು ನಾವು ನಂಬುವ ದೈವ. ಸಂತಸವಾದ ಜೀವನ ಸಾಗಿಸಲು ಸುಭದ್ರವಾದ ಕುಟುಂಬ ವ್ಯವಸ್ಥೆ ಉತ್ತಮ ಸ್ನೇಹಿತರು ಮತ್ತು ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ವಿಶ್ವಾಸ ನಂಬಿಕೆ ಇರಬೇಕು.



ಮೂರು ಹೆಚ್ ಗಳು ಹೆಲ್ತ್, ಹೈಜೀನ್ ಅಂಡ್ ಹಾಬೀಸ್

ಆರೋಗ್ಯ ಸುರಕ್ಷತೆ ಮತ್ತು ಹವ್ಯಾಸಗಳು

ದೈಹಿಕ ಆರೋಗ್ಯ ನಮ್ಮ ಮಾನಸಿಕ ಸಂತುಲನವನ್ನು ಕಾಪಾಡುತ್ತದೆ. ಅ ಸೌಂಡ್ ಮೈಂಡ ಇನ ಅ ಸೌಂಡ್ ಬಾಡಿ ಎನ್ನುವುದು ಇದಕ್ಕೆ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ. ದೈಹಿಕ ಮತ್ತು ಮಾನಸಿಕ ನೈರ್ಮಲ್ಯಗಳು ವ್ಯಕ್ತಿತ್ವವನ್ನು ಬೆಳಗುತ್ತವೆ. ಅಂತೆಯೇ ಒಳ್ಳೆಯ ಹವ್ಯಾಸಗಳು ನಮ್ಮನ್ನು ಸದಾ ಚಟುವಟಿಕೆಯಲ್ಲಿ ಇರಿಸುತ್ತವೆಯಲ್ಲದೇ ಮನಸ್ಸಿಗೆ ಉಲ್ಲಾಸ, ಸಂಭ್ರಮವನ್ನು ನೀಡುತ್ತವೆ. ಪ್ರತಿ ಹೊಸ ಹವ್ಯಾಸವು ಮನಸ್ಸಿಗೆ ಮುದ ನೀಡುತ್ತದೆ.




3 ಎಸ್ ಗಳು.... ಸೋಲ್, ಸರ್ವೀಸ್ ಮತ್ತು ಸ್ಮೈಲ್. ನೀವು ಮಾಡುವ ಕೆಲಸ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿರಲಿ, ಯಾರನ್ನು ಮೆಚ್ಚಿಸಲು ಅಲ್ಲ. ಸೇವಾಪರತೆಯಿಂದ ಕೂಡಿರಲಿ ಮತ್ತು ನಗುನಗುತ್ತಾ ಸಂತೋಷಕರ ಜೀವನವನ್ನು ಕಳೆಯಿರಿ.




ವಿಪರ್ಯಾಸವೆಂದರೆ 19ನೇ ಶತಮಾನದಲ್ಲಿ ರಾಬರ್ಟ್ ಓವೆನ್ ಹೇಳಿದ್ದನ್ನು ಶತಶತಮಾನಗಳ ಹಿಂದೆ ನಮ್ಮ ಪೂರ್ವಜರು ಆಚರಿಸುತ್ತಿದ್ದರು. ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಅವರು ಪ್ರಾತಃಕರ್ಮಗಳನ್ನು ಪೂರೈಸಿ ಉದರ ನಿಮಿತ್ತ ದೈಹಿಕ ಶ್ರಮದ ಕಾಯಕಗಳಲ್ಲಿ ತೊಡಗಿ ಕೊಳ್ಳುತ್ತಿದ್ದರು. ಇಳಿ ಹೊತ್ತಿನಲ್ಲಿ ತಮ್ಮ ದೈಹಿಕ ಶ್ರಮದ ಕಾರ್ಯಗಳನ್ನು ನಿಲ್ಲಿಸಿ ಮನೆಗೆ ಮರಳುತ್ತಿದ್ದ ಅವರು ಸಂಜೆಯಾಗುತ್ತಿದ್ದಂತೆ  ದೇವರ ಮುಂದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮನೆಯ ಹೊರಗಿನ ಮರದ ಕೆಳಗೆ ಕುಳಿತು ನೆರೆಹೊರೆಯವರೊಂದಿಗೆ ಮಾತನಾಡುತ್ತಾ ಕಾಲ ಕ್ಷೇಪ ಮಾಡುತ್ತಿದ್ದರು. ಬೇಗನೆ ಊಟ ಮಾಡಿ ಮಲಗುತ್ತಿದ್ದರು.




ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿಗಳಲ್ಲಿ ಉತ್ಸವ ಜಾತ್ರೆಗಳಲ್ಲಿ ಸಂಭ್ರಮವೇ ಮನೆ ಮಾಡಿದಂತೆ ತೊಡಗಿಕೊಳ್ಳುತ್ತಿದ್ದರು. ಪುರಾಣ, ಪುಣ್ಯಶ್ರವಣ, ಕೀರ್ತನೆ, ಭಜನೆಗಳಲ್ಲಿ ಕಾಲ ಕಳೆಯುತ್ತಿದ್ದರು. ದೇಸಿ ಆಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಳ್ಳುತ್ತಿದ್ದರು. ಉಪವಾಸ, ಏಕಾದಶಿ ನಿರಾಹಾರ ಎಂದು ಆಚರಿಸುತ್ತಾ ಜೀರ್ಣಾಂಗ ವ್ಯೂಹಕ್ಕೆ ವಿಶ್ರಾಂತಿ ನೀಡುತ್ತಿದ್ದರು. ದೈಹಿಕ, ಮಾನಸಿಕವಾಗಿಯಲ್ಲದೆ ಭಾವನಾತ್ಮಕವಾಗಿ ಭಕ್ತಿಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ದಾನ ಧರ್ಮಗಳಲ್ಲಿ ನಂಬಿಕೆ ಇದ್ದು ಉಳ್ಳವರು ದೇಹಿ ಎಂದು ಬಂದವನಿಗೆ ನೀಡಿ ಹಾಗೆ ನೀಡಲು ತಮಗೆ ಶಕ್ತಿ ಕೊಟ್ಟ ಆ ಭಗವಂತನಿಗೆ ಕೃತಾರ್ಥರಾಗುತ್ತಿದ್ದರು. ಇದುವೇ ನಮ್ಮ ಪ್ರಾಚೀನ ಪರಂಪರೆಯ ಮಹತ್ವ. ಒಟ್ಟಿನಲ್ಲಿ ಪೂರ್ವದ್ದೇ ಇರಲಿ ಪಶ್ಚಿಮದ್ದೇ ಬರಲಿ. ಒಳ್ಳೆಯದು ಎಲ್ಲಾ ಕಡೆಯಿಂದ ಹರಿದು ಬರಲಿ. ವಿಶ್ವ ಮಾನವ ಪ್ರಜ್ಞೆ ನಮ್ಮಲ್ಲಿರಲಿ ಎಂದು ಆಶಿಸೋಣ.


-ವೀಣಾ ಹೇಮಂತ್ ಗೌಡ ಪಾಟೀಲ್ ,

ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top