ದುಶ್ಚಟಗಳಿಂದ ದೂರವಿದ್ದು ಅಮೂಲ್ಯ ಜೀವನ ಸಾರ್ಥಕಪಡಿಸಿಕೊಳ್ಳಬೇಕು: ಮಾಜಿ ಸಚಿವ ನಾರಾಯಣಗೌಡ

Upayuktha
0


ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಇವರ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶವು ಯಶಸ್ವಿಯಾಗಿ ನಡೆಯಿತು. 


ಸಾವಿರಾರು ಮಹಿಳೆಯರು ಜನಜಾಗೃತಿ ಜಾಥಾದಲ್ಲಿ ಭಾಗಿಯಾಗಿ ಭಿತ್ತಿಪತ್ರಗಳನ್ನು ಹಿಡಿದು ದುಶ್ಚಟಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.


ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿ ಮಾತನಾಡಿದ ಮಾಜಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ದುಶ್ವಟಗಳಿಂದ  ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ಪಾತ್ರವು ಶ್ಲಾಘನೀಯವಾಗಿದೆ ಎಂದು ಹೇಳಿದರು.


ಸ್ವಾತಂತ್ರ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕುಡಿತ ಸೇರಿದಂತೆ ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಹೋರಾಟ ಮಾಡಿದ್ದರು. ಇಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಮಧ್ಯವರ್ಜನ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸಿ ಮದ್ಯಪಾನ ಸೇರಿದಂತೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನ ಹಾಗೂ ಜೀವವನ್ನು ಕಳೆದುಕೊಳ್ಳುತ್ತಿರುವ ಜನರನ್ನು ಮಧ್ಯಪಾನ ಚಟದಿಂದ ಬಿಡಿಸಿ ನವ ಜೀವನದತ್ತ ಮುನ್ನಡೆಸುತ್ತಿದ್ದಾರೆ. ಲಕ್ಷಾಂತರ ಕುಟುಂಬಗಳು ಇಂದು ಕುಡಿತದ ಚಟದಿಂದ ಹೊರಬಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ಸAತೋಷದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ದುಡಿಯುತ್ತಿರುವ ವೀರೇಂದ್ರಹೆಗಡೆಯವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ದಾರಿಯಲ್ಲಿ ಸಾಗುವ ಮೂಲಕ ಶ್ರೀಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಿ ವ್ಯಸನಮುಕ್ತ ಆರೋಗ್ಯವಂತ ಸಮಾಜದ ನಿರ್ಮಾತೃಗಳಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದ ನಾರಾಯಣ ಗೌಡರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ. ಒಂದು ಚುನಾಯಿತ ಸರ್ಕಾರವು ಮಾಡಲಾಗದ ಸಮಾಜಮುಖಿ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆಯು ಇಂದು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಇಡೀ ಸಮಾಜವನ್ನೇ ಪ್ರಗತಿಯ ದಿಕ್ಕಿನಂತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.


ಶಾಸಕ ಹೆಚ್.ಟಿ. ಮಂಜು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸ್ವಾವಲಂಭನೆಗೆ ದಾರಿದೀಪವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾರ್ಥಕ ಸೇವೆಯನ್ನು ಗುಣಗಾನ ಮಾಡಿದರು.


ಜನಜಾಗೃತಿ ಜಾಥಾವನ್ನು ಉದ್ಘಾಟಿಸಿದ ಸಮಾಜಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್  ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಚಟುವಟಿಕೆಗಳಿಂದಾಗಿ ಇಂದು ಗ್ರಾಮೀಣ ಪ್ರದೇಶದ ಜನರು ಸದೃಢ ಸ್ವಾವಲಂಬಿ ಜೀವನವನ್ನು ನಡೆಸಲು ಸಾಧ್ಯವಾಗಿದೆ. ಕುಡಿತ, ಧೂಮಪಾನ ಸೇರಿದಂತೆ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಿ ವ್ಯಸನಮುಕ್ತ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ದುಡಿಯುತ್ತಿರುವ ಸಂಸ್ಥೆಯ ಕಾರ್ಯದಕ್ಷತೆಯು ಮಾದರಿಯಾಗಿದ್ದು ದುಶ್ಚಟಗಳಿಂದ ಬಿಡುಗಡೆ ಹೊಂದಿ ನವ ಜೀವನಕ್ಕೆ ಕಾಲಿಡುತ್ತಿರುವ ಸಾವಿರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ ಎಂದರು.


ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯರಾಮ್ ತೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿಧ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸರಸ್ವತಿ ಆಶಯ ಭಾಷಣ ಮಾಡಿ, ಇಂದು ದುಶ್ಚಟಗಳು ಇಡೀ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಾ, ಕುಟುಂಬದ ಸದಸ್ಯರ ಜೀವನವನ್ನೇ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತಿವೆ. ಇಂದು ಮಕ್ಕಳು ಹಾಗೂ ಯುವ ಜನರು ಮೊಬೈಲ್ ಫೋನುಗಳ ದಾಸರಾಗಿ ಕುಡಿತದಂತೆಯೇ ಮತ್ತೊಂದು ಸಾಮಾಜಿಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಫೋನಿನ ಹಾವಳಿಯಿಂದಾಗಿ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ, ವೈಜ್ಞಾನಿಕ ಆವಿಷ್ಕಾರಗಳ ಫಲವನ್ನು ಒಳ್ಳೆಯ ಕೆಲಸಗಳಿಗೆ ಮಾತ್ರ ಬಳಸಬೇಕೇ ಹೊರತು, ಸಮಯಯನ್ನು ಹಾಳು ಮಾಡುವ ಮೊಬೈಲ್ ಆನ್‌ಲೈನ್ ಗೇಮುಗಳು, ಫೇಸ್ಬುಕ್ ವ್ಯಾಟ್ಸಪ್‌ಗಳಿಗೆ ದುರ್ಬಳಕೆ ಮಾಡಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ದಿಕ್ಕಿನಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಕೊಡಿಸುವ ಮೂಲಕ ನಮ್ಮ ಸಮಾಜಕ್ಕೆ ಉತ್ತಮ ನಾಗರೀಕರನ್ನು ಕೊಡುಗೆಯಾಗಿ ನೀಡಬೇಕು ಎಂದು ಸರಸ್ವತಿ ಮನವಿ ಮಾಡಿದರು.


ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್. ಜಾನಕಿರಾಮ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ್‌ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಪಿ.ಎಲ್.ಡಿ.ಬ್ಯಾಂಕ್  ಮಾಜಿ ನಿರ್ದೇಶಕ ಅಕ್ಕಿಹೆಬ್ಬಾಳು ರಘು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ವಿಶ್ರಾಂತ ಶಿಕ್ಷಕ ಡಾ.ಅಂಚಿ ಸಣ್ಣಸ್ವಾಮಿಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ. ಅಶೋಕ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ್‌ ಕಾರಂತ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಚನ್ನಕೇಶವ, ಸುನಿತಾ ದಯಾನಂದ್, ಮೊಟ್ಟೆಮಂಜು, ಜ್ಯೋತಿ ದೇವರಾಜ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಉಷಾ, ಸೋಮಪ್ಪ, ತಾಲೂಕು ವೃತ್ತಿನಿರತ ಟೈಲರ್ಸ್ ಸಂಘದ ಅಧ್ಯಕ್ಷ  ಮಂಜುನಾಥ್, ಕರವೇ ಸ್ವಾಭಿಮಾನಿ ಸೇನೆಯ  ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೋಮಶೇಖರ್, ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ಕಾವ್ಯ, ಸೇರಿದಂತೆ ಸಾವಿರಾರು ಜನರು ಸಾಧಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top