ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇಂದು (ಅ.12) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಏಳನೆಯ ಕಂತಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿ- ಅಂತಿಮ ಬಿ.ಕಾಂ.ನ ವಂದನಾ ಅವರಿಗೆ ಹಿರಿಯ ವಿದ್ಯಾರ್ಥಿ, ಉದ್ಯಮಿ (ಮಾಲಕ -ಸಂಧ್ಯಾ ಟ್ರೇಡರ್ಸ್, ಉಜಿರೆ) ಜಿ. ರಾಜೇಶ್ ಪೈ ಅವರು 5,000 ರೂ. ಸಹಾಯಧನ ಹಸ್ತಾಂತರಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ, ಮಂಗಳೂರು ವಿ.ವಿ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಮುಖ್ಯ ಅತಿಥಿಯಾಗಿದ್ದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡತನ ಶಾಪವಲ್ಲ, ಹಸಿವು ದಾರಿ ತೆರೆದು ತೋರಿಸುತ್ತದೆ. ಜ್ಞಾನದ ಹಸಿವು ಬದುಕಿನ ದಾರಿ ತೋರಿಸುತ್ತದೆ. ದೃಷ್ಟಿಕೋನಕ್ಕೆ ಪೂರಕವಾಗಿ ಬದುಕು ರೂಪುಗೊಳ್ಳುತ್ತದೆ. ಉತ್ತಮ ದೃಷ್ಟಿಕೋನ, ವಿವೇಚನೆಯಿಂದ ಮುಂದುವರಿದರೆ ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.
“ಉಜಿರೆ ಎಸ್.ಡಿ.ಎಂ. ಕಾಲೇಜಿನ ಶ್ರೇಷ್ಠ ಅಧ್ಯಾಪಕ ಪರಂಪರೆ ನನ್ನನ್ನು ಅತ್ಯಂತ ಅರ್ಥಪೂರ್ಣ ವೃತ್ತಿಯಾದ ಅಧ್ಯಾಪನದೆಡೆ ಕೊಂಡೊಯ್ದಿದೆ. ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಅಂತಹ ಸಂಪೂರ್ಣ ಅವಕಾಶಗಳನ್ನು ಕಾಲೇಜು ನನಗೆ ನೀಡಿದೆ. ಬಡತನದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ನನಗೆ ಕಾಲೇಜು ಎಲ್ಲವನ್ನೂ ನೀಡಿದೆ. ಪ್ರಸ್ತುತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಕಾಲೇಜು ಶಕ್ತಿ ನೀಡಿದೆ” ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಡಾ. ಮಾಧವ ಎಂ.ಕೆ. ಅವರು ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದರು. ಅಪ್ರತಿಮ ಸಂಘಟಕರೂ ಆಗಿದ್ದಾರೆ. ಇಂತಹ ಹಲವು ಸಾಧಕರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ‘ಎಸ್.ಡಿ.ಎಂ. ನೆನಪಿನಂಗಳ’ ಒಂದು ಉದಾತ್ತ ಕಾರ್ಯಕ್ರಮವಾಗಿದ್ದು, ಉತ್ತಮ ರೀತಿಯಲ್ಲಿ ನಡೆದು ಬರುತ್ತಿದೆ” ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ಗುರುನಾಥ ಪ್ರಭು, ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್, ಸಂಯೋಜಕ ಡಾ. ಎಂ. ಪಿ. ಶ್ರೀನಾಥ, ಉದ್ಯಮಿ ಅರುಣ್ ಕುಮಾರ್, ಕಾಲೇಜಿನ ಕಲಾ ನಿಕಾಯದ ಡೀನ್ ಡಾ. ಎನ್. ಶ್ರೀಧರ್ ಭಟ್ ಉಪಸ್ಥಿತರಿದ್ದರು.
ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ