ನಮ್ಮ ದಿನನಿತ್ಯದ ಸಮಯವು ಅಮೂಲ್ಯವಾದ ರತ್ನದಂತೆ, ಮೌಲ್ಯವನ್ನರಿಯದೇ ವ್ಯರ್ಥಗೊಳಿಸದಿರೋಣ.
ನಾಗಪಾಳ್ಯವೆಂಬ ಒಂದು ಕುಗ್ರಾಮದಲ್ಲಿ ಗಂಗಯ್ಯ ಎಂಬ ನಿರುದ್ಯೋಗಿ ಬಡ ಯುವಕನೊಬ್ಬ ವಾಸಿಸುತ್ತಿದ್ದನು. ಒಮ್ಮೆ ಆತ ಅಗತ್ಯ ಕೆಲಸದ ನಿಮಿತ್ತ ತನ್ನ ಹಳ್ಳಿಯಿಂದ ದೂರದೂರಿನ ಪಟ್ಟಣಕ್ಕೆ ಹೋದನು. ಪಟ್ಟಣಕ್ಕೆ ಸಾಗುವ ಹಾದಿಯು ದಟ್ಟವಾದ ಕಾಡಿನಿಂದ ಕೂಡಿದ್ದು, ಪಟ್ಟಣವನ್ನು ತಲುಪಬೇಕಾದರೆ ತುಂಬಿ ಹರಿಯುತ್ತಿದ್ದ ನದಿಯೊಂದನ್ನು ದೋಣಿಯ ಮೂಲಕ ದಾಟಿ ಹೋಗಬೇಕಿತ್ತು. ಕೆಲಸವನ್ನು ಮುಗಿಸಿ ಗಂಗಯ್ಯನು ಪಟ್ಟಣದಿಂದ ಮರಳಿ ತನ್ನ ಊರಿಗೆ ಹೊರಡಬೇಕಾದರೆ ಸಂಜೆಯಾಗಿತ್ತು. ಆದಷ್ಟು ಬೇಗನೆ ನದಿ ದಾಟಿಬಿಡಬೇಕು ಎಂದು ವೇಗವಾಗಿ ಗಂಗಯ್ಯ ಊರಿನೆಡೆಗೆ ಹೆಜ್ಜೆ ಹಾಕಲಾರಂಭಿಸಿದ. ಎಷ್ಟು ವೇಗವಾಗಿ ನಡೆದುಕೊಂಡು ಬಂದರೂ ಗಂಗಯ್ಯನು ನದಿಯ ದಡವನ್ನು ತಲುಪಿದಾಗ ದಟ್ಟ ಕತ್ತಲಾದ್ದರಿಂದ ದೋಣಿಯನ್ನು ನಡೆಸುವ ಅಂಬಿಗನು ದೋಣಿಯನ್ನು ನದಿಯ ಇನ್ನೊಂದು ದಡದಲ್ಲಿ ಕಟ್ಟಿ ಹಾಕಿ ತನ್ನೂರಿಗೆ ಹೊರಟು ಹೋಗಿದ್ದ. ನದಿಯನ್ನು ದಾಟಿ ಮತ್ತೊಂದು ದಡಕ್ಕೆ ತಲುಪಿದರೆ ಗಂಗಯ್ಯನ ಊರಿತ್ತು. ಆದರೆ ನದಿಯನ್ನು ದಾಟಲು ದೋಣಿಯ ಲಭ್ಯತೆ ಇಲ್ಲದಿದ್ದುದರಿಂದ ಆತನು ನದಿಯ ದಡದಲ್ಲಿ ಕುಳಿತು ಬೆಳಗಾಗುವ ತನಕ ಸಮಯವನ್ನು ಕಳೆದು ನಂತರ ದೋಣಿಯ ಮೂಲಕ ನದಿಯನ್ನು ದಾಟುವುದಾಗಿ ನಿರ್ಧರಿಸಿದ.
ನದಿಯ ದಡದಲ್ಲಿ ರಾತ್ರಿಯನ್ನು ಕಳೆಯಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದ ಗಂಗಯ್ಯನ ಕಾಲಿಗೆ ಏನೋ ಎಡವಿದಂತಾಗಿ ಏನೆಂದು ನೋಡಿದಾಗ ಅಲ್ಲಿ ಒಂದು ಬಟ್ಟೆಯ ಚೀಲ ಬಿದ್ದಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ಒಂದಷ್ಟು ಕಲ್ಲಿನಂಥ ವಸ್ತುಗಳಿರುವುದನ್ನು ಗಂಗಯ್ಯ ಗಮನಿಸಿದ. ಆ ಚೀಲವನ್ನು ಕೈಗೆತ್ತಿಕೊಂಡು ನದಿಯ ದಡದಲ್ಲಿದ್ದ ಕಲ್ಲಿನ ಮೇಲೆ ಕುಳಿತುಕೊಂಡನು. ಸ್ವಲ್ಪ ಸಮಯ ಕಳೆದ ನಂತರ ಗಂಗಯ್ಯ ತಾನು ತಂದಿದ್ದ ಊಟದ ಬುತ್ತಿಯನ್ನು ತೆರೆದು ತಿಂದು, ರಾತ್ರಿಯನ್ನು ಕಳೆಯಲು ಚೀಲದೊಳಗಿದ್ದ ಕಲ್ಲುಗಳನ್ನು ಒಂದೊಂದಾಗಿ ನದಿಗೆ ಎಸೆಯಲಾರಂಭಿಸಿದ. ಕತ್ತಲಿನ ನೀರವ ಮೌನದಲ್ಲಿ ಕಲ್ಲು ನೀರಿಗೆ ಬಿದ್ದ ಸದ್ದು ವಿಭಿನ್ನವಾಗಿ ಪ್ರತಿಧ್ವನಿಸುತ್ತಿದ್ದುದಲ್ಲದೇ, ಬೆಳದಿಂಗಳ ಬೆಳಕಿಗೆ ನೀರಿನಲ್ಲಿ ಏಳುತ್ತಿದ್ದ ಅಲೆಗಳನ್ನು ನೋಡುತ್ತಾ ಗಂಗಯ್ಯನು ರೋಮಾಂಚಿತಗೊಳ್ಳುತ್ತಿದ್ದ. ಒಂದು ಕಲ್ಲು ಎಸೆದ ನಂತರ ಅದರ ಪ್ರತಿಧ್ವನಿಯ ಶಬ್ದವು ನಿಲ್ಲುವವರೆಗೆ ಕಾಯುತ್ತಾ ಕುಳಿತು ನಂತರ ಮತ್ತೊಂದು ಕಲ್ಲನ್ನು ನೀರಿಗೆ ಎಸೆಯುತ್ತಿದ್ದ. ಹೀಗೆ ರಾತ್ರಿಯಿಡೀ ಕಲ್ಲನ್ನು ಒಂದೊಂದಾಗಿ ಎಸೆಯುತ್ತಾ ರಾತ್ರಿಯು ಕಳೆದು ಸೂರ್ಯ ಉದಯಿಸುವ ವೇಳೆಗೆ ಗಂಗಯ್ಯನ ಕೈಯಲ್ಲಿ ಕೊನೆಯ ಒಂದು ಕಲ್ಲಷ್ಟೇ ಉಳಿದಿತ್ತು.
ಸೂರ್ಯನ ಬೆಳಕಿನಲ್ಲಿ ತನ್ನ ಕೈಯಲ್ಲಿದ್ದ ಕಲ್ಲನ್ನು ನೋಡಿದ ಗಂಗಯ್ಯನಿಗೆ ಆಶ್ಚರ್ಯ ಕಾದಿತ್ತು. ಕೈಯಲ್ಲಿದ್ದ ಕಲ್ಲು ಕೇವಲ ಕಲ್ಲಾಗಿರದೇ ಪಳಪಳನೆ ಹೊಳೆಯುತ್ತಿದ್ದ ಅಮೂಲ್ಯವಾದ ರತ್ನವಾಗಿದ್ದು, ಉಳಿದಿದ್ದ ಆ ಒಂದು ರತ್ನದ ಕಲ್ಲು ಗಂಗಯ್ಯನನ್ನು ನೋಡಿ ನಕ್ಕಂತೆ ಆತನಿಗೆ ಭಾಸವಾಯಿತು. ಅದುವರೆಗೂ ರಾತ್ರಿಯಿಡೀ ಗಂಗಯ್ಯನು ನದಿಗೆ ಎಸೆದ ಕಲ್ಲು ರತ್ನಗಳೇ ಆಗಿದ್ದವು. ಚೀಲದಲ್ಲಿ ತುಂಬಿದ್ದ ಅಮೂಲ್ಯವಾದ ರತ್ನಗಳನ್ನು ನದಿಗೆ ಒಂದೊಂದಾಗಿ ಎಸೆದ ತನ್ನ ಮೂರ್ಖತನಕ್ಕೆ ಗಂಗಯ್ಯ ಪಶ್ಚಾತ್ತಾಪಪಟ್ಟನು. ಆದರೆ ಅದಾಗಲೇ ಕಾಲವು ಮಿಂಚಿ, ರತ್ನಗಳೆಲ್ಲವೂ ನದಿಯ ತಳವನ್ನು ಸೇರಿದ್ದವು. ನಮ್ಮ ದಿನನಿತ್ಯದ ಸಮಯವೂ ಅದೇ ಅಮೂಲ್ಯವಾದ ರತ್ನದಂತೆ. ಆ ರತ್ನದ ಮೌಲ್ಯವನ್ನು ಅರಿಯದ ನಾವೂ ಮೂರ್ಖರಂತೆ ನಮ್ಮ ಕೈಯಾರೆ ಒಂದೊಂದಾಗಿ ದೂರ ಎಸೆಯುತ್ತೇವೆ. ಅದರ ಮೌಲ್ಯವು ಅರಿವಿಗೆ ಬಂದಾಗ ಪಶ್ಚಾತ್ತಾಪ ಪಡುತ್ತೇವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ