ಪೆರುವಡಿ ನಾರಾಯಣ ಭಟ್ಟರು - ಯಕ್ಷಗಾನ ಹಾಸ್ಯಕ್ಕೆ ಮಾನ ತಂದ ಹಾಸ್ಯಗಾರರು. ತೆಂಕುತಿಟ್ಟಿನ ಪ್ರಾತಿನಿಧಿಕ ಹಾಸ್ಯಗಾರರು. ಉಭಯ ತಿಟ್ಟುಗಳಲ್ಲಿ ಮನ್ನಣೆ. 'ರಾಜಾಹಾಸ್ಯ' ಎನ್ನುವ ನೆಗಳ್ತೆ. ವಿವಿಧ ಮೇಳಗಳಲ್ಲಿ ಅನುಭವ. ಮೂಲ್ಕಿ ಮೇಳದ ಯಜಮಾನಿಕೆ. ಉದ್ಧಾಮ ಕಲಾವಿದರ ತಂಡಕ್ಕೆ ಅಭಿಮಾನದ ಹೊನಲಿನ ಸಮೃದ್ಧತೆ. ಮೇಳ ಬದುಕಿನ ಅನನ್ಯ ಸಿಹಿ-ಕಹಿ ಅನುಭವ. ಪಾತ್ರಗಳಲ್ಲಿ ಸಹಜಾಭಿವ್ಯಕ್ತಿ. ಪಾತ್ರೋಚಿತ ಅಭಿನಯ. 'ಪಾಪಣ್ಣ, ಬಾಹುಕ..' ಪಾತ್ರಗಳ ಮೂಲಕ ಜನಾನುರಾಗಿ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ನಿರ್ವಹಿಸಿದ ಎಲ್ಲಾ ಪಾತ್ರಗಳಲ್ಲೂ ಸಹಜತೆಯ ಛಾಪು. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದು ನಕ್ಕು ನಲಿಯಲು ಇರುವುದಲ್ಲ' ಎನ್ನುವ ಎಚ್ಚರ
ಯಕ್ಷಗಾನ ಹಾಸ್ಯಕ್ಕೆ ಗೌರವ ತಂದ ಪೆರುವಡಿ (ಪೆರ್ವಡಿ, ಪೆರುವೋಡಿ) ನಾರಾಯಣ ಭಟ್ಟರು ಇಂದು ವಿಧಿವಶರಾದರು.
(ಜನನ: 28-5-1927 ; ಮರಣ: 31-10-2023)
2002ರಲ್ಲಿ ಪುತ್ತೂರಿನ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಾರಥ್ಯದ ಕನ್ನಡ ಪ್ರಪಂಚ ಪ್ರಕಾಶನದ ಮೂಲಕ ಪೆರುವಡಿಯವರ ಕಲಾ ಯಾನದ 'ಹಾಸ್ಯಗಾರನ ಅಂತರಂಗ' ಪುಸ್ತಕ ಅನಾವರಣಗೊಂಡಿತ್ತು. ನನಗೆ ಈ ಪುಸ್ತಕಕ್ಕೆ ಹೂರಣವನ್ನು ತುಂಬಿದ ಸಾರ್ಥಕತೆ. ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪೆರುವಡಿಯವರ ಬದುಕನ್ನು ಪೋಣಿಸಿದೆ.
ವಿಧಿವಶರಾದ ಪೆರುವಡಿ ನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ.
-ನಾ. ಕಾರಂತ ಪೆರಾಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ