ನುಡಿನಮನ: ಬೆಳಕು ಚೆಲ್ಲಿ ಮರೆಯಾದ ಪ್ರಕಾಶ

Upayuktha
0

ರಾಜ್ಯದಲ್ಲಿ ಖಾಸಗಿ ಬಸ್‌ಗಳ ಉದ್ಯಮ ಬಹುಪಾಲು ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜಿಲ್ಲೆಯೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಆದರೆ ಕಾಲದ ಹೊಡೆತಕ್ಕೆ ಸಿಲುಕಿ, ಸಾವಿರಾರು ಮಂದಿಗೆ ಬದುಕು ನೀಡಿದ ಖಾಸಗಿ ಬಸ್‌ಗಳ ಸಾರಿಗೆ ಉದ್ಯಮ ಇಂದು ನಾನಾ ಬಗೆಯ ಸಂಕಷ್ಟಕ್ಕೀಡಾಗಿದೆ. ಬಸ್ಸುಗಳ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಸ್ಥಿತಿಗೆ ತಲುಪಿರುವುದು ಸರಕಾರ ಗಮನಿಸಲೇಬೇಕಾದ ಎಚ್ಚರಿಕೆಯ ಗಂಟೆಯೂ ಹೌದು. ಇತ್ತೀಚೆಗೆ ಪ್ರಸಿದ್ಧ ಮಹೇಶ್ ಮೋಟರ್ಸ್‌ನ ಮಾಲೀಕರಾದ ಪ್ರಕಾಶ್‌ ಜೀವನವನ್ನು ದುರಂತಮಯವಾಗಿ ಅಂತ್ಯಗೊಳಿಸಿಕೊಂಡರು. ಈ ಹಿನ್ನೆಲೆಯಲ್ಲಿ ಅವರ ಆಪ್ತ ಒಡನಾಡಿಯೊಬ್ಬರು ಬರೆದ ನುಡಿನಮನ ಇಲ್ಲಿದೆ:




ಹೌದು ಧರೆಯಲ್ಲಿ ಮಿಂಚಬೇಕಿದ್ದ ನಕ್ಷತ್ರವೊಂದು ಸ್ವರ್ಗದ ಪಾಲಾಗಿದೆ. ಸೂರ್ಯನು ಬೇಸರದಿ ಮೋಡದ ಮರೆಗೆ ಸರಿದು ಹೋಗಿದ್ದಾನೆ. ಹೊರಗಡೆ ಧೋ ಎನ್ನುವ ಮಳೆಯ ನಡುವೆ "ಪ್ರಕಾಶ" ಕೂಡ ಮರೆಯಾಗಿದ್ದಾನೆ ನಿಜ. ಆಕಾಶವೂ ಕೂಡ ಇಂದು ಬಿಕ್ಕಿ ಬಿಕ್ಕಿ ಅಳುತ್ತಿದೆ.


ಮರಣವನ್ನು ಯಾರು ನೋಡಿಲ್ಲ

ಬಹುಶಃ ಅದು ಸುಂದರವಾಗಿರಬಹುದು.. ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ... ನಿನಗೆ ಅದನ್ನು ನೋಡುವ ಆಸೆಯಾಯಿತೆ?


ಆದರೆ ನಿ ಹೋಗುವಾಗ ನಿನ್ನ ಮುದ್ದಿನ ಮಗಳು ಕುಶಿಯ ಮುಖ ನಿನ್ನ ಎದುರು ಬರಲಿಲ್ಲವೇ?

ಆಕೆ ಕರೆಯುವ ಪಪ್ಪ ಎಂಬ ಮುದ್ದಿನ ಧ್ವನಿ ಕೂಡ ಕೇಳಿಸಲಿಲ್ಲವೇ?

ತುಂಬಿದ ಸಂಸಾರದ ಹೊಣೆಗಾರಿಕೆಯ ಅರಿವಿರಲಿಲ್ಲವೇ? 

ನಿನ್ನ ಹಿಂದೆ ನಿನ್ನ ಹೆಗಲಾಗಿ ನಿಂತಿರುವ ಸಿಬ್ಬಂದಿಗಳ ಅಣ್ಣ.. ಎಂಬ ಕರೆ ಕೇಳಲಿಲ್ಲವೇ?

ನಿನ್ನ ಒಡಹುಟ್ಟಿದವರ ಮಮತೆ ನಿನ್ನನ್ನು ಕಟ್ಟಿ ಹಾಕಲಿಲ್ಲವೇ?

ಜೀವಕ್ಕೆ ಜೀವ ನೀಡುವ ನಿನ್ನ ಗೆಳೆಯರ ನಗು ನಿನಗೆ ಕೇಳಿಸಲಿಲ್ಲವೇ?

ನಿನ್ನ ಇಷ್ಟದ ಬಿರಿಯಾನಿಯ ಸ್ವಾದದ ನೆನಪು ಬರಲಿಲ್ಲವೇ?


ನೀನೇ ಕಟ್ಟಿದ ನಿನ್ನ ಸಾಮ್ರಾಜ್ಯವನ್ನು ಬರಿದು ಮಾಡಿ ಹೊರಡುವಾಗ ಸ್ವಲ್ಪವೂ ಮನಸ್ಸು ಹಿಂಜರಿಯಲಿಲ್ಲವೇ? ನಮಗೇ ಇಷ್ಟು ವೇದನೆ, ಇನ್ನು ಹೆತ್ತು ಹೊತ್ತು ಸಾಕಿ ಸಲಹಿ ಎದೆ ಎತ್ತರಕ್ಕೆ ಬೆಳೆದು ನಿಂತ ಮಗ ಇನ್ನಿಲ್ಲ ಎಂದಾಗ ಆ ಹೆತ್ತವರ ಸ್ಥಿತಿ ಏನಾಗಿರಬಹುದು?


ನಡೆಯುವ ಹಾದಿಯಲ್ಲಿ ಕನಸುಗಳೆಂಬ ಹೂವ ಚೆಲ್ಲಿದಾತನಿಗೆ ಕಲ್ಲೆದೆಯ ವಿಧಾತ ಇದೇನು ಮಾಡಿಬಿಟ್ಟ.? 

ದೇವರೇ ಇದು ನ್ಯಾಯವೇ?

ಅದ್ಯಾವ ಊರ ಬೆಳಗಲು ಹೊರಟು ಹೋದೆ ನೀನು?

ಮರೆಯಲಾದೀತೆ ಪ್ರಕಾಶ ನಿನ್ನ ಮೊಗವ.

ಮೊಗದಲ್ಲಿನ ಆ ನಗುವ. ಆದರೂ ನೀನಿಲ್ಲ ಎಂಬುದೇ ಒಂದು ನೋವಿನ ಹಿಂಸೆ.

ನಟ್ಟ ನಡುರಾತ್ರಿ ಎಚ್ಚರ ಆದರೆ ಕಣ್ಣೆದುರು ನಿನ್ನದೇ ಮುಖ.

ಮನದ ತುಂಬಾ ಜಡಿಮಳೆಯ ಸಿಡಿಲು.

ರಾತ್ರಿಯ ನೀರವತೆಗೆ ನಿಟ್ಟುಸಿರೇ ಸಾಂತ್ವನ.

ಪ್ರಕಾಶ ನೀನು ಹೊರಟು ಹೋದೆ ಆದರೆ ನಿನ್ನ ಸಾವನ್ನು ಜೀರ್ಣಿಸಿಕೊಳ್ಳಲು ದಶಮಾನಗಳೇ ಬೇಕು. "ನಾನಿದ್ದೇನೆ ನಿನ್ನ ಜೊತೆ" ಎಂದರೆ ಸಾಕು ಸಾವು ಬಂದರೂ ಬಿಟ್ಟು ಕೊಡದ ಮಾತು ಅವನದ್ದು. ಅದೊಂದು ವೇದವಾಕ್ಯದಂತೆ ತನ್ನವರನ್ನು ಎಂದೂ ಕೂಡ ಬಿಟ್ಟುಕೊಡದ ಪ್ರಕಾಶನ ದಿವ್ಯ ಪ್ರಕಾಶದಲ್ಲಿ ಬೆಳೆದವರು ಅದೆಷ್ಟೋ ಮಂದಿ.


ತನ್ನ ಸಿಬ್ಬಂದಿಗಳ ಲಾಲನೆ ಪಾಲನೆಯಲ್ಲಿ ಯಾವುದೇ ರೀತಿಯ ತಾರತಮ್ಯ ತೋರದೆ ತಾನು ಕೂಡ ಅವರಂತೆ ಬದುಕಿ ತೋರಿಸಿದವ. ಅವರ ಕಷ್ಟ ಸುಖಗಳಲ್ಲಿ ತನ್ನ ಕಷ್ಟ ಮರೆತವ. ಗೆಳೆತನಕ್ಕೆ ಮಾನ ಕೊಟ್ಟವ. ಕೋಟಿಗಳ ವ್ಯವಹಾರದಲ್ಲಿ ತಾನೊಬ್ಬ ಜನಸಾಮಾನ್ಯ ನಂತೆ ಜೀವಿಸಿದವ. ಬಸ್ಸು ಉದ್ಯಮದಲ್ಲಿ ತನ್ನ ಸಿಬ್ಬಂದಿಗಳ ಬೆನ್ನೆಲುಬಾಗಿ ನಿಂತು ಬೆನ್ನು ತಟ್ಟಿದವ. ಇಂದು ಬಾಳಿಗೆ ಬೆನ್ನು ಹಾಕಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ. ಪ್ರಕಾಶನ ಸಾವು ಜೀವನ ಪೂರ್ತಿ ಕಾಡಲಿದೆ.

 

ಜೀವನದಲ್ಲಿ ಸದಾ ಇಲ್ಲೇ ಬಾಳಲು ಆಗದು. ಬಂದವರು ಹಿಂದಿರುಗುವುದು ಸೃಷ್ಟಿ ನಿಯಮ. ಅದರೆ ನಿನ್ನಂತೆ ನೆನಪಲುಳಿಯುವವರು ಕೆಲವರೇ ಇರಬಹುದು ನೀನು ತೋರಿದ ಧೈರ್ಯ ಜಗಕೆ ಮಾದರಿಯಾಗಿರುವುದು... ನೀನು ನನ್ನ ಆತ್ಮೀಯ ಎನ್ನುವುದೇ ನನಗೆ ಹೆಮ್ಮೆ.


ಯಾವುದೂ ಶಾಶ್ವತವಲ್ಲ. ನಿಜ.. ಹಗಲಿನ ಬೆನ್ನಹಿಂದೆಯೇ ಇರುಳು ನಗುವಿನ ಬೆನ್ನಹಿಂದೆಯೇ ಅಳು ಜನನದ ಬೆನ್ನಹಿಂದೆಯೇ ಮರಣ. 


ಸಾಧ್ಯವಾದರೆ ಮತ್ತೊಮ್ಮೆ ಹುಟ್ಟಿ ಬಾ.. ಪ್ರಕಾಶ.. ನಿನ್ನ  ನೆನಪಲ್ಲಿ ಬಾಡಿದ ಮನಸುಗಳಿಗೆ ಸಾಂತ್ವಾನ ನೀಡು. ನೀನು ಮಾಡಿದ ಒಳ್ಳೆಯ ಕೆಲಸಗಳು ನಿನ್ನ ಸ್ವರ್ಗದ ದಾರಿಯಲ್ಲಿ ಹೂವ ಹಾಸಿಗೆಯಾಗಲಿ.

ಅಂತರಾಳದ ನಮನಗಳು.


- ದಿವಾಕರ್ ಶೆಟ್ಟಿ ಅಡ್ಯಾರ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top