ನವರಾತ್ರ ನಮಸ್ಯಾ - ಲಲಿತೋಪಾಖ್ಯಾನ ಪ್ರವಚನ - 2 ಅಕ್ಷರ ರೂಪ

Upayuktha
0

ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ 'ಲಲಿತೋಪಾಖ್ಯಾನ' ಪ್ರವಚನದ ಅಕ್ಷರರೂಪ. (16-10-2023)




‌ಅತಿಮಧುರ ಚಾಪ ಹಸ್ತಾಂ ಅಪರಿಮಿತಾಮೋದಬಾಣಸೌಭಾಗ್ಯಾಮ್|

ಅರುಣಾಂ ಅತಿಶಯ ಕರುಣಾಂ ಅಭಿನವ ಕುಲಸುಂದರೀಂ ವಂದೇ||


ಈ ಬಗೆಯ ಬಿಲ್ಲು ಬಾಣಗಳ ವರ್ಣನೆ ನಮಗೆ ದುರ್ಲಭ. 'ಅತಿಮಧುರ ಚಾಪ ಹಸ್ತಾಂ - ದೇವಿಯ ಕೈಯಲ್ಲಿ ಬಿಲ್ಲಿದೆ, ಅದು ಹೇಗಿದೆ ಅಂದರೆ ಅತ್ಯಂತ ಮಧುರವಾಗಿದೆ. ಮಧುರವಾದ ಬಿಲ್ಲಿನಿಂದ ಹೂಡುವಂತಹ ಬಾಣುಗಳು ಹೇಗಿದೆ ಅಂದರೆ 'ಅಪರಿಮಿತಾಮೋದಬಾಣ ಸೌಭಾಗ್ಯಾಮ್'. ಅಪಾರ ಪರಿಮಳ ಬೀರುವ, ಸುಗಂಧವನ್ನು ಸೂಸುವಂತಹ ಬಾಣಗಳು. ಇವಳ ವರ್ಣ ಅರುಣ, ಹಾಗಾಗಿ ಆಕೆಯನ್ನು ಅರುಣ ವರ್ಣ ಎಂದು ಹೇಳಿದ್ದಾರೆ. ಬಿಲ್ಲು-ಬಾಣಗಳನ್ನು ಹಿಡಿದಂತಹ ದೇವಿಯ ಅಂತರಂಗದ ವರ್ಣನೆ ಹೇಗಿದೆ ಎಂದರೆ ಅತಿಶಯ ಕರುಣಾಂ.  ಬಿಲ್ಲು-ಬಾಣ ಹಿಡಿದ ಮೇಲೆ ಚಂಡಿ - ಚಾಮುಂಡಿ ಎಂದು ಕರೆಯಬೇಕಾಗಿತ್ತು ಅಲ್ಲವಾ?! ಎಷ್ಟು ಅದ್ಭುತವಾಗಿದೆ ನೋಡಿ. ಬಿಲ್ಲು ಏನೋ ಇದೆ ಕೈಯಲ್ಲಿ, ಆದರೆ ಅದು ಕಬ್ಬಿನ ಬಿಲ್ಲು. ಕಬ್ಬಿಣದ ಬಿಲ್ಲು ಅಲ್ಲ, ಅಲ್ಲಿಯೂ ಕರುಣೆ. ಹಾಗಾಗಿ  ಆಕೆಯ ಕೈಯಿಯ ಧನಸ್ಸು ಕೂಡಾ ಅತ್ಯಂತ ಮಧುರವಾಗಿರುವಂತಹದ್ದು. ಬಾಣಗಳೆಲ್ಲಾ ಪರಿಮಳ, ಅದು ಹೇಗೆ ಎಂದರೆ ಅವೆಲ್ಲಾ ಹೂವಿನ ಬಾಣಗಳು. ದೇವಿಗೆ ಕೋಪ ಬಂದರೂ ಕೂಡ ಕಬ್ಬಿನ ಬಿಲ್ಲನ್ನು ಎತ್ತಿ ಹೂವಿನ ಬಾಣವನ್ನು ಪ್ರಯೋಗ ಮಾಡುತ್ತಾಳೆ ಎಂದರೆ ಆಕೆಯ ಕರುಣೆ ಎಂತಹದ್ದು?! ಆಕೆಯ ಮನಸ್ಸು, ಹೃದಯ ಎಂತಹದ್ದು? ಕನಿಕರ ಎಂತಹದ್ದು? ಜೀವಲೋಕದ ಬಗ್ಗೆ ಎಂಬುದನ್ನು ನಾವಿಲ್ಲಿ ಚಿಂತಿಸಬೇಕು. ರಾಜರಾಜೇಶ್ವರಿಯ ಸ್ವರೂಪ ಅದು. ಒಂದು ಕೈಯಲ್ಲಿ ಪಾಶ, ಇನ್ನೊಂದು ಕೈಯಲ್ಲಿ ಅಂಕುಶ. ಅದು "ರಾಗಸ್ವರೂಪ ಪಾಶಾಢ್ಯಾಂ ಕ್ರೋಧಾಕಾರಾಂಕುಶೋಜ್ವಲಾಂ"- ರಾಗವೇ ಪಾಶ, ಕ್ರೋಧವೇ ಅಂಕುಶ, ಇನ್ನೆರಡು ಕೈಗಳಲ್ಲಿ ಕಬ್ಬಿನ ಬಿಲ್ಲು ಮತ್ತು ಹೂವಿನ ಬಾಣಗಳು. ಅಂತಹ ಸ್ವರೂಪ ಆಕೆಯದ್ದು. ಆಕೆಯ ಹೃದಯ ಅತ್ಯಂತ ಕೋಮಲ. ಆಕೆಯನ್ನು ಮೊಟ್ಟ ಮೊದಲು ಧ್ಯಾನಿಸೋಣ, ಭಾವಿಸೋಣ. ಏಕೆಂದರೆ  ಹಯಗ್ರೀವ ಮೊಟ್ಟ ಮೊದಲು ಹೇಳಿದ್ದೇ ಅದು - ರಾಜರಾಜೇಶ್ವರಿಯನ್ನು, ಲಲಿತಾ ತ್ರಿಪುರಸುಂದರಿಯನ್ನು ಧ್ಯಾನಿಸಿ.  ಧ್ಯಾನಿಸಿದರೆ ಏನಾಗುತ್ತದೆ? ಎಂದರೆ, “ದುಷ್ಕೃತಂ ಸುಕೃತಾಯತೇ” ಮಾಡಿದ ಪಾಪವು ಪುಣ್ಯವಾಗಿ ಪರಿವರ್ತನೆ ಹೊಂದುತ್ತದೆ. ನಾವು ನೋಡಿದ ಯಾವ ಶಾಸ್ತ್ರಗಳಲ್ಲಿ, ಗ್ರಂಥಗಳಲ್ಲಿ ಇಂತಹದ್ದೊಂದು ಉಲ್ಲೇಖವನ್ನು ಕಂಡಿಲ್ಲ. ಪಾಪಗಳು ಪರಿಹಾರವಾಗುವ ಮಾತುಗಳನ್ನು ಓದಿದ್ದು ಇದೆ, ಕೇಳಿದ್ದು ಇದೆ. ಪ್ರಾಯಶ್ಚಿತ್ತ ಮ‌ಾಡಿದರೆ ಪಾಪ ಪರಿಹಾರ ಆಗುತ್ತದೆ. ಆದರೆ ಮಾಡಿದ ಪಾಪವು ಪುಣ್ಯವಾಗಿ ಬದಲಾಗುವುದನ್ನು ನಾವು ಎಲ್ಲಿಯೂ ಕೂಡ ನೋಡಿದ್ದಿಲ್ಲಾ. ಅದು ಇದ್ದರೆ ರಾಜರಾಜೇಶ್ವರಿಯ ಕಾರುಣ್ಯದಲ್ಲಿ ಮಾತ್ರ. ಆಕೆಯ ಮನೋಹರ ಮೂರ್ತಿ, ಶಿರದ ಮೇಲೆ ಚಂದ್ರಕಲೆ, ಹಣೆಯಲ್ಲಿ ಮೂರನೆಯ ಕಣ್ಣು, ಕಬ್ಬಿನ ಬಿಲ್ಲು, ಹೂವಿನ ಬಾಣಗಳು, ಪಾಶ ಮತ್ತು ಅಂಕುಶವನ್ನು ಧರಿಸಿದ ಆಕೆಯ ದಿವ್ಯಮಂಗಲ ಸ್ವರೂಪವನ್ನು ಧ್ಯಾನಮಾಡಿದರೆ, ಮಾಡಿದ ಪಾಪವು ಪುಣ್ಯವಾಗಿ ಬದಲಾಗುತ್ತದೆ. ಆಕೆಯ ಅನುಗ್ರಹ ಬಹಳ ದೊಡ್ಡದು. ಮಾಡಿದ ಪಾಪವು ಪುಣ್ಯವಾಗುತ್ತದೆ ಮೊದಲ ಮಾತು ಅದು. ಎರಡನೇಯದು ಅರ್ಚನೆಯನ್ನು ವಿಧಿವತ್ತಾಗಿ ಮಾಡಬೇಕು. ಆದರೆ ಒಂದು ವೇಳೆ ವಿಧಿವತ್ತಾಗಿ ಮಾಡದಿದ್ದರೂ ಕೂಡ ಶುಭಫಲವೇ ಉಂಟು. ಇದು ಕೂಡ ಬಹಳ ಅಪರೂಪದ ಮಾತು. ಯಾವುದಾದರೂ ಒಂದು ವಿಧಾನವನ್ನು ನಿರೂಪಣೆ ಮಾಡುವಾಗ ಸಾಮಾನ್ಯವಾಗಿ ಶಾಸ್ತ್ರಗಳು ಬಲವಾಗಿ ಪ್ರತಿಪಾದನೆ ಮಾಡುತ್ತವೆ. ಲೋಪವಿಲ್ಲದೇ ಮಾಡಬೇಕು (ಮಂತ್ರಲೋಪ, ತಂತ್ರಲೋಪ, ದ್ರವ್ಯಲೋಪ, ಕ್ರಿಯಾಲೋಪ) ಇಂತಹದು ಯಾವುದೂ ಇಲ್ಲದಂತೆ ಮಾಡಬೇಕು. ಆದರೆ ಈ ಶ್ರೀವಿದ್ಯೆಯ ರಹಸ್ಯ ಇದೆಯಲ್ಲಾ ಇದು ಆರಂಭವಾಗುವಾಗಲೇ ಆಡಿದ ಮಾತು ಏನೆಂದರೆ "ತಪ್ಪಾದರೆ ತಪ್ಪಾಗಲಿ ಬಿಡಿ, ತೊಂದರೆಯಿಲ್ಲ ಆದರೆ ಮಾಡಿ". ವಿಧಿನಾ ಅವಿಧಿನಾsಪಿವಾ- ವಿಧಿ ಪೂರ್ವಕವಾಗಿ ಮಾಡಲ್ಪಡಲಿ ಅಥವಾ ವಿಧಿ ಪೂರ್ವಕವಲ್ಲದೇ ಮಾಡಲ್ಪಡಲಿ, ಆದರೆ ಫಲ ಇದ್ದೇ ಇದೆ. ಕ್ಲೇಶಗಳಿಂದ, ದೋಷಗಳಿಂದ, ನೋವುಗಳಿಂದ ದೇವಿ ಬಿಡುಗಡೆಯನ್ನು ಕೊಡುತ್ತಾಳೆ. ಹಾಗೆಂದು ವಿಧಿ ಶೂನ್ಯವಾಗಿ ಮಾಡುವುದಕ್ಕೆ ಇದು ಒಂದು ರಹದಾರಿ ಅಂತ ಅಲ್ಲ. ಶ್ರದ್ಧೆಯಿಂದ  ಮಾಡಬೇಕು ಎನ್ನುವುದಕ್ಕೆ ಅದು ಪ್ರಚೋದನೆ. ನಿಮಗೆ ತಿಳಿದಂತೆ ಮಾಡಿ, ಆದರೆ ಮಾಡದೇ ಇರಬೇಡಿ. 

ಮೂರನೇಯದು ನಮಗೆ ಬಹಳ ಬೇಕಾಗಿರುವಂತಹದೇ, ಕೆಲವು ಬಾರಿ ನಾವು ಹಣಕ್ಕೆ ಆಸೆ ಪಡುತ್ತೇವೆ, ಹಣದ ಹಿಂದೆ ಹೋಗುತ್ತೇವೆ. ಪುಣ್ಯದ ಹಿಂದೆ ಹೋಗೋದಿಲ್ಲ. ಏಕೆಂದರೆ ಹಣ ಕಾಣುತ್ತದೆ, ಆದರೆ ಪುಣ್ಯ ಕಾಣುವುದಿಲ್ಲ. ಹಣ ಬಂದದ್ದು ಗೊತ್ತಾಗುತ್ತದೆ, ಆದರೆ ಪುಣ್ಯ ಬಂದದ್ದು ಗೊತ್ತೇ ಆಗುವುದಿಲ್ಲ. ನಮಗೆ ಕಾಣುವಂತಹ ವಿಷಯದಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ. ಕಾಣದಿರುವುದು ಏನೋ ಗೊತ್ತೇ ಇರುವುದಿಲ್ಲ. ಪರಲೋಕ ಎಂದರೆ ಇದೆಯೋ? ಇಲ್ಲವೋ?  ಯಾರು ಕಂಡವರು? ಹಾಗಾಗಿ ಕಾಣದ ಸುಖಕ್ಕಾಗಿ ಕಾಣುವ ಸುಖವನ್ನು ಕಳೆದುಕೊಳ್ಳಲು ಜೀವ ತಯಾರಾಗಿರುವುದಿಲ್ಲ. ಯಾಕೆ ಈ ಆಧ್ಯಾತ್ಮದ ಮಾರ್ಗದಲ್ಲಿ, ಉಪಾಸನೆ, ಸಾಧನೆ ಮಾರ್ಗದಲ್ಲಿ ಜನರು ಮುಂದೆ ಹೋಗುವುದಿಲ್ಲ ಅಂದರೆ, ಅದು ಇಲ್ಲಿಯ ಸುಖವನ್ನೆಲ್ಲಾ ಬಿಡಬೇಕು, ಅಲ್ಲಿ ಸುಖ ಇದೆಯೋ ಇಲ್ಲವೋ ಕಂಡವರಾರು!? ಹಾಗಾಗಿ ಕಾಣದ ಸುಖಕ್ಕಾಗಿ ಕಾಣುವ ಸುಖವನ್ನು ಮನುಷ್ಯ ಬಿಡಲು ಸಿದ್ಧನಿರುವುದಿಲ್ಲ. ಅದಕ್ಕೆ ಹಯಗ್ರೀವ ಮೂರನೇ ಮಾತಿನಲ್ಲಿ ಪರಿಹಾರವನ್ನು ಹೇಳುತ್ತಾನೆ. ಇಲ್ಲಿಯ ಸುಖವೂ ಉಂಟು ಮತ್ತು ಅಲ್ಲಿಯ ಸುಖವೂ ಉಂಟು. ಇಲ್ಲಿಯ ಸುಖವನ್ನು ಅನುಭವಿಸಿ ಚೆನ್ನಾಗಿರಿ. ಇಹಲೋಕದ ಸುಖವನ್ನು ರಾಜರಾಜೇಶ್ವರಿ ಅನುಗ್ರಹ ಮಾಡಿಕೊಡುತ್ತಾಳೆ. ಜೊತೆಗೆ ಅಲ್ಲಿಯ ಸುಖವನ್ನು ಅಂದರೆ, ಪರಲೋಕದ ಸುಖವನ್ನು ಪಡೆದುಕೊಳ್ಳಬಹುದು. ಪುಣ್ಯವನ್ನು ಸಂಪಾದನೆ ಮಾಡಬಹುದು ಮತ್ತು ಮುಕ್ತಿಯನ್ನು ಪಡೆಯಬಹುದು. ಹಯಗ್ರೀವ ಹೇಳಿದ ಈ ಮೂರು ವಾಕ್ಯಗಳು ಅಜ್ಞಾನಿಗಳ, ಪಾಮರರ ಲೋಕಕ್ಕೆ  ಅದೊಂದು ದೊಡ್ಡ ಅಭಯವಾಣಿ ಇದ್ದಂತೆ. ಹಾಗಾಗಿ ಪಾಪ ಪುಣ್ಯವಾಗುವುದಕ್ಕೆ ರಾಜರಾಜೇಶ್ವರಿ ಧ್ಯಾನ ಮಾಡಿ. ಇಷ್ಟು ಹೇಳಿ ಹಯಗ್ರೀವ ದೇವ ಅಗಸ್ತ್ಯರಿಗೆ ಹೇಳುತ್ತಾನೆ. ಇದೋ ಈ ಮಂತ್ರವನ್ನು ನಿನಗೆ ಕೊಟ್ಟೆ, ಶ್ರೀವಿದ್ಯೆಯನ್ನು ನಿನಗೆ ಕೊಟ್ಟೆ. ಇದು ಸರ್ವ ದುಃಖ ನಿವಾರಕ. ಯಾರು ಈ ಶ್ರೀವಿದ್ಯೆಯನ್ನು ಉಪಾಸನೆ ಮಾಡುತ್ತಾರೋ, ಅವರು ಈ ಎಲ್ಲಾ ದುಃಖಗಳಿಂದ ಬಿಡುಗಡೆಯನ್ನು ಪಡೆಯುತ್ತಾರೆ.  ಇದನ್ನು ಹಂಚು ಲೋಕಕ್ಕೆಲ್ಲಾ, ಈ ಉಪಾಯವನ್ನು ಎಲ್ಲರಿಗೂ ತಿಳಿಯಪಡಿಸು. ಹಯಗ್ರೀವ ಹೇಳಿದ್ದು, ಎಲ್ಲಾ ಜೀವಗಳಿಗೆ ಮತ್ತು ದೇವಲೋಕಗಳಿಗೆ  ಅದ್ಭುತವಾಗಿರುವಂತಹ  ಶ್ರೀಚಕ್ರಮಂತ್ರವನ್ನು ನೀನು ಪ್ರಚುರ ಪಡಿಸು. ಅದರಿಂದ ಅವರೆಲ್ಲರ ದುಃಖ ಮೋಕ್ಷ. ಮಂತ್ರ ಎಷ್ಟು ಶ್ರೇಷ್ಠವಾಗಿರತಕ್ಕಂಥದ್ದು. ಇದನ್ನು ಹಯಗ್ರೀವ ಅಗಸ್ತ್ಯರಿಗೆ ಕೊಟ್ಟು ಇದರಿಂದ ಲೋಕ ಉದ್ಧಾರ ಎಂದು ಹೇಳಿದಾಗ ಅಗಸ್ತ್ಯರಲ್ಲಿ ಎಲ್ಲಿಲ್ಲದ ಕುತೂಹಲ. ಹೇಗಿರಬಹುದು ಆ ತಾಯಿ!? ಆಕೆಯನ್ನು ಧ್ಯಾನ ಮಾಡಿದ ಮಾತ್ರದಿಂದ ಪಾಪವೆಲ್ಲಾ ಪುಣ್ಯವಾಗಿ ಪರಿವರ್ತನೆ ಆಗುವುದಾದರೆ!.



ಆಕೆಯ ಧ್ಯಾನದಿಂದ ಇಷ್ಟೆಲ್ಲಾ ಪ್ರಭಾವವಿದೆ ಎಂದರೆ ಆ ದೇವಿ ಹೇಗಿರಬಹುದು? ಅವಳ ಸ್ವರೂಪವೇನು? ಪ್ರಭಾವವೇನು? ಅವಳ ವಿಹಾರ ಹೇಗೆ ಎಂಬುದಾಗಿ ಹಯಗ್ರೀವ ದೇವನನ್ನು ಅಗಸ್ತ್ಯರು ಪ್ರಶ್ನಿಸುತ್ತಾರೆ.

        

ಕುತೂಹಲ ಇದೇ ಮೂಲ. ಎಲ್ಲಾ ಶಾಸ್ತ್ರಗಳು, ದರ್ಶನಗಳು ಕುತೂಹಲದ ಮೂಲಕವೇ ಲೋಕಕ್ಕೆ ಪ್ರಕಟವಾಗಿರುವುದು. ಹಾಗಾಗಿ ಮೊಟ್ಟ ಮೊದಲು ನಮಗೆ ದೇವರ ಬಗ್ಗೆ ಕುತೂಹಲವಿರಬೇಕು. ಆಗ ಮುಂದಿನದ್ದು ತಾನಾಗಿಯೇ ಗೋಚರಿಸುತ್ತದೆ. ಮಕ್ಕಳಲ್ಲಿ ಬಹಳ ಕುತೂಹಲವಿರುತ್ತದೆ. ಇವತ್ತೊಂದು ಮಗು ಪ್ರಶ್ನೆ ಕೇಳಿತು, ಹನುಮಂತ ಎಲ್ಲಿದ್ದಾನೆ ಎಂದು. ನಾವು ನಮ್ಮ ಎದೆಯನ್ನೇ ಮುಟ್ಟಿ ತೋರಿಸಬೇಕು ಇಲ್ಲಿದ್ದಾನೆ ಎಂದು. ಹಾಗಾಗಿ ಸಾಧನೆಯ ಮೊದಲ ಹೆಜ್ಜೆ ಕುತೂಹಲ. ಆಗ ಹಯಗ್ರೀವ ದೇವನು ಅಗಸ್ತ್ಯರಿಗೆ ಉತ್ತರಿಸುತ್ತಾನೆ, "ಇದು ಬಹುದೊಡ್ಡ ಪ್ರಶ್ನೆ, ಇದನ್ನು ಅಲ್ಪ ಕಾಲದಲ್ಲಿ 

ವಿವರಿಸಲು ಸಾಧ್ಯವಿಲ್ಲ. ದೇವಿಯ ಪ್ರಭಾವ, ಸ್ವರೂಪ ಮತ್ತು ವಿಹಾರವನ್ನು ನಿರೂಪಣೆ ಮಾಡಬೇಕೆಂದರೆ ದೀರ್ಘಕಾಲಬೇಕು. ಅದನ್ನು ನನ್ನ ಈ ರೂಪ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದೋ, ಈ ಹಯಗ್ರೀವ ಮುನಿ ಇದೆಲ್ಲವನ್ನು ವಿಸ್ತಾರವಾಗಿ ನಿನಗೆ ವಿವರಿಸುತ್ತಾನೆ" ಎಂಬುದಾಗಿ ಹೇಳಿ, ಹಯಗ್ರೀವ ದೇವನು ಹಯಗ್ರೀವ ಮುನಿಯ ಮೂಲಕ ಸಂವಾದವನ್ನು ಮುಂದುವರಿಸುತ್ತಾನೆ. ಅಗಸ್ತ್ಯ ಮುನಿಗಳು ತಪಸ್ಸು ಮಾಡಿ ಹಯಗ್ರೀವ ದೇವರನ್ನು ಸಾಕ್ಷಾತ್ಕರಿಸಿಕೊಂಡ ಸನ್ನಿವೇಶವದು. ಹಾಗಾಗಿ ದೇವನು ಸಂವಾದವನ್ನು ಮುನಿಗಳ ಮೂಲಕ ಮುಂದುವರೆಸಿದನು. ತಪಸ್ಸು ಮಾಡಿ ದೇವರು ಪ್ರತ್ಯಕ್ಷವಾದಾಗ ನಾವು ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಮಾತನಾಡಲಾಗುವುದಿಲ್ಲ. ದೇವಿಯ ವರ್ಣನೆಯು ಹಾಗೆಯೇ, ಒಂದು ಕ್ಷಣದಲ್ಲಿ ಮುಗಿಯುವಂತಹದ್ದಲ್ಲ. ಬಹಳ ದೀರ್ಘಕಾಲ ತೆಗೆದುಕೊಳ್ಳುವಂತದ್ದು. ಹಾಗಾಗಿ ಸಾಕ್ಷಾತ್ಕಾರದ ಸನ್ನಿವೇಶಕ್ಕೆ ಹೊಂದುವಂತದ್ದಲ್ಲ. ದೇವರು ಪ್ರತ್ಯಕ್ಷವಾದಾಗ, ಆ ಸಮಯದಲ್ಲಿ ಎಷ್ಟು ಕಥೆಯನ್ನು ಹಯಗ್ರೀವದೇವನು ಹೇಳಬಹುದು? ಮತ್ತು ಅಗಸ್ತ್ಯರು ಕೇಳಬಹುದು? ಹಾಗಾಗಿ ಹಯಗ್ರೀವ ದೇವನು ಅಗಸ್ತ್ಯರು ಕೇಳಿದ್ದಕ್ಕೆ ಇಲ್ಲವೆನ್ನದೇ, ಬೇರೆ ವಿಧಾನದಲ್ಲಿ ಅಗಸ್ತ್ಯರ ಕೋರಿಕೆಯನ್ನು ಈಡೇರಿಸುತ್ತಾನೆ. ಹಯಗ್ರೀವ ದೇವನು ಅಗಸ್ತ್ಯರಿಗೆ, "ನಿನ್ನೊಟ್ಟಿಗೆ ಇದ್ದು ನಿನಗೆ ಬೇಕಾದ್ದೆಲ್ಲವನ್ನೂ ವಿವರಿಸುತ್ತೇನೆ, ಇಡೀ ಲಲಿತಾ ತ್ರಿಪುರ ಸುಂದರಿಯ ಸರ್ವ ರಹಸ್ಯಗಳನ್ನು ತಿಳಿಯಪಡಿಸುತ್ತೇನೆ" ಎಂದು ಹೇಳಿ, ತಾನೇ ಹಯಗ್ರೀವ ಮುನಿಯಾಗಿ, ಅಗಸ್ತ್ಯರೊಂದಿಗೆ ಅವರ ಆಶ್ರಮಕ್ಕೆ ಬಂದರು. ಎಂಬುದಾಗಿ ಈ ಕಥೆಯಿಂದ ತಿಳಿಯಲ್ಪಡುತ್ತದೆ.


ದೇವರಿಗೆ ಎಷ್ಟು ಕರುಣೆ ನೋಡಿ. ನಮ್ಮ ಮಕ್ಕಳು ನಮ್ಮನ್ನು ಏನಾದರೂ ಕೇಳಿದರೆ ಅದಕ್ಕೆ ಉತ್ತರ ಹೇಳುವಾಗ ನಮಗೆ ಈ ಸಮಾಧಾನವಿರುತ್ತದೆಯಾ? "ಶೇಷಂ ಕೋಪೇನ ಪೂರಯೇತ್" ಎಂಬುದಾಗಿ ಒಂದು ಮಾತು. ಉಪಾಧ್ಯಾಯರಿಗೆ ವಿದ್ಯಾರ್ಥಿಯು ಪ್ರಶ್ನೆಯನ್ನು ಕೇಳುತ್ತಿರುತ್ತಾನೆ, ಅವರಿಗೆ ಉತ್ತರ ಗೊತ್ತಿಲ್ಲ. ಆಗ ಗೊತ್ತಿರುವುದಕ್ಕೆಲ್ಲಾ ಉತ್ತರ ತಿಳಿಸಿ, ಗೊತ್ತಿಲ್ಲದ್ದನ್ನು ಹೇಗೆ ಹೇಳುವುದು ಎಂದರೆ, ಯಾವುದೋ ಒಂದು ನೆಪಮಾಡಿ, ಕೋಪದಿಂದ ಹೇಳುವುದು ಪರಿಹಾರವಲ್ಲ. ಜಿಜ್ಞಾಸುವೊಬ್ಬ ಸಮ್ಮುಖದಲ್ಲಿ ಬಂದಾಗ, ಆತನಿಗೆ ಜ್ಞಾನವನ್ನು ಧಾರೆ ಎರೆಯಬೇಕು. ಆತನ ಜ್ಞಾನದಾಹವನ್ನು ಪೂರ್ತಿ ತೀರಿಸಬೇಕು ಎಂಬುದು ಶಾಸ್ತ್ರ. ಹಾಗಾಗಿ ಅಗಸ್ತ್ಯರನ್ನು ಹಯಗ್ರೀವ ದೇವನು ನಿರಾಶೆ ಮಾಡುವುದಿಲ್ಲ. ಹಾಗೆಯೇ ನಾವು ಕೂಡ ಜಿಜ್ಞಾಸುವಿಗೆ ನಿರಾಶೆ ಮಾಡಬಾರದು. ಹಾಗೆಂದು ನಮಗೆ ಗೊತ್ತಿದ್ದನ್ನು ಊರಿಗೆಲ್ಲಾ ಹೇಳಿಕೊಂಡು ಹೋಗಬಾರದು.

"ನ ಪೃಷ್ಟಃ ಕಸ್ಯಚಿತ್ ಬ್ರೂಯಾತ್" ಎಂದರೆ ಯಾರಾದರೂ ನಮ್ಮಲ್ಲಿ ಬಂದು ಯಾವುದಾದರೂ ವಿಷಯವನ್ನು ಕೇಳದೆ, ನಮ್ಮಷ್ಟಕ್ಕೆ ನಾವೇ ಯಾವುದೇ ವಿವರಣೆಯನ್ನು ಕೊಡಬಾರದು. ಆದರೆ ಯೋಗ್ಯ ಅಧಿಕಾರಿ, ಸತ್ಪಾತ್ರ ಬಂದು ಕೇಳಿದಾಗ, ಆ ಸಮಯದಲ್ಲಿ ಅವನಿಗೆ ತಿಳಿಸಿಕೊಡಬೇಕಾಗಿರುವುದು ಕರ್ತವ್ಯ. ಏಕೆಂದರೆ ಅಂತಹವರು ಸಿಗುವುದೇ ಕಷ್ಟ. ಒಳ್ಳೆಯ ಮಾತುಗಳನ್ನು ಕೇಳುವಂತಹವರು, ಒಳ್ಳೆಯ ವಿಷಯಗಳ ಬಗ್ಗೆ ಜಿಜ್ಞಾಸೆ ಉಳ್ಳವರು ಸಿಗುವುದೇ ದುರ್ಲಭ. ಹಾಗೆ ಭಗವಂತ, ಮುನಿಗಳೊಡನೆ ಮುನಿಯಾಗುತ್ತಾನೆ, ಗೊಲ್ಲರೊಡನೆ ಗೊಲ್ಲನಾಗುತ್ತಾನೆ, ವೀರರೊಡನೆ ವೀರನಾಗುತ್ತಾನೆ. ನಮಗಾಗಿ ಎಷ್ಟೋ ರೂಪಗಳನ್ನು ತಾಳುತ್ತಾನೆ. ಅದೆಲ್ಲವೂ ಅವನ ಕರುಣೆ. ಹತ್ತು ಅವತಾರಗಳೇನು, ನೂರು ಸಾವಿರ ಅವತಾರಗಳು, ರೂಪಗಳು. ಹೀಗೆ ಭಗವಂತ ನಮ್ಮ ಮೇಲೆ, ಜೀವಲೋಕದ ಮೇಲೆ ಕರುಣೆ ತೋರಿದ ರೀತಿಗಳಿಗೆ ಲೆಕ್ಕವುಂಟೆ? ಆದರೆ ನಾವು ಮೂರ್ಖರು, ಇಷ್ಟೆಲ್ಲಾ ಉಪಾಯಗಳು ನಮ್ಮ ಕಣ್ಣ ಮುಂದೆ ಬಂದರೂ, ಒಂದನ್ನೂ ನಾವು ಬಳಸಿಕೊಳ್ಳುವುದಿಲ್ಲ.


ಶ್ರೀಶಂಕರರು "ಯೋಗತಾರಾವಳಿ" ಎಂಬ ಅದ್ಭುತವಾದ ಪುಟ್ಟ ಯೋಗ ಗ್ರಂಥದಲ್ಲಿ ಒಂದು ವಿಷಯವನ್ನು ನಿರೂಪಣೆ ಮಾಡುತ್ತಾರೆ. ಶಿವನು ಒಂದು ಕಾಲುಲಕ್ಷ ಸಾಧನಾ ಮಾರ್ಗಗಳನ್ನು ಪ್ರಪಂಚಕ್ಕೆ ಕೊಟ್ಟನು. ನಾವು ಅದರಲ್ಲಿ ಒಂದನ್ನೂ ಅನುಷ್ಠಾನ ಮಾಡುವುದಿಲ್ಲ. ಒಂದು ಮಾರ್ಗದಲ್ಲಿಯೂ ನಾವು ಮುಂದುವರೆಯುವುದಿಲ್ಲ. ಅದು ನಮ್ಮ ಹಣೆಬರಹ. ಹಯಗ್ರೀವ ಮುನಿಯೊಡನೆ ಅಗಸ್ತ್ಯರು ಆಶ್ರಮಕ್ಕೆ ಹಿಂದಿರುಗಿದರು. ಮುನಿ ರೂಪದ ಹರಿ ಮನೆಗೆ ಬಂದನು. ಅಲ್ಲಿ ಶ್ರೀವಿದ್ಯೆಯ ಕುರಿತು ಅಗಸ್ತ್ಯರು ಮುನಿಯನ್ನು ಪ್ರಶ್ನಿಸುತ್ತಾರೆ. ಆಗ ಮುನಿಯು ಅಗಸ್ತ್ಯರಿಗೆ ದೇವಿಯ ಚರಿತ್ರೆಯನ್ನು ವಿಸ್ತಾರವಾಗಿ ಹೇಳಲು ಆರಂಭಿಸುತ್ತಾನೆ. ದೇವಿಯ ಮೊಟ್ಟಮೊದಲ ರೂಪದ ಬಗ್ಗೆ, ಅದರ ಆವಿರ್ಭಾವದ ಬಗ್ಗೆ ಮುನಿಗಳು ಹೀಗೆ ಹೇಳುತ್ತಾರೆ. ಬ್ರಹ್ಮ ಧ್ಯಾನ ಮಾಡಿದನು, ಆ ಧ್ಯಾನದಿಂದ ಹೊರ ಬಂದ ಪ್ರಕೃತಿ ದೇವಿಯ ಮೊದಲ ರೂಪವಂತೆ. ರಾಜರಾಜೇಶ್ವರಿಯ, ಲಲಿತಾ ತ್ರಿಪುರ ಸುಂದರಿಯ ಮೊಟ್ಟ ಮೊದಲ ರೂಪ ಯಾವುದೆಂದರೆ ಅದು ಪ್ರಕೃತಿ. ಬ್ರಹ್ಮನ ಧ್ಯಾನದಿಂದ ಅದರ ಆವಿರ್ಭಾವ. ಬ್ರಹ್ಮನ ಧ್ಯಾನದಿಂದ ಅವಳು ಹುಟ್ಟಿದ್ದಲ್ಲ, ಅವಳು ಗೋಚರಕ್ಕೆ ಬಂದಿದ್ದು. ಧ್ಯಾನ ಮಾಡಿದಾಗ ಬ್ರಹ್ಮನ ಅನುಭವಕ್ಕೆ ಬಂದಿರುವಂತಹದ್ದು ಮತ್ತು ವ್ಯಕ್ತವಾಗಿರುವಂತಹದ್ದು. ಅಲ್ಲಿಯವರೆಗೆ ಸುಪ್ತವಾಗಿ ಇದ್ದಂತಹ ಆ ಪರಾಶಕ್ತಿ ವ್ಯಕ್ತವಾಗಿರುವಂತಹದ್ದು. ಬ್ರಹ್ಮ ಅವಳನ್ನು ಹುಟ್ಟಿಸಿದ್ದಲ್ಲ, ಅವಳೇ ಬ್ರಹ್ಮನ ಜನನಿ, "ಆಬ್ರಹ್ಮಕೀಟಜನನೀ". ಸೃಷ್ಟಿಕರ್ತ ಬ್ರಹ್ಮನಿಂದ ಆರಂಭಿಸಿ ಕೀಟದವರೆಗೆ ಎಲ್ಲರೂ ಆಕೆಯಿಂದಲೇ ಹುಟ್ಟಿ ಬಂದವರು. ಎಲ್ಲರಿಗೂ ಅವಳೇ ಜನನಿ. ಅವಳು ಆಗ ಹುಟ್ಟಿದ್ದಲ್ಲ, ಅಲ್ಲಿಯವರೆಗೆ ಗುಪ್ತವಾಗಿ, ಸುಪ್ತವಾಗಿ ಇದ್ದವಳು, ಅಭಿವ್ಯಕ್ತವಾಗಿದ್ದು ಆ ಸಮಯದಲ್ಲಿ. ಬ್ರಹ್ಮನ ಧ್ಯಾನ, ಸಂಕಲ್ಪವು, ಜಗತ್ತು ಸೃಷ್ಟಿಯಾಗುವುದು ಹೇಗೆ? ಎಂದು. ವಿಷ್ಣುವಿಗೆ, ಈ ಜಗತ್ತು ಉಳಿಯುವುದು ಹೇಗೆ? ಎಂದು ಮತ್ತು ಶಿವನಿಗೆ ಈ ಜಗತ್ತನ್ನು ಉಪಸಂಹಾರ ಮಾಡುವುದು ಹೇಗೆ? ಎಂದು. ದೇವತೆಗಳಿಗೆ ಇದೇ ಸಂಕಲ್ಪ. ಹಾಗಾಗಿ ಸೃಷ್ಟಿಯ ಸಂಕಲ್ಪದಲ್ಲಿ ಬ್ರಹ್ಮ ಆ ಪರಾಶಕ್ತಿಯ ಧ್ಯಾನ ಮಾಡುವಾಗ, ಪ್ರಕೃತಿಯಾಗಿ ಬಂದಳು. ಪ್ರಕೃತಿಯೆಂದರೆ ನಮಗೆ ನೆಲೆ ಕೊಟ್ಟಿರುವ ಈ ಭೂಮಂಡಲ, ನಾವು ಕುಳಿತಿರುವ ನೆಲ, ಪಂಚಭೂತಗಳಾದ ಉಸಿರಾಡುವ ಗಾಳಿ, ಕುಡಿಯುವ ನೀರು, ನಮ್ಮ ಉಷ್ಣತೆ ಅಥವಾ ಅಗ್ನಿ, ನಮ್ಮ ಶರೀರ ಉಳಿಯುವುದಕ್ಕೆ, ಜಾಗ ಕೊಟ್ಟಿರುವ ಆಕಾಶ. ನೀಲಾಕಾಶವಲ್ಲಾ, ನಮ್ಮೆಲ್ಲರಿಗೂ ಉಳಿಯಲಿಕ್ಕೆ ಅವಕಾಶ ಕೊಟ್ಟಿರುವ ಆಕಾಶ, ಇವೆಲ್ಲವೂ ಪ್ರಕೃತಿಯೇ. ಪಂಚಭೂತಗಳೇ ಪ್ರಕೃತಿ. ಪಂಚಭೂತಗಳ ಹಿಂದೆ ಸೂಕ್ಷ್ಮರೂಪಗಳಾದ ಪಂಚತನ್ಮಾತ್ರಗಳು ಇರುತ್ತವೆ ಅದೂ ಪ್ರಕೃತಿ. ನಮ್ಮ ಇಂದ್ರಿಯಗಳಾದ ನೋಡುವ ಕಣ್ಣು, ಕೇಳುವ ಕಿವಿ, ಆಘ್ರಾಣಿಸುವ ಮೂಗು, ರುಚಿಗ್ರಹಣ ಮಾಡುವ ನಾಲಿಗೆ, ಸ್ಪರ್ಶವನ್ನು ತಿಳಿಯುವ ಚರ್ಮ, ಕರ್ಮೇಂದ್ರಿಯಗಳಾದ ಕೈ ಕಾಲುಗಳು, ಮಾತು ಇವೆಲ್ಲವೂ ಪ್ರಕೃತಿಯೇ. ಹಾಗಾಗಿ ಇದೆಲ್ಲವೂ ಅವಳೇ. ದೇವರ ಎಲ್ಲಾ ರೂಪವನ್ನು ನೋಡದಿದ್ದರೂ, ನಾವು ಅವಳ ಈ ರೂಪವನ್ನು ನೋಡಿರುತ್ತೇವೆ. ಏಕೆಂದರೆ ನೋಡುವುದೆಲ್ಲವೂ, ಕೇಳುವುದೆಲ್ಲವೂ, ನಮ್ಮ ಅನುಭವಕ್ಕೆ ಬರುವುದೆಲ್ಲವೂ ಪ್ರಕೃತಿಯೇ. ಹಾಗೆ ಆಲೋಚನೆ ಮಾಡಿದಾಗ ನಾವೆಲ್ಲರೂ ದೇವಿಯ ಮಡಿಲಲ್ಲಿಯೇ, ಒಡಲಿನಲ್ಲಿಯೇ ಇದ್ದೇವೆ ಎಂಬುದು ತಿಳಿಯುತ್ತದೆ. ಹಾಗಾಗಿ ಜಗತ್ತಿನಲ್ಲಿ ಏನೆಲ್ಲಾ ಇರಬಹುದೋ, ನಮಗೆ ಗೊತ್ತಿರುವುದೋ, ಗೊತ್ತಿಲ್ಲದಿರುವುದೋ, ಇತ್ತೋ, ಇಲ್ಲವೋ, ಮುಂದೆ ಇರಲಿಕ್ಕಿದೆಯೋ, ಎಲ್ಲವೂ ಪ್ರಕೃತಿಯೆಂಬ ಶಬ್ದದಿಂದ ವಾಚ್ಯವಾಗಿರುವುದು. ಇದೇ ಅವಳ ಮೊದಲ ರೂಪ. ರಾಜರಾಜೇಶ್ವರಿಯ ಮೊದಲ ಸ್ವರೂಪ ಮೊದಲ ಆವಿರ್ಭಾವ ಈ ಸೃಷ್ಟಿ. ಹಾಗೆ ಬ್ರಹ್ಮನ ಜ್ಞಾನದಿಂದ ಅವಳು ಗೋಚರಕ್ಕೆ ಬಂದಿರುವುದು. ಸೃಷ್ಟಿಕರ್ತ ಸೃಷ್ಟಿಯ ಬಗ್ಗೆ ಸಂಕಲ್ಪ ಮಾಡಿ ಧ್ಯಾನ ಮಾಡುವಾಗ, ಆತನಿಗೆ ವರ ಕೊಟ್ಟು ಸೃಷ್ಟಿಯಾಗಿ ಆ ದೇವಿಯು ಅಭಿವ್ಯಕ್ತಗೊಂಡಳು. ಹಾಗಾಗಿ ನಾವು ಕಾಣುವುದೆಲ್ಲವೂ, ಕೇಳುವುದೆಲ್ಲವೂ, ಮುಟ್ಟುವುದೆಲ್ಲವೂ ರಾಜರಾಜೇಶ್ವರಿ. ನಾವು ಸವಿದ ಸವಿಯೆಲ್ಲವೂ ರಾಜರಾಜೇಶ್ವರಿಯೇ. ಹಾಗಾಗಿ ಅವಳು ಸರ್ವಾತ್ಮಿಕೆ. ಅವಳಲ್ಲದಿರುವುದು ಯಾವುದೂ ಇಲ್ಲ. ಇದು ಅವಳ ಮೊದಲ ಸ್ವರೂಪ.

     

ತುಂಬಾ ವಿಶೇಷವಾದ ಎರಡನೆಯ ಆವಿರ್ಭಾವಕ್ಕೊಂದು ಕಥೆಯಿದೆ. ಒಮ್ಮೆ ಇಂದ್ರನಿಗೆ ಗರ್ವ ಬಂದಿತು. ಇಂದ್ರನೆಂದರೆ ಒಡೆತನ. ಅದು ಬಂದ ಕೂಡಲೇ ಗರ್ವ ಬರುತ್ತದೆ. ಹಾಗೆ ದೇವೇಂದ್ರನಿಗೆ ಒಮ್ಮೆ ಗರ್ವ ಬಂದಾಗ, ಆ ಗರ್ವದ ಮೇಲೆ ಶಿವನ ದೃಷ್ಟಿ ಬಿತ್ತು. ಶಿವನು ಆ ಗರ್ವಕ್ಕೊಂದು ಚಿಕಿತ್ಸೆ ಮಾಡಬೇಕೆಂದು, ತನ್ನದೇ ಅಂಶಸಂಜಾತರಾದ ದೂರ್ವಾಸರನ್ನು ಕರೆದು, ಇಂದ್ರನ ಗರ್ವವನ್ನು ಇಳಿಸಲು ಸೂಚಿಸಿದನು. ದೂರ್ವಾಸರು ಶಿವನಿಂದ ಅಪ್ಪಣೆ ಪಡೆದು, ವಿದ್ಯಾಧರಲೋಕದ ಮಾರ್ಗವಾಗಿ ಇಂದ್ರನಲ್ಲಿಗೆ ಮುಂದುವರೆಯುತ್ತಾರೆ. ಮುನಿಗಳು ಒಂದು ದಾರಿಯಲ್ಲಿ ಹೋಗುತ್ತಾರೆ ಎಂದರೆ ಅದಕ್ಕೊಂದು ಕಾರಣವಿರುತ್ತದೆ. ವಿದ್ಯಾಧರರೆಂದರೆ ದೇವತೆಗಳಲ್ಲಿ ಒಂದು ಪ್ರಭೇದ. ದೇವತೆಗಳು, ಅಪ್ಸರೆಯರು, ಗಂಧರ್ವರು, ವಿದ್ಯಾಧರರು, ಯಕ್ಷರು ಹೀಗೆ ನಾನಾ ಪ್ರಭೇದಗಳುಂಟು. ದಾರಿಯಲ್ಲಿ ಒಬ್ಬಳು ವಿದ್ಯಾಧರ ಕನ್ನಿಕೆ ದೂರ್ವಾಸರ ಗಮನವನ್ನು ಸೆಳೆದಳು. ಯಾವುದೋ ಒಂದು ಉನ್ಮಾದದಲ್ಲಿ, ಲಹರಿಯಲ್ಲಿ, ಆನಂದದಲ್ಲಿ ತೇಲುತ್ತಿರುವಂತೆ ನಡೆದು ಬರುತ್ತಿದ್ದಳು. ಅವಳ ಕೈಯಲ್ಲಿ ಒಂದು ಮನೋಹರವಾದ, ಸುಗಂಧ ಸೂಸುವಂತಹ ಪುಷ್ಪ ಮಾಲಿಕೆ ಇತ್ತು. ದೂರ್ವಾಸರು ನೇರವಾಗಿ ಅವಳ ಬಳಿ ಬಂದು ಅವಳನ್ನು ಕೇಳುತ್ತಾರೆ, ಏನಿದು? ಎಲ್ಲಿಂದ ಬಂದೆ? ಮತ್ತು ಎಲ್ಲಿಗೆ ಹೊರಟೆ? ಎಂದು. ಆ ವಿದ್ಯಾಧರ ಕನ್ನಿಕೆ ದುರ್ವಾಸರಿಗೆ ಪ್ರಣಾಮಗಳನ್ನು ಮಾಡಿ ಹೀಗೆಂದಳು, "ದೀರ್ಘಕಾಲ ನಾನು ರಾಜರಾಜೇಶ್ವರಿಯ ಸೇವೆಯಲ್ಲಿದ್ದೆ, ಲಲಿತಾ ತ್ರಿಪುರ ಸುಂದರಿಯ ಕುರಿತು ತಪಸ್ಸಿನಲ್ಲಿದ್ದೆ. ಆಕೆ ಸಂತುಷ್ಟಳಾಗಿ ತಾನು ತೊಟ್ಟ ಪುಷ್ಪಮಾಲಿಕೆಯನ್ನು ಪ್ರಸಾದ ರೂಪವಾಗಿ ನನಗೆ ಅನುಗ್ರಹಿಸಿದಳು. ಅದನ್ನೇ ತೆಗೆದುಕೊಂಡು ಬರುತ್ತಿದ್ದೇನೆ" ಎಂದಳು. ಆ ಆನಂದ, ಉನ್ಮಾದದಲ್ಲಿ ಮತ್ತು ಆವೇಶದಲ್ಲಿ ಅವಳು ಇದ್ದಿದ್ದು.

ನೀವೆಲ್ಲರೂ ಕುಂಕುಮಾರ್ಚನೆ, ಅಷ್ಟೋತ್ತರ ಮಾಡಬೇಕು. ಏಕೆಂದರೆ ವಿದ್ಯಾಧರ ಸ್ತ್ರೀಯೇ ಮಾಡಿದ್ದಾಳೆಂದರೆ ನೀವೆಲ್ಲರೂ ಮಾಡಲೇಬೇಕು. ದೂರ್ವಾಸರು ಆ ಮಾಲೆಯನ್ನು ತನಗೆ ಕೊಡುವಂತೆ ಅವಳನ್ನು ಕೇಳಿದರು. ಎಷ್ಟೋ ಕಾಲದ ತಪಸ್ಸಿನ ಫಲವಾಗಿ ದೊರೆತ ಆ ಮಾಲೆಯನ್ನು ಕೇಳಿದ್ದು ದೂರ್ವಾಸರು. ದೂರ್ವಾಸರು ದೊಡ್ಡ ತಪಸ್ವಿಗಳು, ಋಷಿಗಳು, ಅವರು ಕೇಳಿದಾಗ ಇಲ್ಲವೆನ್ನಲಾಗುವುದಿಲ್ಲ. ಮತ್ತು ಅವರ ಸಿಟ್ಟು ಲೋಕ ವಿಖ್ಯಾತ. ಅವರಿಗೆ ಸಿಟ್ಟು ಬಂದರೆ ಶಾಪವೇ. ಆದರೆ ಆಕೆ ಒಂದಿನಿತೂ ಯೋಚಿಸದೆ, ಮುನಿಗಳೇ ನಿಮಗೆ ಈ ಹಾರಬೇಕೆಂದರೆ ತೆಗೆದುಕೊಳ್ಳಿ ಎಂದಳು. ಆ ದೇವಿಯ ಕುರಿತು ತಪಸ್ಸು ಮಾಡಿದ್ದು, ಆಕೆ ಅನುಗ್ರಹಿಸಿದ್ದನ್ನು ಕೊಡಬಹುದಾ ಎಂದರೆ, ಖಂಡಿತವಾಗಿಯೂ ಕೊಡಬಹುದು. ಆಕೆಯ ಆಶೀರ್ವಾದವು ಯಾವಾಗಲೂ ಇರುತ್ತದೆ. ಆಕೆಯ ಅನುಗ್ರಹವನ್ನು ಮತ್ತೊಬ್ಬ ಕೇಳುವವನಿಗೆ ವಿತರಣೆ ಮಾಡಿದರೆ ಆ ದೇವಿಗೆ ಸಂತೋಷವೇ ಆಗುತ್ತದೆ. ಅದರಿಂದ ನಮಗೇನೂ ಕಡಿಮೆಯಾಗುವುದಿಲ್ಲ. ಆ ಭಾವ ಆಕೆಯಲ್ಲಿದ್ದಿದ್ದು.


ದೂರ್ವಾಸರಿಗೆ ಎಲ್ಲಿಲ್ಲದ ಸಂತೋಷವಾಯಿತು. ಎರಡೂ ಕೈಗಳನ್ನು ಎತ್ತಿ ಆಕೆಗೆ ಬಹುದೊಡ್ಡ ಆಶೀರ್ವಾದವನ್ನೇ ಮಾಡುತ್ತಾರೆ. ದೇವಿಯ ಪೂರ್ಣಾನುಗ್ರಹ ಪ್ರಾಪ್ತವಾಗುವಂತೆ, ಮನಸ್ಸು ದೇವಿಯಲ್ಲಿ ಸ್ಥಿರವಾಗುವಂತೆ ಹರಸುತ್ತಾರೆ. ಹರಸಿ ಇಂದ್ರನು ಇರುವೆಡೆಗೆ ಮುಂದುವರೆಯುತ್ತಾರೆ. ಅವರು ಅವಧೂತರು. ಕೆಲವೊಮ್ಮೆ ಹಾಡುತ್ತಾ, ಕೆಲವೊಮ್ಮೆ ಕುಣಿಯುತ್ತಾ, ಒಮ್ಮೊಮ್ಮೆ ನಗುತ್ತಾ, ವಿಚಿತ್ರವಾಗಿರುವಂತಹ ವರ್ತನೆ. ನೋಡುವವರಿಗೆ ಹುಚ್ಚರಂತೆ ಕಾಣುವಂತಹದ್ದು. ಆದರೆ ಅದು ನಿಜವಾಗಿಯೂ ಜ್ಞಾನದ ಒಂದು ಆವೇಶ.ಬೇರೆ ಏನೂ ಅಲ್ಲ. 


ದಾರಿಯಲ್ಲಿ ಕೆಲವು ವಿದ್ಯಾಧರರು, ವಿದ್ಯಾಧರಿಯರು ಅವರಿಗೆ ವೃಣಿಯನ್ನು ಕೊಟ್ಟರು. ಬೇರೆ ಬೇರೆ ರೀತಿಯ ಉಪಹಾರಗಳನ್ನು, ಉಡುಗೊರೆಗಳನ್ನು ಸಹ ಕೊಟ್ಟರು. ದೂರ್ವಾಸರು ಎಲ್ಲವನ್ನೂ ಪರಿಗ್ರಹಿಸಿ, ಕೊನೆಯಲ್ಲಿ ಇಂದ್ರನ ಮುಂದೆ ಹೋಗಿ ನಿಂತರು. ಇಂದ್ರ - ಮೂರುಲೋಕದ ಒಡೆಯ, ಐರಾವತವನ್ನೇರಿದ್ದಾನೆ. ಅದು ಸಹ ಗಜೇಂದ್ರ, ಇವನು ದೇವೇಂದ್ರ. ಅಂತಹ ಮದವಿಳಿಯುವ, ಮದೋದಕವನ್ನೇ ಸುರಿಸುವ ಐರಾವತವನ್ನೇರಿ ದೇವೇಂದ್ರ ಮೆರೆಯುತ್ತಿದ್ದಾನೆ. ದೂರ್ವಾಸರು ಅಲ್ಲಿಗೆ ತೆರಳಿ, ನೇರವಾಗಿ ಆ ಮಾಲೆಯನ್ನು ಇಂದ್ರನಿಗೆ ಕೊಟ್ಟರು. ದೇವಿಯು ತೊಟ್ಟ ಮಾಲೆ ಅದು, ಏನೇನು ಕೆಲಸಗಳನ್ನು ಮಾಡುತ್ತದೆಯೋ? ವಿದ್ಯಾಧರೆಯ ಕೈಗೆ ಬಂದು, ಅವರಿಂದ ದೂರ್ವಾಸರಿಗೆ ಬಂದು ಈಗ ಇಂದ್ರನಿಗೆ ಬಂದಿದೆ. ಆ ಮಾಲೆ ದೇವಿ ಮುಡಿದಿದ್ದು, ಅಗಸ್ತ್ಯರು ಅತ್ಯಂತ ಪ್ರೀತಿಯಿಂದ ಧಾರಣೆ ಮಾಡಿದ್ದು, ಅದನ್ನು ದೇವೇಂದ್ರನಿಗೆ ಕೊಟ್ಟಾಗ ಅದನ್ನು ದೇವೇಂದ್ರ ಏನು ಮಾಡಬೇಕು? ಆತ ಆ ಮಾಲೆಯನ್ನು ಹಾಗೆಯೇ ಐರಾವತದ ಕುಂಭಸ್ಥಳದ ಮೇಲೆ ಹಾಕಿದನಂತೆ. ಸ್ವಲ್ಪ ಉಪೇಕ್ಷೆಯಿತ್ತು ಅದರಲ್ಲಿ. ಎಷ್ಟು ಗೌರವವಿರಬೇಕೋ ಸ್ವಲ್ಪ ಕಡಿಮೆಯಿತ್ತು ಆ ಭಾವ. ಇಂದ್ರನೇ ಹೀಗಾದರೆ ಇನ್ನು ಆತನ ವಾಹನ ಹೇಗಿರಬೇಕು? ಐರಾವತ ತನ್ನ ಸೊಂಡಿಲಿನಿಂದ ಮಾಲೆಯನ್ನು ತೆಗೆದುಕೊಂಡು ಕಾಲಡಿಗೆ ಹಾಕಿ ಹೊಸಕಿಬಿಟ್ಟತು. ಯಥಾ ರಾಜಾ ತಥಾ ಪ್ರಜಾ. ಇಂದ್ರನು ಹೇಗೋ ಆತನ ವಾಹನವೂ ಹಾಗೇ. ಆದರೆ ವಾಹನ ಮಾಡಿದ ತಪ್ಪಿಗೆ ಹೊಣೆಗಾರ ಯಾರಾಗುತ್ತಾನೆ? ಜವಾಬ್ದಾರಿ ಇದೆ ಅಲ್ಲಿ. ನಿಮ್ಮ ಪ್ರತಿನಿಧಿ ಮಾಡಿದ ತಪ್ಪಿಗೆ, ನಿಮ್ಮ ಸೇವಕ ಮಾಡಿದ ತಪ್ಪಿಗೆ, ನಿಮ್ಮ ಮಕ್ಕಳು, ತಮ್ಮಂದಿರು ಮಾಡಿದ ತಪ್ಪಿಗೆ ನೀವು ಹೊಣೆಗಾರರಾಗುತ್ತೀರಿ. ಇದರಿಂದ ದೂರ್ವಾಸರಿಗೆ ಎಲ್ಲಿಲ್ಲದ ಕೋಪ ಬಂದಿತು, ಆತನನ್ನು ಶಪಿಸಿದರು. ನಿನ್ನ ತೇಜಸ್ಸು ನಷ್ಟವಾಗಿ ಹೋಗಲಿ, ನಿನ್ನ ಸಂಪತ್ತು ನಷ್ಟವಾಗಿ ಹೋಗಲಿ, ನೀನು ಮದಾಂಧನಾಗಿದ್ದೀಯ. ದೇವಿಯ ಶಿರವೇರಿದ ಮಾಲೆ ಇದು, ಒಬ್ಬ ಬ್ರಹ್ಮರ್ಷಿಯ ಕೈಯಿಂದ ನಿನಗದು ಬಂದರೆ, ಅದನ್ನು ಆನೆಯ ಮೇಲೆ ಉಪೇಕ್ಷೆಯಿಂದ ಇಟ್ಟು ಅದು ಕಾಲಿನಲ್ಲಿ ಹೊಸಕಿ ಹಾಕುವಂತೆ ಮಾಡಿದ್ದೀಯ, ನೀನು ಈ ಸ್ಥಾನಕ್ಕೆ ಯೋಗ್ಯನಲ್ಲ. ನಿನಗಿದು ತಕ್ಕ ಪ್ರಾಯಶ್ಚಿತ್ತ. ಹಾಗಾಗಿ ನಿನ್ನ ಆಡಳಿತ, ನಿನ್ನ ಪ್ರಶಾಸನವೇನಿದೆಯೋ ಇದು ತೇಜೋವಿಹೀನವಾಗಲಿ, ಶ್ರೀವಿಹೀನವಾಗಲಿ ಎಂದು ಶಪಿಸುತ್ತಾರೆ. ಮರುಕ್ಷಣದಲ್ಲಿ ಸ್ವರ್ಗದಲ್ಲಿರುವಂತಹ "ನಿತ್ಯಶ್ರೀ"-  ಎಂದರೆ ನಾಶವಿಲ್ಲದಂತಹ ಸಂಪತ್ತು ಅದು ಇಂದ್ರನನ್ನು ಬಿಟ್ಟು ನಾರಾಯಣನೆಡೆಗೆ ವೈಕುಂಠಕ್ಕೆ ಹೊರಟು ಹೋಯಿತಂತೆ. ಹಾಗೆಯೇ ಗೆಲುವು ತಂದುಕೊಡುವಂತಹ "ವಿಜಯಶ್ರೀ" ದೈತ್ಯಲೋಕಕ್ಕೆ ಹೊರಟು ಹೋಯಿತು. ಒಂದು ಮೇಲೆ ಒಂದು ಕೆಳಗೆ. ವಿಜಯಶ್ರೀ ಪಾತಾಳಕ್ಕೆ ದೈತ್ಯರೆಡೆಗೆ ಹೊರಟಿತು ಎಂದರೆ ಅರ್ಥವೇನು? ಅವರಿಗೆ ವಿಜಯವಾಗುತ್ತದೆ ಎಂಬ ಸೂಚನೆ.


ಇಂದ್ರ ಕಳಾಹೀನನಾದ, ತೇಜೋಹೀನನಾದ. ಆತನ ಆಡಳಿತವು ಸಹ ನಿಸ್ಸಾರವಾಯಿತು. ಪ್ರಪಂಚದಲ್ಲಿ ಧರ್ಮಕಾರ್ಯಗಳಿಗೆ ಬಲ ಕಡಿಮೆಯಾಗತೊಡಗಿತು. ಯಜ್ಞ-ಯಾಗಾದಿಗಳು, ತಪಸ್ಸುಗಳು ಅಥವಾ ಇವುಗಳನ್ನು ನೆರವೇರಿಸುವ ಸಾತ್ವಿಕರು, ಸಾಧಕರು ಇವರ ಬಲ ಮತ್ತು ಸಂಖ್ಯೆ ಕ್ಷೀಣವಾಯಿತು. "ಗರ್ವ ಬೆಳೆಸುವ ಪುಣ್ಯಕ್ಕಿಂತ ವಿನಯ ಬೆಳೆಸುವ ಪಾಪವೇ ಮೇಲು" ಎಂಬ ಮಾತಿದೆ. ಇಂದ್ರನ ಕಥೆಯೂ ಹಾಗೇ ಆಯಿತು. ಏನು ಪ್ರಯೋಜನವಾಯಿತು ಪುಣ್ಯದಿಂದ? ಇಂದ್ರ ಪದವಿ ಬರುವುದು ಪುಣ್ಯದಿಂದ. ಆ ಪುಣ್ಯ ಗರ್ವಕ್ಕೆ ಕಾರಣವಾಗುವುದಾದರೆ ಏಕೆ ಬೇಕು ಆ ಪುಣ್ಯ, ಅಂತಹ ಪುಣ್ಯದಿಂದ ಏನು ಪ್ರಯೋಜನ? ಅದೇ ಪಾಪದಿಂದ ದುಃಖ ಬರುತ್ತದೆ. ಆಗ ನಮ್ಮ ತಲೆ ಸ್ವಲ್ಪ ತಗ್ಗುತ್ತದೆ, ನಯ ವಿನಯ ಬರುತ್ತದೆ, ಸೌಜನ್ಯ ಬರುತ್ತದೆ. ಈ ಪುಣ್ಯಕ್ಕಿಂತ ಆ ಪಾಪವೇ ದೊಡ್ಡದು. "ಯಸ್ಯ ಅನುಗ್ರಹಮಿಚ್ಛಾಮಿ, ತಸ್ಯ ವಿತ್ತಂಹರಾಮ್ಯಹಮ್". ಯಾರಿಗೆ ಒಳ್ಳೆಯದಾಗಬೇಕೆಂದು ನಾನು ಬಯಸುತ್ತೇನೋ ಅವನ ಸಂಪತ್ತನ್ನು ಅಪಹರಣ ಮಾಡುತ್ತೇನೆ, ಆತನಿಗೆ ಬಡತನವನ್ನು ಕೊಡುತ್ತೇನೆ. ಏಕೆಂದರೆ ಅದರಿಂದ ಆತನಿಗೆ ನಯ ವಿನಯ ಬರುತ್ತದೆ, ಭಕ್ತಿ ಬರುತ್ತದೆ. ಶಕ್ತಿ ಹೆಚ್ಚಾದಾಗ ಭಕ್ತಿ ಕಡಿಮೆಯಾಗುತ್ತದೆ ಎಂದು ಭಗವಂತನೇ ಒಂದು ಕಡೆ ಹೇಳುತ್ತಾನೆ. 


ಒಂದು ಕಥೆ ನೆನಪಾಗುತ್ತದೆ. ಒಂದು ಶಿಲ್ಪಿಯ ಕಥೆಯಿದು. ಗೋರೇಲಾಲ್ ಎಂಬ ಒಬ್ಬ ಅದ್ಭುತ ಶಿಲ್ಪಿಯಿದ್ದ. ಆತ ಮೂರ್ತಿಗಳನ್ನು ಮಾಡಿದರೆ ಅದಕ್ಕೆ ಜೀವಕಳೆ ಇರುತ್ತಿತ್ತಂತೆ. ಅದು ನಿಜವಾದ ವ್ಯಕ್ತಿಯೋ ಅಥವಾ ಮೂರ್ತಿಯೋ ಎಂದು ಅನ್ನಿಸುತ್ತಿತ್ತಂತೆ. ಯಾರೋ ನಿಜವಾಗಿಯೂ ಕುಳಿತಿದ್ದಾರೆ, ನಿಂತಿದ್ದಾರೆ, ನಡೆಯುತ್ತಿದ್ದಾರೆ ಎಂದು ಭ್ರಮೆ ಬರುವಂತೆ ಆತ ಶಿಲ್ಪಗಳನ್ನು ರಚಿಸುತ್ತಿದ್ದ. ಖ್ಯಾತ ಶಿಲ್ಪಿಯಾಗಿದ್ದನಂತೆ. ಆತನಿಗೆ ಒಂದು ಕನಸು ಬಿತ್ತಂತೆ. ಕನಸು ಏನೆಂದರೆ ಇನ್ನು ಹದಿನೈದು ದಿನ ಕಳೆದು ನಿನಗೆ ಸಾವು ಬರುತ್ತದೆ ಎಂದು. ಇನ್ನು ಹದಿನೈದು ದಿನ ಕಳೆದು ಇಂತಹ ದಿನ, ಇಷ್ಟು ಸಮಯಕ್ಕೆ, ಇಂತಹ ರೂಪದಲ್ಲಿ ನಿನಗೆ ಮೃತ್ಯು ಬರುತ್ತದೆ, ಯಮದೂತರು ಬರುತ್ತಾರೆ ನಿನ್ನನ್ನು ಕರೆದೊಯ್ಯುವ ಸಲುವಾಗಿ ಎಂದು. ಒಮ್ಮೆ ಆತನಿಗೆ ತುಂಬಾ ವ್ಯಥೆಯಾಯಿತು. ಆತ ಧೈರ್ಯಸ್ಥ, ಹಾಗಾಗಿ ಹೇಗೆ ತಪ್ಪಿಸಿಕೊಳ್ಳಬಹುದೆಂದು ಉಪಾಯವನ್ನು ಯೋಚಿಸಿದ. ಆತನಿಗೆ ಒಂದು ಉಪಾಯ ಹೊಳೆಯಿತು. ತನ್ನಂತಹದೇ ಒಂದು ಒಂಭತ್ತು ಮೂರ್ತಿಗಳನ್ನು ಮಾಡಿದ. ಯಮದೂತರು ಬಂದರೆ ಅವರಿಗೆ ಗುರುತೇ ಸಿಗಬಾರದೆಂದು ಆತ ಕಾಯುತ್ತಿದ್ದ. ಆ ಶಿಲ್ಪಗಳು ಇರುವ ಭಂಗಿಯಲ್ಲಿಯೇ ಆತನೂ ಸಹ ಇದ್ದ. ಯಮದೂತರು ಬಂದಾಗ ಎಲ್ಲವೂ ಒಂದೇ ರೀತಿ ಇರುವುದನ್ನು ನೋಡಿ ಅವರಿಗೆ ಭಯವಾಯಿತಂತೆ. ಯಮಧರ್ಮ ಆದೇಶಿಸಿದ್ದು ಒಬ್ಬ ಗೋರೇಲಾಲ್ ನನ್ನು ಕರೆದಕೊಂಡು ಬರುವಂತೆ. ಆದರೆ ಹತ್ತು ಜನ ಇರುವುದನ್ನು ನೋಡಿ ಅವರಿಗೆ ಗೊಂದಲವಾಯಿತು. ಇದರರ್ಥ ಗೋರೇಲಾಲನಲ್ಲಿ ಎಂತಹ ಚಾತುರ್ಯವಿತ್ತೆಂದು. ಯಮದೂತರಿಗೆ ಗೋರೇಲಾಲನನ್ನು ಗುರುತಿಸಲು ಸಾಧ್ಯವಾಗದೇ ಯಮಲೋಕಕ್ಕೆ ಹಿಂದಿರುಗಿದರು. ನೇರವಾಗಿ ಯಮಧರ್ಮನಲ್ಲಿ ನೀನು ಒಂದು ಗೋರೇಲಾಲನನ್ನು ಕರೆತರಲು ಹೇಳಿದ್ದು, ಅಲ್ಲಿ ಹತ್ತು ಗೋರೇಲಾಲ್ ಇದ್ದಿದ್ದರಿಂದ  ಯಾರೆಂದು ಗೊಂದಲವಾಯಿತು ಹಾಗಾಗಿ ಹಿಂದಿರುಗಿದೆವು ಎಂದುರು. ಯಮನಿಗೆ ಕಿರಿಕಿರಿಯಾಗಿ ಸ್ವತಃ ತಾನೇ ಬರುತ್ತೇನೆಂದು ಗೋರೇಲಾಲ್ ನ ಜೀವ ತೆಗೆದುಕೊಳ್ಳಲು ಎಂದು  ಬಂದನು. ಯಮಧರ್ಮನು ಆತನ ಶಿಲ್ಪಶಾಲೆಯನ್ನು ಪ್ರವೇಶಿಸಿದಾಗ ಹತ್ತೂ ಶಿಲ್ಪಿಗಳು ಒಂದೇ ಸ್ಥಿತಿಯಲ್ಲಿದ್ದವು. ಸ್ವತಃ ಯಮಧರ್ಮನೇ ಬಂದಿದ್ದರಿಂದ ಒಂದು ಚೂರೂ ಅಲ್ಲಾಡದೆ, ಉಸಿರು ಬಿಗಿಹಿಡಿದು ಗೋರೇಲಾಲನೂ ಸಹ ಶಿಲ್ಪದಂತೆ ಕುಳಿತಿದ್ದ. ಸ್ವತಃ ಯಮನಿಗೂ ಯಾರು ಗೋರೇಲಾಲನೆಂದು ಗೊಂದಲವಾಯಿತು. ಆಗ ಸಲ್ಪ ಯೋಚಿಸಿ ಯಮನು ಹೇಳಿದನಂತೆ "ಎಂತಹ ಶಿಲ್ಪ ಕಲೆ ನಿನ್ನದು, ಆದರೂ ಸಹ ಒಂದೇ ಒಂದು ಕೊರತೆಯಿದೆ, ದೋಷವಿದೆ" ಎಂದನಂತೆ. ಆ ಕೂಡಲೇ ಗೋರೇಲಾಲನು,"ಏನು ಹೇಳಿ? ನನ್ನ ಶಿಲ್ಪದಲ್ಲಿಯೇ ಕೊರತೆಯೇ" ಎಂದು ಮಾತನಾಡಿದನು. ಮದ, ಆತನಲ್ಲಿರುವ ಅಹಂ. ಯಾರಾದರೂ ಆತನ ಶಿಲ್ಪದಲ್ಲಿ ಕೊರತೆಯಿದೆ ಎಂದರೆ ಆತನಿಗೆ ಅಷ್ಟು ಸಿಟ್ಟು ಬರುತ್ತಿತ್ತು. ಎಷ್ಟು ಒಳ್ಳೇ ರೀತಿಯಲ್ಲಿ ಕೆಲಸ ಮಾಡಿದರೂ ಆತನಲ್ಲಿ ಅಷ್ಟು ಅಹಂ ತುಂಬಿತ್ತು. ಆತ ಎಲ್ಲಿದೆ ದೋಷ ಎಂದಾಗ "ಇಲ್ಲೇ ಇದೆ" ದೋಷ ಎಂದು ಯಮಧರ್ಮ ಆತನನ್ನು ಹಿಡಿದುಕೊಂಡ. ಆತನಲ್ಲಿರುವ ಮದವೇ ದೋಷ. ಅದು ಇರಲಿಲ್ಲವೆಂದರೆ ಯಾವುದೇ ತೊಂದರೆ ಸಹ ಆಗುತ್ತಿರಲಿಲ್ಲ. ಹಾಗಾಗಿ ಯಮಧರ್ಮನಿಗೂ ಸಹ ಒಂದು ದೋಷ ಬೇಕು ಎಂದರ್ಥ. ಮದವೆನ್ನುವುದು ಅಂತಹ ದೋಷ, ನೆಲೆಯನ್ನು ಕಳೆದುಕೊಳ್ಳಲು ಅದು ಕಾರಣವಾಗುತ್ತದೆ. ಹಾಗಾಗಿ ಇಂದ್ರನಿಗೂ ಸಹ ಮದದ ಪರಿಣಾಮದಿಂದಾಗಿ ದುರವಸ್ಥೆ ಉಂಟಾಯಿತು. ಇಂದ್ರನು ನೇರವಾಗಿ ದೇವಗುರು ಬೃಹಸ್ಪತಿಯಲ್ಲಿಗೆ ಹೋಗಿ ಶಾಪವಿಮೋಚನೆಗೆ ದಾರಿಯನ್ನು ಕೇಳುತ್ತಾನೆ. ಆಗ ಬೃಹಸ್ಪತಿಯು ಬ್ರಹ್ಮಹತ್ಯೆ, ಸುರಾಪಾನ, ಸ್ವರ್ಣಚೌರ್ಯ ಇಂತಹ ಪಾಪಗಳನ್ನೇ ಪಟ್ಟಿ ಮಾಡಿ ಅದಕ್ಕೆ ಫಲ ಏನು? ಪರಿಹಾರ ಏನು? ಎಂದು ವಿಸ್ತಾರವಾಗಿ ವಿವರಿಸುತ್ತಾರೆ. ಇದೆಲ್ಲ ಯಾಕೆಂದರೆ, 'ಮಾಡಿದ್ದುಣ್ಣೋ ಮಹಾರಾಯ'. ನೀನು ಮಾಡಿದ ಪಾಪಗಳನ್ನು ನೀನು ಅನುಭವಿಸಬೇಕು ಎಂದು ದೇವಗುರು ಬೃಹಸ್ಪತಿ ದೇವೇಂದ್ರನಿಗೆ ಹೇಳುತ್ತಾರೆ. ಲಲಿತೋಪಾಖ್ಯಾನದಲ್ಲಿ ಪಾಪಗಳ ಪಟ್ಟಿ ಎರಡು ಅಧ್ಯಾಯವಿದೆ. ಪಾಪಗಳು, ಫಲಗಳು ಮತ್ತು ಅದರ ಪ್ರಾಯಶ್ಚಿತ್ತಗಳು ಅವೆಲ್ಲವನ್ನು ದೇವಗುರು ದೇವೇಂದ್ರನಿಗೆ ಹೇಳಿದ್ದು. ಕಟ್ಟ ಕಡೆಯಲ್ಲಿ ದೇವೇಂದ್ರ ನನ್ನದೇನು? ಎಂದು ಕೇಳುವಾಗ, ದೇವಗುರುವು ನೀನು ಮೊದಲೂ ಸಹ ಇದನ್ನೇ ಮಾಡಿದ್ದು.  ಮೊದಲು ವಿಶ್ವರೂಪನು ದೇವಗುರುವಾಗಿದ್ದ. ಆತನ ಮೇಲೆ ಸಂಶಯ ಬಂದು ಕಾರಣಾಂತರಗಳಿಂದ ದೇವೇಂದ್ರನು ಆತನ ತಲೆಯನ್ನು ಕತ್ತರಿಸುತ್ತಾನೆ. ವಿಶ್ವರೂಪನ ತಾಯಿ ರಾಕ್ಷಸ ವಂಶದವರು ಮತ್ತು ತಂದೆ ದೇವತೆ. ದೇವಗುರುವೂ ಹೌದು. ಆದರೆ "ಸ್ವಸ್ತ್ರೀಯೋ ಅಸುರಾಣಾಂ" ಆತನ ತಾಯಿ ರಾಕ್ಷಸರ ಪೈಕಿ. ಆದರೆ ಆತನಿಗೆ ರಾಕ್ಷಸರೆಂದರೆ ವಿರೋಧವಿರಲಿಲ್ಲ. ಆದ್ದರಿಂದ ದೇವೇಂದ್ರನಿಗೆ ಆತ ರಾಕ್ಷಸರಿಗೆ ಸಹಾಯ ಮಾಡುತ್ತಾನೆಂದು ಸಂಶಯ. ಹಾಗಾಗಿ ಒಮ್ಮೆ ಸಂದರ್ಭವನ್ನು ಕಾದು, ವಿಶ್ವರೂಪನನ್ನು ಸಂಹಾರ ಮಾಡಿದಾಗ ಪ್ರಬಲವಾದ ದೋಷವು ವಿಶ್ವರೂಪನ ತಂದೆಯ ಶಾಪದಿಂದ ಕಾಡಿತ್ತು. ಹಾಗೆಯೇ ಅದು ಮೊದಲನೆಯದು ಈಗ ಎರಡನೆಯದು. ಒಂದು ಗಂಟು ಹಾಕಿದರೆ ಬಿಡಿಸಿಕೊಳ್ಳಬಹುದು ಆದರೆ ಎರಡು ಗಂಟು ಹಾಕಿದರೆ ಬಿಡಿಸುವುದು ಕಷ್ಟ. ನೀನು ಇದನ್ನು ಅನುಭವಿಸಲೇಬೇಕು. ಅನುಭವಿಸಿದ ಮೇಲೆ ಪರಿಹಾರ ಸಿಗುತ್ತದೆ, ಎಂದು ದೇವಗುರು ಬೃಹಸ್ಪತಿ ಹೇಳುವಾಗಲೇ ಮಲಕ ಎನ್ನುವ ದೈತ್ಯನ ನಾಯಕತ್ವದಲ್ಲಿ ರಾಕ್ಷಸರು ಸ್ವರ್ಗವನ್ನು ಮುತ್ತಿದರು. ದೇವತೆಗಳಿಗೆ ಪರಾಭವವಾಯಿತು. ದೇವೇಂದ್ರನು ಸ್ವರ್ಗಲೋಕವನ್ನು ಬಿಟ್ಟು ದೇವತೆಗಳ ಜೊತೆಗೂಡಿ ಪಲಾಯನ ಮಾಡಬೇಕಾಯಿತು.


ಬ್ರಹ್ಮನ ಸೂಚನೆಯಂತೆ ದೇವತೆಗಳೆಲ್ಲರೂ ವಿಷ್ಣುವಿನ ಬಳಿ ತೆರಳಿದಾಗ, ವಿಷ್ಣುವು ದೇವೇಂದ್ರನಿಗೆ ದುರ್ಬಲನಾದವನು ಸಂಧಿ ಮಾಡಿಕೊಳ್ಳಬೇಕು, ಇದು ರಾಜನೀತಿ. ನೀನು ರಾಕ್ಷಸನ ಜೊತೆಯಲ್ಲಿ ಸಂಧಿ ಮಾಡಿಕೊಂಡು ಸಮುದ್ರಮಥನ ಮಾಡಿದಾಗ ಅಮೃತ ಬರುತ್ತದೆ. ಅಮೃತವನ್ನು ಸೇವಿಸಿದಾಗ ನೀವು ಬಲಶಾಲಿಗಳಾಗುತ್ತೀರಿ, ಅಜರಾಮರರಾಗುತ್ತೀರಿ, ಅವಿನಾಶಿಗಳಾಗುತ್ತೀರಿ. ರಾಕ್ಷಸರನ್ನು ಸೋಲಿಸಲು ಸಹಾಯವಾಗುತ್ತದೆ. ರಾಕ್ಷಸರಿಗೆ ಅಮೃತ ಸಿಗದಂತೆ ನಿಮಗೆ ಮಾತ್ರ ಸಿಗುವಂತೆ ನಾನು ನೋಡಿಕೊಳ್ಳುತ್ತೇನೆ. ಈಗ ಹೋಗಿ ರಾಕ್ಷಸರೊಂದಿಗೆ ಸಂಧಿಮಾಡಿಕೊಳ್ಳಿ.  ಸಮುದ್ರಮಥನ ಮಾಡಿದ ಮೇಲೆ ಇಬ್ಬರಿಗೂ ಸಮಪಾಲು ಎಂದು ಒಪ್ಪಂದ ಮಾಡಿಕೊಳ್ಳಿ ಎಂದು ಹೇಳಿದನು. ಆಗ ರಾಕ್ಷಸರು ಸಹ ಒಪ್ಪಿದರು. ದೇವತೆಗಳನ್ನು ಸೋಲಿಸಿ ನಾವೇ ಅಮೃತ ತೆಗೆದುಕೊಳ್ಳಬಹುದು ಎಂಬುದು ರಾಕ್ಷಸರ ಆಲೋಚನೆ. ದೇವತೆಗಳಿಗೆ ಹರಿಯೇ ಧೈರ್ಯ. ವಿಷ್ಣು ನಿಮಗೆ ಅಮೃತವನ್ನು ಸಿಗುವಂತೆ ಮಾಡುತ್ತೇನೆ ಎಂದು ಹೇಳಿದ್ದೇ ಧೈರ್ಯ. ದೇವತೆಗಳು ಮತ್ತು ರಾಕ್ಷಸರು ಕೂಡಬೇಕೆಂದರೆ ಇಂತಹ ರಾಜಕೀಯವೇ ಆಗಬೇಕು. ಹಾಗೆಯೇ ದೇವತೆಗಳು ಮತ್ತು ರಾಕ್ಷಸರು ಅಮೃತಮಥನ ಮಾಡಿದ್ದು ನಿಮಗೆಲ್ಲರಿಗೂ ಗೊತ್ತಿರುವ ಕಥೆ. ಸಮುದ್ರಮಥನ ಹೇಗೆ ಸಾಧ್ಯವಾಯಿತು ಎಂಬುದು ದೊಡ್ಡ ಕಥೆ. ಮಂದರ ಪರ್ವತವೇ ಕಡೆಯುವ ಕಡಗೋಲಾಗಿ, ವಾಸುಕಿಯೇ ಹಗ್ಗವಾಗಿ, ಆಧಾರವಾಗಿ ಆದಿಕೂರ್ಮನೇ ಇದ್ದು, ಸಾಗರ ಮಥನ ಕಾರ್ಯವು ಅದ್ಭುತವಾಗಿ ನಡೆದು, ಹಾಲಾಹಲವೇ ವಿಷವಾಗಿ ಬಂದು, ವಿಷವನ್ನು ಶಿವ ಕುಡಿದು ವಿಷಕಂಠನಾಗಿರುವ ಕಥೆ ಎಲ್ಲರಿಗೂ ತಿಳಿದೇ ಇದೆ. ನಂತರ ಕಲ್ಪವೃಕ್ಷ, ಪಾರಿಜಾತ, ಅಪ್ಸರೆಯರು, ಚಂದ್ರ, ಕೌಸ್ತುಭಮಣಿ, ಮಹಾಲಕ್ಷ್ಮಿ ಇನ್ನೂ ಮುಂತಾದ ಸುವಸ್ತುಗಳು ಸಮುದ್ರದಿಂದ ಒಂದೊಂದೇ ಮೇಲೆದ್ದು ಬಂದು, ಬೇರೆ ಬೇರೆಯವರು ಅದನ್ನು ಆರಿಸಿಕೊಂಡರು. ಚಂದ್ರ ಶಿವನಿಗೆ, ಲಕ್ಷ್ಮೀ, ಕೌಸ್ತುಭಮಣಿ ವಿಷ್ಣುವಿಗೆ, ಪಾರಿಜಾತ, ಅಪ್ಸರೆಯರು ದೇವಲೋಕಕ್ಕೆ, ಸುರೆ ಸುರರಿಗೆ. ಇಂತಹ ಬೇರೆಬೇರೆ ಸುವಸ್ತುಗಳು ಬೇರೆಬೇರೆಯವರಿಗೆ ಸೇರಿದವು. ಅಸುರರಿಗೆ ಯಾವುದೂ ಬೇಡ, ಅವರು ಅಮೃತಕ್ಕಾಗಿಯೇ ಕಾಯುತ್ತಿದ್ದರು. ಕೊಟ್ಟ ಕೊನೆಯಲ್ಲಿ ಅಮೃತ ಬಂದಿತು. ಧನ್ವಂತರಿಯಿಂದ ಅಮೃತ ಕಲಶವನ್ನು ಕಿತ್ತುಕೊಂಡು ರಾಕ್ಷಸರು ತಾವೇ ಸೇವಿಸಬೇಕೆಂದು ಮುಂದಾದಾಗ ಅವರಿಬ್ಬರ ನಡುವೆ ಮತ್ತೆ ಯುದ್ಧವಾಯಿತು. ದೇವಿಯ ಆವಿರ್ಭಾವದ ಇನ್ನೊಂದು ಸಮಯ ಇದು. ಆಗ ಮಹಾವಿಷ್ಣು ಚಿಂತಿತನಾದನು, ನಾನು ಅಮೃತ ನಿಮಗೆ ಸಿಗುವಂತೆ ಮಾಡುತ್ತೇನೆ ಎಂದು ದೇವತೆಗಳಿಗೆ ಅಭಯ ಕೊಟ್ಟಿದ್ದೇನೆ ಎಂದು. ಆಗ ಮಹಾವಿಷ್ಣುವು ಪರಾಶಕ್ತಿಯನ್ನು, ರಾಜರಾಜೇಶ್ವರಿಯನ್ನು, ಲಲಿತಾ ತ್ರಿಪುರಸುಂದರಿಯನ್ನು ಅಂತರಂಗದಲ್ಲಿ ಆರಾಧನೆ ಮಾಡಿ ಧ್ಯಾನ ಮಾಡುತ್ತಾ ಮಾಡುತ್ತಾ ಅವಳೇ ಆದನಂತೆ. ಅದೇ ಮೋಹಿನಿಯ ರೂಪ. ಅದೇ ನಿನ್ನೆ ಹೇಳಿದ್ದು, ಶ್ರೀವಿಷ್ಣು ಬೇರೆ ಅಲ್ಲ ಶ್ರೀವಿದ್ಯೆ ಬೇರೆ ಅಲ್ಲ.  ಶ್ರೀವಿಷ್ಣುವಿನದೇ ಮತ್ತೊಂದು ರೂಪ ಶ್ರೀವಿದ್ಯೆ. ಇದಕ್ಕೆ ಅನೇಕ ಕುರುಹುಗಳು ಸಿಗುತ್ತವೆ. ಈ ದೇವಿಯ ಎರಡನೇ ಪ್ರಾದುರ್ಭಾವವೇನಿದೆ ಅದುವೇ ಮೋಹಿನಿ. ಅದು ವಿಷ್ಣುಮಾಯೆ, ವೈಷ್ಣವ. ಹಾಗಾಗಿ ವಿಷ್ಣುವೇ ಮೋಹಿನಿಯಾಗಿ ಬಂದ. ದೇವ ದಾನವರ ನಡುವೆ ನಿಂದ. ಅಸ್ತ್ರ ಶಸ್ತ್ರಗಳಿಂದ ಸಾಧ್ಯವಾಗದೇ ಇರುವಂತದ್ದು ಸೌಂದರ್ಯದಿಂದ, ಮೋಹದ ಮಾಯೆಯಿಂದ ಸಾಧಿಸುವಂತಹ ಪ್ರಕ್ರಿಯೆ ಇದು. ಮೋಹಿನಿ ಅವಳ ದೊಡ್ಡ ಅಸ್ತ್ರವೇ  ಮೋಹ. ಅದರ ಮೂಲಕ ಆಕೆ ಕಾರ್ಯ ಸಾಧನೆ ಮಾಡುವಂತದ್ದು. ಮಹಾಮಾಯೆ ಮೋಹಜಾಲವನ್ನು ಪ್ರಪಂಚದಲ್ಲೆಲ್ಲಾ ಬೀರಿದ್ದಾಳೆ, ಹಾಗಾಗಿಯೇ ಜಗತ್ತು ನಡೆಯುತ್ತದೆ. ಮೋಹಿನಿ ಹೇಗೆ ಅಮೃತವನ್ನು ದೇವತೆಗಳಿಗೆ ಕೊಡಿಸಿದಳು ಮತ್ತು ಹೇಗೆ ಶಾಸ್ತಾ, ಮಹಾಶಾಸ್ತಾ, ಅಯ್ಯಪ್ಪನನ್ನು ಹೇಗೆ ಸೃಷ್ಟಿ ಮಾಡಿದಳು ಎಂಬುದನ್ನು ನಾಳೆಯ ಪ್ರವಚನದಲ್ಲಿ ನೋಡೋಣ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top