ನವರಾತ್ರ ನಮಸ್ಯಾ - ಲಲಿತೋಪಾಖ್ಯಾನ ಪ್ರವಚನ - 1 ಅಕ್ಷರರೂಪ

Upayuktha
0

ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ. (15-10-2023)

~~




~~


ವ್ಯಾಖ್ಯಾನಮುದ್ರಾಂ ಕರಸರಸಿಜೈಃ

ಪುಸ್ತಕಂ ಶಂಖಚಕ್ರೇ ವಿಬ್ರದ್ಭಿನ್ನಸ್ಫಟಿಕರುಚಿರೇ ಪುಂಡರೀಕೇ ನಿಷಣ್ಣಃ |  

ಅಮ್ಲಾನಶ್ರೀಃ ಅಮೃತವಿಷದೈಃ ಅಂಶುಭಿಃ ಪ್ಲಾವಯನ್ಮಾಮ್ ಆವಿರ್ಭೂಯಾತ್ ಅನಘಮಹಿಮಾ ಮಾನಸೇ ವಾಗಧೀಷಃ|| 


ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ ಆಧಾರಂ ಸರ್ವವಿದ್ಯಾನಾಮ್ ಹಯಗ್ರೀವಮುಪಾಸ್ಮಹೇ||


ಧವಲ ವರ್ಣದ ಕಮಲದಲ್ಲಿ ಸನ್ನಿಹಿತನಾದ ಹಯಮುಖದ ವಿಷ್ಣು ಅಶ್ವಾನನ. ಒಂದು ಕೈಯಲ್ಲಿ ಚಿನ್ಮುದ್ರೆ, ಇನ್ನೊಂದು ಕೈಯಲ್ಲಿ ಪುಸ್ತಕ, ಮತ್ತೆರಡು ಕೈಯಲ್ಲಿ ಶಂಖಚಕ್ರಗಳು. ಶ್ವೇತಕಮಲದ ಮೇಲೆ ಮಂಡಿಸಿದ ವಿದ್ಯಾಧೀಶ. ವಾಗಧೀಶಃ ಮಾತಿಗೆಲ್ಲಾ ಅವನೆಯಂತೆ ಅಧಿದೇವತೆ. ಆತ ಈಗ ನಮ್ಮ ನಿಮ್ಮ ಮಾನಸದಲ್ಲಿ ಆವಿರ್ಭವಿಸಬೇಕು. ತನ್ನ ಅಮೃತದ ಕಿರಣವನ್ನು ನಮ್ಮ ಮೇಲೆ ಚೆಲ್ಲಬೇಕು. ಏಕೆಂದರೆ ಆತನಿಂದ ಪ್ರಪಂಚಕ್ಕೆ ಬಂದ ಒಂದು ವಿದ್ಯೆಯನ್ನು, ಶ್ರೀವಿದ್ಯೆಯನ್ನು ಕಿಂಚಿತ್ತು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು. ಹಾಗಾಗಿ ಆ ಶ್ರೀವಿದ್ಯೆ ಎಲ್ಲಿಂದ ಬಂದಿತೋ ಅಂತಹ ಹಯಗ್ರೀವ, ಶ್ರೀಮನ್ನಾರಾಯಣನ ಸನ್ನಿಧಾನಕ್ಕೆ ಮೊದಲಾಗಿ ಪ್ರಮಾಣಗಳನ್ನು ನಾವು ಸಲ್ಲಿಸುತ್ತೇವೆ. 

              

ಮಣ್ಣೆಲ್ಲಾ ಒಂದೇ ಅಲ್ಲ. ಬೇರೆ ಬೇರೆ ಮಣ್ಣು ಇದೆ, ಬೇರೆ ಬೇರೆ ಗುಣಗಳಿವೆ. ಬೇರೆ ಬೇರೆ ಬಣ್ಣಗಳೂ ಕೂಡ ಇದೆ. ಕಪ್ಪು, ಕೆಂಪು, ಹಳದಿ, ಬಿಳಿ ಬಣ್ಣದ ಮಣ್ಣುಂಟು. ಗುಣ ಒಂದೇ ಅಲ್ಲ. ಬಿಳಿಯ ಮಣ್ಣಾದರೆ ಬ್ರಹ್ಮಭೂಮಿ, ಕೆಂಪು ಮಣ್ಣಾದರೆ ಕ್ಷಾತ್ರಕ್ಕೆ ತುಂಬಾ ಪ್ರೇರಕ ಮತ್ತು ಪೂರಕ. ಹಳದಿ ಮಣ್ಣಾದರೆ ವ್ಯಾಪಾರಕ್ಕೆ ಹೇಳಿ ಮಾಡಿಸಿರುವವಂತದ್ದು. ಹೀಗೆ ಮಣ್ಣಿನ ಬಣ್ಣಗಳು ಬೇರೆ, ಗಂಧಗಳು ಬೇರೆ. ಕೆಲವು ಮಣ್ಣಿಗೆ ರಕ್ತದ ಪರಿಮಳವಂತೆ, ಕೆಲವು ಮಣ್ಣಿಗೆ ತುಪ್ಪದ ಪರಿಮಳವಂತೆ. ರಕ್ತದ ಪರಿಮಳ ಇರುವ ಭೂಮಿಯಾದರೆ ಅಲ್ಲಿ ಕ್ಷತ್ರ ವಿದ್ಯೆಯನ್ನು, ತುಪ್ಪದ ಪರಿಮಳ ಇರುವ ಭೂಮಿಯಾದರೆ ಅಲ್ಲಿ ಬ್ರಹ್ಮ ವಿದ್ಯೆಯನ್ನು ಬೆಳೆಸಬೇಕು. ಹಾಗೆ ಗುಣ, ಗಂಧ, ವರ್ಣ ಅದೆಲ್ಲ ಮಣ್ಣಿನಲ್ಲಿಯೇ ಸೇರಿರುತ್ತದೆ. ಹಾಗಾಗಿ ಎಲ್ಲಾ ಮಣ್ಣಿನಲ್ಲಿಯೂ ತೆಂಗು ಬೆಳೆಯುವುದಿಲ್ಲ, ಎಲ್ಲಾ ಮಣ್ಣಿನಲ್ಲಿ ಅಡಿಕೆ ಬೆಳೆಯುವುದಿಲ್ಲ, ಎಲ್ಲಾ ಮಣ್ಣಿನಲ್ಲಿ ಭತ್ತ ಬೆಳೆಯುವುದಿಲ್ಲ. ಜೀರಿಗೆ ಎಲ್ಲ ಕಡೆ ಬೆಳೆಯುವುದಿಲ್ಲ. ಹೀಗೆ ಒಂದು ಬೆಳೆಯನ್ನು ಬೆಳೆಯುವಲ್ಲಿ ಇನ್ನೊಂದು ಬೆಳೆಯನ್ನು ಬೆಳೆಯುವುದಿಲ್ಲ. ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆಯನ್ನು ಬೆಳೆಯಲಾಗುತ್ತದೆ. ಹೀಗೆ ಕಾಲವೂ ಕೂಡ. ಒಂದೊಂದು ಕಾಲಕ್ಕೂ ಒಂದೊಂದು ಗುಣವಿದೆ. ಕಾಲವೆಲ್ಲ ಒಂದೇ ಅಲ್ಲ. ಮಳೆಗಾಲದಲ್ಲಿ ಮಳೆ ಸುರಿಯುತ್ತಿರುತ್ತದೆ. ಚಳಿಗಾಲದಲ್ಲಿ ಅಧಿಕವಾದ ಚಳಿಯಿರುತ್ತದೆ. ಹಾಗೆ ಬೇಸಿಗೆಕಾಲದಲ್ಲಿ ತುಂಬಾ ಧಗೆಯಿರುತ್ತದೆ. ಹಾಗೆಯೇ ರಾಮನವಮಿ ಬೇರೆ, ಶಿವರಾತ್ರಿ ಬೇರೆ, ಗಣೇಶ ಚತುರ್ಥಿ ಬೇರೆ‌. ಅದೆಲ್ಲಾ ಯಾಕೆ ಹೀಗೆ? ಅಂದರೆ ಕಾಲದ ಆ ಖಂಡದಲ್ಲಿ ದೇವತೆಯ ಆವಿರ್ಭಾವ ಅತ್ಯಂತ ಅಧಿಕವಾಗಿದೆ. ಗಣೇಶ ಚತುರ್ಥಿ ದಿನ ಕಾಲದಲ್ಲಿ ಸಹಜವಾಗಿ ಗಣೇಶನ ಆವಿರ್ಭಾವ ಆಗಿರುವಂತದ್ದು. ಶಿವರಾತ್ರಿಯ ದಿನ ಆ ರಾತ್ರಿ ಶಿವನ ಆವಿರ್ಭಾವ ತುಂಬಾ ವಿಶೇಷವಾಗಿರುವಂತದ್ದು. ನೀವು ಇಡೀ ಒಂದು ವರ್ಷ ಶಿವನ ಉಪಾಸನೆ ಮಾಡಿದರೂ, ಶಿವರಾತ್ರಿ ದಿನ ಉಪಾಸನೆ ಮಾಡಿದರೂ ಒಂದೇ ತೂಕ. ಅಥವಾ ಅದೇ ಹೆಚ್ಚು ತೂಕ. ಶಿವರಾತ್ರಿಯ ದಿನದ ಉಪಾಸನೆಗೆ ಬಲವಿದೆ ಮತ್ತು ಫಲವಿದೆ. ಯಾಕೆಂದರೆ ಆ ಕಾಲ ಶಿವನದ್ದು. ಹಾಗೆ ಇಂದಿನ ದಿನದಿಂದ ಪ್ರಾರಂಭವಾಗುವ ಕಾಲವಿದೆಯಲ್ಲಾ ಇದು ಅಮ್ಮನವರ ಕಾಲ. ಈ ಒಂಬತ್ತು ಮತ್ತೆ ಒಂದು, ಹತ್ತು ದಿನಗಳು ಅದು 'ದಶ ಅಹೋರಾತ್ರ'. ಅದು ಈಗ ದಸರಾ ಎಂದಾಗಿದೆ. ಇದರಲ್ಲಿ ಅಮ್ಮನವರ ಪ್ರಾದುರ್ಭಾವ ವಿಶೇಷವಾಗಿ ಕಾಣುವಂತದ್ದು. ಕೇವಲ ಬರಿಗಣ್ಣಿಗೆ ಕಾಣುವಂತದ್ದಲ್ಲ. ಯಾರು ಉಪಾಸನೆ, ತಪಸ್ಸು ಮಾಡುತ್ತಾರೆ ಅವರಿಗೆ ವ್ಯತ್ಯಾಸ ಗೊತ್ತಿರುತ್ತದೆ. ಬೇರೆ ಸಮಯದಲ್ಲಿ ಅಮ್ಮನವರ ಉಪಾಸನೆ ಮಾಡಿದರೆ ಫಲವೇನು? ಅಥವಾ ಈ ಸಮಯದಲ್ಲಿ ಉಪಾಸನೆ ಮಾಡಿದರ ಫಲವೇನು ಎಂದು. ಈ ಸಮಯದಲ್ಲಿ ಉಪಾಸನೆ ಮಾಡಿದರೆ ಎಷ್ಟೋ ಪಾಲು ಮಿಗಿಲಾಗಿರುವಂತಹ ಫಲ ಲಭಿಸುತ್ತದೆ. ಅಮ್ಮನವರು ಜೀವಿಗಳ ಮೇಲಿನ ಕನಿಕರದಿಂದ ಈ ಸಮಯದಲ್ಲಿ ತನ್ನ ಸಾನ್ನಿಧ್ಯವನ್ನು ಕೊಟ್ಟಿರುತ್ತಾರೆ. ಹಾಗಾಗಿ ಈ ಸಮಯದಲ್ಲಿ ಅಮ್ಮನವರ ಸೇವೆ ಮಾಡಬೇಕು, ಉಪಾಸನೆ ಮಾಡಬೇಕು. ನವರಾತ್ರ ನಮಸ್ಯ, ಪೂಜ್ಯ ನಮಸ್ಯ ಅಪಚಿತಿಃ. ನಮಸ್ಯ ಎಂದರೆ ಪೂಜೆ ಎಂದು ಅರ್ಥ. ನವರಾತ್ರಿಯಲ್ಲಿ ಮಾಡುವ ದೇವಿಯ ಪೂಜೆ. ಈ ಭೂಮಿ ದೇವ ಭೂಮಿ, ಯಾಕೆಂದರೆ ಒಂದು ಕಾಲದಲ್ಲಿ ರಾಮಚಂದ್ರಪುರಮಠದ ಗುರುಗಳ ಸಂಚಾರ ಅನಿರೀಕ್ಷಿತವಾಗಿ ಇಲ್ಲಿ ಉಂಟಾಯಿತು. ನಮ್ಮ ಪೂಜ್ಯ ಗುರುಗಳ ಪಾದ ಸ್ಪರ್ಶ ಈ ಭೂಮಿಗೆ ಆಯಿತು. ಸ್ವಲ್ಪ ಕಾಲ ಕಳೆದ ಮೇಲೆ ದೊಡ್ಡ ಗುರುಪಾದುಕೆ ಪ್ರತಿಷ್ಠಾಪನೆ ಇಲ್ಲಿ ಆಯಿತು. ಮಹಾಪಾದುಕಾ ಪೂಜೆ, ಸಾವಿರಾರು ಪಾದುಕಾ ಪೂಜೆ ಇಲ್ಲಿ ನೆರವೇರಿತು. ಗುರುಗಳಿಗೆ ಹನುಮಂತನ ಸಂಚಾರ ಇಲ್ಲಿ ಕಂಡುಬಂತು, ಹನುಮಂತನ ದೇವಸ್ಥಾನ ಆಯಿತು. ಗುರುಗಳು ಇಲ್ಲಿ ಮಠವನ್ನು ನಿರ್ಮಾಣ ಮಾಡಿದರು, ರಾಮ ದೇವರ ಆಗಮನವಾಯಿತು. ಈಗ ಅಮ್ಮನವರ ಗಾಳಿ ಬೀಸಿದೆ.  ರಾಜರಾಜೇಶ್ವರಿಯ ಶುಭಾಗಮನ ಈ ರೂಪದಲ್ಲಿ ಆಗುತ್ತಿದೆ. ಒಂದು ದಿನ ಹಾರಕರೆ ನಾರಾಯಣ ಭಟ್ ಅವರು ಕೇಳಿದರು, ಈ ಬಾರಿ ನಮ್ಮ ಮಾಣಿಮಠದಲ್ಲಿ ನವರಾತ್ರಿ ಆಗಬಹುದಾ? ಎಂದು. ಆಗಬಹುದು ಎಂದು ಹೇಳಿದೆವು. ಇದು ಮೇಲ್ನೋಟಕ್ಕೆ ಕಾಣಿಸುತ್ತಿರಬಹುದು ಆದರೆ ವಸ್ತು ಸ್ಥಿತಿ ಅದಲ್ಲ. ನಾವು ನಿತ್ಯ ಆರಾಧಿಸುತ್ತಿರುವ ರಾಜರಾಜೇಶ್ವರಿಯ ದೃಷ್ಟಿ ಇಲ್ಲಿ ಬಿತ್ತು. ರಾಜರಾಜೇಶ್ವರಿಯ ಕರುಣಾಕಟಾಕ್ಷ ಇಲ್ಲಿ ಪಸರಿಸಿದ್ದರಿಂದ ನಾರಾಯಣ ಭಟ್ ಅವರಿಗೆ ಕೇಳಬೇಕು ಎಂದೆನಿಸುತು ಮತ್ತು ನಮಗೆ ಒಪ್ಪಿಕೊಳ್ಳಬೇಕೆಂಬ ಮನಸ್ಸು ಬಂದಿರುವುದು. ಹಾಗಾಗಿ  ರಾಜರಾಜೇಶ್ವರಿ ಅಮ್ಮನವರ ಅನುಗ್ರಹದಿಂದ ಈ ಕಾರ್ಯಕ್ರಮ ನೆರವೇರುತ್ತಿದೆ.


ನಾವು ಇದನ್ನು ಯಾವಾಗಲೂ ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳಬೇಕು. ಕಣ್ಣಿಗೆ ಕಾಣುವ ಕಾರಣಗಳು ಬೇರೆ ಮತ್ತು ಕಾಣದ ಕಾರಣಗಳು ಬೇರೆ. ಕಾಣದೇ ಇರುವ ಕಾರಣಗಳ ಮೇಲೆ ನಮ್ಮ ಗಮನವಿರಬೇಕು. ನಿಜವಾದ ಕಾರಣಕರ್ತರು ಯಾರು? ಅದು ರಾಜರಾಜೇಶ್ವರಿ, ತ್ರಿಪುರಸುಂದರಿ, ಲಲಿತಾಂಬಿಕೆ ಆಕೆಯ ದೃಷ್ಟಿ ಇಲ್ಲಿಗೆ ಬಿದ್ದಿದೆ. ಈ ಸಮಯದಲ್ಲಿ ದೇವಿಯ ಪೂಜೆಯನ್ನು ತ್ರಿಕರಣಗಳಿಂದ ಮಾಡಬೇಕೆಂಬ ಮನಸ್ಸು. ತ್ರಿಕರಣ ಎಂದರೇನು? ಮನಸ್ಸು, ಮಾತು ಮತ್ತು ಮೈ(ಶರೀರ). ಈ ಮೂರರಿಂದ ದೇವಿಯ ಪೂಜೆಯನ್ನು ಮಾಡಬೇಕು. ಕೃತಿಯಲ್ಲಿ ದೇವರ ಪೂಜೆ ಸಾಯಂಕಾಲವಿದೆ. ಮನಸ್ಸಿನಲ್ಲಿ ಪೂಜೆ ಆಗುತ್ತಾ ಇರುತ್ತದೆ. ರಾಜರಾಜೇಶ್ವರಿಯ ಮಹೋತ್ಸವ ನಡೆಯುತ್ತಿದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರ. ಆ ಸಂಕಲ್ಪವೇ ಒಂದು ಪೂಜೆ. ಇಲ್ಲಿಗೆ ಬಂದಾಗ ನೀವು ದೇವಿಯ ಭಜನೆ ಮಾಡುತ್ತೀರಿ, ದೇವಿಯ ದರ್ಶನ ಮಾಡುತ್ತೀರಿ, ದೇವಿಯ ಬಳಿ ಪ್ರಾರ್ಥಿಸುತ್ತೀರ ಇವೆಲ್ಲಾ ಮಾನಸಪೂಜೆಗಳೇ ಆದರೆ ಸಣ್ಣ ಸಣ್ಣ ರೂಪಗಳು. ಆದರೆ ಅದು ಬೆಳೆಯಬೇಕು. ನಮ್ಮ ಮನದಲ್ಲಿ ದೇವಿಯನ್ನು ಪೂಜಿಸಲು ಕಲಿಯಬೇಕು. ಉಪಕರಣಗಳು ಯಾವುದೂ ಬೇಡ. ಮಾನಸ ಪೂಜೆ ತುಂಬಾ ವಿಶೇಷ ಫಲವು ಕೂಡ ಬಹಳ. ಒಂದು ಜಪವನ್ನು ಇನ್ನೊಬ್ಬರಿಗೆ ಕೇಳುವಂತೆ ಜಪಿಸಿದರೆ ಫಲವುಂಟು, ಆದರೆ ಮನದಲ್ಲಿ ಜಪಿಸಿದರೆ ಫಲ ಅಧಿಕವಾಗಿರುವಂತದ್ದು. ನಾಲಿಗೆ ತುಟಿಯನ್ನು ಅಲುಗಿಸದೆ ಮಾನಸ ಜಪ ಮಾಡಿದರೆ ಅತ್ಯಂತ ವಿಶೇಷವಾದ ಫಲವುಂಟು. ಮಾನಸ ಪೂಜೆ ನಿರಂತರವಾಗಿ ನಡೆಯುತ್ತಿರಬೇಕು. ನಂತರ ವಾಕ್ಯಗಳಿಂದ ದೇವಿಯ ಪೂಜೆ‌. ವಾಕ್ಯೋಪುಷ್ಪಹಾರ. ದೇವಿಯೇ ಕೊಟ್ಟ ಮಾತುಗಳು. 'ಮಾತೆ ಕೊಟ್ಟ ಮಾತುಗಳಿಂದ ಮಾತೆಯ ಅರ್ಚನೆ‌'. ಇದು ಲಲಿತೋಪಾಖ್ಯಾನ ಪ್ರವಚನದ ಸಂದರ್ಭ. 

                               

ಎಲ್ಲಿದೆ ಲಲಿತೋಪಾಖ್ಯಾನ? ಅಂದರೆ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿಯೂ ಇದೆ‌. ಅನುಕ್ಷಣವೂ ಬ್ರಹ್ಮಾಂಡದ ಕಣಕಣದಲ್ಲೂ,  ಮೂಲೆಮೂಲೆಗಳಿಂದಲೂ ಲಲಿತೋಪಾಖ್ಯಾನ ಕೇಳಿ ಬರುತ್ತದೆ.  ಗ್ರಂಥದ ಹೆಸರಿನಲ್ಲಿ ಹೇಳುವುದಾದರೆ ಅದು ಬ್ರಹ್ಮಾಂಡ ಪುರಾಣದಲ್ಲಿದೆ. ಪುರಾಣಗಳು ಹದಿನೆಂಟು, ಆ ಹದಿನೆಂಟು ಪುರಾಣಗಳಲ್ಲಿ ಬ್ರಹ್ಮಾಂಡ ಪುರಾಣವೂ ಒಂದು. ಸಮಸ್ತ ಬ್ರಹ್ಮಾಂಡದ ವರ್ಣನೆ ಇರುವಂತಹ ಪುರಾಣ. ಆ ಪುರಾಣದ ಉತ್ತರಖಂಡದಲ್ಲಿ ಲಲಿತೋಪಾಖ್ಯಾನದ ವರ್ಣನೆ ವಿಸ್ತಾರವಾಗಿದೆ. ನೀವಿಲ್ಲಿ ಸಾಕಷ್ಟು ಮಂದಿ ಮಹಿಳೆಯರಿದ್ದೀರಿ. ಮಠದಲ್ಲಿ ನಿಮ್ಮಗೊಂದು ಉಪದೇಶ, ಆದೇಶವನ್ನು ನೀಡಲಾಗಿದೆ. ಕೆಲವು ವರ್ಷಗಳ ಹಿಂದೆ ಗುರುಪೀಠದದಿಂದ ನಿಮಗೆ ಲಲಿತಾಸಹಸ್ರನಾಮವನ್ನು ನೀಡಲಾಯಿತು. ಶತಕೋಟಿ ಕುಂಕುಮಾರ್ಚನೆ ನಡೆಯಿತು‌. ಮಠದಲ್ಲಿ ಲಲಿತಾಸಹಸ್ರನಾಮದ ಕುಂಕುಮಾರ್ಚನೆ ನೆರವೇರುತ್ತಿರುತ್ತದೆ‌. ಲಲಿತಾಸಹಸ್ರನಾಮ ಎಲ್ಲಿದೆ ಎಂಬ ಪ್ರಶ್ನೆ ಯಾವಾಗಲಾದರೂ ಹುಟ್ಟಿದೆಯಾ? ಅದರ ಆಧಾರ, ಮೂಲ ಯಾವುದು ಎಂದು ತಿಳಿದುಕೊಳ್ಳಬೇಕು. ಯಾವುದಕ್ಕೆ ಮೂಲವಿಲ್ಲ, ಆಧಾರವಿಲ್ಲವೋ ಅದು ಪ್ರಯೋಜನಕ್ಕೆ ಬರುವುದಿಲ್ಲ. ಲಲಿತಾಸಹಸ್ರನಾಮವು ಲಲಿತೋಪಾಖ್ಯಾನದ ಒಂದು ಭಾಗವಾಗಿದೆ. ಲಲಿತಾತ್ರಿಶತಿ, ಲಲಿತಾ ಅಷ್ಟೋತ್ತರ ತುಂಬಾ ಸುಂದರವಾಗಿದೆ. ಲಲಿತಾಸಹಸ್ರನಾಮವನ್ನು, ದೇವರ ತ್ರಿಶತಿಯನ್ನು, ಅಷ್ಟೋತ್ತರ ನೂರೆಂಟು ನಾಮಗಳನ್ನು ಇಷ್ಟು ಸುಂದರವಾಗಿ ಕಾವ್ಯ ವರ್ಣನೆ ಮಾಡುವುದನ್ನು ಬೇರೆ ಕಡೆ ಕಾಣುವುದಕ್ಕೆ ಸಾಧ್ಯವಿಲ್ಲ.


"ರಜತಾಚಲಶೃಂಗಾಗ್ರ ಮಧ್ಯಸ್ಥಾಯೈ ನಮೋ ನಮಃ", 

"ಹಿಮಾಚಲ ಮಹಾವಂಶ ಪಾವನಾಯೈ ನಮೋ ನಮಃ". ಅನುಷ್ಟುಪ್ ಛಂದಸ್ಸಿನ ಎರಡು ಪಾದಗಳು ಸೇರಿ ಒಂದು ನಾಮ. ಅರ್ಧ ಶ್ಲೋಕ ಒಂದು ನಾಮಕ್ಕೆ ತೆಗೆದುಕೊಂಡಿರುವಂತದ್ದು. ಕಥೆಗಳು ಮಧ್ಯದಲ್ಲಿದೆ. "ದಕ್ಷಪ್ರಜಾಪತಿಸುತ ವೇಷಾಡ್ಯಾಯೈ ನಮೋ  ನಮಃ". ಏನದು? ಕಥೆ ಅದು. ದಕ್ಷಪ್ರಜಾಪತಿಯ ಸುತೆ, ಸತಿಯ ವೇಷತಾಳಿ ಬಂದಿರುವಂತಹ ಕಥೆ. ಹಾಗಾಗಿ ಇಂಥಹ ಅದ್ಭುತವಾದ, ರಸವತ್ತಾದ, ಕಾವ್ಯಮಯವಾದ ಈ ದೇವಿಯ ನಾಮ ಸಂಪದ. ಸಹಸ್ರನಾಮ, ತ್ರಿಶತಿ, ಅಷ್ಟೋತ್ತರವೆಲ್ಲವೂ ಬ್ರಹ್ಮಾಂಡ ಪುರಾಣದಲ್ಲಿರುವಂತದ್ದು. ಆಕೆಯೇ ಬ್ರಹ್ಮಾಂಡ. ಹಾಗಾಗಿ ಅಲ್ಲಿಯ ಲಲಿತೋಪಾಖ್ಯಾನದ ಕುರಿತಾಗಿ ಈ ಪ್ರವಚನ ನಡೆಯುವಂತದ್ದು. ಯಾವ ವಿಷಯವನ್ನಾದರೂ ಯಾರು ಯಾರಿಗೆ ಹೇಳಿದರು ಎನ್ನುವುದು ಬಹಳ ಮುಖ್ಯ. ಜಪ ಮಾಡುವಾಗ ಋಷಿ, ಛಂದಸ್ಸು, ದೇವ, ದೇವತೆ ಅನುಸಂಧಾನ ಮಾಡದೆ ಜಪ ಮಾಡುವ ಕ್ರಮವಿಲ್ಲ. ಯಾಕೆಂದರೆ ಯಾರಿಂದ ಬಂತು ಆ ಮಂತ್ರ ಎಂದು ತಿಳಿದುಕೊಳ್ಳದೆ ಮಂತ್ರ ಪಠಿಸಿದರೆ ಫಲವಿಲ್ಲ. ಅದು ಅರ್ಥ ಪೂರ್ಣವಲ್ಲ. ಈ ಲೋಕಕ್ಕೆ ಬರಲು ಯಾರು ಕಾರಣರಾದರೋ ಅವರನ್ನು ನಾವು ನೆನಪು ಮಾಡಿಕೊಳ್ಳಬೇಕು. ವಿಶ್ವಮಿತ್ರ ಋಷಿಃ ಅವರ ಸ್ಮರಣೆಯನ್ನು ಮೊದಲು ಮಾಡಿಕೊಳ್ಳಬೇಕು. ಆ ಕಾರಣಕ್ಕಾಗಿ ಈ ಲಲಿತೋಪಾಖ್ಯಾನ ಎಲ್ಲಿಂದ ಬಂತು? ಯಾರು ಯಾರಿಗೆ ಹೇಳಿದರು ಎಂದು ಅರಿತಿರಬೇಕು. ಮಾತ್ರವಲ್ಲ‌ ನೀವು ವಿಶ್ವಾಸವನಿಡಬೇಕು ಎಂದರೆ, ನೀವು ನಂಬಬೇಕು ಎಂದರೆ ಯಾರು ಹೇಳಿದ್ದು ಮತ್ತು ಯಾರಿಗೆ ಹೇಳಿದ್ದು ಎನ್ನುವುದು ಬಹಳ ಮುಖ್ಯ. ಶಂಖದಿಂದ ಬಂದರೆ ತೀರ್ಥ. ಇಲ್ಲದಿದ್ದರೆ ಅದು ತೀರ್ಥವಾಗುವುದಕ್ಕೆ ಸಾಧ್ಯವಿಲ್ಲ. ಶಂಖಕ್ಕೆ ಆ ಗುಣವಿದೆ‌. ಅದರೊಳಗೆ ಬಿದ್ದ ನೀರು ಸಾಲಿಗ್ರಾಮಕ್ಕೆ ತಾಗಿ ಬಂದರೆ ತೀರ್ಥ ಎಂದೆನಿಸುಕೊಳ್ಳುತ್ತದೆ. ಹಾಗಾಗಿ ಶಂಖಕ್ಕೆ, ಸಾಲಿಗ್ರಾಮಕ್ಕೆ, ತುಳಸಿಗೆ, ಘಂಟೆಗೆ, ಪುರುಷಸೂಕ್ತಕ್ಕೆ ಯೋಗ್ಯತೆಯಿದೆ. ಇವೆಲ್ಲಾ ಸೇರಿದಾಗ ತೀರ್ಥ. ಪುರುಷಸೂಕ್ತದ ಮಂತ್ರವನ್ನು ಉಚ್ಚರಿಸುತ್ತಿರಬೇಕು, ಘಂಟೆ ತೂಗುತ್ತಿರಬೇಕು, ಸಾಲಿಗ್ರಾಮದ ಮೇಲೆ ತುಳಸಿಯಿರಬೇಕು ಶಂಖೋದಕವನ್ನು ಸಾಲಿಗ್ರಾಮದ ಮೇಲೆರಿಯಬೇಕು. ‌ಹಾಗೆ ಹರಿದು ಬಂದ ನೀರು ತೀರ್ಥ. ಎಲ್ಲಿಂದ ಬಂತು ಎಂಬುದು ತುಂಬಾ ಮುಖ್ಯ. ನಮ್ಮ ಮನೆಯ ಬಾವಿಯಲ್ಲಿರುವ ನೀರು ತೀರ್ಥವಾಗಿರುವುದಿಲ್ಲ.


ನಿಮ್ಮ ಮನೆಯಲ್ಲಿ ಅರಿಶಿಣ, ಅಕ್ಕಿ, ತುಪ್ಪ ಎಲ್ಲಾ ಇದೆ ನೀವೇ ಮಂತ್ರಾಕ್ಷತೆಯನ್ನು ಮಾಡಿಕೊಳ್ಳಬಹುದು. ಆದರೆ ಗುರುಗಳನ್ನು ಹುಡುಕಿಕೊಂಡು ಬರುವುದೇಕೆ? ಮಾಣಿಮಠಕ್ಕೋ ಅಶೋಕೆಗೆ ಬಂದು ಸಾಲಿನಲ್ಲಿ ನಿಂತು ಇಷ್ಟೆಲ್ಲಾ ಯಾಕೆ? ಮನೆಯಲ್ಲಿ ಯಾಕೆ ಮಂತ್ರಾಕ್ಷತೆ ಮಾಡಿಕೊಳ್ಳಬಾರದು? ಯಾಕೆಂದರೆ ಮಂತ್ರಾಕ್ಷತೆ ಎಲ್ಲಿಂದ ಬಂತು ಎಂಬುದು ಮುಖ್ಯ. ಯಾರ ಕೈಯಿಂದ ಬಂತು, ಯಾರ ಕಡೆಯಿಂದ ಬಂತು ಯಾರ ಸಂಕಲ್ಪ ಪೂರಕವಾಗಿ ಬಂತು. ಆಗ ಮಂತ್ರಾಕ್ಷತೆಗೆ ಶಕ್ತಿ. ಅದಿಲ್ಲದಿದ್ದರೆ ಅದು ಅಕ್ಕಿ ಅಥವ ಅರಿಶಿಣ ಅಷ್ಟೇ. ಅಕ್ಕಿಗೆ, ಅರಿಶಿಣಕ್ಕೆ ಇರುವ ಗುಣ ಇರಬಹುದು. ಆದರೆ ಮಂತ್ರಾಕ್ಷತೆಗಿರುವ ಗುಣ ಬರುವುದಕ್ಕೆ ಸಾಧ್ಯವಿಲ್ಲ. ಅದು ಗುರುಹಸ್ತದಿಂದ ಗುರುಗಳ ಸಂಕಲ್ಪ ಪ್ರೇರಿತವಾಗಿ ಬಂದರೆ ಅದಕ್ಕೆ ಯೋಗ್ಯತೆಯಿದೆ. ಒಂದು ವೇಳೆ ಗುರಿಕ್ಕಾರರಿಂದ ಬಂದರೂ ಅದು ಗುರುಗಳು ಸಂಕಲ್ಪದಿಂದ ಬಂದಿರುತ್ತದೆ.



ಈ ಲಲಿತೋಪಾಖ್ಯಾನ ಹಯಗ್ರೀವನಿಂದ ಬಂದಿರುವಂತದ್ದು. ಹಾಗಾಗಿ ನಾವು ಆರಂಭದಲ್ಲಿ ಹಯಗ್ರೀವ ಸ್ಮರಣೆಯನ್ನು ಮಾಡಿದ್ದೇವೆ. ಹಯಮುಖ ಮಹಾವಿಷ್ಣು ಅಲ್ಲಿಂದ ಬಂದಿರುವಂತದ್ದು. ಹಯಗ್ರೀವ ಅಂದರೆ ವಿದ್ಯಾದಿರಾಜ, ಎಲ್ಲಾ ವಿದ್ಯೆಗಳೂ ಅವನಿಂದ ಹರಿದು ಬಂದಿದೆ. "ಜ್ಞಾನಾನಂದಮಯಂ ದೇವಂ ನಿರ್ಮಲಸ್ಪಟಿಕಕೃತಿಮ್".


 

ಜ್ಞಾನದಿಂದ ಬರುವ ಆನಂದ ಅದು ಅವನ ಸ್ವರೂಪ. ಸ್ಫಟಿಕದಂತೆ ನಿರ್ಮಲವಾಗಿದೆ ಅವನ ಆಕೃತಿ. ಅಲ್ಲಿ ಪಾಪವಿಲ್ಲ ದೋಷವಿಲ್ಲ. ಅದು ಅನಘ. "ಆಧಾರಾಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ". ಅವನಿಂದ ಬಂತು ಶ್ರೀವಿದ್ಯೆ. ಲಲಿತಾಪರಮೇಶ್ವರಿಯ ವಿಚಾರ, ತ್ರಿಪುರ ಸುಂದರಿಯ ವಿಷಯ ಅದನ್ನು ಶ್ರೀವಿದ್ಯೆ ಎಂದು ಕರೆಯುತ್ತಾರೆ. ಅದು ವಿದ್ಯಾದಿರಾಜನಿಂದ ಬಂದಿರುವಂತದು. 

"ವಿಶುದ್ಧ ವಿಜ್ಞಾನ ಘನಸ್ವರೂಪಂ

ವಿಜ್ಞಾನವಿಶ್ರಣನ ಬದ್ಧದೀಕ್ಷಂ|

ದಯಾನಿಧಿಂ ದೇಹಭೃತಾಂ ಶರಣ್ಯಂ

ದೇವಂ ಹಯಗ್ರೀವಂ ಅಹಂ ಪ್ರಪದ್ಯೇ||"

ವಿಶುದ್ಧ ವಿಜ್ಞಾನವೇ ಅವನ ಸ್ವರೂಪವಂತೆ. ಜ್ಞಾನ ವಿಜ್ಞಾನಗಳನ್ನು ವಿತರಣೆ ಮಾಡುವುದೇ ಅವನ ಸಂಕಲ್ಪ.

ಅವನು ದಯೆಯ‌ ನಿಧಿಯಂತೆ, ನಮ್ಮಗೆಲ್ಲಾ ಅವನೇ ಆಶ್ರಯನಂತೆ, ಎಲ್ಲಾ ಜೀವಿಗಳಿಗೂ ಅವನೇ ರಕ್ಷಕ ಅಂತಹ ಹಯಗ್ರೀವನಿಗೆ ಶರಣಾಗಿ ಮುಂದುವರೆಯಬೇಕು. ಮತ್ತೆ ದೇವರೆಲ್ಲಾ ಬೇರೆ ಬೇರೆ ಕಂಡರೂ ಅಂತರ್ಗತವಾಗಿ ಎಲ್ಲರೂ ಒಂದೇ. "ಏಕಂ  ಸದ್ವಿಪ್ರಾ ಬಹುಧಾ ವದಂತಿ". 

ಈ ಶೈವರು, ವೈಷ್ಣವರೆಲ್ಲಾ ಸುಮ್ಮನೆ ಕಿತ್ತಾಡುವುದು. 

ಶಿವ ಮತ್ತು ವಿಷ್ಣು ಒಂದೇ ಆಗಿರುತ್ತಾರೆ. ಶಿವ ಮತ್ತು ವಿಷ್ಣುವಿನ ನಡುವೆ ಕಲಹವಿಲ್ಲ. ಆದರೆ ಶೈವ ಮತ್ತು ವೈಷ್ಣವರ ನಡುವಿನ ಕಲಹ ತಪ್ಪಿದ್ದಲ್ಲ. ಗೋಕರ್ಣದ ಆತ್ಮಲಿಂಗ ನೋಡಿ, ಸಾಲಿಗ್ರಾಮದ ಪೀಠ ಇದೆ. ಅದು ವಿಷ್ಣುಮಯ, ಅದರ ಮಧ್ಯದಲ್ಲಿ ಆತ್ಮಲಿಂಗವಿದೆ, ಅದು ಶಿವ ಸ್ವರೂಪ. ನಾವು ಪೂಜೆ ಮಾಡುವಾಗ ಶಿವನನ್ನು ಬಿಟ್ಟು ವಿಷ್ಣುವಿಗೆ ಅಥವಾ ವಿಷ್ಣುವನ್ನು ಬಿಟ್ಟು ಶಿವನಿಗೂ ಪೂಜೆ ಮಾಡಲಾಗುವುದಿಲ್ಲ. ಅಲ್ಲಿಯ ಪೂಜಾ ಮಂತ್ರದಲ್ಲಿ ವಿಷ್ಣು ಮಂತ್ರ ಹಾಗೂ ರುದ್ರ ಮಂತ್ರ ಎರಡೂ ಇದೆ. ಹಾಗೆಯೇ ಮಹಾವಿಷ್ಣು ಹಾಗೂ ಲಲಿತಾ ತ್ರಿಪುರಸುಂದರಿ ಮೇಲುನೋಟಕ್ಕೆ ಅದೆಲ್ಲೋ ಇದೆಲ್ಲೋ ಅನ್ನಿಸಬಹುದು. ಆದರೆ ಅವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ತ್ರಿಪುರ ಸುಂದರಿ ವಿಷ್ಣುಮಾಯೆ ಅನ್ನುವುದು ಮುಂದಿನ ಆಖ್ಯಾನಗಳಲ್ಲೂ ಕಾಣಲಿದ್ದೀರಿ. ತ್ರಿಪುರ ಸುಂದರಿಯ ಆಖ್ಯಾನವನ್ನು, ಶ್ರೀಚಕ್ರವನ್ನು ಜಗತ್ತಿಗೆ ನೀಡಿದವನು ಹಯಗ್ರೀವ ರೂಪಿ ಮಹಾವಿಷ್ಣು. ಅಲ್ಲಿಂದ ಆ ಸಂಬಂಧ ಶುರುವಾಯಿತು. ಇನ್ನು ಆತ ಹೇಳಿದ್ದು ಅಗಸ್ತ್ಯರಿಗೆ. ಸೂರ್ಯನನ್ನೇ ಮುಚ್ಚಿ ಕತ್ತಲೆಯನ್ನು ಮಾಡುವಂತಹ ವಿಂಧ್ಯ ಪರ್ವತವನ್ನು ತಡೆದು ಅಲ್ಲಿಯೇ ನಿಲ್ಲಿಸಿದವರು ಅಗಸ್ತ್ಯರು. ಅಗ (ಪರ್ವತ)ವನ್ನು ಸ್ತಬ್ಧಗೊಳಿಸಿದವರು. ಅವರ ಪ್ರಭಾವ ಅತ್ಯದ್ಭುತ.


ವಾತಾಪಿ ಇಲ್ವಲರ ಕಥೆಯು ನಿಮಗೆಲ್ಲ ತಿಳಿದಿದೆ. ಇಲ್ವಲನ ತಮ್ಮ ಆಡಿನ ರೂಪ ತಾಳುವ ಶಕ್ತಿ ಹೊಂದಿದ್ದರಿಂದ ಆತನನ್ನೇ ಕತ್ತರಿಸಿ ಅಡುಗೆ ಮಾಡಿ ಇಲ್ವಲ ಇತರರಿಗೆ ಉಣಬಡಿಸುತ್ತಿದ್ದ. ಊಟದ ನಂತರ 'ವಾತಾಪಿ ನಿಷ್ಕ್ರಮಸ್ವ' ಎಂದು ಇಲ್ವಲ ಹೇಳಿದಾಗ ತಿಂದವರ ಉದರವನ್ನು ಬಗೆದು ವಾತಾಪಿ ಹೊರಬರುತ್ತಿದ್ದ. ಹೀಗೆ ಅದೆಷ್ಟೋ ಜನರ ಹತ್ಯೆ ಮಾಡಿದ ವಾತಾಪಿಯನ್ನೇ ಜೀರ್ಣ ಮಾಡಿದವರು ಅಗಸ್ತ್ಯ ಮುನಿಗಳು. ಈ ಕಥೆಯ ಪ್ರಾಮುಖ್ಯತೆ ಏನೆಂದರೆ ವಾತಾಪಿ ಒಬ್ಬ ರಾಕ್ಷಸ. ಪಾಪದ ಮೂರ್ತಿ ರೂಪ ರಾಕ್ಷಸ ಜನ್ಮ. ಅಂತಹ ರಾಕ್ಷಸನನ್ನು, ಮಹಾಪಾಪವನ್ನು ಜೀರ್ಣಿಸಬಲ್ಲ ಮಹಾತೇಜಸ್ವಿ ಅಗಸ್ತ್ಯಮುನಿಗಳು. ಅಗ್ನಿಯ ಬಗ್ಗೆ ಆಯುರ್ವೇದದಲ್ಲಿ ಬಹಳ ಉಲ್ಲೇಖಗಳಿವೆ. ಅದು ಸರಿಯಾಗಿದ್ದರೆ ಉಳಿದದ್ದೆಲ್ಲ ಸರಿಯಾಗಿರುತ್ತದೆ. ಅಗ್ನಿಯು ಹೇಗಿರಬೇಕೆಂದರೆ ಕಲ್ಲನ್ನು ತಿಂದರೂ ಜೀರ್ಣವಾಗುವಂತೆ ಇರಬೇಕು. ಅಗಸ್ತ್ಯರ ಉದಾಹರಣೆ ಕೊಡುವುದಾದರೆ ಅಗ್ನಿಯು ಅಗಸ್ತ್ಯರ ಅಗ್ನಿಯಂತಿರಬೇಕು. ಈಗ ನಮ್ಮ ಪರಿಸ್ಥಿತಿ ಒಂದು ಲೋಟ ಹಾಲು ಜಾಸ್ತಿಯಾದರೆ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮಲ್ಲಿಲ್ಲ. ತಿನ್ನುವಾಗ ಬೇಕೆನಿಸಿ ತಿಂದರೆ ಆಮೇಲೆ ಹೊಟ್ಟೆನೋವು. ಆದರೆ ಅಗಸ್ತ್ಯರ ಅಗ್ನಿಯು ಹಾಗಿರಲಿಲ್ಲ. ಶ್ರೀರಾಮಚಂದ್ರ ತಮ್ಮ ಲಕ್ಷ್ಮಣನಿಗೆ ಅಗಸ್ತ್ಯರ ಬಗ್ಗೆ ವರ್ಣನೆ ಮಾಡುವಾಗ ಯಾವ ಮಹಾಮುನಿ ದಕ್ಷಿಣಕ್ಕೆ ಬಂದ ನಂತರ, ರಾಕ್ಷಸರು ದಕ್ಷಿಣವನ್ನು ಭಯದಿಂದ ತಿರುಗಿ ನೋಡಿ ಆ ದಿಕ್ಕಿಗೆ ಬರಲಿಲ್ಲವೋ ಅವರೇ ಅಗಸ್ತ್ಯರು ಎಂದು ವರ್ಣಿಸಿದ.


ಹದಿನಾಲ್ಕು ವರ್ಷ ವನವಾಸ ಮಾಡಿದ ಶ್ರೀರಾಮಚಂದ್ರ ಅಗಸ್ತ್ಯರ ಆಶ್ರಮವನ್ನು ಮಾತ್ರ ತಾನೇ ಅರಸಿ, ಹುಡುಕಿ ಭೇಟಿಮಾಡಿದ. ಅಗಸ್ತ್ಯರು ರಾಮನನ್ನು ಕರೆಯದಿದ್ದರೂ ಆತ ಬಂದಾಗ ನಿನ್ನ ನಿರೀಕ್ಷೆಯಲ್ಲಿ ನಾನಿದ್ದೆ ಎಂದರು. ಅವರ ಆಶ್ರಮವಾದರು ಹೇಗಿತ್ತು? ಅಲ್ಲಿ ಬ್ರಹ್ಮ, ಇಂದ್ರ, ಅಗ್ನಿ, ವರುಣ, ಗಾಯತ್ರಿ, ಅನಂತರ ಪ್ರತ್ಯೇಕ ಸ್ಥಾನಗಳಿದ್ದವು. ಈ ವಿಶ್ವವನ್ನು ನಡೆಸುವಂತಹ ಮಹಾಶಕ್ತಿಗಳೆಲ್ಲ ಅವರ ಆಶ್ರಮದಲ್ಲಿ ಬಂದು ನೆಲೆಸಿದ್ದರು. ದೇವತೆಗಳೇ ಸ್ತುತಿಸುವಂತಹ ಮುನಿ ಅಗಸ್ತ್ಯರು. ರಾಮಾಯಣದ ಮುಖ್ಯ ಅಂಶವಾದ ರಾವಣ ವಧೆಯ ಸೂತ್ರಧಾರಿ ಅವರು. ಅಗಸ್ತ್ಯರ ಬಳಿ ರಾಮ ನೆಲೆಗಾಗಿ ಜಾಗ ಕೇಳಿದಾಗ ಶೂರ್ಪನಖಿ ಬರುವ ವಿಷಯವನ್ನು ಅರಿತು ಆತನನ್ನು ಪಂಚವಟಿಗೆ ಕಳುಹಿಸಿದರು. ಖರ-ದೂಷಣರ ಸಂಹಾರ, ಶೂರ್ಪನಖಿಯ ದೂರನ್ನು ಕೇಳಿ ರಾವಣ ಬರುವ ವಿಷಯ ಅವರಿಗೆ ತಿಳಿದಿತ್ತು. ಸೀತಾಪಹರಣದ ಕಾರಣ ರಾಮನೇ ಲಂಕೆಗೆ ಹೋಗುವನೆಂದು ಅಗಸ್ತ್ಯರು ತಿಳಿದಿದ್ದರು. ಹಾಗಾಗಿ ಹೋಗುವ ಮುನ್ನವೇ ವೈಷ್ಣವ ಧನಸ್ಸನ್ನು, ರಾವಣ ವಧೆಗೆ ಬೇಕಾದ ಬಾಣಗಳನ್ನು ರಾಮನಿಗೆ ನೀಡಿ ಪಂಚವಟಿಯತ್ತ ಕಳುಹಿಸಿದರು. ರಾಮನಿಗೆ ಅಗಸ್ತ್ಯರಿಗೆ ಗಾಢವಾದ ಸಂಬಂಧ. ರಾವಣ ಸಂಹಾರದಲ್ಲಿ ರಾಮನಿಗೆ ಯುದ್ಧ ಭೂಮಿಯಲ್ಲಿ ಆದಿತ್ಯ ಹೃದಯ ಉಪದೇಶ ಮಾಡಿದವರು ಸಹ ಅಗಸ್ತ್ಯರು. ಹಾಗಾಗಿ ರಾಮನಿಗೆ ಸಂಬಂಧಿಸಿದ ಮಂತ್ರಗಳು, ಉಪನಿಷತ್ತುಗಳು, ಅಗಸ್ತ್ಯರಿಂದಲೇ ಬಂದಿದೆ. 


ನಮ್ಮ ರಾಮಚಂದ್ರಾಪುರಮಠದ ಪೂಜಾ ವಿಗ್ರಹಗಳಾದ ಸೀತಾರಾಮಚಂದ್ರ ಚಂದ್ರಮೌಳೀಶ್ವರ, ರಾಜರಾಜೇಶ್ವರಿ ಮೂರ್ತಿ ನೀಡಿದವರೂ ಅಗಸ್ತ್ಯ ಮುನಿಗಳು. ನಮಗೂ ಅವರಿಗೂ ಅವಿನಾಭಾವ ಸಂಬಂಧ. ಅವರಾದರೂ ಇಂತಹ ಶಕ್ತಿಯುಳ್ಳವರು. ರಾಮನಿಗೂ, ಲಲಿತೆಗೂ ಅವರೇ ದ್ವಾರ. ಲೋಕೋದ್ಧಾರಕ್ಕಾಗಿ ಎಷ್ಟು ಮಹಾದೇವತೆಗಳಿಗೆ, ಮಹೋಪಾಸನೆಗಳಿಗೆ ದ್ವಾರವಾದರು. ಶಿವನಿಗೂ ಬಹಳ ಹತ್ತಿರ ಅವರು. ಕೈಲಾಸದಲ್ಲಿ ಈಶ್ವರ ಪಾರ್ವತಿಯರ ಮದುವೆ ನಡೆಯುವಾಗ ಬ್ರಹ್ಮಾಂಡವೆಲ್ಲ ಅಲ್ಲಿಯೇ ಸೇರಿ ಸೃಷ್ಟಿಯಲ್ಲಿ ಅಸಮತೋಲನ ಉಂಟಾಯಿತು. ಆಗ ಉತ್ತರದಲ್ಲಿ ಇದ್ದ ತೂಕಕ್ಕೆ ಸರಿಹೊಂದುವಂತೆ ದಕ್ಷಿಣಕ್ಕೆ ಬಂದವರು ಅಗಸ್ತ್ಯರು. ಇಡೀ ಬ್ರಹ್ಮಾಂಡವನ್ನು ಒಂದು ಕಡೆಯಲ್ಲಿ ಇರಿಸಿ, ಅದಕ್ಕೆ ಸರಿಹೊಂದುವಂತೆ ಮತ್ತೊಂದು ಕಡೆ ಅಗಸ್ತ್ಯರು ಇದ್ದರು ಎನ್ನುವಾಗ ಎಂತಹ ತೂಕ ಅವರದ್ದು. 



ದೇವ ದೇವತೆಗಳಿಗೆಲ್ಲ ಸಮನಾದ ಅಗಸ್ತ್ಯರು ಲೋಕಸಂಚಾರ ಕೈಗೊಂಡರು. ಮಹಾತ್ಮರು ಒಂದು ಹೆಜ್ಜೆ ಎತ್ತಿಟ್ಟರೂ ಅದರ ಹಿಂದೆ ಕಾರಣ ಇರುತ್ತದೆ. ಆ ಕಾರಣ ನಮಗೆ ತಿಳಿಯಬಹುದು ಅಥವಾ ತಿಳಿಯದಿರಬಹುದು. 'ನ ಸ್ವಪ್ನೇಪಿ ವೃಥಾ ಚೇಷ್ಟತೆ' ಎಂದು ಚಾಣಕ್ಯನ ಬಗ್ಗೆ ಹೇಳುತ್ತಾರೆ. ಚಾಣಕ್ಯ ಸ್ವಪ್ನದಲ್ಲಿಯೂ ಕಾರಣವಿಲ್ಲದೇ ಒಂದು ಚಲನೆಯನ್ನು ಮಾಡುವುದಿಲ್ಲ. ನಾವು ನಿದ್ದೆಯಲ್ಲಿ ಮಾಡುವ ಚಲನೆಗಳಿಗೆ ಕಾರಣ ಕೊಡಲಿಕ್ಕಾಗುವುದಿಲ್ಲ. ಆದರೆ ಚಾಣಕ್ಯನ ಪ್ರತಿ ಚಲನೆಗೂ ಕಾರಣವಿತ್ತು ಎನ್ನುವುದಾಗಿ ಹೇಳುತ್ತಾರೆ. ಶಾಸ್ತ್ರಗಳು ಹೇಳುತ್ತವೆ: ಆ ಚತುರ್ಥಾತ್ ಕರ್ಮಣ ಅಂದರೆ, ನಾವು ಒಂದು ಹೆಜ್ಜೆ ಇಟ್ಟರೆ ಮುಂದಿನ ನಾಲ್ಕು ಹೆಜ್ಜೆ ನೋಡಿ ಇಡಬೇಕು. ಚದುರಂಗದ ಆಟ ಜೀವನ. ಹಾಗೆ ಅಗಸ್ತ್ಯರು ಲೋಕ ಸಂಚಾರ ಮಾಡಿದರೆ ಲೋಕಕ್ಕೆ ಮಹಾಶುಭವಾಗಲಿದೆ ಎಂದರ್ಥ. ಅವರಿಗೆ ತಿಳಿಯದಿರುವುದು ಏನಿದೆ? ಮತ್ತೆ ಏಕೆ ಲೋಕ ಸಂಚಾರ ಎಂದರೆ ದಯೆಯಿಂದ ಅವರು ತೀರ್ಥ ಕ್ಷೇತ್ರಗಳು, ದೇವಾಲಯ, ಗ್ರಾಮ, ನಗರ, ಶೈಲ, ಪರ್ವತಗಳನ್ನೆಲ್ಲ ಸಂಚಾರ ಮಾಡುತ್ತಾರೆ. ಆಗ ಅವರು ಜಗತ್ತಿನ ತುಂಬಾ ನೋಡಿದ್ದು ಕೇವಲ ನೋವು ಮಾತ್ರ. ಕೆಲವರಿಗೆ ಹೆಚ್ಚು ಇನ್ನೂ ಕೆಲವರಿಗೆ ಕಡಿಮೆ ಆದರೆ ನೋವಿಲ್ಲದವರು ಯಾರಿಲ್ಲ. ಹಾಗಾಗಿ ಆ ಲೋಕ ಕಾರುಣಿಕನಿಗೆ ಜೀವಗಳ ನೋವಿನ ಚಿಂತೆಯಾಯಿತು. ಇವರು ನೆಮ್ಮದಿ ಪಡೆಯುವ ದಾರಿ ಏನು ಎನ್ನುವ ಚಿಂತೆ ಅವರನ್ನು ಕಾಡಿತು. ಹೀಗೆ ಚಿಂತಿಸುತ್ತಾ ಅವರು ಬಂದು ನಿಂತಿದ್ದು ಕಾಂಚಿ ಕ್ಷೇತ್ರದಲ್ಲಿ. ಭೂಮಿಯನ್ನು ಭೂದೇವಿಯ ರೂಪದಲ್ಲಿ ಕಾಣುವುದಾದರೆ ಕಾಂಚಿ ಆಕೆಯ ಸೊಂಟದ ಡಾಬಿನ ಜಾಗದಲ್ಲಿ ಬರುತ್ತದೆ. ಅಲ್ಲಿ ಏಕಾಂಬರೇಶ್ವರ, ಕಾಮಾಕ್ಷಿಯರ ಸನ್ನಿಧಿಯಿದೆ. ಅಲ್ಲಿ ಶಿವನ ದರ್ಶನ, ಕಾಮಾಕ್ಷಿ ಪೂಜೆ ಹಾಗೆ ಜನಾರ್ದನನ ಕುರಿತು ತಪಸ್ಸು ಮಾಡುತ್ತಾರೆ. ತಪಸ್ಸಿಗೆ ಒಲಿದು ಜನಾರ್ದನ ದರ್ಶನ ಕೊಡುತ್ತಾನೆ. ಆದರೆ ಆತನ ನಿಜ ಸ್ವರೂಪವನ್ನು ಬಿಟ್ಟು ಹಯಗ್ರೀವದ ರೂಪದಲ್ಲಿ ದರ್ಶನ ಕೊಡುತ್ತಾನೆ.


ಹೇಗೆ ತಾಯಿ ಅವರವರ ರುಚಿಗೆ ತಕ್ಕಂತೆ ಆಹಾರ ಬಡಿಸುತ್ತಾಳೋ ಹಾಗೇ ದೇವರು ತನ್ನ ರೂಪವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಬದಲಿಸುತ್ತಾರೆ. ವಿದ್ಯಾ ರೂಪವಾದ ಹಯಗ್ರೀವನಿಂದ ಜಗತ್ತಿಗೆ ವಿದ್ಯಾನುಗ್ರಹ ಆಗುವ ಸೂಚನೆ ಆ ಅವತಾರ. ಅಗಸ್ತ್ಯರು ತನಗಾಗಿ ಏನನ್ನು ಕೇಳಲಿಲ್ಲ. ಅವರು ಪೂರ್ಣರು. ಅವರು ಕೇಳಿದ್ದೇನೆಂದರೆ ಲೋಕ ಕಷ್ಟ ಪರಿಹಾರವಾಗುವ ದಾರಿ. ಆ ಅನುಗ್ರಹವನ್ನು ಅಗಸ್ತ್ಯರು ಕೇಳಿದರು. ಸ್ವಂತಕ್ಕೆ ಒತ್ತು ಕಡಿಮೆಯಾದರೆ ಸಂತ. ಯಾರು ಸ್ವಂತಕ್ಕೆ ಕಡಿಮೆ ಮಾಡಲಿಲ್ಲ ಆತ ಇಂತಹ ಪೀಠದಲ್ಲಿ ಇದ್ದರೂ ಸಂತನಲ್ಲ. ಒಬ್ಬ ವ್ಯಕ್ತಿ ಸ್ವಂತಕ್ಕೆ ಒತ್ತು ಕಡಿಮೆ ಮಾಡಿದಲ್ಲಿ, ಖಾವಿ ಬಟ್ಟೆಯನ್ನು ತೊಟ್ಟುಕೊಳ್ಳದಿದ್ದರೂ ಸಹ ಆತ ಸಂತ ಎನಿಸಿಕೊಳ್ಳುತ್ತಾನೆ. ಯಾರಲ್ಲಿ ಸ್ವಾರ್ಥ ಇರುವುದಿಲ್ಲವೋ, ಯಾರಲ್ಲಿ ಪರಾರ್ಥ ಜಾಗೃತವಾಗಿರುತ್ತದೋ ಆತನೇ ಸಂತ. ಈ ಎಲ್ಲಾ ಲಕ್ಷಣಗಳೂ ನಮಗೆ ಅಗಸ್ತ್ಯರಲ್ಲಿ ಕಾಣಸಿಗುತ್ತದೆ. ಲಲಿತಾ ಸಹಸ್ರನಾಮ, ತ್ರಿಶತಿ, ಅಷ್ಟೋತ್ತರ, ಶ್ರೀವಿದ್ಯೆ, ಶ್ರೀಚಕ್ರೋಪಾಸನೆ, ಸೌಂದರ್ಯ ಲಹರೀ ಮುಂತಾದವುಗಳು ನೋವಿನಿಂದ ಅಥವಾ ಕಷ್ಟಗಳಿಂದ ಬಿಡುಗಡೆ ಪಡೆಯುವ ದಾರಿಗಳು. ಇಂತಹದೊಂದು ದಾರಿಯನ್ನು ಅಗಸ್ತ್ಯರು ಸೋಪಾನ ಕಟ್ಟಲಿಕ್ಕೆ ಬಯಸುತ್ತಾರೆ. ಅಗಸ್ತ್ಯರಂತು ಪರಮವ್ಯೋಮವನ್ನು ಹಾರಿಯೇ ಸೇರುತ್ತಾರೆ. ಆದರೆ ಉಳಿದವರ ಪಾಡೇನು?! ಹಾಗಾಗಿ ಅಂಥಹದೊಂದಕ್ಕಾಗಿ ಅಗಸ್ತ್ಯರು ಕೇಳ್ತಾ ಇದ್ದಾರೆ. ಅದಕ್ಕೆ ಹಯಗ್ರೀವ ಹೇಳುತ್ತಾನೆ -


ಇದೇ ಪ್ರಶ್ನೆಯನ್ನು ಹಿಂದೆ  ಸೃಷ್ಟಿಕರ್ತ ಬ್ರಹ್ಮನು ಸಂಹಾರಕರ್ತನಾದಂತಹ ಶಿವನು ಹಾಗೆ ದೂರ್ವಾಸ ಮುನಿಗಳು ಸಹ ಕೇಳಿರುತ್ತಾರೆ. ಈಗ ನಿನ್ನ ಮೂಲಕ ನಾನು ಸಂಪೂರ್ಣ ಜೀವಸಂಕುಲಕ್ಕೇ ಏನು ಮಾಡಿದರೆ ಜೀವಿಗಳ ಕಷ್ಟ ಪರಿಹಾರವಾಗುತ್ತದೆಂದು ಹೇಳುತ್ತೇನೆ!

ಈ ಪ್ರಪಂಚದಲ್ಲಿ ಇರುವುದು ಎರಡೇ ವಿಷಯಗಳು, ಒಂದು  ಪುರುಷ, ಇನ್ನೊಂದು ಪ್ರಧಾನ. ಪ್ರಧಾನ ಎಂದರೆ ಸಾಂಖ್ಯದ ಪರಿಭಾಷದ ಪ್ರಕಾರ ಪ್ರಕೃತಿ ಎಂದರ್ಥ, ಪ್ರಕೃತಿಯೊಳಗಿನ ಚೈತನ್ಯವೇ ಪುರುಷ. ನಮ್ಮ ಪಾಂಚಭೌತಿಕ ಶರೀರ ಪ್ರಕೃತಿಯಾದರೆ, ಇದರೊಳಗಿನ ಚೈತನ್ಯವೇ ಪುರುಷ. ಯಾರಿಗೆ ಈ ಪ್ರಕೃತಿ ಮತ್ತು ಪುರುಷ ಇದರ ವಿವೇಚನೆ ಮಾಡಲು ತಿಳಿಯುತ್ತದೋ, ಆತ ಸರ್ವ ದುಃಖಗಳಿಂದ ಸಹ ವಿಮೋಚನೆಯನ್ನು ಪಡೆದುಕೊಳ್ಳುತ್ತಾನೆ. ಹಾಗೆಯೇ ಇನ್ನೊಂದು ದಾರಿಯನ್ನು ಕೂಡ ಹಯಗ್ರೀವ ಹೇಳುತ್ತಾನೆ, ಅದೇ ಪರಾಶಕ್ತಿಯ ಧ್ಯಾನ. ಪುಣ್ಯಾತ್ಮರು ಪರಾಶಕ್ತಿಯ ಆರಾಧನೆಯಿಂದ, ಕಷ್ಟಗಳಿಂದ ಮುಕ್ತವಾಗುತ್ತಾರೆ - ಇದು ಸಾಮಾನ್ಯ ಸಂಗತಿ. ಆದರೆ ಇದು ಮಾತ್ರವಲ್ಲ; ಪಾಪಿಗಳು, ವರ್ಣಾಶ್ರಮ ವಿಹೀನರು, ಪಥಭ್ರಷ್ಟರೂ ಕೂಡ ಪರಾಶಕ್ತಿಯ ರೂಪವನ್ನು ಧ್ಯಾನಿಸಿದರೆ, ಆ ಪಾಪಗಳೆಲ್ಲಾ ಪುಣ್ಯವಾಗಿ ಪರಿವರ್ತನೆಯಾಗುತ್ತದೆ.


"ಯದ್ರೂಪ ಧ್ಯಾನ ಮಾತ್ರೇಣ ದುಷ್ಕೃತಮ್ ಸುಕೃತಾಯ ತೇ ". 'ಪುಣ್ಯೇನ  ಪುಣ್ಯಂ ಲೋಕಂ ನಯತಿ, ಪಾಪೇನ ಪಾಪಂ, ಉಭಾಭ್ಯಂ ಮನುಷ್ಯ ಲೋಕಮ್' ಹಾಗಾಗಿ ನಮ್ಮಲ್ಲಿ ಪಾಪ-ಪುಣ್ಯ ಎರಡೂ ಇದೆ. ಎಂಥವರಿಗೂ ಸಹ ಇರುವ ಮಾರ್ಗವೆಂದರೆ ಅದು ತ್ರಿಪುರ ಸುಂದರಿಯ ಮಾರ್ಗ, ಶ್ರೀವಿದ್ಯೆಯ ಮಾರ್ಗ! 'ವಿಧಿನಾ ಅವಿಧಿನಾ ಅಪಿ ವಾ' ವಿಧಿವತ್ತಾಗಿ ಆಗಲಿ, ವಿಧಿಹೀನವಾಗಿಯೇ ಆಗಲಿ ಪರಾಶಕ್ತಿ ತ್ರಿಪುರ ಸುಂದರಿಯ ಪೂಜೆಯನ್ನು ಮಾಡಿದಲ್ಲಿ ಅದಕ್ಕೆ ಮಹತ್ತರವಾದ ಫಲವಿದೆ. ಪಾಪವೂ ಪುಣ್ಯವಾಗಿ ಪರಿವರ್ತನೆ ಹೊಂದಬಹುದು, ಪಾಪಿಯೂ ಕೂಡ ಉದ್ಧಾರವಾಗಬಹುದು.



ಭೋಗ ಮತ್ತು ಮೋಕ್ಷಗಳ ಸಮನ್ವಯದ ಕುರಿತು ಹಯಗ್ರೀವ ಹೇಳುತ್ತಾನೆ- "ತಸ್ಮಾತ್ ಅಶೇಷ ಲೋಕಾನಾಮ್ ತ್ರಿಪುರಾರಾಧನಂ ವಿನಾ ನಷ್ಟೌ ಭೋಗೋಪವರ್ಗವತು ಯೌಗಪದ್ಯೇನ ಕುತ್ರಚಿತ್"

ಮೋಕ್ಷದ ಕುರಿತು ಪ್ರಯತ್ನ ಮಾಡುವವನಿಗೆ ಇಹದಲ್ಲಿ ಸುಖವಿರುವುದಿಲ್ಲ, ಇನ್ನು ಇಹದಲ್ಲಿ ಸ್ವಚ್ಛಂದವಾಗಿರುವವನಿಗೆ ಅಂದರೆ ಭೋಗಿಗಳಿಗೆ ಪರದಲ್ಲಿ ಸುಖವಿಲ್ಲ. ಆದರೆ ತ್ರಿಪುರ ಸುಂದರಿಯ ಉಪಾಸನೆ ಒಂದು ಮಾತ್ರದಿಂದಲೇ ಇಹ ಹಾಗೂ ಪರ ಎರಡರಲ್ಲೂ ಸುಖವಿದೆ. ಹಾಗಾಗಿ ಲಲಿತೋಪಾಸನೆಯೇ ಎಲ್ಲದಕ್ಕೂ ದಾರಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top