ನ್ಯಾಯವಾದಿ ವಿ.ಎಸ್.ಧನಂಜಯಕುಮಾರ್ ಅಭಿಮತ
ಕೆ.ಆರ್.ಪೇಟೆ: ಪೌರಾಣಿಕ ನಾಟಕಗಳು ಮನುಷ್ಯನ ಉತ್ತಮ ಬದುಕಿಗೆ ಮಾರ್ಗದರ್ಶನ ಸೂತ್ರವಾಗಿವೆ. ಸತ್ಯ, ನ್ಯಾಯ, ನೀತಿ ಧರ್ಮಕ್ಕೆ ಎಂದಿಗೂ ಜಯವಿದೆ. ಅನ್ಯಾಯ, ಅಧರ್ಮ, ಅಸತ್ಯಕ್ಕೆ ಎಂದಿಗೂ ಉಳಿಗಾಲವಿಲ್ಲ ಎಂಬ ಶ್ರೇಷ್ಠ ಸಂದೇಶವನ್ನು ಪೌರಾಣಿಕ ನಾಟಕಗಳು ನೀಡುತ್ತವೆ. ಹಾಗಾಗಿ ಪೌರಾಣಿಕ ನಾಟಕ ಕಲೆಯನ್ನು ಉಳಿಸಲು ಸರ್ಕಾರವು ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ನ್ಯಾಯವಾದಿ ವಿ.ಎಸ್.ಧನಂಜಯಕುಮಾರ್ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಾಟಕ ಮಂಡಳಿಯವರು ಅಭಿನಯಿಸಿದ ಅಭಿಮನ್ಯು ವಿವಾಹ ಅಥವಾ ಭೀಮ- ದುರ್ಯೋಧನರ ಗಧಾಯುದ್ದ ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಟಕ ಕಲೆ ಮತ್ತು ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಾಟಕ ಕಲೆ ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬಗಳಾಗಿವೆ. ಪೌರಾಣಿಕ ನಾಟಕಗಳಲ್ಲಿ ಬರುವ ವಿವಿಧ ಪಾತ್ರಗಳಲ್ಲಿನ ಉತ್ತಮ ಸಾರವನ್ನು ಅರಿತು ಜೀವನ ನಡೆಸಿದರೆ ಮನುಷ್ಯ ಉತ್ತಮ ಜೀವನ ನಡೆಸಬಹುದು. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಸಮಾಜದ ಪರಿವರ್ತನೆಗೆ ಪೌರಾಣಿಕ ನಾಟಕವು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ಇಂದಿಗೂ ಸಹ ಪೌರಾಣಿಕ ನಾಟಕ ಪ್ರದರ್ಶನ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿವೆ. ಪ್ರಪಂಚದಲ್ಲಿ ಹಲವು ಮಾಧ್ಯಮಗಳು ಮನರಂಜನೆ ನೀಡುತ್ತಾ ಬಂದಿದ್ದರೂ ಪೌರಾಣಿಕ ನಾಟಕಗಳ ಪ್ರದರ್ಶನ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ನಾಟಕ ಕಲೆಯನ್ನು ಕಲಿತು, ತಾವೇ ಸಂಪನ್ಮೂಲ ಕ್ರೋಢೀಕರಿಸಿ ನಾಟಕಗಳನ್ನು ಅಭಿನಯಿಸುತ್ತಾ ನಮ್ಮ ಸಂಸ್ಕೃತಿ-ಪರಂಪರೆಯನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ನಾಟಕ ಪ್ರದರ್ಶನ ಮಾಡುವ ನಾಟಕಗಳಿಗೆ ಕನಿಷ್ಟ 1ಲಕ್ಷ ರೂ ಪ್ರೋತ್ಸಾಹ ಧನವಾಗಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಆರ್.ಟಿ.ಓಮಲ್ಲಿಕಾರ್ಜುನ್ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರಿಗೆ ಹಿತವಚನ ಹೇಳುತ್ತಾ ಇಂದಿನ ಸಿನಿಮಾ, ಟೀವಿ ಧಾರಾವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಕಲೆ ಎಂದೆಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವುದು ಶ್ಲಾಘನೀಯ. ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿ ಕಷ್ಟ ಪಟ್ಟು ಕಲಿತ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಕಲಾವಿದರ ತಮ್ಮ ಬದುಕು ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ ಮನರಂಜಿಸುತ್ತಾರೆ. ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ಕಲಾವಿದರಿಗೆ ಪ್ರೇರಕ ಶಕ್ತಿಯಾಗಿ ನಿಲ್ಲಬೇಕು ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ಗ್ರಾಮದ ಹಿರಿಯ ಮುಖಂಡರು ಹಾಗೂ ನಿವೃತ್ತ ಶಿಕ್ಷಕ ರಾಮೇಗೌಡ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಗದ್ದೆ ಹೊಸೂರು ಜಗದೀಶ್ ಮಾತನಾಡಿ ಗ್ರಾಮೀಣ ಭಾಗದ ಜನತೆ ನಾಟಕ ಕಲೆಯನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಜೊತೆಗೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ, ಮಕ್ಕಳನ್ನೇ ಆಸ್ತಿಯನ್ನಾಗಿಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ಟಿ.ಮಂಜು ಸಹೋದರ ಉದ್ಯಮಿ ಹೆಚ್.ಟಿ.ಲೋಕೇಶ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಉದ್ಯಮಿ ಗದ್ದೆ ಹೊಸೂರು ಜಗದೀಶ್, ಗ್ರಾ.ಪಂ.ಸದಸ್ಯ ಶೀಳನೆರೆ ಸಿದ್ದೇಶ್, ಕತ್ತರಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಗ್ರಾಮದ ಮುಖಂಡರಾದ ಕೆ.ಎಂ. ವಾಸುದೇವ್, ಸತೀಶ್, ಗವೀಗೌಡ, ಕುಮಾರ್, ಮನುಕುಮಾರ್, ಗ್ರಾ.ಪಂ.ಸದಸ್ಯರಾದ ಪರಮೇಶ್, ಹರ್ಷ, ದೀಪು, ಉಪನ್ಯಾಸಕ ಕತ್ತರಘಟ್ಟ ವಾಸು, ಕತ್ತರಘಟ್ಟ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬೆಟ್ಟಮ್ಮ ಶಿಕ್ಷಕ ನಾಗೇಂದ್ರ ಸೇರಿದಂತೆ ಸೇರಿದಂತೆ ಕತ್ತರಘಟ್ಟ ಗ್ರಾಮದ ಹಿರಿಯ ಮುಖಂಡರು ಹಾಗೂ ವಿವಿಧ ಗ್ರಾಮಗಳ ಗಣ್ಯರು ನಾಟಕ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಾಟಕದಲ್ಲಿ ಭೀಮನ ಪಾತ್ರದಲ್ಲಿ ಚಂದ್ರು, ಅಭಿಮನ್ಯು ಪಾತ್ರದಲ್ಲಿ ಅಭಿಷೇಕ್, ದುರ್ಯೋಧನನ ಪಾತ್ರದಲ್ಲಿ ಮನುಕುಮಾರ್, ಕೃಷ್ಣನ ಪಾತ್ರದಲ್ಲಿ ಮಹೇಶ್, ಕರ್ಣನ ಪಾತ್ರ ಹೊಸಹೊಳಲು ರಘು, ಸಾತ್ಯಕಿ ಪಾತ್ರದಲ್ಲಿ ಶ್ರೀನಿವಾಸ್ ಅತ್ಯುತ್ತಮವಾಗಿ ಅಭಿನಯಿಸುವ ಮೂಲಕ ನಾಟಕದ ಕಳೆಯನ್ನು ಹೆಚ್ಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ