ಕಳೆದುಕೊಂಡಿರುವುದೇನು??

Upayuktha
0


ತ್ತೀಚೆಗೆ ಕಿರುಚಿತ್ರವೊಂದನ್ನು ನೋಡಿದೆ. ಆ ಚಿತ್ರ ಹೀಗಿತ್ತು...........ಅದೊಂದು ಬೃಹತ್ ಮಾಲ್. ಮೊಬೈಲ್ ನಲ್ಲಿ ಏನನ್ನೋ ವೀಕ್ಷಿಸುತ್ತಾ ಯುವಕನೋರ್ವ ನಡೆದು ಬರುತ್ತಿದ್ದ. ಅಲ್ಲಿಯೇ ಲಿಫ್ಟ್ ಇರುವುದು ಕಂಡ ಆ ಯುವಕ ಓಡುತ್ತಾ ಬಂದು ಲಿಫ್ಟ್ ಒಳಗೆ ನುಸುಳಿದ. ಆದರೆ ಲಿಫ್ಟ್ ನ ಬಾಗಿಲು ಮುಚ್ಚಲಿಲ್ಲ. ಎಲ್ಲರೂ ಸೂಚನಾ ಫಲಕದಡೆ ತಲೆಯೆತ್ತಿ ನೋಡಿದಾಗ ಅಲ್ಲಿ ಓವರ್ ಲೋಡ್ ಎಂದು ತೋರಿಸುತ್ತಿತ್ತು ಯಾರಾದರೂ ಒಬ್ಬರು ಲಿಫ್ಟ್ ನಿಂದ ಹೊರಗೆ ಹೋಗಲೇಬೇಕು ಎಂಬ ಸೂಚನೆಯೂ ಅಲ್ಲಿತ್ತು. ಎಲ್ಲರ ಚಿತ್ತ ಕೊನೆಯಲ್ಲಿ ಬಂದು ಲಿಫ್ಟನ್ನು ಸೇರಿದ ಆ ಯುವಕನತ್ತ, ಆದರೆ ಆ ಯುವಕನೋ ತನ್ನ ಮೊಬೈಲಿನಲ್ಲಿ ಮಗ್ನ. ಯಾರಾದರೂ ಒಬ್ಬರು ಹೊರಗೆ ಹೋಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ, ಆದರೆ ಯಾರೂ ಹೊರಗೆ ಹೋಗುತ್ತಿಲ್ಲ. ಹೀಗೆಯೇ ಕೆಲ ಕ್ಷಣಗಳು ಕಳೆದು ಹೋದವು ಒಂದು ನಿಮಿಷವಾಯಿತು ಲಿಫ್ಟ್ ಒಂದೇ ಸಮನೆ ಬೀಪ್ ಮಾಡುತ್ತಿತ್ತು. ಆದರೂ ಯಾರು ಕೂಡ ಅದರಡೆಗೆ ಚಿತ್ತ ಹರಿಸಲಿಲ್ಲ. ಕೆಲವರು ತಮ್ಮ ವಾಚುಗಳನ್ನು ನೋಡತೊಡಗಿದರು ಇನ್ನೂ ಕೆಲವರು ಯಾರಾದರೂ ಇಳಿಯುವರೆ ಎಂದು ಸುತ್ತಲೂ ನೋಟ ಹರಿಸುತ್ತಿದ್ದರು. ಯಾರೂ ದನಿಯೆತ್ತಿ ಹೇಳುವವರಿಲ್ಲ, ಸುಮ್ಮನೆ ಗೊಣಗುತ್ತಿದ್ದರು. ಹೀಗೆಯೇ ಎರಡು ನಿಮಿಷ ಕಳೆಯಿತು.


ಇದೆಲ್ಲವನ್ನು ಗಮನಿಸುತ್ತಿದ್ದ ಯುವತಿಯೊರ್ಗಳು ನಿಧಾನವಾಗಿ ಲಿಫ್ ನಿಂದ ಹೊರ ಹೊರಟಳು. ಎಲ್ಲರಲ್ಲೂ ನಿರಾಳ ಭಾವ ಅಬ್ಬಾ! ಈಗಲಾದರೂ ಲಿಫ್ಟ್  ಚಲಿಸುತ್ತದೆಯಲ್ಲ ಎಂದು. ಆದರೆ ಹಾಗೆ ನೋಡುತ್ತಿದ್ದವರ ಕಣ್ಣು ಅಗಲವಾಗಿ, ಹುಬ್ಬು ಮೇಲೇರಿ, ಬಾಯಿ ಇಷ್ಟಗಲವಾಗಿ  ತೆರೆಯಿತು. ಕಾರಣವಿಷ್ಟೇ ಉಳಿದವರೆಲ್ಲ ತಮ್ಮ ತಮ್ಮ ವೈಯುಕ್ತಿಕ ಹಿತಾಸಕ್ತಿಯನ್ನು ನೋಡಿಕೊಂಡರೆ, ಲಿಫ್ಟ್ ನಿಂದ ಹೊರಬಂದ ಮಹಿಳೆ ಎರಡೂ ಕಾಲುಗಳಲ್ಲಿ ಬಲವಿಲ್ಲದ ಕಾರಣ ಎರಡೂ ಕೈಗಳಿಗೆ ಕೃತಕ ಕೋಲುಗಳನ್ನು ಜೋಡಿಸಿಕೊಂಡಾಕೆ. ಆಕೆ ಹೊರಗೆ ಕಾಲಿಟ್ಟ ನಂತರ ಲಿಫ್ಟ್ ನ ಸ್ವಯಂಚಾಲಿತ ಗಾಜಿನ ಬಾಗಿಲು ಹಾಕಿಕೊಂಡು ಲಿಫ್ಟ್ ಚಲಿಸಲಾರಂಭಿಸಿತು ಆ ಅಂಗವಿಕಲ ಮಹಿಳೆಯು ಹಿಂತಿರುಗಿ ನೋಡಿ ನಸು ನಕ್ಕಳು. ಕೊನೆಯಲ್ಲಿ ಬಂದು ಲಿಫ್ಟ್ ಸೇರಿದ ಯುವಕ ಪಶ್ಚಾತಾಪದಿಂದ ತಲೆತಗ್ಗಿಸಿದರೆ,ಉಳಿದೆಲ್ಲರ ಮುಖಗಳು ಮ್ಲಾನವಾದವು.


ಲಿಫ್ಟ್ ನಲ್ಲಿದ್ದವರು ಪಡೆದುಕೊಂಡದ್ದೇನು?? ಕಳೆದುಕೊಂಡದ್ದೇನು?? ಲಿಫ್ಟ್ ನಿಂದ ಹೊರ ನಡೆದ ಯುವತಿ ಪಡೆದುಕೊಂಡಿದ್ದೇನು?


ಸ್ವಾರ್ಥ, ಮೌಲ್ಯರಹಿತತೆ, ದುರ್ನಡತೆ, ಸ್ವೇಚ್ಛಾಚಾರ ತಾನು ಮಾತ್ರ ಸುಖವಾಗಿ ಇರಬೇಕೆಂಬ ಹಪಹಪಿ, ಯಾರನ್ನೂ ಕೇರ್ ಮಾಡದಿರುವುದು, ತನ್ನದೇ ಸರಿ ಎಂಬ ಭಾವ, ಮಾನವೀಯ ಮೌಲ್ಯಗಳಾದ ಭಾವುಕತೆ ಮತ್ತು ಕರುಣೆಗಳು ಮಾಯವಾಗಿರುವುದು ಹೀಗೆ ಹತ್ತು ಹಲವು ವಿಷಯಗಳನ್ನು ಲಿಫ್ಟ್ ನ ಒಳಗಿರುವವರು ಕಳೆದುಕೊಂಡಿದ್ದರು. ಲಿಫ್ಟ್ ಚಲಿಸದೆ ಹೋದಾಗ ಮೊದಲು ಎಲ್ಲರೂ ನೋಡಿದ್ದು ಲಿಫ್ಟಿನಲ್ಲಿ ಕೊನೆಯಲ್ಲಿ ಬಂದು ಸೇರಿಕೊಂಡ ಹುಡುಗನನ್ನು... ಅಂದರೆ ಆತ ಇಳಿದು ಹೋಗಲಿ ಎಂಬ ಭಾವದಿಂದ. ಆದರೆ ಅವನೋ ಇದಾವುದರೆಡೆ ಲಕ್ಷ್ಯ ಕೊಡದೆ ತನ್ನದೇ ಲೋಕದಲ್ಲಿ ಮುಳುಗಿದ್ದು, ಕೆಲವರು ಗಡಿಯಾರ ನೋಡುತ್ತಾ ಸಮಯ ಮೀರಿತು ಎಂದು ಗೊಣಗಿದರೇ ಹೊರತು ತಮ್ಮಂತೆ ಇನ್ನುಳಿದವರ ಸಮಯವೂ ಹಾಳಾಗುತ್ತದೆ ಎಂದು ಅರಿತುಕೊಳ್ಳಲಿಲ್ಲ. ಉಳಿದವರ ಸಮಯ ವ್ಯರ್ಥವಾಗುತ್ತಿದೆ.... ಅತ್ಯವಸರ ಇರುವವರು ಮೊದಲು ಹೋಗಲಿ ಎಂಬ ಭಾವವಂತೂ ಖಂಡಿತವಾಗಿ ಯಾರಲ್ಲಿಯೂ ಇರಲಿಲ್ಲ. ಒಂದು ರೀತಿಯ ಭಾವ ಶೂನ್ಯತೆ ಅವರೆಲ್ಲರನ್ನು ಆವರಿಸಿತ್ತು.


ಅಂತಹ ಸಮಯದಲ್ಲಿಯೇ ಆ ಅಂಗವಿಕಲ ಆದರೆ ಸ್ವಾವಲಂಬಿಯಾದ ಯುವತಿ ಲಿಫ್ಟ್ ನಿಂದ ಹೊರಗೆ ಬಂದು ಇನ್ನುಳಿದವರಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟಳು. ಆಕೆಯಲ್ಲಿರುವ ಮಾನವೀಯತೆಯ ಕಿಂಚಿತ್ತು ಅಂಶವು ಉಳಿದವರಲ್ಲಿ ಇರಲಿಲ್ಲ ಆದರೆ ಒಂದೊಮ್ಮೆ ಆಕೆಯನ್ನು ನೋಡಿದಾಗ ಅವರೆಲ್ಲರಲ್ಲೂ ತಪ್ಪು ಮಾಡಿದ ಭಾವ ಆವರಿಸಿಕೊಂಡದ್ದಂತೂ ಸುಳ್ಳಲ್ಲ.


ಸ್ನೇಹಿತರೆ ಇಂತಹ ಹಲವಾರು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ನಾವು ಕೂಡ ಸಮಯವನ್ನು ವ್ಯರ್ಥಪಡಿಸದೇ ನಮ್ಮ ಬುದ್ಧಿ ಮತ್ತು ಕಾರ್ಯಶಕ್ತಿಯ ಮೇಲೆ ನಂಬಿಕೆಯಿಟ್ಟು, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಇಚ್ಛಾಶಕ್ತಿಯನ್ನು ನಮ್ಮದಾಗಿಸಿಕೊಳ್ಳೋಣ. ಆ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂಬ ಆಶಯ ವ್ಯಕ್ತಪಡಿಸುವ.

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top