ಕೆ.ಆರ್.ಪೇಟೆ: ತಾಲ್ಲೂಕಿನ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡ ಬೇಕೆಂದು ಒತ್ತಾಯಿಸಿ ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ತಿಂಗಳ ಹಿಂದೆ ನೀರು ಹೇಮಾವತಿ ಮುಖ್ಯ ನಾಲೆಯಲ್ಲಿ ಸುಮಾರು ಸುಮಾರು ಒಂದೂವರೆ ತಿಂಗಳು ನೀರು ಹರಿಸಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ಕಟ್ಟೆಗಳಿಗೆ ಹನಿ ನೀರನ್ನು ಬಿಡದೇ ನಿರ್ಲಕ್ಷ್ಯ ವಹಿಸಿದರು. ಈ ಕಾರಣ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಈ ಮತ್ತೆ 10 ದಿನಗಳ ಮಟ್ಟಿಗೆ ಮತ್ತೊಮ್ಮೆ ಮುಖ್ಯ ನಾಲೆಗೆ ನೀರು ಹರಿಸಲಾಗುತ್ತಿದೆ. ಆದರೂ ಸಹ ನೀರಾವರಿ ಅಧಿಕಾರಿಗಳು ಇದೂವರೆವಿಗೂ ನೀರು ತುಂಬಿಸಲು ಗಂಭೀರವಾದ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಎರಡನೇ ಭಾರಿಗೂ ನಮಗೆ ಅನ್ಯಾಯ ಮಾಡುತ್ತಿರುವ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಲು ಇಂದು ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಿಜರ್ ಅಹಮದ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರು ನಂ.55ನೇ ವಿತರಣಾ ನಾಲೆಗೆ ಹೆಚ್ಚು ನೀರಿ ಹರಿಸಿ ಕೊನೆಯ ಭಾಗದ ಗ್ರಾಮಗಳಾದ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ಕೆರೆಗಳಿಗೆ ಭಾರತೀಪುರ ಬಳಿ ಇರುವ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ನಮ್ಮ ಗ್ರಾಮದ ಕೆರೆಗಳಿಗೆ ನೀರು ತುಂಬಿಸದೇ ಇರಲು ಕಾರಣವೇನು ಎಂದು ರೈತರು ಪ್ರಶ್ನಿಸಿದರು.
ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಬೇಟಿ ನೀಡಿ ರೈತರ ಮನವಿ ಆಲಿಸಿದ ಶಾಸಕ ಹೆಚ್.ಟಿ.ಮಂಜು ಸಹೋದರ ಹೆಚ್.ಟಿ.ಲೋಕೇಶ್ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಡಾ.ಕೆ.ಸಿ. ಶ್ರೀಕಾಂತ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಅವರು ಈ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಏನು ತೊಂದರೆ ಇದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಯ ಪಾಲಕ ಇಂಜಿನಿಯರ್ ಕಿಜರ್ ಅಹಮದ್ ಅವರು ನಂ.55 ವಿತರಣಾ ನಾಲೆಯ ಮೂಲಕ ನಾಲೆಯ ಸಾಮರ್ಥ್ಯಕ್ಕೆ ತಕ್ಕಂತೆ ನೀರನ್ನು ಹರಿಸಲಾಗುತ್ತಿದೆ. ಈ ಭಾಗದ ಎಲ್ಲಾ ದೊಡ್ಡ ದೊಡ್ಡ ಕೆರೆಗಳನ್ನು ತುಂಬಿಸಲಾಗಿದೆ. ನಂ.55ರ ಕೊನೆಯ ಭಾಗದ ಗ್ರಾಮಗಳ ಕೆರೆಗಳಿಗೆ ಈ ಭಾರಿ ಕಡ್ಡಾಯವಾಗಿ ತುಂಬಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಆಗ ಪ್ರತಿಭಟನಾನಿರತ ರೈತರು ನಾಲೆಯಲ್ಲಿ ಕಡಿಮೆ ಪ್ರಮಾಣದ ನೀರು ಬಿಟ್ಟಿದ್ದಾರೆ. ಹಾಗಾಗಿ ಕೊನೆಯ ಭಾಗಕ್ಕೆ ನೀರು ಬರುತ್ತಿಲ್ಲ ಎಂದು ದೂರಿದಾಗ ರೈತರನ್ನೆ ಮುಖ್ಯ ಕಾಲುವೆಗೆ ಬಂದು ವೀಕ್ಷಣೆ ಮಾಡುವಂತೆ ಇಇ ಕಿಜರ್ ಅಹಮದ್ ಮನವಿ ಮಾಡಿದರು.
ರೈತರೊಂದಿಗೆ ಶಾಸಕರ ಸಹೋದರ ಹೆಚ್.ಟಿ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಡಾ.ಕೆ.ಸಿ. ಶ್ರೀಕಾಂತ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಭೇಟಿ ನೀಡಿ ಭಾರತೀಪುರದ ಬಳಿ ಮುಖ್ಯನಾಲೆಯಿಂದ 55ನೇ ವಿತರಣಾ ನಾಲೆಗೆ ಬಿಟ್ಟಿರುವ ನೀರಿನ ಪ್ರಮಾಣವನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಇದೇ ಸಾಮರ್ಥ್ಯದ ನೀರನ್ನು ಕೆರೆಗಳು ಭರ್ತಿಯಾಗುವರೆವಿಗೂ ನಿತ್ಯ ಹರಿಸಬೇಕು. ಸವಡಿಗಳು, ಇಂಜಿನಿಯರ್‌ಗಳು ಕ್ರಿಯಾಶೀಲವಾಗಿ ಕೆಲಸ ಮಾಡಿ ಕೊನೆಯ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಾಗೇಗೌಡ, ಸುರೇಶ್, ಅನಿಲ್ ಗೌಡ, ಜಗದೀಶ್, ರಾಮೇಗೌಡ, ನಾಗರಾಜೇಗೌಡ, ಪ್ರಕಾಶ್, ಕೃಷ್ಣೇಗೌಡ, ಶಿವೇಗೌಡ, ಗೋಪಾಲ್, ಚಂದ್ರು, ಸುನಿಲ್, ಧನುಷ್, ದೀಕ್ಷಿತ್, ಶೇಖರ್, ಜಗದೀಶ್, ಶೇಖರ್, ಸಾಧುಗೋನಹಳ್ಳಿ ಸುರೇಶ್, ರಘು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ