ಅ.ಭಾ. ವೀರಶೈವ ಮಹಾಸಭಾ: ಮತ್ತೆ ಚುನಾವಣೆಗೆ ನಿಲ್ಲುವುದನ್ನು ಸಹಿಸದೆ ಇಲ್ಲಸಲ್ಲದ ಆರೋಪ: ಎಸ್‌.ವಿ. ಧನಂಜಯ್ ಕುಮಾರ್

Upayuktha
0


ಕೆ.ಆರ್ ಪೇಟೆ: ಅಖಿಲ ಭಾರತ ವೀರಶೈವ ಮಹಾಸಭಾದ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷನಾಗಿ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ‌ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸಬೇಕು ಎಂದು ಸಮುದಾಯ ನಿರ್ಧರಿಸಿದೆ. ಇದರಿಂದಾಗಿ ನನ್ನ ಏಳಿಗೆಯನ್ನು ಸಹಿಸದೇ ಮುಂಬರುವ ಸಮುದಾಯದ ಚುನಾವಣೆ ದೃಷ್ಟಿಯಿಂದ ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಾಸಲು ಈರಪ್ಪ, ಕಾರ್ಯದರ್ಶಿ ನಾಗೇಶ್ ಬಾಬು, ಮಾಧವಪ್ರಸಾದ್, ಬ್ಯಾಂಕ್ ಪರಮೇಶ್ವರ್ ಇತರರು ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್. ಧನಂಜಯ್ ಕುಮಾರ್ ಹೇಳಿದರು.


ಅವರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲ್ಲೂಕು ವೀರಶೈವ ‌ಮಹಾಸಭಾ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸತತವಾಗಿ ಏಳು ವರ್ಷಗಳ ಕಾಲ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿರುವ  ಸಾಸಲು ಈರಪ್ಪ ಹಾಗೂ ನಾಗೇಶ್ ಬಾಬು ಅವರು ತಾವು ನಡೆಸಿರುವ ಭ್ರಷ್ಟಾಚಾರ, ಹಣ ದುರುಪಯೋಗದ ಆರೋಪಗಳನ್ನು  ಮುಚ್ಚಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಾ ವೀರಶೈವ ಲಿಂಗಾಯತ ಸಮಾಜವನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.


ಈ ಹಿಂದಿನ ಸಮಿತಿಯ ಲೆಕ್ಕಪತ್ರಗಳನ್ನು ನೀಡದೆ, ಹಣ ಬಳಕೆಯ ಬಗ್ಗೆ ದಾಖಲಾತಿಗಳನ್ನು ನೀಡದೆ ಸಮಿತಿಯ ಅನುಮತಿ ಇಲ್ಲದೆ ಬೇಕಾಬಿಟ್ಟಿಯಾಗಿ ಹಣ ವ್ಯಯ ಮಾಡಿ ಭ್ರಷ್ಟಾಚಾರ ನಡೆಸಿರುವ ಸಾಸಲು ಈರಪ್ಪ ಹಾಗೂ ನಾಗೇಶ್ ಬಾಬು ವಿರುದ್ಧ ಅಧಿಕಾರ ದುರುಪಯೋಗ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ದೂರು ನೀಡಿ ತನಿಖೆ ಮಾಡುವಂತೆ ಒತ್ತಾಯಿಸುತ್ತೇನೆ. ಹಾಗೂ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಂಡು ಸದಸ್ಯತ್ವವನ್ನು ರದ್ದು ಪಡಿಸಲು ತಮಗೆ ಅನುಮತಿ ನೀಡಬೇಕೆಂದು ಧನಂಜಯ  ಮನವಿ ಮಾಡಿದರು.



ಕೆ.ಆರ್.ಪೇಟೆ ಪಟ್ಟಣದಲ್ಲಿ 2019ರಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ನಡೆಸಲು ಸಾರ್ವಜನಿಕರಿಂದ ಸಂಗ್ರಹಿಸಿರುವ ವಂತಿಗೆ  ಹಣ 8 ಲಕ್ಷ ರೂಗಳ ಜೊತೆಗೆ ನಾನು ವೈಯಕ್ತಿಕವಾಗಿ 2 ಲಕ್ಷ ರೂ ಹಣವನ್ನು ಹೆಚ್ಚುವರಿಯಾಗಿ ಖರ್ಚು ಮಾಡಿ ಎಲ್ಲಾ ಲೆಕ್ಕಪತ್ರಗಳನ್ನು ಸಮಿತಿಯ ಮುಂದೆ ಇಟ್ಟಿದ್ದೇನೆ. ಸಮಾಜದ ಸೇವೆಗಾಗಿ ಸಾರ್ವಜನಿಕ ಜೀವನಕ್ಕೆ ಬಂದಿರುವ ನಾನು ವಕೀಲನಾಗಿ, ಸಾಮಾಜಿಕ ಹೋರಾಟಗಾರನಾಗಿ ಬದ್ಧತೆಯಿಂದ ಜನಪರವಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜದ ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಂಡು ಕೆಲಸ ಮಾಡುವುದನ್ನು ಸಹಿಸದ ಸಾಸಲು ಈರಪ್ಪ ಹಾಗೂ ನಾಗೇಶ್ ಬಾಬು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರಿಗೆ ನಿಜವಾಗಿ ಸಮಾಜದ ಬಗ್ಗೆ ಕಾಳಜಿ ಇದ್ದರೆ ಸದ್ಯದಲ್ಲಿಯೇ ನಾನು ಮಹಾಸಭಾದ ವಾರ್ಷಿಕ ಮಹಾಸಭೆಯನ್ನು ಕರೆದು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಮಾಜದ ಬಂಧುಗಳ ಸಮಕ್ಷಮದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಲೆಕ್ಕಪತ್ರಗಳನ್ನು ನೀಡುತ್ತೇನೆ. ನನ್ನ ವಿರುದ್ಧ ಹಾಗೂ ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡುವವರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಲಿ ಎಂದು ಧನಂಜಯ ಸವಾಲು ಹಾಕಿದರು.


ನಾನು ಮಹಾಸಭಾದ ಅಧ್ಯಕ್ಷನಾಗಿ ಐದು ವರ್ಷ ಸಮೀಪಿಸುತ್ತಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಅಂದಿನಿಂದ ಹಿಡಿದು ಇಂದಿನವರೆಗೆ ಸಮಾಜದ ಸಂಘಟನೆಗೆ ಒತ್ತು ನೀಡಿ, ಜನಪರವಾಗಿ ಕೆಲಸ ಮಾಡಿದ್ದೇನೆ, ಮುಂದೆಯೂ ಜನಪರವಾಗಿ ಕೆಲಸ ಮಾಡುವ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದೇನೆ. ಕೃಷ್ಣರಾಜಪೇಟೆ ಪಟ್ಟಣದಲ್ಲಿರುವ 20 ಗುಂಟೆ ಸಮಾಜದ ಆಸ್ತಿಯನ್ನು ಜೋಪಾನ ಮಾಡಿದ್ದೇನೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಶಾಮಿಲಾಗಿರುವ ಸಾಸಲು ಈರಪ್ಪ ಹಾಗೂ ನಾಗೇಶ್ ಬಾಬು ಸಂಘದ ಆಸ್ತಿಯ ಸ್ವಾಧೀನಕ್ಕೆ ತೊಂದರೆ ಕೊಡುತ್ತಿದ್ದಾರೆ. 2018ನೇ ಇಸವಿಯಲ್ಲಿ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದಲ್ಲಿ ಅನ್ನ ದಾಸೋಹ ಮಂದಿರವನ್ನು ನಿಲ್ಲಿಸುವುದಾಗಿ 5 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ಸಂಗ್ರಹ ಮಾಡಿದ್ದು ಇದುವರೆಗೂ ಸಂಘಕ್ಕೆ ಲೆಕ್ಕ ಕೊಟ್ಟಿರುವುದಿಲ್ಲ ಈ ಬಗ್ಗೆ ಮೊದಲು ನನ್ನ ವಿರುದ್ಧ ಆರೋಪ ಮಾಡುವವರು ಇದಕ್ಕೆ ಲಿಖಿತ  ಉತ್ತರ ನೀಡಬೇಕು ಈ ಕುರಿತು ಇವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ರಾಜ್ಯಾಧ್ಯಕ್ಷರಾದ ತಿಪ್ಪಣ್ಣ ಅವರಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ ಎಂದು ಧನಂಜಯಕುಮಾರ್ ತಿಳಿಸಿದರು.


ತಾಲೂಕು ಘಟಕದ ಕಾರ್ಯದರ್ಶಿಗಳಾದ ಬೊಮ್ಮಲಾಪುರ ವೀರಪ್ಪ ಮಾತನಾಡಿ, ಸಂಘದ ಅಧ್ಯಕ್ಷರಾದ ಧನಂಜಯ ಅವರು ಸಂಘದ ವತಿಯಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ವೈಯಕ್ತಿಕವಾಗಿ ತಮ್ಮ ಜೇಬಿನ ಹಣದಿಂದ ಸಾವಿರಾರು ರೂ ಖರ್ಚು ಮಾಡುತ್ತಿದ್ದಾರೆ. ಬಸವ ಜಯಂತಿ ಮಾಡಲು ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣ ಹಾಗೂ ಕಾರ್ಯಕ್ರಮಕ್ಕೆ ವೆಚ್ಚವಾಗಿರುವ ಹಣವನ್ನು ಆಡಿಟ್ ಮಾಡಿಸಿ ಲೆಕ್ಕಪತ್ರಗಳನ್ನು ಸಂಘದ ಸದಸ್ಯರಿಗೆ ಒದಗಿಸಿ ಜೋಪಾನವಾಗಿದ್ದೇವೆ. ಸಾರ್ವಜನಿಕರಿಂದ ಸಂಗ್ರಹವಾದ ಹಣದ ಜೊತೆಗೆ ಅಧ್ಯಕ್ಷರು ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವೆಚ್ಚವನ್ನು ಮಾಡಿದ್ದಾರೆ ಈ ಬಗ್ಗೆ ದಾಖಲಾತಿಗಳನ್ನು ಪರಿಶೀಲನೆ ಮಾಡಲಿ ಎಂದು ವೀರಪ್ಪ ಹೇಳಿದರು.


ಸಭೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೊಮ್ಮಲಾಪುರ ವೀರಪ್ಪ, ನಿವೃತ್ತ ಶಿಕ್ಷಕರಾದ ಶಿವಕುಮಾರ್, ಕಟ್ಟಹಳ್ಳಿ ಪ್ರಕಾಶ್, ಡಿ.ಸಿ.ಕುಮಾರ್, ಚೌಡಸಮುದ್ರ ಶಿವಮೂರ್ತಿ, ಬ್ಯಾಂಕ್ ನಂಜುಂಡಪ್ಪ, ಎಲ್ಐಸಿ ಶಿವಪ್ಪ, ರುದ್ರಪ್ಪ, ನಾಡಬೋಗನಹಳ್ಳಿ ಎನ್.ಎಸ್.ಈರಪ್ಪ, ಶಿವಮೂರ್ತಿ, ಹರೀಶ್, ಸಚಿನ್, ರುದ್ರಪ್ಪ, ಕೇಬಲ್ ಗುಂಡ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top