ಕೆ.ಆರ್.ಪೇಟೆ ಪಟ್ಟಣದಲ್ಲಿ ಸಮಾಜಸೇವಕ ಮಲ್ಲಿಕಾರ್ಜುನ ಅವರು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವವಿಕಸನ ತರಬೇತಿ ಹಾಗೂ ಜೀವನದ ಗುರಿ ಕುರಿತು ವಿದ್ಯಾರ್ಥಿಗಳೊಂದಿಗೆ ಒಂದುದಿನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರಾಜ್ಯದ ವ್ಯಕ್ತಿತ್ವ ವಿಕಸನ ತರಬೇತುದಾರ ಶಂಕರ್ ಬೆಳ್ಳೂರು ಸಂವಾದ ನಡೆಸಿದರು.
ಕೆ.ಆರ್.ಪೇಟೆ: ಯಾರಿಗೆ ಜ್ಞಾನಾರ್ಜನೆಯ ಹಸಿವು ಇರುತ್ತದೋ ಅವರಿಗೆ ವಿದ್ಯೆಯು ಸುಲಭವಾಗಿ ಒಲಿಯುತ್ತದೆ. ಅಪ್ಪ ಮಾಡಿದ ಆಸ್ತಿ ಇದೆ ಎಂಬ ಅಹಂ ಇದ್ದರೆ ಖಂಡಿತಾ ವಿದ್ಯೆ ತಲೆಗೆ ಹತ್ತುವುದಿಲ್ಲ ಎಂದು ರಾಜ್ಯ ವ್ಯಕ್ತಿತ್ವ ವಿಕಸನ ತರಬೇತುದಾರ ಶಂಕರ್ ಬೆಳ್ಳೂರು ಹೇಳಿದರು.
ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಸಮಾಜಸೇವಕ ಮಲ್ಲಿಕಾರ್ಜುನ್ ಅವರು ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವವಿಕಸನ ತರಬೇತಿ ಹಾಗೂ ಜೀವನದ ಗುರಿ ಕುರಿತು ವಿದ್ಯಾರ್ಥಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿ ಮಾತನಾಡಿದರು.
ವಿದ್ಯಾರ್ಥಿಗಳು ಗುರಿ-ಗುರು ಮುಂದಿಟ್ಟುಕೊಂಡು ಸಮಯಪಾಲನೆ ಮಾಡುತ್ತಾ ಕಠಿಣ ಪರಿಶ್ರಮದಿಂದ, ಸಾಧನೆ ಮಾಡುವ ಕಲಿಕಾಸ್ತಿಯಿಂದ ಇಷ್ಟಪಟ್ಟು ಅಭ್ಯಾಸ ಮಾಡಿದರೆ ಶ್ರೇಷ್ಠ ಸಾಧನೆ ಮಾಡಬಹುದು. ದ್ವಿತೀಯ ಪಿಯುಸಿ, ಅಥವಾ ಎಸ್‌ಎಸ್‌ಎಲ್‌ಸಿ ಯುವಜನರು ಹಾಗೂ ವಿದ್ಯಾರ್ಥಿಗಳು ತಂದೆತಾಯಿಗಳ ಒತ್ತಡಕ್ಕೆ ಒಳಗಾಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡದೇ ಇಷ್ಟಪಟ್ಟು ಅಭ್ಯಾಸ ಮಾಡಿದರೆ ಉತ್ತಮ ಶಿಕ್ಷಣ ಪಡೆಯಬಹುದು.
ದ್ವಿತೀಯ ಪಿಯುಸಿ, ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಂತರ ಮುಂದೇನು ವ್ಯಾಸಂಗ ಮಾಡಬೇಕು ಯಾವ ಕೋರ್ಸಿಗೆ ಸೇರಬೇಕು ಎಂಬ ಗೊಂದಲದಲ್ಲಿರುವ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ದೊರೆಯುವುದಿಲ್ಲ. ಕೆಲವು ಪೋಷಕರು ತಮ್ಮ ಮಕ್ಕಳು ಎಂಜಿನಿಯರ್ ಆಗಬೇಕು ಎಂದು ಆಸೆಪಟ್ಟರೆ ಮತ್ತೆ ಕೆಲವು ಪೋಷಕರು ತಮ್ಮ ಮಗ ಡಾಕ್ಟರ್ ಆಗಲೇಬೇಕು ಎಂಬ ಆಶಾಗೋಪುರವನ್ನು ಕಟ್ಟಿಕೊಂಡು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕಿಯಾದರೂ ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ ಬಲವಂತವಾಗಿ ತಾಂತ್ರಿಕ ಶಿಕ್ಷಣ ಇಲ್ಲವೇ ವೈದ್ಯಕೀಯ ಶಿಕ್ಷಣಕ್ಕೆ ಸೇರಿಸುತ್ತಾರೆ. ಆವಿದ್ಯಾರ್ಥಿಯು ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆಯಿದ್ದರೂ ಅವರ ಆಸೆ ಇಷ್ಟಗಳಿಗೆ ವಿರುದ್ಧವಾಗಿ ಶಿಕ್ಷಣದ ದಾರಿಯನ್ನೇ ಅದಲು ಬದಲು ಮಾಡಿಬಿಡುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಇಷ್ಟಕ್ಕೆ ವಿರುದ್ಧವಾದ ದಾರಿಯಲ್ಲಿ ಸಾಗಲು ಒತ್ತಾಯಿಸದೇ ಮಕ್ಕಳ ಅಭಿರುಚಿಗೆ ಪೂರಕವಾಗಿ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದ ಶಂಕರ್ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಪಡೆಯುವುದು ಕೆಲಸ ಪಡೆಯಲು ಅಲ್ಲ ಎಂಬ ಸತ್ಯವನ್ನು ಮೊದಲು ಅರಿತಿರಬೇಕು. ನಾವು ಶಿಕ್ಷಣದ ಜ್ಞಾನವನ್ನು ಪಡೆದುಕೊಳ್ಳುವುದು ನಮ್ಮ ವ್ಯಕ್ತಿತ್ವದ ವಿಕಾಸಕ್ಕಾಗಿ ಹಾಗೂ ಜ್ಞಾನಾರ್ಜನೆಗಾಗಿ ಎಂಬ ಸತ್ಯವನ್ನು ತಿಳಿದು ಯಾರದೇ ಬಲವಂತ ಹಾಗೂ ಒತ್ತಾಯಕ್ಕೆ ಶಿಕ್ಷನ ಪಡೆಯದೇ ನಮ್ಮ ಬದುಕು ರೂಪಿಸಿಕೊಳ್ಳಲು ಶಿಕ್ಷಣವು ಬೇಕೇ ಬೇಕು. ಆದ್ದರಿಂದ ವಿದ್ಯಾರ್ಥಿಗಳು ಲೋಕಜ್ಞಾನವನ್ನು ತಿಳಿದುಕೊಂಡು ದಿನ ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸಾಧನೆ ಮಾಡಬೇಕು. ಸಾಧನೆಯು ಪ್ರತಿಭಾವಂತರ ಸ್ವತ್ತೇ ಹೊರತು ಸೋಮಾರಿಗಳಿಗೆ ಗಗನಕುಸುಮ ಎಂದು ಅರಿತು ಜೀವನದಲ್ಲಿ ಸಾಧನೆ ಮಾಡಬೇಕು. ಜೀವನದಲ್ಲಿ ಎದುರಾಗುವ ಸೋಲಿಗೆ ಹೆದರಿ ಪಲಾಯನವಾದವನ್ನು ಅನುಸರಿಸದೇ ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು ಎಂದು ಶಂಕರ್‌ಬೆಳ್ಳೂರು ಹೇಳಿದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಮಲ್ಲಿಕಾರ್ಜುನ ಮಾತನಾಡಿ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸಾಧಕರ ಸಂಖ್ಯೆಯು ಹೆಚ್ಚಿದ್ದರೂ ಅವರು ಸಾಧನೆ ಮಾಡಲು ಬೇಕಾದ ದಾರಿ ಯಾವುದು, ಯಾವ ದಾರಿಯಲ್ಲಿ ಸಾಗಬೇಕು ಎಂಬ ಸಾಮಾನ್ಯ ಅರಿವು ಇರುವುದಿಲ್ಲವಾದ್ದರಿಂದ ವೃತ್ತಿಕೌಶಲ್ಯ ತರಬೇತಿ ಮಾರ್ಗದರ್ಶಕರನ್ನು ಕರೆಸಿ ಅವರೊಂದಿಗೆ ನಮ್ಮ ವಿದ್ಯಾರ್ಥಿಗಳ ಜೊತೆ ಸಂವಾದ ಆಯೋಜಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸಲು ಕಾರ್ಯಕ್ರಮ ರೂಪಿಸಿದ್ದೇನೆ. ನನ್ನ ಶ್ರಮವು ಸಾರ್ಥಕವಾಯಿತೆಂದು ತಿಳಿಯಲು ಇಲ್ಲಿಗೆ ಆಗಮಿಸಿರುವ ವಿದ್ಯಾರ್ಥಿಗಳ ಪೈಕಿ ಕನಿಷ್ಠ 50 ವಿದ್ಯಾರ್ಥಿಗಳಾದರೂ ಸಾಧಕರಾಗಿ ಹೊರಹೊಮ್ಮಿದರೆ ಸಾಕು, ನನಗೆ ಧನ್ಯತಾ ಭಾವ ಮೂಡುತ್ತದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಗಾಂಧಿ ಜಯಂತಿ ಆಚರಣೆ: ಇದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ, ಹಾಗೂ ಮಾಜಿಪ್ರಧಾನಿ ಲಾಲ್ ಬಹದ್ದೂರ್ ಶಾಸ್ತೀಜಿ ಅವರ ಜಯಂತಿ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಗಣ್ಯರು ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪೂಜೆ ಮಾಡಿ, ಪುಷ್ಪನಮನ ಸಲ್ಲಿಸಿ, ಭಕ್ತಿನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ.ಅಂ.ಚಿ. ಸಣ್ಣಸ್ವಾಮಿಗೌಡ, ವಾಸ್ತುಶಿಲ್ಪಿಗಳಾದ ರಾಘವೇಂದ್ರ, ಬಳ್ಳೇಕೆರೆ ಮಂಜುನಾಥ್, ಸುರೇಶ್, ಮೈಸೂರಿನ ರಾಜ್‌ಗೋಪಾಲ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಉಪನ್ಯಾಸಕ ಎಸ್.ಚಂದ್ರಶೇಖರ್, ತಾಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ಸಂಘಟನಾ ಕಾರ್ಯದರ್ಶಿ ಎನ್.ಜೆ.ಮಂಜು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೃತ್ತಿಕೌಶಲ್ಯ ಮಾರ್ಗದರ್ಶನ ಹಾಗೂ ಮುಂದಿನ ವಿದ್ಯಾಭ್ಯಾಸ ಕುರಿತು ತಜ್ಞರೊಂದಿಗೆ ಸಂವಾದ ನಡೆಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ