ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಬಿ. ಕೋಡಿಹಳ್ಳಿ ಗ್ರಾಮದ ಸ.ನಂ. 4 ಮತ್ತು 50ರಲ್ಲಿ ಹಾದು ಹೋಗಿರುವ ವಳಗೆರೆಮೆಣಸ ದೊಡ್ಡಕೆರೆಯ ನಾಲಾ ಏರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಕೊನೆಯ ಭಾಗದ ರೈತರು ನಾಲಾ ಏರಿಯ ಮೇಲೆ ಜನ-ಜಾನುವಾರುಗಳು ಎತ್ತಿನ ಬಂಡಿ ಓಡಾಡಲು ತೊಂದರೆಯಾಗಿದ್ದು, ಅಳತೆ ಮಾಡಿ ಒತ್ತುವರಿ ತೆರವು ಮಾಡಿಕೊಡುವಂತೆ ರೈತರು ತಹಸೀಲ್ದಾರ್ ಮತ್ತು ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಗುರುವಾರ ನಾಲೆಯನ್ನು ಅಳತೆ ಮಾಡಿ ಅಗಲೀಕರಣ ಮಾಡಿಕೊಡುವ ಮೂಲಕ ಒತ್ತುವರಿ ತೆರವುಗೊಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಚಂದ್ರಶೇಖರ್ ಹಾಗೂ ರೈತರಾದ ನಾಗರಾಜು, ಜಗದೀಶ್ ಅವರು 33 ಅಡಿ ವಿಸ್ತೀರ್ಣದ ನಾಲಾ ಏರಿಯನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದರಿಂದ ಬೇಸತ್ತ ಈ ಭಾಗದ ರೈತರು ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಕರವೇ ತಾಲ್ಲೂಕು ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಹೇಮಾವತಿ ನೀರಾವರಿ ಇಲಾಖೆಯಲ್ಲಿ 33ಅಡಿ ಅಗಲ ವಿಸ್ತೀರ್ಣ ಉಳ್ಳ ನಾಲೆಯ ಪೂರ್ಣ ದಾಖಲೆ, ನಕಾಶೆಯೊಂದಿಗೆ ತಾಲ್ಲೂಕು ತಹಸೀಲ್ದಾರ್ ರವರಿಗೆ, ಸರ್ವೆ ಅಧಿಕಾರಿಗಳಿಗೆ, ಹೇಮಾವತಿ ನೀರಾವರಿ ನಂ.20 ವಿಭಾಗದ ಎಇಇ ಅವರಿಗೆ ರೈತರುಗಳು ಮನವಿ ಸಲ್ಲಿಸಿ ನಮಗೆ ನಾಲಾ ಏರಿಯ ಮೇಲೆ ಓಡಾಡಲು ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ನಾಲಾ ಏರಿಯನ್ನು ಕೆಲವರು ಓಡಾಡದಂತೆ ತೊಂದರೆ ಕೊಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಗ್ರಾ.ಪಂ.ಸದಸ್ಯರಾದ ಪ್ರೇಮ, ಚಂದ್ರಶೇಖರ್ ಅವರು ರೈತ ಮಹಿಳೆ ಆಶಾ ನಂಜುಂಡೇಗೌಡ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದರು.
ಈ ಸಂಬಂಧ ದಾಖಲಾತಿ ಪರಿಶೀಲಿಸಿದ ತಹಸೀಲ್ದಾರ್ ನಿಸರ್ಗಪ್ರಿಯ ರೈತ ಮಹಿಳೆಯ ಮೇಲೆ ನಡೆಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಅಳತೆ ಮಾಡಿಸಿ ಅಗಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಸೀಲ್ದಾರ್ ಆದೇಶದಂತೆ ಹೇಮಾವತಿ ನೀರಾವರಿ ಇಲಾಖೆಯ ನಂ.20 ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ವಿಶ್ವನಾಥ್, ಸಹಾಯಕ ಇಂಜಿನಿಯರ್ ರವಿಕುಮಾರ್, ರಾಘವೇಂದ್ರ ಖುದ್ದು ನಿಂತು ನಾಲಾ ಏರಿಯನ್ನು ಜೆಸಿಬಿಯಿಂದ ಅಗಲೀಕರಣಗೊಳಿಸಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ನಿಸರ್ಗಪ್ರಿಯ ಅವರು, ಇದು 33 ಅಡಿ ಅಗಲ ವಿಸ್ತೀರ್ಣವುಳ್ಳ ಸರ್ವಿಸ್ ನಾಲಾ ಏರಿಯಾಗಿದೆ. ಇದನ್ನು ನೀರಾವರಿ ಇಲಾಖೆಯ ಕಾರು, ಜೀಪು, ರೈತರ ಎತ್ತಿನ ಬಂಡಿ, ಜನಜಾನುವಾರುಗಳು ಓಡಾಡಲು ಬಳಸಲು ಅವಕಾಶವಿದೆ. ಇದಕ್ಕೆ ಯಾರೂ ತೊಂದರೆ ಕೊಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಯಾರಾದರೂ ಏರಿಯನ್ನು ಒಡೆಯುವುದು, ಓಡಾಡಲು ರೈತರಿಗೆ, ಜಾನುವಾರುಗಳಿಗೆ ತೊಂದರೆಕೊಡುವುದು, ರೈತರ ಎತ್ತಿನ ಬಂಡಿ ಓಡಾಡಲು ತೊಂದರೆ ಕೊಡುವುದನ್ನು ಮಾಡಿದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ್ ನಿಸರ್ಗಪ್ರಿಯರವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಜ್ಞಾನೇಶ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ತಾಲ್ಲೂಕು ಸರ್ವೆಯರ್ ನಾಗರಾಜು, ಹೇಮಾವತಿ ನೀರಾವರಿ ಇಲಾಖೆಯ ನಂ.20 ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ವಿಶ್ವನಾಥ್, ಸಹಾಯಕ ಇಂಜಿನಿಯರ್ ರವಿಕುಮಾರ್, ರಾಘವೇಂದ್ರ, ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್, ಬಸಪ್ಪ, ಗ್ರಾಮದ ಮುಖಂಡರಾದ ಎ.ಬಿ.ದೇವರಾಜು, ಎ.ಎಸ್.ಗೋಪಾಲ್, ಎ.ಪಿ.ಕೇಶವ್, ಸೀಮೆ ಮಹೇಂದ್ರ ರೈತರಾದ ಗೆಂಡಣ್ಣನ ನಾಗಣ್ಣ, ಕುಮಾರ್, ಮಾಟಣ್ಣನ ಪ್ರವೀಣ್, ಮಂಜೇಗೌಡ, ಆಶಾ, ನಂಜುಂಡೇಗೌಡ, ವೈರಮುಡಿಗೌಡ, ಕೃಷ್ಣ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ