ಡಾ. ಹಾ.ಮಾ.ನಾ. ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಎಸ್. ಡಿ. ಶೆಟ್ಟಿ ಅವರಿಗೆ ಅಭಿವಂದನಾ ಕಾರ್ಯಕ್ರಮ
ಉಜಿರೆ: "ಸಾಮಾನ್ಯ ಜನರಲ್ಲಿ ಕೂಡ ಸಂಶೋಧನಾ ಭಾವ ಮೂಡಿಸುವ, ಸೂಕ್ಷ್ಮಗೊಳಿಸುವ, ಮಾರ್ಗದರ್ಶನ ಮಾಡುವ ಗುಣ ಡಾ. ಎಸ್. ಡಿ. (ಶಾಂತಿನಾಥ ದೀಪಣ್ಣ) ಶೆಟ್ಟಿ ಅವರಲ್ಲಿದೆ" ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ ಹೇಳಿದರು.
ಕಾಲೇಜಿನ ಡಾ. ಹಾ.ಮಾ.ನಾ. (ಹಾರೋಗದ್ದೆ ಮಾನಪ್ಪ ನಾಯಕ) ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ 2006 ರಿಂದ 2023 ರ ವರೆಗೆ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಖ್ಯಾತ ಸಂಶೋಧಕ ಡಾ. ಎಸ್. ಡಿ. ಶೆಟ್ಟಿ ಅಭಿವಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ನುಡಿಗಳನ್ನಾಡಿದರು. ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರ ಮತ್ತು ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಅ.12ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
“ಡಾ. ಎಸ್. ಡಿ. ಶೆಟ್ಟಿ ಅವರನ್ನು ಕನ್ನಡ ಅಧ್ಯಾಪಕರಾಗಿ ಮಾತ್ರವಲ್ಲ, ಇತಿಹಾಸ ಸಂಶೋಧಕರಾಗಿಯೂ ಗುರುತಿಸಬಹುದು. ಹಾಮಾನಾ ಸಂಶೋಧನ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳ ಓದಿಗೆ ಸದಾ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಸೌಲಭ್ಯವನ್ನು ಅವರು ನೀಡಿದ್ದಾರೆ” ಎಂದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, "ಡಾ. ಎಸ್. ಡಿ. ಶೆಟ್ಟಿ ಮತ್ತು ನಮ್ಮ ಕಾಲೇಜಿನ ಸಂಬಂಧ ಬಹಳ ವಿಶೇಷವಾದುದು. ಸುಮಾರು ನಾಲ್ಕು ದಶಕಗಳಿಂದ ನಮ್ಮ ಕಾಲೇಜು ಮತ್ತು ಹಾ.ಮಾ.ನಾ. ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ ಅವರು ನಿವೃತ್ತಿ ಹೊಂದುತ್ತಿರುವುದು ನಮಗೆ ಬೇಸರದ ಸಂಗತಿ” ಎಂದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಡಿ. ಶೆಟ್ಟಿ, "ವಿದ್ಯಾರ್ಥಿ ಜೀವನದಲ್ಲಿ ನನ್ನ ಗುರುಗಳ ಮಾರ್ಗದರ್ಶನ ನನ್ನ ಜೀವನ ರೂಪಿಸಿತು. ನಾನು ಓದಲು ಮುಖ್ಯ ಕಾರಣವೇ ಕನ್ನಡದ ಶಾಸನದ ಸಂಪತ್ತು ಮತ್ತು ಹಸ್ತಪ್ರತಿಗಳ ಸಂಪತ್ತು” ಎಂದರು. ತಮ್ಮ ಕಾಲೇಜು ಜೀವನ ಹಾಗೂ ಸಂಸ್ಥೆಯೊಂದಿಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದರು.
ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ರಾಧಾಕೃಷ್ಣ ಕೆದಿಲಾಯ ಗುರುನಮನ ಸಲ್ಲಿಸಿದರು. "ನನ್ನ ಗುರುಗಳಾಗಿದ್ದ ಡಾ. ಎಸ್.ಡಿ. ಶೆಟ್ಟಿ ಅವರು ಯಾವುದೇ ಸಂದರ್ಭದಲ್ಲಿಯೂ ಅಹಂ ತೋರದೆ ನನ್ನ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿದ್ದಾರೆ. ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿರುವ ಪ್ರತಿ ವಸ್ತುವಿನಲ್ಲಿಯೂ ಇವರ ಉಸಿರಿದೆ" ಎಂದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, "ಡಾ. ಎಸ್. ಡಿ. ಶೆಟ್ಟಿ ಸಂಶೋಧನೆಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಅಧ್ಯಯನಕ್ಕೂ ಹೆಚ್ಚಿನ ಪ್ರಾಮುಖ್ಯ ನೀಡಿದ್ದಾರೆ. ಎಸ್.ಡಿ.ಎಂ. ಕಾಲೇಜಿಗೆ ಅವರ ಕೊಡುಗೆ ಅಪಾರವಾದದ್ದು" ಎಂದರು.
ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ, ಡಾ. ಹಾ.ಮಾ.ನಾ. ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ ಕೆ. ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ.ಎ. ವಂದಿಸಿ, ಮಹೇಶ್ ಆರ್. ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ