ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ
ಅನ್ನವಿರುವ ತನಕ ಪ್ರಾಣವು
ಜಗದೊಳಗನ್ನವೇ ದೈವ - ಸರ್ವಜ್ಞ
ಪ್ರತಿಯೊಬ್ಬ ಮನುಷ್ಯನೂ ಭೂಮಿಯ ಮೇಲೆ ತನ್ನ ಅಸ್ತಿತ್ವಕ್ಕಾಗಿ ಆಹಾರ, ನೀರು ಮತ್ತು ಗಾಳಿಯ ಮೇಲೆ ಅವಲಂಬನೆಯನ್ನು ಹೊಂದಿರುತ್ತಾನೆ. ಅದರಲ್ಲಿ ಆಹಾರವು ನಮ್ಮ ದೇಹದ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್ ಗಳನ್ನು ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಇಂದು ವಿಶ್ವ ಆಹಾರ ದಿನ. ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವೆಂದು ಆಚರಿಸಲಾಗುತ್ತದೆ. ಯುನೈಟೆಡ್ ನೇಷನ್‌ನ ಆಹಾರ ಮತ್ತು ಕೃಷಿ ಸಂಸ್ಥೆ (FAO) 1979 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. 1945 ರಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಇದಕ್ಕೆ ಅಡಿಪಾಯ ಹಾಕಿತು. ಇದಾದ ನಂತರ ಪ್ರತಿ ವರ್ಷವೂ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. ಆರಂಭದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಯ ಸ್ಮರಣೆಗಾಗಿ ಆಚರಿಸಲಾಗುತ್ತಿತ್ತು. ನಂತರದಲ್ಲಿ ಈ ಆಚರಣೆಯು ಜಾಗತಿಕವಾಗಿ ಬದಲಾಯಿತು.
ಈ ದಿನವನ್ನು ಜಾಗತಿಕ ಹಸಿವನ್ನು ಪರಿಹರಿಸಲು ಮತ್ತು ವಿಶ್ವದಾದ್ಯಂತ ಹಸಿವನ್ನು ನಿರ್ಮೂಲನೆ ಮಾಡಲು ಸಮರ್ಪಿಸಲಾಗುತ್ತದೆ. ವಿಶ್ವ ಆಹಾರ ದಿನದ ಮೂಲ ಉದ್ದೇಶ -ಆಹಾರ ಪ್ರತಿಯೊಬ್ಬರ ಹಕ್ಕಾಗಿದ್ದು ಪೌಷ್ಟಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗಬೇಕೆನ್ನುವ ಆಕಾಂಕ್ಷೆ ಹೊಂದಿದೆ ಹಾಗೂ ಜಗತ್ತಿನ ಬಡವರು ಮತ್ತು ದುರ್ಬಲ ಸಮುದಾಯದವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗುವಂತೆ ಮಾಡುವುದು ವಿಶ್ವ ಆಹಾರ ದಿನಾಚರಣೆಯ ಪ್ರಮುಖ ಅಂಶಗಳಲ್ಲಿ ಒಂದು. ಇದಕ್ಕಾಗಿ ಆಹಾರ ಉತ್ಪಾದನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿಯಾಗಿ ಬಂಡವಾಳ ಹೂಡಿಕೆ ಹಾಗೂ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಬಡ ರಾಷ್ಟ್ರಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜೊತೆಗೆ ಈ ದಿನದಂದು ಅಪೌಷ್ಟಿಕತೆ ಮತ್ತು ಸ್ಥೂಲಕಾಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅನೇಕ ಜಾಗೃತಿ ಉಪಕ್ರಮಗಳನ್ನು ಸಹ ನಡೆಸಲಾಗುತ್ತದೆ.
ಈ ಬಾರಿಯ ವಿಶ್ವ ಆಹಾರ ದಿನದ ಮುಖ್ಯ ವಿಷಯ " ನೀರು ಜೀವನ, ನೀರು ಆಹಾರ" . ಭೂಮಿಯ ಮೇಲಿನ ಜೀವನಕ್ಕೆ ನೀರು ಎಷ್ಟು ನಿರ್ಣಾಯಕವಾಗಿದೆ ಮತ್ತು ಅದು ನಮ್ಮ ಆಹಾರಕ್ಕೆ ಹೇಗೆ ಆಧಾರವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ನಗರಗಳು ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಜಗತ್ತು ಎದುರಿಸುತ್ತಿರುವಾಗ ನೀರನ್ನು ಬುದ್ದಿವಂತಿಕೆಯಿಂದ ಬಳಸುವ ಅಗತ್ಯತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಬಯಸುತ್ತಿದೆ. ಪ್ರಪಂಚದಾದ್ಯಂತ ಸಾಕಷ್ಟು ಆಹಾರ ಮತ್ತು ಶುದ್ಧ ನೀರಿನ ಕೊರತೆಯಂತಹ ಕಠಿಣ ಸಮಸ್ಯೆಗಳನ್ನು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಲು ಇದು ನಮಗೆ ಅರಿವು ಮೂಡಿಸುತ್ತಿದೆ.
ಇಷ್ಟೆಲ್ಲಾ ಕಾರ್ಯಕ್ರಮಗಳು ಒಂದೆಡೆ ನಡೆಯುತ್ತಿದ್ದರು ಇನ್ನೊಂದೆಡೆ ಜನರು ಹಸಿವಿನಿಂದ ಬಳಲುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ವಿಶ್ವಾದ್ಯಂತ ಸುಮಾರು 87 ಲಕ್ಷ ಮಂದಿಗೆ ಸಾಕಷ್ಟು ಆಹಾರದ ಲಭ್ಯತೆ ಇಲ್ಲ. ಜಗತ್ತಿನಲ್ಲಿ 8 ಜನರಲ್ಲಿ ಓರ್ವ ಹಸಿವಿನಿಂದ ಬಳಲುತ್ತಿದ್ದಾನೆ. ಇದರಲ್ಲಿ ಹೆಚ್ಚಿನ ಪ್ರಮಾಣ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳಾಗಿವೆ.
ಅದರಲ್ಲಿ ಭಾರತ ದೇಶವು ಒಂದು. ಪ್ರತಿ ಏಳು ಮಂದಿ ಭಾರತೀಯರಲ್ಲಿ ಒಬ್ಬ ಹಸಿವಿನಿಂದ ಬಳಲುತ್ತಿದ್ದು 2030ರ ವೇಳೆಗೆ ದೇಶದಲ್ಲಿ ಹಸಿವಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಶಿಶುಮರಣ ಸಂಖ್ಯೆ, ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ಬೆಳವಣಿಗೆ ಕುಂಠಿತ ಮಕ್ಕಳನ್ನು ಹಸಿವಿನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪರಿಗಣಿಸಲಾಗಿದೆ.
ಹಸಿವಿನ ಸಮಸ್ಯೆಯು ದೇಶದಲ್ಲಿ ಇದೆ ಎಂದು ಹೇಳಲಾದರೂ ಎಲ್ಲಾ ಭಾರತೀಯರಿಗೂ ಕೂಡ ಸಾಕಾಗುವಷ್ಟು ಆಹಾರಧಾನ್ಯಗಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿದೆ. ಆದರೆ ಸಮಸ್ಯೆ ಇರುವುದು ಅವುಗಳನ್ನು ತಲುಪಿಸುವ ವ್ಯವಸ್ಥೆಯಲ್ಲಿ. ಸರ್ಕಾರ ಹಸಿವು ಮುಕ್ತ ದೇಶವನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಿದರೆ ಸಾಲದು ಆ ಸವಲತ್ತುಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಅನುಷ. ಎಮ್,
ಸಹಾಯಕ ಪ್ರಾಧ್ಯಾಪಕರು,
ರಸಾಯನ ಶಾಸ್ತ್ರ ವಿಭಾಗ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ