ಸೇವೆಯಲ್ಲೇ ಸಾರ್ಥಕ್ಯ ಕಂಡ ಸಂಘಟನಾ ಚತುರ ಆರ್.ಶ್ರೀನಿವಾಸ್

Upayuktha
0

ಸಚಿವ ದಿನೇಶ ಗುಂಡೂರಾವ್ ಅಭಿಮತ


ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಖಜಾಂಚಿಗಳು ಆದ ಆರ್ ಶ್ರೀನಿವಾಸ್ ರವರ 60ರ ಸಂಭ್ರಮಾಚರಣೆಯನ್ನು ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಂಸ ಜ್ಯೋತಿ ಟ್ರಸ್ಟ್ ಮತ್ತು ಆರ್ ಶ್ರೀನಿವಾಸ್ ಅಭಿನಂದನ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ  39 ವರ್ಷಗಳ ದೀರ್ಘಕಾಲಿಕ ಸಾರ್ಥಕ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿರುವ ಸುಸಂದರ್ಭದಲ್ಲಿ ಶ್ರೀಯುತರನ್ನು ಅಭಿನಂದಿಸಲು ಹಿತೈಷಿ ಮಿತ್ರರು ಸೇರಿ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ .ಸಾಮಾಜಿಕ -ಧಾರ್ಮಿಕ -ಶೈಕ್ಷಣಿಕ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿ ವ್ಯಕ್ತಿಯಾಗಿ ಸಾಧನೆ ಮಾಡಿರುವ ಶ್ರೀನಿವಾಸ್ ರಂಗಭೂಮಿ ಕಲಾವಿದರು ಹಾಗೂ ಕ್ರೀಡಾಪಟುವು ಸಹ ಆಗಿರುವುದಲ್ಲದೆ ಜನಪರ ಪ್ರಾಮಾಣಿಕ ಕಾಳಜಿ, ಸಮಾಜಮುಖಿ ಚಿಂತನೆ, ಸಾಂಸ್ಕೃತಿಕ ಮನೋಭೂಮಿಕೆಯ ಸಜ್ಜನ ನಡೆನುಡಿಯ ಸರಳ ಜೀವಿ ಶ್ರೀನಿವಾಸ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಪತ್ರಕರ್ತ ಮ.ಸ ನಂಜುಂಡಸ್ವಾಮಿ ಸಂಪಾದಕತ್ವದಲ್ಲಿ ಆರ್ ಶ್ರೀನಿವಾಸ್ ಅರವತ್ತು ಅಭಿನಂದನಾ ಗ್ರಂಥ 'ಕೌಸ್ತುಭ'ವನ್ನು ವಿಧಾನ ಪರಿಷತ್ ಸದಸ್ಯ ಎಂ ಆರ್ ಸೀತಾರಾಮ್ ಬಿಡುಗಡೆ ಮಾಡಿ ಸೇವೆ – ಸಂಘಟನೆ – ಸಂಸ್ಕೃತಿಯ ತ್ರಿಮೂರ್ತಿ ಸಂಗಮ ಇವರ ವ್ಯಕ್ತಿತ್ವದ ದ್ಯೋತಕ.ಸುದೀಘ೵  ಸೇವಾವಧಿಯ ಸಿಂಹಾವಲೋಕನವನ್ನು , ಇವರನ್ನು ಹತ್ತಿರದಿಂದ ಬಲ್ಲ ಹತ್ತಾರು ಮಹನೀಯರು ಕಟ್ಟಿಕೊಟ್ಟ ದಿವ್ಯ ಜೀವನದ ಮಧುರ ಘಟನೆಗಳ ಅನಾವರಣ ಈ ಕೃತಿಯಲ್ಲಿದೆ  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅಭಿನಂದನ ನುಡಿಗಳನ್ನು ಆಡಿದರು. ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರ ಡಾ .ಹೆಚ್. ರವಿಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಹಿರಿಯ ಪತ್ರಕರ್ತ ರವೀಂದ್ರ ಭಟ್, ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ ವಿವೇಕ ದೊರೈ ಭಾಗವಹಿಸುವರು.


ಇದೇ ಸಂದರ್ಭದಲ್ಲಿ ಶ್ರೀ ಎ ಪುಟ್ಟಸ್ವಾಮಿ, ಮ.ಸ ನಂಜುಂಡಸ್ವಾಮಿ ,ಪ್ರಕಾಶ್ ಗಿಡ್ಡೆ ಖಜ ಮೋಹಿದೀನ್ ಮತ್ತು ಸುಗುಣ ಕೃಷ್ಣಪ್ಪರವರಿಗೆ ಗೌರವ ಸನ್ಮಾನ ನಡೆಯಿತು.. ಅಭಿನಂದನಾ ಸಮಾರಂಭದ ಆರಂಭದಲ್ಲಿ ಹಿರಿಯ ರಂಗಭೂಮಿ ಕಲಾವಿದ ಎಂ.ಮುರಳಿಧರ ಪ್ರಧಾನ ನಿರ್ವಹಣೆ ಪರಿಕಲ್ಪನೆಯಲ್ಲಿ ವೈವಿಧ್ಯಮಯ ಗೀತಲಹರಿಯನ್ನು ಗಾಯಕರಾದ ದಿವಾಕರ ಕಶ್ಯಪ್ ,ಸವಿತಾ ಗಣೇಶ್ ಪ್ರಸಾದ್ ಹಾಗೂ ಚಾಂದಿನಿ ಗರ್ತಿಕೆರೆ ನಡೆಸಿಕೊಟ್ಟರು.


ವಿದುಷಿ ರೂಪಶ್ರೀ ಮಧುಸೂದನ್ ನಿರ್ದೇಶನದ ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದವರಿಂದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಲಹರಿ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಡೊಳ್ ಚಂದ್ರು ನೇತೃತ್ವದಲ್ಲಿ ಡೊಳ್ಳು ಪೂಜಾ ಹಾಗೂ ವೀರಭದ್ರ ,ಕುಣಿತ ,ಜಾನಪದ ನೃತ್ಯ ಲಹರಿ ಹಾಗೂ ಶ್ರೀನಿವಾಸ ಸಾಧನೆ  ಪರಿಚಯಿಸುವ ಅಭಿನವ ಸವ್ಯಸಾಚಿ ಕಿರು ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top