ಉಜಿರೆ: ಇಂದಿನ ತಲೆಮಾರಿಗೆ ಗಾಂಧಿ ಮೌಲ್ಯಗಳನ್ನು ತಲುಪಿಸುವ ಗುರುತರ ಜವಾಬ್ದಾರಿ ಎಲ್ಲಾ ಹಿರಿಯ ತಲೆಮಾರಿನ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ತಂದವರಲ್ಲಿ ಮುಂಚೂಣಿ ನಾಯಕರಾಗಿರುವ ಗಾಂಧೀಜಿಯವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ಪರಿಪಾಲಿಸುತ್ತಿದ್ದ ಮೌಲ್ಯಗಳು ಇಂದಿನ ಆಧುನಿಕ ಕಾಲಕ್ಕೆ ಸಲ್ಲುತ್ತವೆ. ಗಾಂಧಿ ಮೌಲ್ಯಗಳಾದ ಅಹಿಂಸೆ, ಸತ್ಯಾಗ್ರಹ, ಸ್ವಯಂಶಿಸ್ತು, ಧಾರ್ಮಿಕ ಒಳನೋಟ, ಸರ್ವೋದಯ ಮುಂತಾದವುಗಳು ಎಂದಿಗೂ ಪ್ರಸ್ತುತ ಹಾಗೂ ಅನುಕರಣೀಯ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಧ್ಯಾಪಕ ಹಾಗೂ ಖ್ಯಾತ ಚಿಂತಕ ಅರವಿಂದ ಚೊಕ್ಕಾಡಿಯವರು ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಸಂಘ ಹಾಗೂ ಗಾಂಧಿ ವಿಚಾರ ವೇದಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ವಿದ್ಯಾರ್ಥಿಗಳು ಗಾಂಧಿ ಮೌಲ್ಯಗಳನ್ನು ಅನುಸರಿಸುವಂತೆ ಕರೆನೀಡಿದರು. ಮಾದಕದ್ರವ್ಯ ವ್ಯಸನ ತಡೆಯ ಅಭಿಯಾನದ ಅಂಗವಾಗಿ ಕನ್ನಡ ವಿಭಾಗ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಶ್ ಬಿ. ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನು ಹೆಗ್ಡೆ ಅವರು ಅಭ್ಯಾಗತರನ್ನು ಪರಿಚಯಿಸಿದರು. ರಕ್ಷಿತಾ ಸ್ವಾಗತಿಸಿ, ವಿಷ್ಣು ವಂದಿಸಿದರು. ಕನ್ನಡ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ