'ಸರ್ಕಾರದ ಕೆಲಸ ಮಾಡುವ ಆಳ್ವಾಸ್'
ವಿದ್ಯಾಗಿರಿ: 'ವ್ಯಕ್ತಿಯೊಬ್ಬನಿಗೆ ಕೆಲಸ ಕೊಡಿಸುವುದು ಕುಟುಂಬವೊಂದಕ್ಕೆ ಬದುಕು ನೀಡಿದಂತೆ. ಅಂತಹ ಸರ್ಕಾರದ ಕೆಲಸವನ್ನು ಆಳ್ವಾಸ್ ಮಾಡುತ್ತಿದೆ' ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ 'ಆಳ್ವಾಸ್ ಪ್ರಗತಿ-2023' ಬೃಹತ್ ಉದ್ಯೋಗ ಮೇಳವನ್ನು ಶುಕ್ರವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
'ಆಳ್ವಾಸ್ ಪ್ರಗತಿಯ 13ನೇ ಆವೃತ್ತಿ ಇದಾಗಿದ್ದು, ಇಂತಹ ನಿರಂತರ ಸಮಾಜ ಸೇವೆಯನ್ನು ಕೈಗೊಂಡಿರುವ ಡಾ. ಎಂ. ಮೋಹನ ಆಳ್ವ ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ' ಎಂದರು.
'2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಔದ್ಯೋಗಿಕ ಸರ್ವೆಯನ್ನು ಮಾಡಿಸಿದ್ದರು. ಆ ಸರ್ವೆ ಪ್ರಕಾರ ದೇಶದ ಪ್ರತಿ 10 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ, 5 ಲಕ್ಷ ವಿದ್ಯಾರ್ಥಿಗಳು ಉದ್ಯೋಗ ಪಡೆದರೆ, ಉಳಿದ 5 ಲಕ್ಷ ಮಂದಿ ಉದ್ಯೋಗ ಅರಸುತ್ತಾ ಅಲೆಯುತ್ತಾರೆ. ಇಂತಹ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಸಲುವಾಗಿ ಮೋದಿ ಅವರು ಜಿಲ್ಲೆಗೊಂದು ಉದ್ಯೋಗ ಮೇಳದ ಕಲ್ಪನೆ ತಂದಿದ್ದರು' ಎಂದರು.
ಆದರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶದ ಕನಸು ನನಸು ಮಾಡುತ್ತಿದೆ. ಯುವಜನತೆ ತಮ್ಮ ಜೀವನವನ್ನು ದೇಶಕ್ಕೆ ಮೀಸಲು ಇಡಬೇಕು ಎಂಬ ಆಶಯ ಸಾಕಾರಗೊಳಿಸುತ್ತಿದೆ. ಯಾರೂ ನಿರುದ್ಯೋಗಿ ಆಗಬಾರದು. ಎಲ್ಲರೂ ನೆಮ್ಮದಿಯಿಂದ ಇರಬೇಕು ಅವರ ಚಿಂತನೆ ಉತ್ಕೃಷ್ಟವಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಉದ್ಯೋಗ ಪಡೆಯಲು ಅರ್ಹತೆ ಜೊತೆ ನಿಮ್ಮ ವ್ಯಕ್ತಿತ್ವವೂ ಮುಖ್ಯವಾಗುತ್ತದೆ ಎಂದರು.
ಸಂದರ್ಶನದಲ್ಲಿ ಉತ್ತಮ ಉತ್ತರ ಕೊಟ್ಟಿದ್ದರೂ, ಕೆಲವೊಮ್ಮೆ ಕೆಲಸಗಳು ಸಿಗುವುದಿಲ್ಲ. ಏಕೆಂದರೆ ಹಾವ-ಭಾವ ಗುಣ-ನಡತೆ, ಮಾತಿನ ಶೈಲಿ ಇವೆಲ್ಲವೂ ಆಕರ್ಷಕ ಆಗಿರಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಎಂದಾಕ್ಷಣ ವಿದೇಶ ದೃಷ್ಟಿ ಹಾಯಿಸುವ ಬದಲು, ದೇಶದಲ್ಲಿ ನೆಲೆ ನಿಂತು ಸಾಧಿಸುವ ಛಲ ಹೊಂದಬೇಕು. ಆ ಮೂಲಕ ನೀವು ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
ಜ್ಞಾನದ ಜೊತೆ ಕೌಶಲ ವೃದ್ಧಿ ಪಡಿಸಿದಾಗ ಉದ್ಯೋಗ ಪಡೆಯಲು ಸಾಧ್ಯ ಎಂದರು.
ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇದ್ದರು.
ಯುಎಇ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಡಾ. ಸಂಜಯ್‌ಕುಮಾರ್, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ಮಾನವ ಸಂಪನ್ಮೂಲದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಫ್ಯಾಕ್ಟ್ಸೆಟ್ ಸಿಸ್ಟಮ್ ಇಂಡಿಯಾ ಪ್ರೈ. ಲಿ. ಹಾಗೂ ಭಾರತ ಮತ್ತು ಫಿಲಿಫೈನ್ಸ್ ಟಾಲೆಂಟ್ ಅಕ್ವಸಿಷನ್ ಉಪಾಧ್ಯಕ್ಷರಾದ ಅನುಪ್ಮ ರಂಜನ್ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು
ಆನ್‌ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 9018
ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 1432
ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು: 198
ಮೊದಲ ದಿನ ಆಗಮಿಸಿದ ಉದ್ಯೋಗಕಾಂಕ್ಷಿಗಳು: 7986
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ